ಒಮಿಕ್ರಾನ್​ನಿಂದ ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರ ಪ್ರಮಾಣ ಆರು ಪಟ್ಟು ಹೆಚ್ಚಳ: ಭಾರತದಲ್ಲಿ ಹೆಚ್ಚಾಗುತ್ತಿದೆ ಆತಂಕ

ಒಮಿಕ್ರಾನ್​ನಿಂದ ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರ ಪ್ರಮಾಣ ಆರು ಪಟ್ಟು ಹೆಚ್ಚಳ: ಭಾರತದಲ್ಲಿ ಹೆಚ್ಚಾಗುತ್ತಿದೆ ಆತಂಕ
ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಕೊರೊನಾ ರೂಪಾಂತರದಿಂದ ಸೋಂಕು ಪ್ರಮಾಣ ಹೆಚ್ಚಾಗಿದೆ.

ತನ್ನ ಲಕ್ಷಣಕ್ಕೆ ತಕ್ಕಂತೆ ವೇಗವಾಗಿ ಬೇರೆಬೇರೆ ದೇಶಗಳಿಗೆ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಹರಡುತ್ತಿದೆ. ಇದೇ ಈಗ ಆತಂಕಕ್ಕೆ ಕಾರಣವಾಗಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 04, 2021 | 6:45 PM

ಭಾರತದಲ್ಲಿ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ನಿಧಾನವಾಗಿ ಹರಡುತ್ತಿದೆ. ಇವತ್ತು ಮತ್ತೊಬ್ಬರಲ್ಲಿ ಒಮಿಕ್ರಾನ್ ಪ್ರಭೇದದ ಕೊರೊನಾ ಸೋಂಕು ಪತ್ತೆಯಾಗಿದೆ. ಜಿಂಬಾಬ್ವೆಯಿಂದ ಗುಜರಾತ್‌ನ ಜಾಮ್ ನಗರಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಇರೋದು ದೃಢಪಟ್ಟಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇಡೀ ಜಗತ್ತನ್ನು ನಡುಗಿಸಿರುವ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಈವರೆಗೂ ಜಗತ್ತಿನ 6 ಖಂಡಗಳ 38 ದೇಶಗಳಿಗೆ ಹರಡಿದೆ. ಆದರೆ, ಈವರೆಗೂ ಒಮಿಕ್ರಾನ್ ಪ್ರಭೇದದ ಸೋಂಕಿತ ವ್ಯಕ್ತಿಗಳ್ಯಾರು ಜಗತ್ತಿನಲ್ಲಿ ಸಾವನ್ನಪ್ಪಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ತನ್ನ ಲಕ್ಷಣಕ್ಕೆ ತಕ್ಕಂತೆ ವೇಗವಾಗಿ ಬೇರೆಬೇರೆ ದೇಶಗಳಿಗೆ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಹರಡುತ್ತಿದೆ. ಇದೇ ಈಗ ಆತಂಕಕ್ಕೆ ಕಾರಣವಾಗಿದೆ.

ಭಾರತದಲ್ಲಿ ಇಂದು ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್​ನ ಮತ್ತೊಂದು ಪ್ರಕರಣ ದೃಢಪಟ್ಟಿದೆ. ಜಿಂಬಾಬ್ವೆಯಿಂದ ಗುಜರಾತ್‌ನ ಜಾಮ್ ನಗರಕ್ಕೆ ಬಂದಿದ್ದ ವ್ಯಕ್ತಿಗೆ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ತಗುಲಿರುವುದು ಜೆನೋಮ್ ಸಿಕ್ವೇನ್ಸಿಂಗ್ ವರದಿಯಿಂದ ದೃಢಪಟ್ಟಿದೆ. 74 ವರ್ಷ ವಯಸ್ಸಿನ ವ್ಯಕ್ತಿ ನವಂಬರ್ 28ರಂದು ಜಿಂಬಾಬ್ವೆಯಿಂದ ಜಾಮ್ ನಗರಕ್ಕೆ ಬಂದಿದ್ದರು. ನವಂಬರ್ 29ರಂದು ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಬಳಿಕ ಪುಣೆಯ ಲ್ಯಾಬ್‌ಗೆ ಕೊರೊನಾ ಸ್ಯಾಂಪಲ್ ಅನ್ನು ಜೆನೋಮ್ ಸಿಕ್ವೇನ್ಸಿಂಗ್‌ಗೆ ಕಳಿಸಲಾಗಿತ್ತು. ಇಂದು ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ತಗುಲಿರುವುದನ್ನು ಗುಜರಾತ್‌ನ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಅಗರವಾಲ್ ತಿಳಿಸಿದ್ದಾರೆ. ಇದರೊಂದಿಗೆ ಭಾರತದಲ್ಲಿ ಪತ್ತೆಯಾದ ಒಮಿಕ್ರಾನ್ ಪ್ರಭೇದದ ಕೊರೊನಾ ಕೇಸ್ ಸಂಖ್ಯೆ 3ಕ್ಕೇರಿಕೆಯಾಗಿದೆ. ದೇಶದ ಬೇರೆಬೇರೆ ನಗರಗಳಲ್ಲಿ ವಿದೇಶದಿಂದ ಬಂದು ಕೊರೊನಾ ಪಾಸಿಟಿವ್ ಬಂದಿರುವವರ ಸ್ಯಾಂಪಲ್ ಅನ್ನು ಜೆನೋಮ್ ಸಿಕ್ವೇನ್ಸಿಂಗ್​ಗೆ ಕಳಿಸಲಾಗಿದೆ. ಜೆನೋಮ್ ಸಿಕ್ವೇನ್ಸಿಂಗ್ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಆಫ್ರಿಕಾದಲ್ಲಿ ಏರುತ್ತಿರುವ ಕೊರೊನಾ ಕೇಸ್ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ರೂಪಾಂತರಿ ಮೊದಲು ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲೇ ಕೊರೊನಾ ಪ್ರಕರಣಗಳ ಸಂಖ್ಯೆ ಆರುಪಟ್ಟು ಹೆಚ್ಚಾಗಿದೆ. ನವೆಂಬರ್ 29ರಂದು 2,273 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಡಿಸೆಂಬರ್ 3ರ ಹೊತ್ತಿಗೆ ಈ ಸಂಖ್ಯೆ 16,055ಕ್ಕೆ ಏರಿಕೆಯಾಗಿದೆ.

