ವಿಶ್ವಕ್ಕೀಗ ಒಮ್ರಿಕಾನ್ (Omicron variant) ಭೀತಿ ಆವರಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ವೈರಸ್ ಇದೀಗ 38ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ಈ ಮಧ್ಯೆ ಈಗಾಗಲೇ ಕೊಡುತ್ತಿರುವ ಕೊರೊನಾ ಲಸಿಕೆಯ ಡೋಸ್ ಪ್ರಮಾಣ ಒಮಿಕ್ರಾನ್ ವಿರುದ್ಧ ಹೋರಾಡಬಲ್ಲದಾ? ಅಥವಾ ಬೂಸ್ಟರ್ ಡೋಸ್ ಬೇಕಾಗುತ್ತದೆಯಾ ಎಂಬುದು ಬಹುವಾಗಿ ಚರ್ಚೆಯಾಗುತ್ತಿರುವ ವಿಚಾರ. ಇನ್ನೂ ಈ ಬಗ್ಗೆ ಆರೋಗ್ಯ ತಜ್ಞರೂ ಕೂಡ ನಿಖರವಾಗಿ ಏನನ್ನೂ ಹೇಳುತ್ತಿಲ್ಲ. ಹೀಗಾಗಿ ಒಮ್ರಿಕಾನ್ ವಿರುದ್ಧ ರಕ್ಷಣೆಗೆ ಕೊವಿಡ್ 19 ಲಸಿಕೆಗಳ ಬೂಸ್ಟರ್ ಡೋಸ್ಗಳ ಅಗತ್ಯ ಮತ್ತು ಅದರ ಶಿಫಾರಸ್ಸುಗಳ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ (World Health Organisation)ಯ ಕಾರ್ಯತಂತ್ರದ ಸಲಹೆಗಾರರ ಗುಂಪು (SAGE) ಡಿಸೆಂಬರ್ 7ರಂದು ಸಭೆ ನಡೆಸಲಿದೆ.
ಈಗ ಕೊರೊನಾ ಲಸಿಕೆ ಅಭಿಯಾನ ಜಾಗತಿಕವಾಗಿದೆ. ಕೆಲವು ದೇಶಗಳಲ್ಲಿ ಒಂದೇ ಡೋಸ್ನ ಲಸಿಕೆ ನೀಡಲಾಗುತ್ತಿದ್ದರೆ, ಭಾರತ ಸೇರಿ ಒಂದಷ್ಟು ರಾಷ್ಟ್ರಗಳಲ್ಲಿ ಎರಡು ಡೋಸ್ಗಳ ಲಸಿಕೆ ಕೊಡಲಾಗುತ್ತಿದೆ. ಸದ್ಯಕ್ಕಂತೂ ಬೂಸ್ಟರ್ ಡೋಸ್ಗಳ ಅಗತ್ಯವಿದೆ ಎಂಬುದಕ್ಕೆ ಯಾವುದೇ ಪುರಾವೆಗಳೂ ಸಿಗುತ್ತಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದರು. ಹಾಗೇ, ಡಬ್ಲ್ಯೂಎಚ್ಒಗೂ ಕೂಡ ಅನಿರ್ದಷ್ಟತೆಯೇ ಇತ್ತು. ಆದರೆ ಈಗ ಹರಡುತ್ತಿರುವ ಹೊಸ ಸೋಂಕು ಒಮಿಕ್ರಾನ್ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೂಸ್ಟರ್ ಡೋಸ್ಗಳು ಬೇಕಾಗುತ್ತವಾ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಅದರ ಬೆನ್ನಲ್ಲೇ ಡಬ್ಲ್ಯೂಎಚ್ಒ ಡಿ.7ಕ್ಕೆ ಸಭೆ ನಡೆಸಲಿದ್ದು, ನಂತರವಷ್ಟೇ ಬೂಸ್ಟರ್ ಡೋಸ್ಗಳ ಬಗ್ಗೆ ಒಂದು ನಿಖರತೆ ಸಿಗಲಿದೆ.
ಭಾರತದಲ್ಲೂ ಕೂಡ ಕೊರೊನಾ ಲಸಿಕೆ ಬೂಸ್ಟರ್ ಡೋಸ್ಗಳ ನೀಡಿಕೆ ಬಗ್ಗೆ ಚರ್ಚೆ ನೀಡುತ್ತಿದೆ. ಆದರೆ ಇದುವರೆಗೆ ಬೂಸ್ಟರ್ ಡೋಸ್ ನೀಡಿಕೆಯ ಅಗತ್ಯ ಕಂಡುಬಂದಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಸೇರಿ ವಿವಿಧ ಪ್ರಮುಖ ಆರೋಗ್ಯ ತಜ್ಞರು ಹೇಳಿದ್ದರು. ಆದರೆ ದೇಶದಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಕೊವಿಡ್ 19 ಲಸಿಕೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಪರಿಗಣಿಸಬೇಕು ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (ಜಿನೋಮ್ ಸಿಕ್ವೆನ್ಸಿಂಗ್ನ್ನು ಕೈಗೊಳ್ಳುವ ಪ್ರಯೋಗಾಲಯಗಳ ಒಕ್ಕೂಟ-ಐಎನ್ಎಸ್ಎಸಿಒಜಿ) ಹೇಳಿದೆ. ಹಾಗೊಮ್ಮೆ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯ ಬಳಿಕ ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ಅಥವಾ ಮೂರನೇ ಡೋಸ್ ಲಸಿಕೆ ಪಡೆಯಬೇಕು ಎಂದು ಹೇಳಿದರೆ, ನಮ್ಮ ದೇಶದಲ್ಲೂ ಕೂಡ ಸರ್ಕಾರಗಳು ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿವೆ.
ಇದನ್ನೂ ಓದಿ: ನಾಪತ್ತೆಯಾಗಿದ್ದ ದಕ್ಷಿಣ ಆಫ್ರಿಕಾ ಪ್ರಯಾಣಿಕರನ್ನು ಪತ್ತೆ ಮಾಡಿದ ಬಿಬಿಎಂಪಿ