Truth Social: ತಮ್ಮದೇ ಆದ ಸೋಷಿಯಲ್ ಮೀಡಿಯಾ ಆಪ್ ಸಿದ್ಧಪಡಿಸುತ್ತಿರುವ ಡೊನಾಲ್ಡ್ ಟ್ರಂಪ್! ಹೇಗಿರಲಿದೆ? ವಿವರಗಳೇನು?

Explained: ಟ್ರಂಪ್ 2024 ರಲ್ಲಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರುಥ್ ಸೋಷಿಯಲ್ (Truth Social) ಟ್ರಂಪ್ ತನ್ನ ಬೆಂಬಲಿಗರೊಂದಿಗೆ ಸಂವಾದಿಸಲು ಬಳಸುವ ಅಧಿಕೃತ ಆಪ್ ಆಗಿ ಹೊರಹೊಮ್ಮಲಿದೆ ಎಂದು ಹೇಳಲಾಗಿದೆ.

Truth Social: ತಮ್ಮದೇ ಆದ ಸೋಷಿಯಲ್ ಮೀಡಿಯಾ ಆಪ್ ಸಿದ್ಧಪಡಿಸುತ್ತಿರುವ ಡೊನಾಲ್ಡ್ ಟ್ರಂಪ್! ಹೇಗಿರಲಿದೆ? ವಿವರಗಳೇನು?
ಡೊನಾಲ್ಡ್​ ಟ್ರಂಪ್​
Edited By:

Updated on: Feb 20, 2022 | 10:27 AM

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಜಾಗತಿಕವಾಗಿ ಮುಖ್ಯ ಎನಿಸಿರುವ ಎಲ್ಲಾ ಸಾಮಾಜಿಕ ಜಾಲತಾಣಗಳಿಂದ (Social Media) ಇಲ್ಲವಾಗಿ ವರ್ಷವೇ ಕಳೆಯಿತು. ಟ್ವಿಟರ್ (Twitter, Facebook) ಸಹಿತ ಮುಖ್ಯ ಸೋಷಿಯಲ್ ಮೀಡಿಯಾಗಳಿಂದ ಟ್ರಂಪ್ ಬ್ಯಾನ್ ಆಗಿದ್ದರು. ಇದೀಗ ಡೊನಾಲ್ಡ್ ಟ್ರಂಪ್ ತನ್ನದೇ ಆದ ಹೊಸ ಸಾಮಾಜಿಕ ಜಾಲತಾಣ ಲಾಂಚ್ ಮಾಡಲು ಮುಂದಾಗಿದ್ದಾರೆ. ಟ್ರುಥ್ ಸೋಷಿಯಲ್ (Truth Social) ಎಂದು ಅದಕ್ಕೆ ಹೆಸರಿಡಲಾಗಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಅಧಿಕೃತವಾಗಿ ಡೊನಾಲ್ಡ್ ಟ್ರಂಪ್ ಪುತ್ರ ಮಾಹಿತಿ ನೀಡಿದ್ದಾರೆ. ಟ್ರುಥ್ ಸೋಷಿಯಲ್​ನಲ್ಲಿ ಡೊನಾಲ್ಡ್ ಟ್ರಂಪ್​ ಮೊದಲ ಪೋಸ್ಟ್​ ಮಾಡಿದ್ದು, ನಿಮ್ಮ ಫೇವರಿಟ್ ಅಧ್ಯಕ್ಷ ಶೀಘ್ರವೇ ನಿಮ್ಮನ್ನು ನೋಡಲಿದ್ದಾರೆ, ತಯಾರಾಗಿರಿ ಎಂದು ಹೇಳಿದ್ದಾರೆ.

ಟ್ರಂಪ್ ಈ ಹೊಸ ಆಪ್​ನ ಬಗ್ಗೆ ಕಳೆದ ವರ್ಷದ ಅಕ್ಟೋಬರ್​​ನಲ್ಲೇ ಮಾಹಿತಿ ನೀಡಿದ್ದರು. ಫೇಸ್​ಬುಕ್ ಹಾಗೂ ಟ್ವಿಟರ್​ಗೆ ಎದುರಾಗಿ ಈ ಆಪ್​ ತಯಾರಿಸುವುದಾಗಿ ಟ್ರಂಪ್ ತಿಳಿಸಿದ್ದರು. ಯುಎಸ್ ಕ್ಯಾಪಿಟೊಲ್ ಕಟ್ಟಡದ ಮೇಲಿನ ದಾಳಿ ಬಳಿಕ ಡೊನಾಲ್ಡ್ ಟ್ರಂಪ್ ಅವರನ್ನು ಫೇಸ್​ಬುಕ್, ಟ್ವಿಟರ್ ಸಾಮಾಜಿಕ ಜಾಲತಾಣಗಳಿಂದ ಬ್ಯಾನ್ ಮಾಡಲಾಗಿತ್ತು. ಹೀಗಾಗಿ ಪರ್ಯಾಯ ಆಪ್ ರಚನೆಗೆ ಟ್ರಂಪ್ ಮುಂದಾಗಿದ್ದರು.

