ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿ ಆಕಾಂಕ್ಷಿಯಾಗಿ ರಿಪಬ್ಲಿಕನ್ ಪಕ್ಷದಲ್ಲಿ ಪೈಪೋಟಿ ನಡೆಸಿರುವ ವಿವೇಕ್ ರಾಮಸ್ವಾಮಿ (Vivek Ramaswamy) ತಮ್ಮ ಮೊನಚು ಮಾತುಗಳಿಂದ ಅಮೆರಿಕನ್ನರ ಗಮನ ಸೆಳೆಯುತ್ತಿದ್ದಾರೆ. ಖಚಿತ ನಿಲುವು, ನೇರಾನೇರ ಮಾತುಗಳ ಖಡಕ್ ವ್ಯಕ್ತಿತ್ವಕ್ಕೆ ಹೆಸರಾದ ವಿವೇಕ್ ರಾಮಸ್ವಾಮಿ ಭಾರತ ಮೂಲದವರು. ಇವರು ಹುಟ್ಟಿ ಬೆಳೆದದ್ದೆಲ್ಲಾ ಅಮೆರಿಕದಲ್ಲೇ. ಇವರ ತಂದೆ ಮತ್ತು ತಾಯಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋದವರು. 38 ವರ್ಷದ ವಿವೇಕ್ ರಾಮಸ್ವಾಮಿ ಅಮೆರಿಕದಲ್ಲಿ ನೆಲಸಿರುವ ಎರಡನೇ ತಲೆಮಾರಿನವರ ಭಾರತೀಯರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನದ ರೇಸ್ನಲ್ಲಿರುವ ಅವರು ಮೂಲತಃ ಉದ್ಯಮಿಯಾಗಿದ್ದಾರೆ. ಹಾಗೆಯೇ ಹಲವು ರಾಜಕೀಯ ಮತ್ತು ಕಾರ್ಪೊರೇಟ್ ಸಂಬಂಧಿ ಪುಸ್ತಕಗಳನ್ನು ಬರೆದು ಹೆಸರುವಾಸಿಯಾಗಿದ್ದಾರೆ. ವಿವೇಕ್ ರಾಮಸ್ವಾಮಿ ಮೂಲ, ಬೆಳವಣಿಗೆ, ನಿಲುವುಗಳ ಬಗ್ಗೆ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ…
ವಿವೇಕ್ ರಾಮಸ್ವಾಮಿ ಅವರದ್ದು ತಮಿಳು ಬ್ರಾಹ್ಮಣ ಮನೆತನ. ಅವರ ತಂದೆ ಗಣಪತಿ ರಾಮಸ್ವಾಮಿ ಮತ್ತು ತಾಯಿ ಗೀತಾ ರಾಮಸ್ವಾಮಿ ಇಬ್ಬರೂ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕನಚೇರಿಯವರು. ಗಣಪತಿ ರಾಮಸ್ವಾಮಿ ಕೇರಳದ ಕಲ್ಲಿಕೋಟೆಯ (ಕ್ಯಾಲಿಕಟ್) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ. ಅವರ ತಾಯಿ ಗೀತಾ ರಾಮಸ್ವಾಮಿ ವೈದ್ಯೆ. ಮೈಸೂರಿನ ಮೆಡಿಕಲ್ ಕಾಲೇಜ್ ಮತ್ತು ರೀಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ವೈದ್ಯಕೀಯ ಪದವಿ ಪಡೆದು, ಅಲ್ಲಿಯೇ ಕೆಲಸ ಮಾಡಿದವರು.
ವಿವೇಕ್ ರಾಮಸ್ವಾಮಿ ಹುಟ್ಟಿದ್ದು ಅಮೆರಿಕದ ಓಹಿಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ 1985, ಆಗಸ್ಟ್ 9ರಂದು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರದಲ್ಲಿ ಪದವಿ ಮಾಡಿದ್ದಾರೆ. ಆಗಲೇ ಅವರು ರಾಜಕೀಯ ಮತ್ತು ತಾತ್ವಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಯಾಲೆ ಲಾ ಸ್ಕೂಲ್ನಲ್ಲಿ ಕಾನೂನು ಕೂಡ ಓದಿದ್ದಾರೆ.
ವಿವೇಕ್ ರಾಮಸ್ವಾಮಿ ಪತ್ನಿ ಅಪೂರ್ವಾ ಅವರೂ ವೈದ್ಯೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ.
ಇದನ್ನೂ ಓದಿ: ಟ್ವಿಟ್ಟರ್ನಲ್ಲಿ ಇಲಾನ್ ಮಸ್ಕ್ ಕತ್ತರಿಹಾಕಿದಂತೆ ನನ್ನ ಆಡಳಿತ ಇರುತ್ತೆ: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ
ವಿವೇಕ್ ರಾಮಸ್ವಾಮಿ 23ನೇ ವಯಸ್ಸಿನಲ್ಲಿ ಕ್ಯಾಂಪಸ್ ವೆಂಚರ್ ನೆಟ್ವರ್ಕ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. ಉದ್ಯಮ ಆರಂಭಿಸಲು ಬಯಸುವ ಯೂನಿವರ್ಸಿಟಿ ವಿದ್ಯಾರ್ಥಿಗಳ ಖಾಸಗಿ ನೆಟ್ವರ್ಕಿಂಗ್ ವೆಬ್ಸೈಟ್ ಅದಾಗಿತ್ತು.
