US Visa: ಅಮೆರಿಕ ವೀಸಾ ಬೇಕೆಂದರೆ ಈ ನಿಯಮ ಕಡ್ಡಾಯ, ನಿಮ್ಮ ಚಟುವಟಿಕೆಗಳ ಮೇಲಿರಲಿದೆ ಟ್ರಂಪ್ ಕಣ್ಣು
ನೀವು ಅಮೆರಿಕದ ವೀಸಾ ಬಯಸಿದರೆ ನೀವು ಸಾಮಾಜಿಕ ಮಾಧ್ಯಮದಲ್ಲಿ ಏನನ್ನೂ ಮರೆಮಾಡಬಾರದು. ಬದಲಿಗೆ ನಿಮ್ಮ ಪ್ರೊಫೈಲ್ ಅನ್ನು ಸಾರ್ವಜನಿಕವಾಗಿ ಇಡಬೇಕು. ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರೆ ವೀಸಾ ಅರ್ಜಿದಾರರಿಗೆ ಈ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ.

ವಾಷಿಂಗ್ಟನ್, ಜೂನ್ 24: ನೀವು ವಿದ್ಯಾರ್ಥಿಯಾಗಿರಬಹುದು, ಉದ್ಯೋಗಿಯೂ ಆಗಿರಬಹುದು. ಅಮೆರಿಕಕ್ಕೆ ಎಫ್, ಎಂ, ಜೆ ವೀಸಾಗೆ ಅಪ್ಲೇ ಮಾಡುವವರಿಗೆ ಈ ನಿಯಮ ಕಡ್ಡಾಯವಾಗಿರುತ್ತದೆ. ಅಮೆರಿಕಕ್ಕೆ ವಿದೇಶಗಳಿಂದ ಹೋಗುವವರ ಚಟುವಟಿಕೆಗಳ ಮೇಲೆ ಡೊನಾಲ್ಡ್ ಟ್ರಂಪ್(Donald Trump) ಸದಾ ಕಣ್ಣಿಡಲಿದ್ದಾರೆ.
ನೀವು ಅಮೆರಿಕದ ವೀಸಾ ಬಯಸಿದರೆ ನೀವು ಸಾಮಾಜಿಕ ಮಾಧ್ಯಮದಲ್ಲಿ ಏನನ್ನೂ ಮರೆಮಾಡಬಾರದು. ಬದಲಿಗೆ ನಿಮ್ಮ ಪ್ರೊಫೈಲ್ ಅನ್ನು ಸಾರ್ವಜನಿಕವಾಗಿ ಇಡಬೇಕು. ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರೆ ವೀಸಾ ಅರ್ಜಿದಾರರಿಗೆ ಈ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ.
ಈ ಹೊಸ ನಿಯಮವು ಎಫ್, ಎಂ ಮತ್ತು ಜೆ ವಲಸೆರಹಿತ ವೀಸಾಗಳಿಗೆ ಅನ್ವಯಿಸುತ್ತದೆ. ಆದ್ದರಿಂದ ಹಿನ್ನೆಲೆ ಪರಿಶೀಲನೆಯಲ್ಲಿ ಯಾವುದೇ ತಪ್ಪಾಗುವುದಿಲ್ಲ. ಕಳೆದ ತಿಂಗಳು ವಿದ್ಯಾರ್ಥಿ ವೀಸಾ ಪ್ರಕ್ರಿಯೆಯನ್ನು ಸ್ವಲ್ಪ ದಿನಗಳವರೆಗೆ ನಿಲ್ಲಿಸಲಾಗಿತ್ತು. ಬಳಿಕ ಡೊನಾಲ್ಡ್ ಟ್ರಂಪ್ ಆಡಳಿತ ಈ ನಿರ್ಧಾರ ಹೊರಬಂದಿದೆ. ಜೂನ್ 23, 2025ರಂದು ಯುಎಸ್ ರಾಯಭಾರ ಕಚೇರಿ ಎಕ್ಸ್ನಲ್ಲಿ, ಎಫ್, ಎಂ ಹಾಗೂ ಜೆ ವಿಸಾಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅರ್ಜಿದಾರರು ಫೇಸ್ಬುಕ್, ಎಕ್ಸ್, ಲಿಂಕ್ಡ್ಇನ್ , ಟಿಕ್ಟಾಕ್ ಮುಂತಾದ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಗೌಪ್ಯತಾ ಸೆಟ್ಟಿಂಗ್ನ್ನು ಸಾರ್ವಜನಿಕಗೊಳಿಸಬೇಕಾಗುತ್ತದೆ ಎಂದು ಘೋಷಿಸಿದೆ.
