AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day 2023: ನನ್ನ ಇಷ್ಟಕಾಮ್ಯಗಳನ್ನು ಈಡೇರಿಸುವ ನನ್ನ ನಲ್ಲನಿಗೆ ಪ್ರೀತಿಯ ಪ್ರೇಮ ಪತ್ರ

ನೀ ಹೆದರಬೇಡ. ನಾನು ಮೊಳ ಹೂವು, ಸೀರೆ ಕೇಳುವುದಿಲ್ಲ. ಅಪರಂಜಿ ನೀನಿರುವಾಗ ಚಿನ್ನವಂತೂ ಬೇಡವೇ ಬೇಡ. ಹಣ ಮತ್ತು ಅಂತಸ್ಥಿಗಂತೂ ನಾ ಬೀಳುವವಳಲ್ಲ ಎಂದು ನಿನಗೆ ತಿಳಿದಿದೆ. ನನಗೆ ನೀನು ಬೇಕು. ನೀನು ಮಾತ್ರ ಬೇಕು.

Valentine's Day 2023: ನನ್ನ ಇಷ್ಟಕಾಮ್ಯಗಳನ್ನು ಈಡೇರಿಸುವ ನನ್ನ ನಲ್ಲನಿಗೆ ಪ್ರೀತಿಯ ಪ್ರೇಮ ಪತ್ರ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Feb 14, 2023 | 5:32 PM

Share

ಪ್ರಿಯನಾದವನೇ… ಅಲ್ಲಲ್ಲ… ಪ್ರೀತಿಯ ಗಗನ್ ತುಂಬಾ ಗೊಂದಲವಾಗುತ್ತದೆ, ನಿನ್ನ ಸಂಬೋಧಿಸುವಾಗ ಮತ್ತು ನಮ್ಮಿಬ್ಬರ ಸಂಬಂಧದ ಅರ್ಥ ಹುಡುಕ ಹೊರಟಾಗ. ಇಂದು ಕಾರಿನಲ್ಲಿ ಕಾಲೇಜಿಗೆ ಹೋಗುವಾಗ, ನನ್ನ ಇನಿಯನ ನೆಲೆಯ ಬಲ್ಲೆಯೇನು, ಹಾಡು ಕೇಳುವಾಗ ನಮ್ಮ ನೆಲೆಯನ್ನು ಗಟ್ಟಿಗಳೊಳಿಸಬೇಕೆಂದುಕೊಂಡೆ. ಇಡೀ ಲೋಕವೆಲ್ಲ ನಾವು ಮುಂದೆ ಮದುವೆಯಾಗುತ್ತೇವೆಂದುಕೊಂಡಿರುವಾಗ ನೀನೇಕೆ ಇಲ್ಲವೆನ್ನುತ್ತಿ? ನಮ್ಮ ಮನೆಯವರಂತೂ ನಾವು ಹುಟ್ಟಿದಾಗಿಂದ ನಿನ್ನ ಪಾದ ತೊಳೆದು ನಿನ್ನ ತೆಕ್ಕೆಗೆ ತಳ್ಳಲು ಕಾದಿದ್ದಾರೆ. ನಿನ್ನ ಇಲ್ಲಸಲ್ಲದ ತಕರಾರುಗಳಿಗೆ ಬಗ್ಗುವವಳಲ್ಲ. ಏಕೆಂದರೆ ನಾನು ಗಗನ್ ನ ಹುಡುಗಿ.

ನೀ ಹೆದರಬೇಡ. ನಾನು ಮೊಳ ಹೂವು, ಸೀರೆ ಕೇಳುವುದಿಲ್ಲ. ಅಪರಂಜಿ ನೀನಿರುವಾಗ ಚಿನ್ನವಂತೂ ಬೇಡವೇ ಬೇಡ. ಹಣ ಮತ್ತು ಅಂತಸ್ಥಿಗಂತೂ ನಾ ಬೀಳುವವಳಲ್ಲ ಎಂದು ನಿನಗೆ ತಿಳಿದಿದೆ. ನನಗೆ ನೀನು ಬೇಕು. ನೀನು ಮಾತ್ರ ಬೇಕು. ನೀನು ಗಗನವಾದರೆ ಅಮವಾಸ್ಯೆಯಲ್ಲೂ ಶೋಭಿಸುವ ಚುಕ್ಕಿ ನಕ್ಷತ್ರವಾಗುವಾಸೆ. ನನ್ನ ಪ್ರೀತಿಯ ಒಪ್ಪಿ ನೀಳ ತೋಳುಗಳಿಂದೋಮ್ಮೆ ಅಪ್ಪು. ನಾವು ಬರಿಯ ಸ್ನೇಹಿತರಲ್ಲ ಎಂದು ತಿಳಿದಾಗಿನಿಂದ ಬೆವೆತು ದೂರ ಸರಿಯುತ್ತಿರುವುದು ನನಗೇನು ಗೊತ್ತಿಲ್ಲವೆಂದೇನಲ್ಲ. ನೀ ದೂರವಾದಷ್ಟು ಹತ್ತಿರ ಬಂದು ಕಾಡುವ ಬಯಕೆ. ದೂರ ಓಡಿದರೂ ಪರವಾಗಿಲ್ಲ. ನಿನ್ನ ಹೃದಯ ನನ್ನ ಮನಕ್ಕೆ ಗಟ್ಟಿಯಾಗಿ ಅಂಟಿಕೊಂಡಿದೆ. ಜೀವವಿರುವ ತನಕ ಹೃದಯವೆಲ್ಲಿಗೆ ಹೋದೀತು?

