ಕೇವಲ 6 ತಿಂಗಳ ಅವಧಿಯಲ್ಲಿ ಹೊಸ ಮಾರಾಟ ದಾಖಲೆ ನಿರ್ಮಿಸಿದ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್
ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಕಾರು ಮಾದರಿಯು ಮಧ್ಯಮ ಕ್ರಮಾಂಕದ ಎಸ್ ಯುವಿ ಮಾರಾಟದಲ್ಲಿ ಹೊಸ ಮಾರಾಟ ದಾಖಲೆಯನ್ನು ನಿರ್ಮಿಸಿದೆ.
ದೇಶದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಹ್ಯುಂಡೈ (hyundai) ತನ್ನ ಹೊಸ ಕ್ರೆಟಾ ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಕ್ರೆಟಾ ಫೇಸ್‌ಲಿಫ್ಟ್ ಭರ್ಜರಿ ಬೇಡಿಕೆ ಪಡೆದುಕೊಂಡಿದೆ. ಕೇವಲ ಕೇವಲ 6 ತಿಂಗಳ ಅವಧಿಯಲ್ಲಿ ಬರೋಬ್ಬರಿ 1 ಲಕ್ಷ ಯುನಿಟ್‌ಗೂ ಹೆಚ್ಚು ಮಾರಾಟಗೊಂಡಿದ್ದು, ಸಾವಿರಾರು ಗ್ರಾಹಕರು ಹೊಸ ಕಾರು ಖರೀದಿಗೆ ಕಾಯುತ್ತಿದ್ದಾರೆ.
ಭಾರತದಲ್ಲಿ ಸದ್ಯ ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳಿಗೆ ಕಳೆದ ಐದಾರು ವರ್ಷಗಳಿಂದ ಭಾರೀ ಪ್ರಮಾಣದ ಬೇಡಿಕೆ ದಾಖಲಾಗುತ್ತಿದ್ದು, ಈ ವಿಭಾಗದಲ್ಲಿರುವ ಹ್ಯುಂಡೈ ಕ್ರೆಟಾ ಕಾರು ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿದೆ. 2015ರ ಜುಲೈನಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಕ್ರೆಟಾ ಕಾರು ಸತತ 9 ವರ್ಷಗಳಿಂದಲೂ ತನ್ನ ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಇದು ಇದೀಗ ಫೇಸ್‌ಲಿಫ್ಟ್ ಆವೃತ್ತಿಯ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.
ಆಕರ್ಷಕ ಬೆಲೆ, ವಿವಿಧ ಎಂಜಿನ್ ಆಯ್ಕೆಗಳು, ಗಮನಸೆಳೆಯುವ ಹೊರ ಮತ್ತು ಒಳ ವಿನ್ಯಾಸಗಳು, ಸುಧಾರಿತ ತಂತ್ರಜ್ಞಾನ ಸೇರಿದಂತೆ ಸುರಕ್ಷತೆಯಲ್ಲೂ ಗಮನಸೆಳೆಯುತ್ತಿರುವ ಕ್ರೆಟಾ ಕಾರು ಮಧ್ಯಮ ವರ್ಗದ ಗ್ರಾಹಕರ ಹಲವು ಬೇಡಿಕೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಬಿಡುಗಡೆಯಾದ 9 ವರ್ಷಗಳ ನಂತರ ಬೇಡಿಕೆಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದು, ಈ ಹಿಂದೆಂದಿಗಿಂತಲೂ ಇದೀಗ ಅತ್ಯಧಿಕ ಫೀಚರ್ಸ್ ಮತ್ತು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟವಾಗುತ್ತಿರುವ ಕ್ರೆಟಾ ಕಾರು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ ಎನ್ ಲೈನ್ ಆವೃತ್ತಿಯಲ್ಲೂ ಸಹ ಮಾರಾಟಗೊಳ್ಳುತ್ತಿದ್ದು, ಇದು ಇ, ಇಎಕ್ಸ್, ಎಸ್, ಎಸ್ ಆಪ್ಷನ್, ಎಸ್ಎಕ್ಸ್, ಎಸ್ಎಕ್ಸ್ ಟೆಕ್ ಮತ್ತು ಎಸ್ಎಕ್ಸ್ ಆಪ್ಷನ್ ವೆರಿಯೆಂಟ್ ಗಳಲ್ಲಿ ಮಾರಾಟವಾಗುತ್ತಿದೆ. ಇದರಲ್ಲಿ ಆರಂಭಿಕ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 20.15 ಲಕ್ಷ ಬೆಲೆ ಹೊಂದಿದೆ.
ವೆರ್ನಾ ಮತ್ತು ಟುಸಾನ್ ಕಾರಿನಲ್ಲಿರುವಂತೆ ಶಾರ್ಪ್ ಎಡ್ಜ್ ವಿನ್ಯಾಸ ಹೊಂದಿರುವ ಕ್ರೆಟಾ ಹೊಸ ಕಾರು ಬಾಕ್ಸಿ ಡಿಸೈನ್ ನೊಂದಿಗೆ ಮತ್ತಷ್ಟು ಆಕರ್ಷಕವಾದ ಫ್ರಂಟ್ ಗ್ರಿಲ್, ಫ್ರಂಟ್ ಬಂಪರ್ ಮತ್ತು ಎಲ್ ಶೇಫ್ ಹೊಂದಿರುವ ಎಲ್ಇಡಿ ಲೈಟ್ಸ್ ಬ್ಯಾಂಡ್ ಪಡೆದುಕೊಂಡಿದ್ದು, ಒಳಭಾಗದಲ್ಲೂ ಭಾರೀ ಬದಲಾವಣೆಯೊಂದಿಗೆ 10.25 ಇಂಚಿನ ಕನೆಕ್ಟೆಡ್ ಸ್ಕ್ರೀನ್, ಮರುವಿನ್ಯಾಸಗೊಳಿಸಲಾದ ಎಸಿ ವೆಂಟ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೊಲ್ ಸೌಲಭ್ಯಗಳನ್ನು ಹೊಂದಿದೆ.
ಇನ್ನು ಕ್ರೆಟಾ ಫೇಸ್‌ಲಿಫ್ಟ್ ನಲ್ಲಿ ಹ್ಯುಂಡೈ ಕಂಪನಿಯು ಈ ಹಿಂದಿನ 1.5 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಮುಂದುವರೆಸಿದ್ದು, ಇದರೊಂದಿಗೆ ಹೊಸದಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಪರಿಚಯಿಸಿದೆ. ಇದು ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 160 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಕಾರಿನಲ್ಲಿ ಗರಿಷ್ಠ ಸುರಕ್ಷತೆಗಾಗಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗಿದ್ದು, ಜೊತೆಗೆ ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್ ಗಳು ಮತ್ತು 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.