AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶದ ನೂತನ ಅಧ್ಯಕ್ಷ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಯಾರು? ಭಾರತದ ಬಗ್ಗೆ ಅವರ ನಿಲುವೇನು?

ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಅವರು ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ನ್ಯಾಷನಲಿಸ್ಟ್ ಪಾರ್ಟಿಯ (BNP) ಹಿರಿಯ ನಾಯಕರಾಗಿದ್ದು, ಈ ಹಿಂದೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿರೋಧ ಪಕ್ಷದಲ್ಲಿ ದೀರ್ಘಕಾಲ ಪ್ರಮುಖ ಸಾಂಸ್ಥಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ನಂತರ, ಅವರು ದೇಶದ ಅತ್ಯುನ್ನತ ಅಧ್ಯಕ್ಷೀಯ ಹುದ್ದೆಗೆ ಆಯ್ಕೆಯಾಗಿದ್ದಾರೆ. ಕಳೆದ ವಾರ ಬಿಎನ್‌ಪಿ ಪಕ್ಷವು ಅಲಂಗೀರ್ ಅವರನ್ನು ತನ್ನ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿತ್ತು.

ಬಾಂಗ್ಲಾದೇಶದ ನೂತನ ಅಧ್ಯಕ್ಷ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಯಾರು? ಭಾರತದ ಬಗ್ಗೆ ಅವರ ನಿಲುವೇನು?
Mirza Fakhrul Islam Alamgir Image Credit source: x
ಸುಷ್ಮಾ ಚಕ್ರೆ
|

Updated on: Aug 20, 2026 | 9:55 PM

Share

ಢಾಕಾ, ಆಗಸ್ಟ್ 20: ಬಾಂಗ್ಲಾದೇಶದ ಜಾತೀಯ ಸಂಸತ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (BNP) ಹಿರಿಯ ನಾಯಕರಾದ 78 ವರ್ಷದ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ 23ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದ 35 ವರ್ಷಗಳಲ್ಲೇ ನಡೆದ ಮೊದಲ ಸ್ಪರ್ಧಾತ್ಮಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಜಯ ಗಳಿಸಿದ್ದಾರೆ. 1990ರ ದಶಕದಲ್ಲಿ ಬಿಎನ್‌ಪಿ (BNP) ಸೇರಿದ ಅಲಂಗೀರ್ ಪಕ್ಷದ ಅತ್ಯಂತ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಬೆಳೆದರು.

78 ವರ್ಷದ ಮಿರ್ಜಾ ಅಲಂಗೀರ್ ಅವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿ, ನಂತರ ಸಾರ್ವಜನಿಕ ಸೇವೆ ಹಾಗೂ ರಾಜಕೀಯ ರಂಗ ಪ್ರವೇಶಿಸಿದರು. 1990ರ ದಶಕದಲ್ಲಿ ಬಿಎನ್‌ಪಿಗೆ ಸೇರ್ಪಡೆಯಾದ ಇವರು, ಕೃಷಿ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಗಳಲ್ಲಿ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷದ ಕಷ್ಟದ ದಿನಗಳಲ್ಲಿ ಬಿಎನ್‌ಪಿಯನ್ನು ಮುನ್ನಡೆಸಿದ ಪ್ರಮುಖ ನಾಯಕರಾಗಿದ್ದ ಇವರು, ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ತಮ್ಮ ಸಚಿವ ಸ್ಥಾನಕ್ಕೆ ಹಾಗೂ ಬಿಎನ್‌ಪಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಬಿಎನ್‌ಪಿ ಅಭ್ಯರ್ಥಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಆಯ್ಕೆ

