ಅಮೆರಿಕದ ಎಚ್1ಬಿ ವೀಸಾ ಯೋಜನೆಯನ್ನೇ ರದ್ದುಗೊಳಿಸುವುದಾಗಿ ಹೇಳಿದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ
H-1B Visa: ಅಮೆರಿಕದಲ್ಲಿ ವೃತ್ತಿಪರ ಉದ್ಯೋಗಿಗಳನ್ನು ಕರೆತರಲು ನೀಡಲಾಗುವ ಎಚ್1ಬಿ ವೀಸಾ ಯೋಜನೆ ಬದಲು ಅರ್ಹತೆ ಆಧಾರದಲ್ಲಿ ವೀಸಾ ನೀಡುವ ಸ್ಕೀಮ್ ತರುವುದಾಗಿ ವಿವೇಕ್ ರಾಮಸ್ವಾಮಿ ಹೇಳಿದ್ದಾರೆ. ಭಾರತ ಮೂಲದ ವಿವೇಕ್ ರಾಮಸ್ವಾಮಿ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.
ವಾಷಿಂಗ್ಟನ್, ಸೆಪ್ಟೆಂಬರ್ 17: ತಾನು ಅಮೆರಿಕದ ಅಧ್ಯಕ್ಷನಾದರೆ ಎಚ್1ಬಿ ವೀಸಾ ಯೋಜನೆಯನ್ನೇ (H-1B Visa) ರದ್ದುಗೊಳಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ (Vivek Ramaswamy) ಹೇಳಿದ್ದಾರೆ. ಲಾಟರಿ ಆಧಾರದಲ್ಲಿ ವೀಸಾ ಆಯ್ಕೆ ಮಾಡಲಾಗುವ ಎಚ್-1ಬಿ ವೀಸಾ ಯೋಜನೆಯನ್ನು ವಿವೇಕ್ ರಾಮಸ್ವಾಮಿ ಗುತ್ತಿಗೆ ಆಧಾರಿತ ಕೆಲಸಕ್ಕೆ ಹೋಲಿಸಿದ್ದಾರೆ. ತಾನು ಅಧಿಕಾರಕ್ಕೆ ಬಂದರೆ ಈ ಪದ್ಧತಿಗೆ ತಿಲಾಂಜಲಿ ಹಾಡಿ, ಅರ್ಹತೆ ಆಧಾರದ ಮೇಲೆ ವೀಸಾ ನೀಡುವ ವ್ಯವಸ್ಥೆ ತರುವುದಾಗಿ ಹೇಳಿದ್ದಾರೆ.
ಭಾರತ ಮೂಲದ ವಿವೇಕ್ ರಾಮಸ್ವಾಮಿ ಅವರು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ. ರಿಪಬ್ಲಿಕನ್ ಪಕ್ಷದೊಳಗಿನ ಅಭ್ಯರ್ಥಿ ಆಯ್ಕೆಗೆ ಅವರು ಸ್ಪರ್ಧಿಸಿದ್ದಾರೆ.
ಎಚ್1ಬಿ ವೀಸಾ ಎಂಬುದು ಅಮೆರಿಕಕ್ಕೆ ವೃತ್ತಿಪರ ಕೆಲಸದ ಮೇಲೆ ಹೋಗುವ ವಿದೇಶಿಯರಿಗೆ ನೀಡಲಾಗುವ ವರ್ಕ್ ವೀಸಾ ಆಗಿರುತ್ತದೆ. ಭಾರತದ ಐಟಿ ವಲಯದಲ್ಲಿ ಈ ವೀಸಾಗೆ ಅತೀವ ಬೇಡಿಕೆ ಇದೆ. ಅಮೆರಿಕದ ಮತ್ತು ಅಮೆರಿಕದಲ್ಲಿ ಕಚೇರಿ ಹೊಂದಿರುವ ಟೆಕ್ ಕಂಪನಿಗಳು ವಿದೇಶಗಳಿಂದ ವೃತ್ತಿಪರರನ್ನು ಕರೆತರಲು ಎಚ್1ಬಿ ವೀಸಾಗೆ ಅರ್ಜಿ ಸಲ್ಲಿಸುತ್ತವೆ. ಭಾರತ ಮತ್ತು ಚೀನಾದಿಂದಲೇ ಅತಿಹೆಚ್ಚು ಮಂದಿ ಇಂಥ ವೀಸಾಗೆ ಅರ್ಜಿ ಸಲ್ಲಿಸುವುದು. 2021ರಲ್ಲಿ ಲಭ್ಯ ಇದ್ದ 85,000 ಎಚ್1ಬಿ ವೀಸಾಗಳಿಗಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳ ಸಂಖ್ಯೆಯೇ ಬರೋಬ್ಬರಿ 8 ಲಕ್ಷ ಸಮೀಪ.
