ಕೇಂದ್ರ ಸಚಿವ ಸಂಪುಟವು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ಕ್ಕೆ ತಿದ್ದುಪಡಿ ತರುವ ಹೊಸ ಮಸೂದೆಗೆ ಅಸ್ತು ಎಂದಿದೆ. ಈ ಮೂಲಕ ಭಾರತದಲ್ಲಿ ಮಹಿಳೆ ಹಾಗೂ ಪುರುಷರಿಗೆ ವಿವಾಹದ ವಯೋಮಿತಿಯಲ್ಲಿ ಏಕರೂಪದ ನಿಯಮ ಜಾರಿಗೆ ಬರಲಿದೆ. ಈ ಮಸೂದೆಯನ್ನು ಕೇಂದ್ರವು ಈ ಬಾರಿಯ ಸಂಸತ್ ಅಧಿವೇಶನದಲ್ಲೇ ಮಂಡಿಸುವ ಸಾಧ್ಯತೆ ಇದ್ದು, ಮುಂದಿನ ವಾರ ಸದನದ ಮುಂದೆ ಇಡುವ ನಿರೀಕ್ಷೆ ಇದೆ. ಈಗಾಗಲೇ ಈ ನಿರ್ಧಾರದ ಕುರಿತು ಪರ ವಿರೋಧಗಳು ದೇಶದಲ್ಲಿ ಕೇಳಿಬಂದಿದ್ದು, ಚರ್ಚೆಯಾಗುತ್ತಿದೆ. ಸಂಸತ್ತಿನಲ್ಲೂ ಈ ವಿಚಾರ ಚರ್ಚೆಯಾಗುತ್ತಿದೆ. ಹೀಗಿರುವಾಗ ವಿವಿಧ ದೇಶಗಳಲ್ಲಿ ಮಹಿಳೆಯರಿಗೆ ವಿವಾಹದ ವಯೋಮಿತಿ ಎಷ್ಟಿರಬಹುದು ಎಂಬ ಕುತೂಹಲ ನಿಮ್ಮಲ್ಲಿದೆಯೇ? ಈ ಕುರಿತ ಮಾಹಿತಿ ಇಲ್ಲಿದೆ. ಜಗತ್ತಿನ ಹಲವು ದೇಶಗಳಲ್ಲಿ ವಿವಾಹದ ಕುರಿತ ಕಾನೂನುಗಳು ವಿಭಿನ್ನವಾಗಿವೆ. ಹಲವು ರಾಷ್ಟ್ರಗಳು ವಯೋಮಿತಿಯನ್ನು ಬಹಳ ಕಡಿಮೆ ಇಟ್ಟಿವೆ. ಈ ಕುರಿತ ಕುತೂಹಲಕರ ಮಾಹಿತಿ ನಿಮ್ಮ ಮುಂದಿದೆ.
ಯುರೋಪ್‌ನಲ್ಲಿ ಮದುವೆಯಾಗಲು ಅತ್ಯಂತ ಕಡಿಮೆ ವಯೋಮಿತಿ ಹೊಂದಿದ ದೇಶ ಯಾವುದು?
ಎಸ್ಟೋನಿಯಾ ಈಗ ಯುರೋಪ್‌ನಲ್ಲಿ ವಿವಾಹಕ್ಕೆ ಅತ್ಯಂತ ಕಡಿಮೆ ವಯೋಮಿತಿ ಹೊಂದಿದ ದೇಶವಾಗಿದೆ. ಹದಿಹರೆಯದ ಯುವಕ- ಯುವತಿಯವರು ಪೋಷಕರ ಒಪ್ಪಿಗೆಯೊಂದಿಗೆ ತಮ್ಮ 15 ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬಹುದಾಗಿದೆ. ಏತನ್ಮಧ್ಯೆ ಸ್ಪಾನಿಷ್ ಸರ್ಕಾರವು 2015 ರಲ್ಲಿ ಮದುವೆಯ ವಯಸ್ಸನ್ನು 14 ರಿಂದ 16 ಕ್ಕೆ ಏರಿಸುವುದಾಗಿ ಘೋಷಿಸಿತು. ಇದಕ್ಕೆ ಕಾರಣ ಯುರೋಪ್ನ ಉಳಿದ ರಾಷ್ಟ್ರಗಳಿಗೆ ವಯೋಮಿತಿ ನಿರ್ಬಂಧಕ್ಕೆ ತನ್ನದನ್ನು ಸಮನ್ವಯಗೊಳಿಸಲು ಈ ನಿರ್ಧಾರವನ್ನು ಸ್ಪಾನಿಷ್ ಸರ್ಕಾರ ತೆಗೆದುಕೊಂಡಿತು.