2007ರಿಂದ 2014ರವರೆಗೆ ಕ್ಯುವಿಟಿ ಫೈನಾನ್ಷಿಯಲ್ ಎಂಬ ಹೆಡ್ಜ್ ಫಂಡ್ನಲ್ಲಿ ಕೆಲಸ ಮಾಡಿದರು.
2014ರಲ್ಲಿ ರೋಯಿವಂಟ್ ಸೈನ್ಸಸ್ ಎಂಬ ಬಯೋಟೆಕ್ನಾಲಜಿ ಸಂಸ್ಥೆಯನ್ನು ಸ್ಥಾಪಿಸಿದರು. ಅದರ ಜೊತೆಗೆ ಹಲವು ಉಪಸಂಸ್ಥೆಗಳನ್ನೂ ಆರಂಭಿಸಿದರು.
2020ರಲ್ಲಿ ಚಾಪ್ಟರ್ ಮೆಡಿಕೇರ್ ಎಂಬ ಮೆಡಿಕೇರ್ ನ್ಯಾವಿಗೇಶನ್ ಪ್ಲಾಟ್ಫಾರ್ಮ್ ಅನ್ನು ಸಹ-ಸಂಸ್ಥಾಪನೆ ಮಾಡಿದರು.
ಆನ್ಕೋರ್ ಬಯೋಫಾರ್ಮಾ, ಟೆಕ್ಮಿರಾ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಗಳಲ್ಲಿ ಅವರು ಛೇರ್ಮನ್ ಆಗಿದ್ದರು.
ಕೆನಡಾದ ಆರ್ಬುಟಸ್ ಬಯೋಫಾರ್ಮಾ ಎಂಬ ಸಂಸ್ಥೆಯ ಬೋರ್ಡ್ನ ಅಧ್ಯಕ್ಷರಾಗಿದ್ದರು.
2022ರಲ್ಲಿ ಸ್ಟ್ರೈವ್ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಸಹ-ಸಂಸ್ಥಾಪಿಸಿದರು.
ವಿವೇಕ್ ರಾಮಸ್ವಾಮಿ ವಿದ್ಯಾರ್ಥಿ ಕಾಲದಲ್ಲಿ ಉದಾರವಾದಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. 2004ರಲ್ಲಿ ಲಿಬರ್ಟೇರಿಯನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗೆ ವೋಟ್ ಹಾಕಿದ್ದಾಗಿ ಅವರು ಹೇಳಿಕೊಂಡಿದ್ದಾರೆ. 2016ರಿಂದೀಚೆ ಅವರು ರಿಪಬ್ಲಿಕನ್ ಪಕ್ಷದ ಪರ ರಾಜಕೀಯ ನಿಲುವು ಹೊಂದಿರುವುದು ಕಂಡು ಬಂದಿದೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ಗೆ ಬೆಂಬಲ ನೀಡಿದ್ದರು.
ಇದೀಗ ವಿವೇಕ್ ರಾಮಸ್ವಾಮಿ ತಾವೇ ಖುದ್ದಾಗಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಲು ಹೊರಟಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳಿಂದ ತಲಾ ಒಬ್ಬ ಅಭ್ಯರ್ಥಿ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಬಹುದು. ಆ ಅಭ್ಯರ್ಥಿಯಾಗಲು ಆಯಾ ಪಕ್ಷದೊಳಗೆ ಮತದಾನ ನಡೆಯುತ್ತದೆ. ಈ ರೇಸ್ನಲ್ಲಿ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಮಂದಿ ಇದ್ದಾರೆ. ಈ ಸ್ಪರ್ಧೆಯಲ್ಲಿ ವಿವೇಕ್ ರಾಮಸ್ವಾಮಿ 3ನೇ ಸ್ಥಾನದಲ್ಲಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತು ಫ್ಲೋರಿಡಾ ಗವರ್ನರ್ ರಾನ್ ಡೀಸ್ಯಾಂಟಿಸ್ ಅವರು ಬಹಳ ಮುಂದಿದ್ದಾರೆ.
ವಿವೇಕ್ ರಾಮಸ್ವಾಮಿ ರಿಪಬ್ಲಿಕನ್ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ತೀರಾ ಕಡಿಮೆ. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಅಭ್ಯರ್ಥಿಯಾಗಿ ಇವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಭಾರತದ ಜೊತೆ ಗಟ್ಟಿ ಸಂಬಂಧ ಇದ್ದರೆ ಅಮೆರಿಕಕ್ಕೆ ಆಗುವ ಪ್ರಯೋಜನವೇನು? ವಿವೇಕ್ ರಾಮಸ್ವಾಮಿ ಅನಿಸಿಕೆ ಇದು
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