ಟ್ರಂಪ್ ಯಾಕೆ ಸ್ವಂತ ಸಾಮಾಜಿಕ ಜಾಲತಾಣ ಆಪ್ ನಿರ್ಮಾಣ ಮಾಡುತ್ತಿದ್ದಾರೆ?

ಟ್ವಿಟರ್ ಹಾಗೂ ಫೇಸ್​ಬುಕ್​ನಂತಹ ಘಟಾನುಘಟಿ ಅಪ್ಲಿಕೇಷನ್​ಗಳಿಗೆ ಸೆಡ್ಡು ಹೊಡೆಯಲು ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ. ತಮ್ಮದೇ ಆದ ವೇದಿಕೆ ಸಿದ್ಧಪಡಿಸಲು ಮುಂದಾಗಿದ್ದಾರೆ. ಈ ಆಪ್​ನ್ನು ಟ್ರಂಪ್ ಮೀಡಿಯಾ & ಟೆಕ್ನಾಲಜಿ ಗ್ರೂಪ್ ನಿರ್ಮಾಣ ಮಾಡುತ್ತಿದೆ. ಈ ಅಪ್ಲಿಕೇಷನ್ ಓಪನ್ ಹಾಗೂ ಫ್ರೀ ಮಾತುಗಳಿಗೆ ಅವಕಾಶ ನೀಡುತ್ತದೆ ಎಂದು ಹೇಳಲಾಗಿದೆ. ಯುಎಸ್​ನಲ್ಲಿ ಬಲಪಂಥೀಯ ಧೋರಣೆಯ ಅಪ್ಲಿಕೇಷನ್​ಗಳು ವೇಗಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಈ ಆಪ್​ ಸಹ ಬಿಡುಗಡೆ ಆಗುತ್ತಿದೆ. ಯುಎಸ್​ನಲ್ಲಿ ಟ್ವಿಟರ್ ಬದಲಾಗಿ ಪಾರ್ಲರ್ (Parler), ಗ್ಯಾಬ್ (Gab) ಮತ್ತು GETTR ಎಂಬ ಅಪ್ಲಿಕೇಷನ್​ಗಳು ಸ್ಥಾನ ಪಡೆದುಕೊಳ್ಳುತ್ತಿದೆ.

ಪಾರ್ಲರ್​ನಂತೆ ಟ್ರಂಪ್​ನ ಹೊಸ ಸಾಮಾಜಿಕ ಜಾಲತಾಣ ಬಹಳಷ್ಟು ಮಂದಿ ಟ್ರಂಪ್ ಬೆಂಬಲಿಗರನ್ನು ಸೆಳೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಟ್ರಂಪ್ 2024 ರಲ್ಲಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರುಥ್ ಸೋಷಿಯಲ್ ಟ್ರಂಪ್ ತನ್ನ ಬೆಂಬಲಿಗರೊಂದಿಗೆ ಸಂವಾದಿಸಲು ಬಳಸುವ ಅಧಿಕೃತ ಆಪ್ ಆಗಿ ಹೊರಹೊಮ್ಮಲಿದೆ ಎಂದು ಹೇಳಲಾಗಿದೆ.

ಟ್ರಂಪ್ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಟ್ವಿಟರ್​ನಲ್ಲಿ ಒಟ್ಟು 20,000 ಕ್ಕೂ ಅಧಿಕ ಟ್ವೀಟ್​ಗಳನ್ನು ಮಾಡಿದ್ದರು. ಸಾಂಪ್ರದಾಯಿಕ ಮಾಧ್ಯಮವನ್ನು ಮೀರಿ ಮೈಕ್ರೋಬ್ಲಾಗಿಂಗ್ ಸೈಟ್ ಬಳಕೆ ಮಾಡಿದ್ದರು.

