ಅಮೆರಿಕ ಚುನಾವಣೆ: ಕತ್ತೆ, ಆನೆಯನ್ನೇ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳು ಎಲೆಕ್ಷನ್ ಚಿಹ್ನೆ ಮಾಡಿಕೊಂಡಿದ್ದೇಕೆ?
ನವೆಂಬರ್ 5ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಬಾರಿ ಡೊನಾಲ್ಡ್ ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ಸ್ಪರ್ಧಿಸಲಿದ್ದು, ಈ ಚುನಾವಣೆ ತೀವ್ರ ಕುತೂಹಲ ಸೃಷ್ಟಿಸಿದೆ. ಅಮೆರಿಕದ ಮತದಾರರು ಕತ್ತೆ ಅಥವಾ ಆನೆ ಚುನಾವಣಾ ಚಿಹ್ನೆಯ ಮೇಲೆ ಸ್ಟಾಂಪ್ ಮಾಡುವ ಮೂಲಕ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕುತ್ತಾರೆ. ಆದರೆ ಅಮೆರಿಕದ ಎರಡು ದೊಡ್ಡ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಚಿಹ್ನೆಯನ್ನು ಹೇಗೆ ಪಡೆದುಕೊಂಡವು ಎಂದು ನಿಮಗೆ ಗೊತ್ತಾ?
ನವದೆಹಲಿ: ಅಮೆರಿಕ ಚುನಾವಣೆಯ ಕಾವು ಜೋರಾಗಿದೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳು ಚುನಾವಣಾ ಪ್ರಚಾರದ ಅಂತಿಮ ಹಂತದ ಸರ್ಕಸ್ ನಡೆಸುತ್ತಿವೆ. ವಿಶೇಷವೆಂದರೆ, ಅಮೆರಿಕದ ಈ ಎರಡು ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆಗಳಲ್ಲಿ ಸಾಮ್ಯತೆ ಇದೆ. ಅಂದರೆ, ಎರಡರ ಚುನಾವಣಾ ಚಿಹ್ನೆಯು ಪ್ರಾಣಿಯಾಗಿದೆ. ಡೆಮಾಕ್ರಟಿಕ್ ಪಕ್ಷದ ಚುನಾವಣಾ ಚಿಹ್ನೆ ಕತ್ತೆಯಾಗಿದ್ದರೆ, ರಿಪಬ್ಲಿಕನ್ ಪಕ್ಷದ ಚುನಾವಣಾ ಚಿಹ್ನೆ ಆನೆಯಾಗಿದೆ. ಆದರೆ ಈ ಎರಡು ಪಕ್ಷಗಳು ಈ ಚುನಾವಣಾ ಚಿಹ್ನೆಗಳನ್ನು ಹೇಗೆ ಪಡೆದುಕೊಂಡವು ಎಂಬುದರ ಹಿಂದೆ ಬಹಳ ಆಸಕ್ತಿದಾಯಕ ಕಥೆಯಿದೆ.
ಅಮೆರಿಕದ ಈ ಎರಡೂ ಪ್ರಮುಖ ಪಕ್ಷಗಳ ಚಿಹ್ನೆಗಳನ್ನು ವ್ಯಂಗ್ಯಚಿತ್ರಕಾರರೊಬ್ಬರು ರಚಿಸಿದ್ದಾರೆ. ಥಾಮಸ್ ನಾಸ್ಟ್ ಎಂಬ ವ್ಯಂಗ್ಯಚಿತ್ರಕಾರ ಹಾರ್ಪರ್ಸ್ ವೀಕ್ಲಿ ಪತ್ರಿಕೆಯಲ್ಲಿ (1862 ರಿಂದ 1886) ತನ್ನ ಅಧಿಕಾರಾವಧಿಯಲ್ಲಿ ತನ್ನ ರಾಜಕೀಯ ಕಾರ್ಟೂನ್‌ಗಳಲ್ಲಿ ರಿಪಬ್ಲಿಕನ್ ಮತ್ತು ಡೆಮೋಕ್ರಾಟ್‌ಗಳನ್ನು ಪ್ರತಿನಿಧಿಸಲು ಆನೆ ಮತ್ತು ಕತ್ತೆಯನ್ನು ಬಳಸಿದ್ದರು. ಅದೇ ಚಿಹ್ನೆಯನ್ನು ಈ ಎರಡೂ ಪಕ್ಷಗಳು ಬಳಸಿಕೊಂಡು, ಅದನ್ನು ಕೊಂಚ ಆಧುನೀಕರಣಗೊಳಿಸಿಕೊಂಡಿವೆ.