ಇಂಗ್ಲೆಂಡ್ನಲ್ಲಿ ವಿವಾಹಕ್ಕೆ ವಯೋಮಿತಿ ಎಷ್ಟು?
ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿರುವ ಜನರು ತಮ್ಮ 18ನೇ ವಯಸ್ಸಿನಲ್ಲಿ ಅಥವಾ ಪೋಷಕರ ಒಪ್ಪಿಗೆಯೊಂದಿಗೆ 16 ಅಥವಾ 17 ನೇ ವಯಸ್ಸಿನಲ್ಲಿ ದಾಂಪತ್ಯಕ್ಕೆ ಕಾಲಿಡಬಹುದು. ಅಚ್ಚರಿಯ ಸಂಗತಿಯೆಂದರೆ, ಈ ವಯಸ್ಸಿಗಿಂತ ಕಡಿಮೆ ವಯಸ್ಸಿನವರು ಮದುವೆಯಾದರೂ ಅಂತಹ ಕಾರ್ಯಕ್ರಮ ಅಥವಾ ಸಮಾರಂಭಗಳನ್ನು ನಿರ್ಬಂಧಿಸುವ ಯಾವುದೇ ಕಾನೂನುಗಳು ಇಂಗ್ಲೆಂಡ್ನಲ್ಲಿಲ್ಲ ಎಂದು ಬಿಬಿಸಿ ತಿಳಿಸಿದೆ.
12ನೇ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬಹುದು ಈ ದೇಶದ ಜನರು:
ಟ್ರಿನಿಡಾಡ್ ಮತ್ತು ಟೊಬಾಗೊ ಕುರಿತ ಅಮೇರಿಕಾದ ಮೂಲದ ವಿಭಾಗವೊಂದರ 2014 ರ ಮಾನವ ಹಕ್ಕುಗಳ ವರದಿಯ ಪ್ರಕಾರ, ಅಧಿಕೃತ ವೈವಾಹಿಕ ವಯಸ್ಸು ಪುರುಷರು ಮತ್ತು ಮಹಿಳೆಯರಿಗೆ 18 ಆಗಿದ್ದರೆ, ಮುಸ್ಲಿಮರು ಮತ್ತು ಹಿಂದೂಗಳು ತಮ್ಮದೇ ಆದ ವಿವಾಹ ಕಾಯಿದೆಯನ್ನು ಹೊಂದಿದ್ದಾರೆ. ಮುಸ್ಲಿಮ್ ಪುರುಷರು 16 ಮತ್ತು ಯುವತಿಯರು ತಮ್ಮ 12 ನೇ ವಯಸ್ಸಿನಲ್ಲಿ ಮದುವೆಯಾಗಬಹುದು. ಹಿಂದೂ ಪುರುಷ 18 ಮತ್ತು ಯುವತಿ 14 ನೇ ವಯಸ್ಸಿನಲ್ಲಿ ಮದುವೆಯಾಗಬಹುದು.
ಅಮೇರಿಕಾ:
ಅಮೇರಿಕಾದ ಪ್ರತಿ ರಾಜ್ಯಗಳಲ್ಲೂ ವಿವಾಹಕ್ಕೆ ಬೇರೆ ಬೇರೆ ವಯೋಮಿತಿಯಿದೆ. ಆಯಾ ರಾಜ್ಯದ ಕಾನೂನುಗಳು, ಮತ್ತು ನಂಬಿಕೆಗಳನ್ನಾಧರಿಸಿ ಈ ನಿಯಮ ರೂಪುಗೊಂಡಿದೆ. ಅದಾಗ್ಯೂ ಸಾಮಾನ್ಯವಾಗಿ ಹೇಳುವುದಾದರೆ ಪ್ರತೀ ವ್ಯಕ್ತಿ 18 ತುಂಬಿದ ನಂತರ ಅಧಿಕೃತವಾಗಿ ಮದುವೆಯಾಗಬಹುದು. ಆದರೆ ಇದಕ್ಕೆ ಕೆಲವೊಂದು ರಾಜ್ಯಗಳು ಹೊರತಾಗಿವೆ. ನೆಬ್ರಸ್ಕಾದಲ್ಲಿ ವಿವಾಹಕ್ಕೆ 19ರ ವಯೋಮಿತಿಯನ್ನು ಗೊತ್ತುಪಡಿಸಲಾಗಿದೆ. ಮಿಸಿಸ್ಸಿಪಿಯಲ್ಲಿ 21 ವರ್ಷದ ನಂತರ ವಿವಾಹವಾಗಬಹುದು. ಬಹಳಷ್ಟು ರಾಜ್ಯಗಳಲ್ಲಿ ವಯಸ್ಕರು ಎಂದು ಪರಿಗಣಿತವಾಗುವ ವಯಸ್ಸಿನಲ್ಲಿ ವಿವಾಹ ಮಾಡಲಾಗುತ್ತದೆ. ಇದಕ್ಕೆ ಅಪವಾದಗಳೂ ಇವೆ. ಉದಾಹರಣೆಗೆ ಅಲಬಾಮಾದಲ್ಲಿ ವಿವಾಹವಾಗಲು 18 ವರ್ಷವಾಗಿರಬೇಕು. ಆದರೆ ವ್ಯಕ್ತಿಗಳನ್ನು 19 ವರ್ಷದ ನಂತರ ವಯಸ್ಕರು ಎಂದು ಅಧಿಕೃತವಾಗಿ ಗುರುತಿಸಲಾಗುತ್ತದೆ.
