ಇರಾನ್​ನ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಂತೆ ಅಮೆರಿಕ!

ಒಂದೆಡೆ ಮಧ್ಯಪ್ರಾಚ್ಯ ಸಂಘರ್ಷದಿಂದ ಜಗತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ಸಮುದ್ರದಲ್ಲಿ ಸಿಲುಕಿರುವ ಇರಾನ್​​ನ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಬಗ್ಗೆ ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ ಎಕ್ಸ್ ಸಂದೇಶ ಪ್ರಕಟಿಸಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.

ಇರಾನ್​ನ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಂತೆ ಅಮೆರಿಕ!
ಸಾಂದರ್ಭಿಕ ಚಿತ್ರ ಹಾಗೂ ಬಲ ಚಿತ್ರದಲ್ಲಿ ಸ್ಕಾಟ್ ಬೆಸೆಂಟ್
Image Credit source: TV9 Network

Updated on: Mar 21, 2026 | 8:11 AM

ವಾಷಿಂಗ್ಟನ್, ಮಾರ್ಚ್ 21: ಮಧ್ಯಪ್ರಾಚ್ಯ ಯುದ್ಧದಿಂದ ಜಗತ್ತಿನಾದ್ಯಂತ ಕಚ್ಚಾ ತೈಲ, ಅಡುಗೆ ಅನಿಲ ಸೇರಿದಂತೆ ತೀವ್ರ ಇಂಧನ ಬಿಕ್ಕಟ್ಟು ಎದುರಾಗಿದೆ. ಇಂಥ ಸನ್ನಿವೇಶದಲ್ಲಿ ಇದೀಗ ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ಸಮುದ್ರದಲ್ಲಿ ಸಿಲುಕಿರುವ, ಇರಾನ್‌ಗೆ ಸೇರಿದ 140 ಮಿಲಿಯನ್ ಬ್ಯಾರೆಲ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿ ಇಂಧನ ಪೂರೈಕೆಯನ್ನು ಸುಗಮಗೊಳಿಸುವುದಾಗಿ ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ (Scott Bessent) ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ಸಂದೇಶದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಡೊನಾಲ್ಡ್ ಟ್ರಂಪ್ (Donald Trump) ನೇತೃತ್ವದ ಅಮೆರಿಕ ಆಡಳಿತ, ಇರಾನ್ ವಿರುದ್ಧದ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಬೆಸೆಂಟ್ ಹೇಳಿಕೆಯ ಪ್ರಕಾರ, ಜಾಗತಿಕ ಉಗ್ರ ಚಟುವಟಿಕೆಗಳಿಗೆ ಇರಾನ್ ಪ್ರಮುಖ ಕಾರಣವಾಗಿದ್ದು, ಅದನ್ನು ನಿಯಂತ್ರಿಸಲು ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನ ಕ್ರಮಗಳನ್ನು ಅಮೆರಿಕ ವೇಗವಾಗಿ ಮುಂದುವರೆಸುತ್ತಿದೆ. ಇರಾನ್ ನಡೆಸಿದ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳಿಗೆ ಪ್ರತಿಯಾಗಿ ಅಮೆರಿಕ ತನ್ನ ಆರ್ಥಿಕ ಹಾಗೂ ಸೈನಿಕ ಶಕ್ತಿಯನ್ನು ಬಳಸುತ್ತಿದೆ.

ಜಾಗತಿಕ ಮಾರುಕಟ್ಟೆಗೆ 140 ಮಿಲಿಯನ್ ಬ್ಯಾರೆಲ್ ತೈಲ

ಇದಕ್ಕೂ ಮಧ್ಯೆ, ಸಮುದ್ರದಲ್ಲಿ ಸಿಲುಕಿರುವ ಇರಾನ್ ತೈಲವನ್ನು ತಾತ್ಕಾಲಿಕವಾಗಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಮೆರಿಕ ನಿರ್ಧರಿಸಿದೆ. ಸುಮಾರು 140 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ತರಲು ಈ ಕ್ರಮ ನೆರವಾಗಲಿದೆ. ಇದರಿಂದ ಜಾಗತಿಕ ತೈಲ ಸರಬರಾಜು ಹೆಚ್ಚಾಗಿ ಬೆಲೆ ಸ್ಥಿರತೆ ಸಾಧಿಸಲು ಸಹಾಯವಾಗಲಿದೆ ಎಂದು ಬೆಸೆಂಟ್ ತಿಳಿಸಿದ್ದಾರೆ.

ಇರಾನ್ ತೈಲವನ್ನು ಕಡಿಮೆ ದರದಲ್ಲಿ ಚೀನಾ ಸಂಗ್ರಹಿಸುತ್ತಿದೆ ಎಂಬ ಆರೋಪವನ್ನೂ ಬೆಸೆಂಟ್ ಮಾಡಿದ್ದಾರೆ. ಈ ತೈಲವನ್ನು ಮಾರುಕಟ್ಟೆಗೆ ಬಿಡುವುದರಿಂದ ಇರಾನ್‌ನ ಆರ್ಥಿಕ ಪ್ರಭಾವ ಕಡಿಮೆಯಾಗಲಿದೆ ಎಂಬುದು ಅಮೆರಿಕದ ಲೆಕ್ಕಾಚಾರ.

ಸ್ಕಾಟ್ ಬೆಸೆಂಟ್ ಎಕ್ಸ್ ಪೋಸ್ಟ್


ಈ ತಾತ್ಕಾಲಿಕ ಅನುಮತಿ ಈಗಾಗಲೇ ಸಾಗಾಟ ಹಂತದಲ್ಲಿರುವ ತೈಲಕ್ಕೆ ಮಾತ್ರ ಅನ್ವಯವಾಗುತ್ತದೆ. ಹೊಸ ಉತ್ಪಾದನೆ ಅಥವಾ ಖರೀದಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜೊತೆಗೆ, ಈ ಮಾರಾಟದಿಂದ ಇರಾನ್‌ಗೆ ಹಣ ತಲುಪುವುದು ಕಷ್ಟವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಕ್ರಮ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್, ಇಸ್ರೇಲ್, ಅಮೆರಿಕ ಸಂಘರ್ಷದಲ್ಲಿ ಹೊಸ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳಿಗೆ ಕಾರಣವಾಗಲಿದೆ. ಅಮೆರಿಕದ ಈ ನಿಲುವು ಯುದ್ಧದ ದಿಕ್ಕು ಹಾಗೂ ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಬ್ರೇಕ್? ಟ್ರಂಪ್ ಆ ಸಂದೇಶದಲ್ಲಿದೆ ಮಹತ್ವದ ಸುಳಿವು!

ಒಟ್ಟಿನಲ್ಲಿ, ಇರಾನ್ ವಿರುದ್ಧದ ಒತ್ತಡ ಮುಂದುವರಿಯುವ ಸೂಚನೆಗಳ ನಡುವೆ, ಜಾಗತಿಕ ತೈಲ ಮಾರುಕಟ್ಟೆಯನ್ನು ಸಮತೋಲನದಲ್ಲಿಡಲು ಅಮೆರಿಕ ತೆಗೆದುಕೊಂಡಿರುವ ಈ ಕ್ರಮ ಗಮನ ಸೆಳೆಯುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us