ಖಾಲೆದಾ ಜಿಯಾ ಜೈಲುವಾಸದಲ್ಲಿದ್ದಾಗ ಹಾಗೂ ತಾರಿಕ್ ರಹಮಾನ್ ವಿದೇಶದಲ್ಲಿದ್ದ ಕಷ್ಟದ ದಿನಗಳಲ್ಲಿ ಮಿರ್ಜಾ ಅಲಂಗೀರ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಬಿಎನ್‌ಪಿಯನ್ನು ಮುನ್ನಡೆಸಿದ್ದರು. ರಾಜಕೀಯ ಪ್ರವೇಶಿಸುವ ಮುನ್ನ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಇವರು, 1971ರ ಬಾಂಗ್ಲಾದೇಶ ವಿಮೋಚನಾ ಚಳವಳಿಯಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. 2001ರಲ್ಲಿ ಎಂಪಿ ಆಗಿ ಆಯ್ಕೆಯಾಗಿದ್ದ ಇವರು, ಕೃಷಿ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಗಳ ಸಹಾಯಕ ಸಚಿವರಾಗಿ ಮತ್ತು ಇತ್ತೀಚೆಗೆ ಸ್ಥಳೀಯ ಆಡಳಿತ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಭಾರತದ ಕುರಿತು ಮಿರ್ಜಾ ಅಲಂಗೀರ್ ನಿಲುವು ಏನು?:

ಭಾರತದೊಂದಿಗೆ ಸುದೀರ್ಘ ಹಾಗೂ ನಿಕಟ ಬಾಂಧವ್ಯವನ್ನು ಮುಂದುವರಿಸಲು ಬಿಎನ್‌ಪಿ ಇಚ್ಛಿಸುತ್ತದೆ ಎಂದು ಅಲಂಗೀರ್ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. “ನಾವು ಭಾರತದೊಂದಿಗೆ ಯುದ್ಧ ಮಾಡಲು ಸಾಧ್ಯವಿಲ್ಲ, ಮಾತುಕತೆಯ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು” ಎಂಬುದು ಅವರ ನಿಲುವಾಗಿದೆ. ಗಡಿ ಭಾಗದಲ್ಲಿ ಹತ್ಯೆಗಳನ್ನು ತಡೆಯುವುದು, ಗಂಗಾ ನದಿ ನೀರು ಹಂಚಿಕೆ, ವ್ಯಾಪಾರ-ವಾಣಿಜ್ಯಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ನ್ಯಾಯಯುತವಾಗಿ ಪುನರ್ ಪರಿಶೀಲಿಸುವುದು ಅವರ ಆದ್ಯತೆಯಾಗಿದೆ.

ಇದನ್ನೂ ಓದಿ: ಸೇನಾ ಮುಖ್ಯಸ್ಥರಿಗೆ ಮುಹಮ್ಮದ್ ಯೂನಸ್ ನೇಮಕ ಇಷ್ಟವಿರಲಿಲ್ಲ: ಬಾಂಗ್ಲಾದೇಶದ ಮಾಜಿ ಕಾನೂನು ಸಲಹೆಗಾರ ಹೇಳಿದ್ದೇನು?

ಬಾಂಗ್ಲಾದೇಶದಿಂದ ಪಲಾಯನಗೊಂಡು ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕು ಎಂದು ಅಲಂಗೀರ್ ಹಲವು ಬಾರಿ ಒತ್ತಾಯಿಸಿದ್ದಾರೆ. ಶೇಖ್ ಹಸೀನಾ ಅವರ ಆಡಳಿತದಲ್ಲಿ ನಡೆದ ಕೊಲೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾನೂನುಬದ್ಧ ವಿಚಾರಣೆ ನಡೆಯಬೇಕು ಎಂಬುದು ಅವರ ಅಭಿಪ್ರಾಯವಾಗಿದೆ. ಶೇಖ್ ಹಸೀನಾ ವಿಷಯವನ್ನು ಮೀರಿ ಭಾರತ ಮತ್ತು ಬಾಂಗ್ಲಾದೇಶ ವ್ಯಾಪಾರ, ವಾಣಿಜ್ಯ ಮತ್ತು ರಾಜತಾಂತ್ರಿಕ ಸಂಬಂಧಗಳಲ್ಲಿ ಮುನ್ನಡೆಯಬೇಕು ಎಂದು ಅಲಂಗೀರ್ ಪ್ರತಿಪಾದಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us