ಟ್ರುಥ್ ಸೋಷಿಯಲ್ ಹೇಗೆ ಕೆಲಸ ಮಾಡುತ್ತದೆ?

ಇದರಲ್ಲಿ ಪೋಸ್ಟ್​ಗಳನ್ನು ‘ಟ್ರುಥ್’ ಎಂದು ಕರೆಯಲಾಗುತ್ತದೆ. ಟ್ವಿಟರ್​ನಲ್ಲಿ ಟ್ವೀಟ್ ಎಂದಂತೆ ಇಲ್ಲಿ ಟ್ರುಥ್ ಎಂದು ಹೆಸರಿಡಲಾಗಿದೆ. ಅದಕ್ಕೆ ರಿಪ್ಲೈ ಬಟನ್ ಆಯ್ಕೆ ಕೂಡ ಇರಲಿದೆ. ಶೇರ್ ಹಾಗೂ ಲೈಕ್ ಆಯ್ಕೆ ಕೂಡ ಇರಲಿದೆ. ಅಪ್ಲಿಕೇಷನ್​ನಲ್ಲಿ ಒಬ್ಬರು ಮತ್ತೊಬ್ಬರನ್ನು ಫಾಲೋ ಮಾಡಬಹುದು. ಹಾಗೇ ಟ್ರೆಂಡಿಂಗ್ ಟಾಪಿಕ್​ಗಳನ್ನು ಕೂಡ ಹಿಂಬಾಲಿಸಬಹುದು. ಟ್ರಂಪ್ ಈ ಅಪ್ಲಿಕೇಷನ್​ಗೆ ಫೆಬ್ರವರಿ 10ರಂದು ಸೇರಿದ್ದಾರೆ. ಹಾಗೂ ಅವರಿಗೆ ಅಪ್ಲಿಕೇಷನ್ ಲಾಂಚ್​ಗೂ ಮೊದಲೇ, ಈಗಾಗಲೇ 175 ಫಾಲೋವರ್ಸ್ ಇದ್ದಾರೆ ಎಂದು ತಿಳಿದುಬಂದಿದೆ.

ಈ ಅಪ್ಲಿಕೇಷನ್​ನ ಬೀಟಾ ವರ್ಷನ್ ಕಳೆದ ಡಿಸೆಂಬರ್​ನಲ್ಲಿ ಕೆಲವರಿಗೆ ಮಾತ್ರ ಅಧಿಕೃತ ಪ್ರವೇಶ ನೀಡಿ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರಿಗೆ ಈ ಅಪ್ಲಿಕೇಷನ್ ಫೆಬ್ರವರಿ 21 ರಂದು ಬಿಡುಗಡೆ ಆಗುತ್ತದೆ ಎನ್ನಲಾಗಿತ್ತು. ಆದರೆ ಸದ್ಯದ ಮಾಹಿತಿಯಂತೆ ಆಪ್ ಬಿಡುಗಡೆ ಮಾರ್ಚ್​ಗೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಈ ಅಪ್ಲಿಕೇಷನ್ ಭಾರತದಲ್ಲಿ ಆಪ್ ಸ್ಟೋರ್​ನಲ್ಲಿ ಸದ್ಯ ಲಭ್ಯವಿಲ್ಲ. ಇದು ಕೇವಲ ಯುಎಸ್ ಜನರಿಗೆ ಮಾತ್ರ ಸಿಗುತ್ತದೆಯೇ ಎಂಬ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದೊರಕಿಲ್ಲ.

ಇದನ್ನೂ ಓದಿ: ವ್ಹೈಟ್ ಹೌಸ್​ನಿಂದ ಹೊರಬಿದ್ದ ನಂತರವೂ ಕಿಮ್ ಜಾಂಗ್-ಉನ್ ಜೊತೆ ಸಂಪರ್ಕದಲ್ಲಿದ್ದೇನೆ ಎಂದರು ಡೊನಾಲ್ಡ್ ಟ್ರಂಪ್: ವರದಿ

ಇದನ್ನೂ ಓದಿ: ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ರನ್ನು ಕೊಂದೇಬಿಡುತ್ತೇನೆ ಎಂದು 2020ರಿಂದ ಬೆನ್ನತ್ತಿದ್ದ 72ವರ್ಷದ ವೃದ್ಧ ಅರೆಸ್ಟ್ !

Published On - 10:25 am, Sun, 20 February 22