ಅವರ ಅದ್ಭುತ ವಿಡಂಬನಾತ್ಮಕ ಕೌಶಲ್ಯದಿಂದಾಗಿ, ಅವರು ಅಮೆರಿಕದ ಮೊದಲ ಶ್ರೇಷ್ಠ ರಾಜಕೀಯ ವ್ಯಂಗ್ಯಚಿತ್ರಕಾರರಾದರು. ನ್ಯಾಸ್ಟಿ ಎಂಬ ಇಂಗ್ಲಿಷ್ ಪದವು ಥಾಮಸ್ ನಾಸ್ಟ್ ಅವರ ಉಪನಾಮದಿಂದ ಬಂದಿದೆ ಎಂಬ ನಂಬಿಕೆಯೂ ಇದೆ.
ಇದನ್ನೂ ಓದಿ: ಭಾರತಕ್ಕೆ ಬರಲಿವೆ 31 ಪ್ರಿಡೇಟರ್ ಡ್ರೋನ್; ಅಮೆರಿಕದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ
ಡೆಮಾಕ್ರಟಿಕ್ ಪಕ್ಷಕ್ಕೆ ‘ಕತ್ತೆ’ ಚುನಾವಣಾ ಚಿಹ್ನೆ ಸಿಕ್ಕಿದ್ದು ಹೇಗೆ?:
19ನೇ ಶತಮಾನದಲ್ಲಿಯೇ ಡೆಮಾಕ್ರಟಿಕ್ ಪಕ್ಷಕ್ಕೆ ‘ಕತ್ತೆ’ ಮತ್ತು ರಿಪಬ್ಲಿಕನ್ ಪಕ್ಷಕ್ಕೆ ‘ಆನೆ’ಯನ್ನು ರಾಜಕೀಯ ಸಂಕೇತವಾಗಿ ಬಳಸಲಾರಂಭಿಸಿತು. 1828ರ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಡೆಮಾಕ್ರಟಿಕ್ ಪಕ್ಷವು ಮೊದಲು ‘ಕತ್ತೆ’ ಚಿಹ್ನೆಯನ್ನು ಬಳಸಿತು. ಆಂಡ್ರ್ಯೂ ಜಾಕ್ಸನ್ ಆಗ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದರು. ಪ್ರತಿಪಕ್ಷಗಳು ಅವರನ್ನು ಕೀಟಲೆ ಮಾಡಲು ‘ಕತ್ತೆ’ ಪದವನ್ನು ಬಳಸಿದವು. ಚುನಾವಣೆಯ ಸಮಯದಲ್ಲಿ, ಪ್ರತಿಪಕ್ಷಗಳು ಜಾಕ್ಸನ್‌ಗೆ ‘ಜಾಕ್‌ಆಸ್’ ಪದವನ್ನು ಬಳಸಿದವು. ಆದರೆ, ಜಾಕ್ಸನ್ ಆ ಚುನಾವಣೆಯಲ್ಲಿ ‘ಕತ್ತೆ’ ಎಂಬ ಹಣೆಪಟ್ಟಿಯನ್ನು ಸಂತೋಷದಿಂದ ಸ್ವೀಕರಿಸಿದರು ಮತ್ತು ಅದನ್ನು ತಮ್ಮ ಅಭಿಯಾನದ ಭಾಗವಾಗಿಸಿಕೊಂಡರು. ಡೆಮಾಕ್ರಟಿಕ್ ಪಕ್ಷದ ಪ್ರಚಾರದಲ್ಲಿ ಮೊದಲ ಬಾರಿಗೆ ಕತ್ತೆಯ ಚಿತ್ರವನ್ನು ಬಳಸಲಾರಂಭಿಸಿತು.