ನನಗಾಗಿ ಚಂದ್ರನನ್ನು ಹೊತ್ತು ತರುವುದು ಬೇಡ. ವೀಕೆಂಡ್ ನಲ್ಲಿ ಇಬ್ಬರೇ ಹೋಗುವುದಂತೂ ಅಸಾಧ್ಯ. ತಾಜ್ ಮಹಲ್ ಕಟ್ಟುವುದಂತೂ ತೀರಾ ಅತಿಶಯೋಕ್ತಿ. ನಿನ್ನಮ್ಮನ, ತಂಗಿಯ, ಅಜ್ಜಿಯ ಪ್ರೀತಿಯನ್ನು ಕೊಡಲಾರೆ, ಕಸಿದುಕೊಳ್ಳಲಾರೆ. ಹೆಸರಿಲ್ಲದ ಈ ಪ್ರೀತಿಯ ಸಂಬಂಧಕ್ಕೊಂದು ಅರ್ಥಕೊಟ್ಟು ಪ್ರೀತಿ ಪಾನ ಮಾಡು. ಜಗತ್ತಿನ ಶ್ರೇಷ್ಠ ಪ್ರೇಮಕಾವ್ಯಗಳ ನಾಯಕನಂತೆ ಪ್ರೀತಿಸಬೇಕಾಗಿಲ್ಲ. ನೀನು ನೀನಾಗಿ ನನ್ನ ಪ್ರೀತಿಸು; ನಿನ್ನವಳಾಗಿ ದುಪ್ಪಟ್ಟು ಮಮತೆ ಸುರಿಯುತ್ತೇನೆ. ನೀನು ತಿರಸ್ಕರಿಸಿದರೂ ಮತ್ತೆ ಬೆಂಬಿಡದೆ ಕಾಡುವೆ. ನನಗೆ ಗೊತ್ತು ನೀನು ಯಾಕೆ ತಪ್ಪಿಸಿಕೊಳ್ಳುತ್ತಿದ್ದಿಯೆಂದು. ನಿನ್ನ ಬಿಟ್ಟು ಹೋಗುವ ಯೋಚನೆ ಮಾಡಲಾರೆ.

ಇದನ್ನೂ ಓದಿ:Valentines Day 2023: ಕನಸನು ಗುಣಿಸುವಂಥಾ ನೆನಪನು ಎಣಿಸುವಂಥ ಹೃದಯದ ಗಣಿತ ನೀನು ನನ್ನ ಮನದ ಅರಸ

ಜೀವನದಲ್ಲಿ ನಿರಾಶೆಯನ್ನೇ ಸವಿದಿರುವ ನಿನಗೆ ಪ್ರೀತಿಯನ್ನು ತಿರಸ್ಕರಿಸಿ ಮತ್ತಾವ ನರಕಕ್ಕೆ ಹೋಗಲಿ ಹೇಳು ನೀನೆಂಬ ಸ್ವರ್ಗವ ತೊರೆದು? ನೀ ಪ್ರೀತಿಸುತ್ತಿಯ ಎಂದು ಕೇಳಬೇಡ, ಕೇಳಿ ನೋಯಿಸಬೇಡ. ಸಾಕಿನ್ನು ಕಳ್ಳಾಟ. ನೀ ಹೇಳುವ ಮೊದಲು ನಾನೇ ನಿವೇದಿಸಿಕೊಳ್ಳುತ್ತಿದ್ದೇನೆ. ನನ್ನ ಪ್ರೀತಿಸು. ನನ್ನ ಹಣೆಯನ್ನೊಮ್ಮೆ ಮೆತ್ತಗೆ ಚುಂಬಿಸಿ ಉಸುರು ಬಾ ನೆಡೆಯೋಣ ಎಂದು. ಅನಂತಪದಿಗಳನ್ನು ಹಾಕಲು ಸಿದ್ಧಳಿದ್ದೇನೆ. ಪ್ರೀತಿ ನಿರಾಕರಣ ಮಾಡುತ್ತೇನೆಂದು ನೀ ಚಿಂತಿಸಿ ತೊಟ್ಟ ಮೌನವನ್ನು ತೇಲಿಬಿಡು. ಮಾತನಾಡುವುದು ಬಹಳಷ್ಟಿದೆ. ನಾ ನಿನ್ನ ಪ್ರೀತಿಸದೆ ಇನ್ಯಾರನ್ನು ಪ್ರೇಮಿಸಲಿ? ನೀ ದೂರ ಸರಿದರೆ ಎಳೆದೊಯ್ದು ಪ್ರೀತಿಸುವೆ.

ಪ್ರೇಮ ಪತ್ರ: ಅಮಿತ ಹೆಬ್ಬಾರ್

Published On - 5:32 pm, Tue, 14 February 23