ಇದನ್ನೂ ಓದಿ: ದೆಹಲಿಯಲ್ಲಿ ಯಶೋಭೂಮಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ; ವಿಶ್ವದರ್ಜೆಯ ಈ ಸೆಂಟರ್ನ ವಿಶೇಷತೆಗಳೇನು?
ಎಚ್1 ಬಿ ವೀಸಾ ಯೋಜನೆ ರದ್ದು ಮಾಡುವ ಬಗ್ಗೆ ಮಾತನಾಡಿದ್ದು ವಿವೇಕ್ ರಾಮಸ್ವಾಮಿ ಮೊದಲಿಗರೇನಲ್ಲ. ರಿಪಬ್ಲಿಕನ್ ಪಕ್ಷದವರೇ ಆದ ಡೊನಾಲ್ಡ್ ಟ್ರಂಪ್ ಕೂಡ ಎಚ್1ಬಿ ವೀಸಾ ರದ್ದುಗೊಳಿಸುವ ಪ್ರಸ್ತಾಪ ಇಟ್ಟಿದ್ದರು. ಈಗ ವಿವೇಕ್ ರಾಮಸ್ವಾಮಿ ಆ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ.
ಈ ಲಾಟರಿ ವ್ಯವಸ್ಥೆಯ ಬದಲು ಅರ್ಹತಾ ಮಾನದಂಡದ ವೀಸಾ ವ್ಯವಸ್ಥೆ ಬರಬೇಕು. ಅಮೆರಿಕಕ್ಕೆ ಈ ಸರಣಿ ಆಧಾರಿತ ವಲಸೆ ಬೇಕಾಗಿಲ್ಲ. ಕುಟುಂಬ ಸದಸ್ಯರಾಗಿ ಬಂದವರು ದೇಶಕ್ಕೆ ತಮ್ಮ ಕೌಶಲ್ಯಗಳಿಂದ ಕೊಡುಗೆ ನೀಡುವ ಅರ್ಹತಾ ವಲಸಿಗರಲ್ಲ ಎಂಬುದು ವಿವೇಕ್ ರಾಮಸ್ವಾಮಿ ಹೇಳಿದ್ದಾರೆ.
ವಿವೇಕ್ ರಾಮಸ್ವಾಮಿ ತಮ್ಮ ಅಮೆರಿಕ ಹೆಜ್ಜೆಗಳನ್ನು ಮೆಲುಕು ಹಾಕಿದ್ದು, ತಮ್ಮ ಪೋಷಕರು ಕೈಯಲ್ಲಿ ಹಣ ಇಲ್ಲದೇ ನಾಲ್ಕು ದಶಕಗಳ ಹಿಂದೆ ಬಂದು ಇಲ್ಲಿ ಸಾಧನೆ ಮಾಡಿದ್ದನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಇಟಲಿಯಲ್ಲಿ ಕಾರಿನ ಮೇಲೆ ಮಿಲಿಟರಿ ಜೆಟ್ ಪತನ, ಐದು ವರ್ಷದ ಬಾಲಕಿ ಸಾವು, ಮೂವರಿಗೆ ಗಾಯ
‘ನನ್ನ ಪೋಷಕರು 40 ವರ್ಷಗಳ ಹಿಂದೆ ಕೈಯಲ್ಲಿ ಯಾವ ಹಣವೂ ಇಲ್ಲದೆ ಈ ದೇಶಕ್ಕೆ ಬಂದಿದ್ದರು. ಇವತ್ತು ನಾನು ಬಹುಕೋಟಿ ಡಾಲರ್ ಮೊತ್ತದ ಕಂಪನಿಗಳನ್ನು ಆರಂಭಿಸಿದ್ದೇನೆ’ ಎಂದು ವಿವೇಕ್ ರಾಮಸ್ವಾಮಿ ವಿವರ ನೀಡಿದ್ದಾರೆ.
ಅಮೆರಿಕ ಸರ್ಕಾರ ಒಂದು ವರ್ಷಕ್ಕೆ 65,000 ಎಚ್1ಬಿ ವೀಸಾಗಳಿಗೆ ಅವಕಾಶ ಕೊಡುತ್ತದೆ. ಈ ಪೈಕಿ 20,000 ವೀಸಾಗಳನ್ನು ಅಮೆರಿಕದ ಉನ್ನತ ಶಿಕ್ಷಣ ಪಡೆದವರಿಗೆ ಸಿಗುತ್ತದೆ. ಈಗ ಎಚ್1ಬಿ ವೀಸಾ ಸಂಖ್ಯೆಯನ್ನು 65,000ದಿಂದ 1.31 ಲಕ್ಷಕ್ಕೆ ಏರಿಸಲು ಕಾನೂನು ರೂಪಿಸುವ ಪ್ರಯತ್ನ ನಡೆಯುತ್ತಿದೆ.
ಇನ್ನಷ್ಟು ವಿಶ್ವ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