ಪುಟಿನ್ ಓರ್ವ ಭಯೋತ್ಪಾದಕ, ವಿಶ್ವಸಂಸ್ಥೆಯಿಂದ ರಷ್ಯಾವನ್ನು ಹೊರಗಟ್ಟಿ: ಝೆಲೆನ್ಸ್ಕಿ ಆಗ್ರಹ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಓರ್ವ ಭಯೋತ್ಪಾದಕ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಸಂಸ್ಥೆಯಿಂದ ರಷ್ಯಾವನ್ನು ಹೊರಗಿಡುವಂತೆ ಆಗ್ರಹಿಸಿದ್ದಾರೆ.
ಕೀವ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಓರ್ವ ಭಯೋತ್ಪಾದಕ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಸಂಸ್ಥೆಯಿಂದ ರಷ್ಯಾವನ್ನು ಹೊರಗಿಡುವಂತೆ ಆಗ್ರಹಿಸಿದ್ದಾರೆ. ಉಕ್ರೇನ್ನ ನಗರವಾದ ಕ್ರೆಮೆನ್ಚುಕ್ನ ಸಾವಿರಕ್ಕೂ ಹೆಚ್ಚು ಮಂದಿ ಇದ್ದ ಶಾಪಿಂಗ್ ಮಾಲ್ ಮೇಲೆ ರಷ್ಯಾವು ಕ್ಷಿಪಣಿ ದಾಳಿ ನಡೆಸಿ ಕನಿಷ್ಠ 18 ಮಂದಿ ಸಾವನ್ನಪ್ಪಿದ ಎರಡು ದಿನಗಳ ಬಳಿಕ ಝೆಲೆನ್ಸ್ಕಿ ಈ ಮಾತುಗಳನ್ನಾಡಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ ನಡುವೆ ಬಹಳ ದಿನಗಳಿಂದ ಯುದ್ಧ ನಡೆಯುತ್ತಿದ್ದು, ಇದುವರೆಗೆ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ಸ್ಥಳಾಂತರಗೊಂಡಿದ್ದಾರೆ. ಹಾಗೂ ಯುದ್ಧಗ್ರಸ್ಥ ಪ್ರದೇಶದಿಂದ ಪಲಾಯನ ಮಾಡುವಂತೆ ಒತ್ತಾಯಿಸಲಾಗಿತ್ತು.
ಉಕ್ರೇನ್ ನೆಲದಲ್ಲಿ ರಷ್ಯಾದ ಆಕ್ರಮಣಕಾರರ ಕ್ರಮಗಳನ್ನು ತನಿಖೆ ಮಾಡಲು ಹಾಗೂ ದೇಶವನ್ನು ಹೊಣೆಗಾರರನ್ನಾಗಿ ಮಾಡಲು ಅಂತಾರಾಷ್ಟ್ರೀಯ ನ್ಯಾಯಮಂಡಳಿಯನ್ನು ಸ್ಥಾಪಿಸುವಂತೆ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ.
193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯಿಂದ ರಷ್ಯಾವನ್ನು ಹೊರಹಾಕುವಂತೆ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ. ಯುಎನ್ ಚಾರ್ಟರ್ನ ಆರ್ಟಿಕಲ್ 6 ಅನ್ನು ಉಲ್ಲೇಖಿಸಿ, ಪ್ರಸ್ತುತ ಚಾರ್ಟರ್ನಲ್ಲಿರುವ ತತ್ವಗಳನ್ನು ನಿರಂತರವಾಗಿ ಉಲ್ಲಂಘಿಸಿದ ಸದಸ್ಯರನ್ನು ಶಿಫಾರಸಿನ ಮೇರೆಗೆ ಸಾಮಾನ್ಯ ಸಭೆಯ ಸಂಘಟನೆಯಿಂದ ಹೊರಹಾಕಬಹುದು ಎಂದು ಹೇಳಿದ್ದಾರೆ.
ರಷ್ಯಾ ಇನ್ನಷ್ಟು ಹತ್ಯೆ ಮಾಡದಂತೆ ತಡೆಯಲು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕಿದೆ. ವಿಶ್ವಸಂಸ್ಥೆಯು ವಿಶೇಷ ಪ್ರತಿನಿಧಿ ಅಥವಾ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯನ್ನು ಕಳುಹಿಸುವಂತೆ ಸಲಹೆ ನೀಡಿದರು.
ರಷ್ಯಾದ ಉಚ್ಛಾಟನೆಯು ವಾಸ್ತವಿಕವಾಗಿ ಅಸಾಧ್ಯವಾಗಿದೆ. ವಿಶ್ವಸಂಸ್ಥೆಯ ಶಾಶ್ವತ ಸದಸ್ಯನಾಗಿರುವ ರಷ್ಯಾವನ್ನು ವಿಶ್ವಸಂಸ್ಥೆಯಿಂದ ಹೊರ ಹಾಕುವುದು ಅಸಾಧ್ಯವಾಗಿದೆ. ಏಕೆಂದರೆ ರಷ್ಯಾಗೆ ವಿಶ್ವಸಂಸ್ಥೆಯಲ್ಲಿ ವಿಟೋ ಅಧಿಕಾರ ಇರುವುದರಿಂದ ಈ ನಿರ್ಧಾರ ಕೈಗೊಳ್ಳುವುದು ಅಸಾಧ್ಯವಾಗಿದೆ.
ಕ್ರೆಮೆನ್ಚುಕ್ನ ಆಗ್ನೇಯ ಭಾಗದಲ್ಲಿರುವ ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿ ರಷ್ಯಾದ ಮತ್ತೊಂದು ಕ್ಷಿಪಣಿ ದಾಳಿಯನ್ನು ವರದಿ ಮಾಡಿದೆ. ಡಿನಿಪ್ರೋ ನಗರದಲ್ಲಿ ಅವಶೇಷಗಳಡಿ ಸಿಲುಕಿರುವ ಜನರಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂಬುದು ತಿಳಿದುಬಂದಿದೆ.