ಯುಎಸ್ ಅಧಿಕಾರಿಗಳು ತಮ್ಮ ಆನ್ಲೈನ್ ಚಟುವಟಿಕೆಗಳನ್ನು ನೋಡಬಹುದು ಮತ್ತು ಅರ್ಜಿದಾರರು ಯುಎಸ್ನಲ್ಲಿ ಅಧ್ಯಯನ ಅಥವಾ ವಿನಿಮಯ ಕಾರ್ಯಕ್ರಮಗಳಿಗೆ ಸೂಕ್ತರೇ ಎಂದು ನಿರ್ಧರಿಸಬಹುದು. ಅಮೆರಿಕದ ಭದ್ರತೆಗೆ ಬೆದರಿಕೆಯನ್ನುಂಟುಮಾಡುವ ಯಾವುದೇ ವ್ಯಕ್ತಿಗೆ ವೀಸಾ ಸಿಗುವುದಿಲ್ಲ.
ಮತ್ತಷ್ಟು ಓದಿ: ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ನಿರ್ಬಂಧ ವಿಧಿಸಿದ್ದರೂ ಒಳ್ಳೆ ಸುದ್ದಿ ನೀಡಿದ ರಾಯಭಾರ ಕಚೇರಿ
ಕಳೆದ ತಿಂಗಳು ಟ್ರಮಪ್ ಆಡಳಿತ ಪ್ರಪಂಚದಾದ್ಯಂತ ತನ್ನ ರಾಯಭಾರ ಕಚೇರಿಗಳಿಗೆ ವಿದ್ಯಾರ್ಥಿ ಹಾಗ ವಿನಿಮಯದ ವೀಸಾಗಳಿಗೆ ಹೊಸ ಸಂದರ್ಶನಗಳು ಮತ್ತು ಅರ್ಜಿಗಳನ್ನು ಸಲ್ಲಿಸುವಂತೆ ಆದೇಶಿಸಿತ್ತು. ಜೋ ಬೈಡನ್ ಆಡಳಿತದಲ್ಲಿ ವೀಶಾ ಪರಿಶೀಲನೆ ಸಡಿಲವಾಗಿತ್ತು. ಈಗ ಟ್ರಂಪ್ ಆಡಳಿತವು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಪರಿಶೀಲಿಸುತ್ತದೆ.
ಎಫ್, ಎಂ ಮತ್ತು ಜೆ ವೀಸಾಗಳು ಎಂದರೆ ಯಾವುವು? F ವೀಸಾ: ವಿಶ್ವವಿದ್ಯಾಲಯಗಳು, ಕಾಲೇಜುಗಳು ಅಥವಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. M ವೀಸಾ: ತಾಂತ್ರಿಕ ಅಥವಾ ವೃತ್ತಿಪರ ಅಧ್ಯಯನಕ್ಕಾಗಿ ಆಗಾಗ ಅಮೆರಿಕಕ್ಕೆ ಭೇಟಿ ನೀಡುವವರಿಗೆ J ವೀಸಾ: ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೆಲವೇ ದಿನಗಳಿಗಾಗಿ ಅಮೆರಿಕಕ್ಕೆ ಬರುವವರು ಈ ವೀಸಾ ಪಡೆಯಬಹುದು.
2019 ರಲ್ಲಿ ಅಮೆರಿಕವು ವೀಸಾ ಅರ್ಜಿದಾರರಿಂದ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಕೇಳಲು ಪ್ರಾರಂಭಿಸಿತ್ತು. ವೀಸಾ ಬಯಸುವ ವ್ಯಕ್ತಿಯು ಅಮೆರಿಕದ ಭದ್ರತೆಗೆ ಬೆದರಿಕೆಯಲ್ಲ ಎಂದು ಖಚಿತಪಡಿಸಿಕೊಳ್ಳಲು ಇದು ಸಹಕಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದಲ್ಲಿ ಅಧ್ಯಯನ ಮಾಡುವ ಕನಸು ಕಾಣುತ್ತಿರುವ ಭಾರತೀಯ ವಿದ್ಯಾರ್ಥಿಗಳು ಈಗ ತಮ್ಮ ಸಾಮಾಜಿಕ ಮಾಧ್ಯಮವನ್ನು ಮುಕ್ತವಾಗಿಡಬೇಕಾಗುತ್ತದೆ. ಇದು ಗೌಪ್ಯತೆಯ ಉಲ್ಲಂಘನೆಯೇ ಅಥವಾ ಅಗತ್ಯವಾದ ಭದ್ರತಾ ಕ್ರಮವೇ ಎಂಬುದು ಪ್ರಶ್ನೆಯಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