ಚೀನಾದಲ್ಲಿ ವಿವಾಹ ವಯೋಮಿತಿ ಎಷ್ಟು?:
ಚೀನಾದಲ್ಲಿ, ಮದುವೆ ನೋಂದಣಿ ಪುಕ್ರಿಯೆಗಳು ವಯಸ್ಸಿನ ಮಿತಿಗೆ ಒಳಪಟ್ಟಿವೆ. ಅದರಂತೆ, ಪುರುಷರಿಗೆ ಕಾನೂನುಬದ್ಧ ವಿವಾಹದ ವಯಸ್ಸು 22 ಆಗಿದ್ದು, ಮಹಿಳೆಯರಿಗೆ ಕನಿಷ್ಠ 20 ವರ್ಷವಾಗಿರಬೇಕು. ಆದರೆ ಪ್ರಸ್ತುತ ಚೀನಾದಲ್ಲಿ ಜನಸಂಖ್ಯೆ ಇಳಿಮುಖವಾಗುತ್ತಿರುವ ಕಾರಣ, ವಿವಾಹದ ವಯಸ್ಸನ್ನು 18ಕ್ಕೆ ಇಳಿಸುವ ಚರ್ಚೆ ಪ್ರಾರಂಭವಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಈ ದೇಶದಲ್ಲಿ ಬಾಲ್ಯವಿವಾಹ ಅಧಿಕೃತ!
ಪಶ್ಚಿಮ ಆಫ್ರಿಕಾದಲ್ಲಿರುವ ದೇಶ ‘ನೈಜರ್’. ವಾಸ್ತವವಾಗಿ ಈ ದೇಶದ ಅಧಿಕೃತ ಕಾನೂನಿನ ಪ್ರಕಾರ, ಯುವಕರು 18 ವರ್ಷಕ್ಕೆ ಹಾಗೂ ಯುವತಿಯರು 15 ವರ್ಷಕ್ಕೆ ಮದುವೆಯಾಗಬಹುದು. ಆದರೆ ಈ ದೇಶದಲ್ಲಿ ಕುಟುಂಬದ ಕಾನೂನಿಗೂ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಅಧಿಕೃತ ಮದುವೆ ವಯಸ್ಸಿಗೂ ಮುನ್ನ ಮದುವೆಯಾದರೂ ಅದು ಅಧಿಕೃತವಾಗುತ್ತದೆ! ವರದಿಗಳ ಪ್ರಕಾರ ನೈಜರ್ನಲ್ಲಿ 76 ಪ್ರತಿಶತ ಯುವತಿಯರು 18 ವರ್ಷಕ್ಕೂ ಮೊದಲೇ ವಿವಾಹವಾಗುತ್ತಾರೆ. ಅದರಲ್ಲಿ 28 ಪ್ರತಿಶತ ಯುವತಿಯರು 15 ವರ್ಷಕ್ಕೂ ಮೊದಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.
ಯೂನಿಸೆಫ್ ವರದಿ ಪ್ರಕಾರ ವಿಶ್ವದಲ್ಲೇ ಅತ್ಯಂತ ಹೆಚ್ಚು ಬಾಲ್ಯವಿವಾಹವಾಗುವುದು ನೈಜರ್ನಲ್ಲಿ. ಈ ದೇಶದ ನಗರಭಾಗಗಳ ಯುವತಿಯರು ಬಾಲ್ಯ ವಿವಾಹದಿಂದ ಪಾರಾಗುತ್ತಾರೆ. ಆದರೆ ಹಳ್ಳಿ ಭಾಗದ ಯುವತಿಯರು ಆರ್ಥಿಕ ಕಾರಣ, ಶಿಕ್ಷಣ ಸೇರಿದಂತೆ ಹಲವಾರು ಕಾರಣಗಳಿಂದ ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:
Published On - 12:03 pm, Sat, 18 December 21