ವಾಷಿಂಗ್ಟನ್: ಅಂಕಣಕಾರ ಜಮಾಲ್ ಖಶೋಗ್ಗಿ ಅವರ ಹತ್ಯೆಗೆ ಅನುಮತಿ ನೀಡಿರುವ ವಿಚಾರದಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಬಿನ್ ಸಲ್ಮಾನ್ ಬಗ್ಗೆ ಜಗತ್ತಿನಾದ್ಯಂತ ವಿವಿಧ ದೇಶಗಳು ಪ್ರತಿಕ್ರಿಯಿಸಿವೆ. ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆ ಅಮೆರಿಕಾ ಗುಪ್ತಚರ ವರದಿಯನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದು, ವರದಿ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಆರೋಪಿಸಿದೆ.
‘ಜಮಾಲ್ ಖಶೋಗ್ಗಿ ಅವರ ಹತ್ಯೆಯು ಭಯಾನಕವಾದ ಅಪರಾಧವೆಂದು ಈ ಹಿಂದೆಯೂ ಹೇಳಿದ್ದೇವೆ. ಈ ಹತ್ಯೆಯ ಹಿಂದೆ ಸೌದಿ ಅರೇಬಿಯಾದ 20 ನಾಗರಿಕರು ಇರುವ ಕುರಿತು ವಿಶ್ವಾಸಾರ್ಹ, ಪಾರದರ್ಶಕ ತನಿಖೆಯನ್ನು ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ’ ಎಂದು ಬ್ರಿಟನ್ನ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ. ಇಷ್ಟಕ್ಕೇ ನಿಲ್ಲದ ಬ್ರಿಟನ್ ವಿದೇಶಾಂಗ ಸಚಿವಾಲಯ ಸೌದಿ ಅರೇಬಿಯಾದ ಜತೆಗಿನ ಮುಂದಿನ ಸಮಾಲೋಚನೆಗಳಲ್ಲಿ ಪಾರದರ್ಶಕ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತನಿಖಾ ಸಂಸ್ಥೆ, ತನ್ನ ಫೇಸ್ಬುಕ್ ಖಾತೆಯಲ್ಲಿ, ‘ಅಮೆರಿಕ ಬಿಡುಗಡೆಗೊಳಿಸಿರುವ ವರದಿಯಲ್ಲಿ ಸೌದಿ ಅರೇಬಿಯದ ಉನ್ನತ ಅಧಿಕಾರಿಗಳ ಪಾತ್ರವಿರುವುದು ಖಚಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಅಮೆರಿಕ ಪ್ರಯತ್ನಿಸಬೇಕಿದೆ’ ಎಂದು ಅಭಿಪ್ರಾಯಪಟ್ಟಿದೆ.
2018ರ ಅಕ್ಟೋಬರ್ನಲ್ಲಿ ಇಸ್ತಾಂಬುಲ್ನ ಸೌದಿ ಕಾನ್ಸುಲೇಟ್ನೊಳಗೆ ಖಶೋಗ್ಗಿ ಹತ್ಯೆ ನಡೆದಿತ್ತು. ನಂತರ ಸಿಐಎ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ಗುಪ್ತಚರ ವರದಿಯನ್ನು ಸಿದ್ಧಪಡಿಸಲಾಗಿದೆ. ಗುಪ್ತಚರ ಸಂಸ್ಥೆಗಳಿಂದ ಸಿದ್ಧವಾಗಿರುವ ವರದಿ ಬಹಿರಂಗವಾದ ಬಳಿಕವೇ ಖಶೋಗ್ಗಿ ಹತ್ಯೆಯಲ್ಲಿ ಪ್ರಿನ್ಸ್ ಮೊಹಮ್ಮದ್ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳು ತಿಳಿಯಲಿದೆ.
ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯಿಂದ ಸಂಗ್ರಹಿಸಲ್ಪಟ್ಟ ವರದಿಯನ್ನು ಬಿಡುಗಡೆ ಮಾಡುವ ನಿರ್ಧಾರವು, ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಮರುಸ್ಥಾಪಿಸುವ ಅಮೆರಿಕಾದ ಬೈಡೆನ್ ಆಡಳಿತದ ನಿರ್ಧಾರದ ಮೇಲೆ ಆಧರಿಸಿದೆ ಎನ್ನಲಾಗುತ್ತಿದೆ. ವರದಿಯ ಪ್ರಕಟಣೆಗೂ ಮುನ್ನವೇ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸೌದಿ ಅರೇಬಿಯಾದ ರಾಜ ಸಲ್ಮಾನ್ ಅವರೊಂದಿಗೆ ಗುರುವಾರ (ಫೆ.25) ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ. ಬೈಡೆನ್ ಪ್ರಾದೇಶಿಕ ಭದ್ರತೆ ಹಾಗೂ ಯೆಮನ್ನಲ್ಲಿನ ಆಂತರಿಕ ಯುದ್ಧವನ್ನು ಕೊನೆಗೊಳಿಸುವ ಕುರಿತು ಒಲವು ತೋರಿದ್ದಾರೆ. ಈ ವಿಚಾರದಲ್ಲಿ ಅಮೆರಿಕ ಮತ್ತು ವಿಶ್ವಸಂಸ್ಥೆಯ ಹೊಸ ಪ್ರಯತ್ನಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಜಾಗತಿಕ ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮಗಳ ಮೇಲೆ ಅಮೆರಿಕಾ ಮಹತ್ವವನನ್ನು ದೃಢೀಕರಿಸಿದೆ ಎಂದು ಶ್ವೇತಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಖಶೋಗ್ಗಿ ಹತ್ಯೆ ವಿಚಾರವನ್ನು ಮತ್ತೆ ಕೆದಕಿದ ದೊಡ್ಡಣ್ಣ
ಇದನ್ನೂ ಓದಿ: ಸೌದಿ ಅರೇಬಿಯಾದ ಸಾಲ ತೀರಿಸಲು ಚೀನಾದಿಂದ ಸಾಲ ಪಡೆದ ಪಾಕಿಸ್ತಾನ
Published On - 7:22 pm, Sun, 28 February 21