ನವೆಂಬರ್ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಿತ್ಯ ನೂರು ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗುತ್ತಿದ್ದವು. ಆದರೆ ನ.20ರ ಬಳಿಕ ಪ್ರಕರಣಗಳ ಸಂಖ್ಯೆ ಏರತೊಡಗಿತ್ತು. ನ.26ರಂದು ಅಧಿಕೃತವಾಗಿ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಆಫ್ರಿಕಾದಲ್ಲಿ ಪತ್ತೆಯಾಗಿರುವುದನ್ನು ಘೋಷಿಸಲಾಯಿತು. ಇದಾದ ಬಳಿಕ 29ರಂದು ದಕ್ಷಿಣ ಆಫ್ರಿಕಾದಲ್ಲಿ 2,273 ಕೊರೊನಾ ಕೇಸ್ ಪತ್ತೆಯಾಗಿದ್ದವು. ನಾಲ್ಕು ದಿನದ ಬಳಿಕ ಅಂದರೆ, ಡಿ.3ರಂದು ಬರೋಬ್ಬರಿ 16,055 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಂದರೆ, ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಕೊರೊನಾ ಪ್ರಕರಣಗಳ ಬೆಳವಣಿಗೆ ದರ ಶೇ 606ರಷ್ಟಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 24.3ರಷ್ಟಿದೆ. ಅಂದರೆ, ಕೊರೊನಾ ಸ್ಯಾಂಪಲ್ ಟೆಸ್ಟಿಂಗ್​ಗೆ ಒಳಗಾಗುವ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಸೋಂಕು ದೃಢಪಡುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಹೆಚ್ಚಾಗಿ ಕೊರೊನಾ ಸೋಂಕು ತಗುಲುತ್ತಿದೆ ಎಂದು ಆಫ್ರಿಕಾದ ವೈದ್ಯರು ಹೇಳಿದ್ದಾರೆ.

ಈ ಅಂಕಿಅಂಶಗಳೇ ಈಗ ವಿಶ್ವಕ್ಕೆ ಎಚ್ಚರಿಕೆಯ ಗಂಟೆಯಾಗಿವೆ. ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಹೇಗೆ, ಎಷ್ಟು ವೇಗವಾಗಿ ಹರಡುತ್ತೆ ಎನ್ನುವುದಕ್ಕೆ ದಕ್ಷಿಣ ಆಫ್ರಿಕಾವೇ ಈಗ ಜಗತ್ತಿಗೆ ಉದಾಹರಣೆಯಾಗಿದೆ. ಒಮಿಕ್ರಾನ್ ಪ್ರಭೇದದ ವೈರಸ್ ಎಂಟ್ರಿಯಾಗಿರುವ ದೇಶಗಳಲ್ಲಿ ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾದಂತೆ ವೇಗವಾಗಿ ಕೊರೊನಾ ವೈರಸ್ ಹರಡಿ, ಕೊರೊನಾ ಕೇಸ್ ಬಾರಿ ಸಂಖ್ಯೆಯಲ್ಲಿ ಏರಿಕೆಯಾಗುವ ಭೀತಿ ವ್ಯಕ್ತವಾಗಿದೆ. ಭಾರತದಲ್ಲೂ ಒಮಿಕ್ರಾನ್ ಪ್ರಭೇದದ ವೈರಸ್​ನಿಂದ 3ನೇ ಕೊರೊನಾ ಅಲೆ ಬರಬಹುದು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದರೇ, ಒಮಿಕ್ರಾನ್ ಪ್ರಭೇದದ ವೈರಸ್ ಅಪಾಯಕಾರಿ ವೈರಸ್ ಅಲ್ಲ, ಸ್ವಲ್ಪ ನೆಗಡಿ, ಜ್ವರ, ಮೈಕೈ ನೋವು, ಸುಸ್ತು ನಂಥ ಲಕ್ಷಣಗಳು ಜನರಲ್ಲಿ ಕಾಣಿಸಿಕೊಳ್ಳುತ್ತಾವೆ ಎಂದು ವೈದ್ಯರು, ತಜ್ಞರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಪ್ರಭೇದದ ವೈರಸ್​ನಿಂದಾಗಿ ನಾಲ್ಕನೇ ಕೊರೊನಾ ಅಲೆ ಶುರುವಾಗಿದೆ.

ಇದನ್ನೂ ಓದಿ: Omicron in India: ಭಾರತದಲ್ಲಿ ಈಗಾಗಲೇ ಹರಡಿದೆ ಒಮಿಕ್ರಾನ್, ಆದರೆ ನಾವು ಹೆದರಬೇಕಿಲ್ಲ: ವಿಜ್ಞಾನಿ ಡಾ ರಾಕೇಶ್ ಮಿಶ್ರಾ ಇದನ್ನೂ ಓದಿ: Omicron in India: ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ವ್ಯಕ್ತಿಗೆ ಒಮಿಕ್ರಾನ್ ಪಾಸಿಟಿವ್: ಗುಜರಾತ್​ನಲ್ಲಿ ಆತಂಕ

Follow us on

Related Stories

Most Read Stories

Click on your DTH Provider to Add TV9 Kannada