ಜಾಕ್ಸನ್‌ರನ್ನು ‘ಕತ್ತೆ’ ಎಂದು ಸಾಬೀತುಪಡಿಸುವ ಪ್ರತಿಪಕ್ಷಗಳ ತಂತ್ರ ವಿಫಲವಾಯಿತು ಮತ್ತು ಅವರು ಚುನಾವಣೆಯಲ್ಲಿ ಗೆದ್ದರು. ಆ ಬಾರಿ ಗೆದ್ದ ಬಳಿಕ ಅವರು ಯುನೈಟೆಡ್ ಸ್ಟೇಟ್ಸ್‌ನ ಏಳನೇ ಅಧ್ಯಕ್ಷರಾದರು ಮತ್ತು ಡೆಮಾಕ್ರಟಿಕ್ ಪಕ್ಷದ ಮೊದಲ ಅಧ್ಯಕ್ಷರಾದರು. 1870ರ ದಶಕದಲ್ಲಿ ವ್ಯಂಗ್ಯಚಿತ್ರಕಾರ ಥಾಮಸ್ ನಾಸ್ಟ್ ಇಡೀ ಡೆಮಾಕ್ರಟಿಕ್ ಪಕ್ಷದ ಸಂಕೇತವಾಗಿ ‘ಕತ್ತೆ’ಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ: ಅಮೆರಿಕದಲ್ಲಿ ಪನ್ನು ಹತ್ಯೆಗೆ ಸಂಚು ರೂಪಿಸಿದವನು ಇನ್ನುಮುಂದೆ ಭಾರತ ಸರ್ಕಾರದ ಉದ್ಯೋಗಿಯಾಗಿರುವುದಿಲ್ಲ: ಮ್ಯಾಥ್ಯೂ ಮಿಲ್ಲರ್
ಥಾಮಸ್ ನಾಸ್ಟ್ ತಮ್ಮ ಕಾರ್ಟೂನ್‌ಗಳಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಕತ್ತೆ ಮತ್ತು ರಿಪಬ್ಲಿಕನ್ ಪಕ್ಷಕ್ಕೆ ಆನೆಯ ಚಿಹ್ನೆಯನ್ನು ಬಳಸಿದ್ದರು. ಥಾಮಸ್ ನಾಸ್ಟ್ ಅವರನ್ನು ಲಿಂಕನ್ ರಿಪಬ್ಲಿಕನ್ ಪಕ್ಷದ ದೊಡ್ಡ ಬೆಂಬಲಿಗ ಎಂದು ಪರಿಗಣಿಸಲಾಗಿದೆ. ರಿಪಬ್ಲಿಕನ್ ಪಕ್ಷವನ್ನು 1854ರಲ್ಲಿ ರಚಿಸಲಾಯಿತು. ಅದಾದ 6 ವರ್ಷಗಳ ನಂತರ 1860ರಲ್ಲಿ ಅಬ್ರಹಾಂ ಲಿಂಕನ್ ಅವರು ಅಮೆರಿಕದ ಮೊದಲ ರಿಪಬ್ಲಿಕನ್ ಅಧ್ಯಕ್ಷರಾಗಿ ಶ್ವೇತಭವನವನ್ನು ತಲುಪಿದರು. 1861 ರಲ್ಲಿ ಅಮೆರಿಕಾದಲ್ಲಿ ಪ್ರಾರಂಭವಾದ ಅಂತರ್ಯುದ್ಧದ ಸಮಯದಲ್ಲಿ ಆನೆಯನ್ನು ರಿಪಬ್ಲಿಕನ್ ಪಕ್ಷದ ಚಿಹ್ನೆಯಾಗಿ ಪತ್ರಿಕೆ ಮತ್ತು ಕಾರ್ಟೂನ್‌ನಲ್ಲಿ ತೋರಿಸಲಾಯಿತು. ಆದರೆ ಇದು 1874 ರಲ್ಲಿ ಥಾಮಸ್ ನಾಸ್ಟ್ ಅವರ ಕಾರ್ಟೂನ್ ನಂತರ ಪ್ರಸಿದ್ಧವಾಯಿತು. ಈ ನಾಸ್ಟ್ ಕಾರ್ಟೂನ್ ಹಾರ್ಪರ್ಸ್ ವೀಕ್ಲಿಯಲ್ಲಿ ‘ದಿ ಥರ್ಡ್ ಟರ್ಮ್ ಪ್ಯಾನಿಕ್’ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಇದರ ನಂತರ, 1880ರ ಬಳಿಕ ಇತರ ವ್ಯಂಗ್ಯಚಿತ್ರಕಾರರು ಕತ್ತೆ ಮತ್ತು ಆನೆಯನ್ನು ಈ ಎರಡೂ ಪಕ್ಷಗಳಿಗೆ ಸಂಕೇತವಾಗಿ ಚಿತ್ರಿಸಲು ಪ್ರಾರಂಭಿಸಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