Valentine’s Day 2023: ಕನಸನು ಗುಣಿಸುವಂಥಾ ನೆನಪನು ಎಣಿಸುವಂಥ ಹೃದಯದ ಗಣಿತ ನೀನು ನನ್ನ ಮನದ ಅರಸ
ನನ್ನ ಬದುಕಿನ ಬಣ್ಣ ನೀನು! ಭರವಸೆ ನೀನು! ನನ್ನ ಪುಟ್ಟ ಕನಸಿನ ಲೋಕದ ರಾಜಕುಮಾರ ನೀನು. ನನ್ನ ಹೃದಯ ಸಾಮ್ರಾಜ್ಯದ ಸಾಮ್ರಾಟ ನೀನು. ಜಾದುಮಾಡಿದಂತೆ ನನ್ನ ಬದುಕಿಗೆ ವಿಸ್ಮಯದ ಒಲವನ್ನು ತಂದ ಜಾದುಗಾರ ನೀನು.
ನನ್ನ ಬದುಕಿನ ಬಣ್ಣ ನೀನು! ಭರವಸೆ ನೀನು! ನನ್ನ ಪುಟ್ಟ ಕನಸಿನ ಲೋಕದ ರಾಜಕುಮಾರ ನೀನು. ನನ್ನ ಹೃದಯ ಸಾಮ್ರಾಜ್ಯದ ಸಾಮ್ರಾಟ ನೀನು. ಜಾದುಮಾಡಿದಂತೆ ನನ್ನ ಬದುಕಿಗೆ ವಿಸ್ಮಯದ ಒಲವನ್ನು ತಂದ ಜಾದುಗಾರ ನೀನು. ಅದೇಕೋ ಕಾಣೆ, ನೀನು ನನ್ನ ಜೀವನಕ್ಕೆ ಬಂದ ಮೇಲೆ ಎಲ್ಲವೂ ರಂಗಾದಂತೆ ಭಾಸವಾಗುತ್ತಿದೆ. ಪ್ರತಿನಿತ್ಯವೂ ಹಬ್ಬದಂತೆ ಕಾಣುತ್ತಿದೆ. ಪ್ರೀತಿಯ ಮಳೆಹನಿ ಸುರಿದಂತಾಗುತ್ತಿದೆ. ನೀಲಿ ಆಗಸ ನೂರಾರು ಬಣ್ಣಗಳಿಂದ ಕಂಗೊಳಿಸುತ್ತಿರುವಂತಿದೆ. ನಾನು ಚಿಕ್ಕವಳಾಗಿದ್ದಾಗ.., ನಮ್ಮ ಮುದ್ದು ರಾಜಕುಮಾರಿನ, ಒಬ್ಬ ರಾಜಕುಮಾರ ಏಳು ಸಮುದ್ರ ದಾಟಿ, ಬಿಳಿ ಕುದುರೆ ಮೇಲೆ ಬಂದು ಕರೆದುಕೊಂಡು ಹೋಗ್ತಾನೆ ಅಂತ ಅಮ್ಮ ಹೇಳುತ್ತಿದ್ದ ಮಾತನ್ನು ಕಥೆಯೆಂದು ಭಾವಿಸಿದ್ದೆ. ಆದರೆ ಆ ಕನಸಿನ ಕಥೆಯನ್ನು ನನಸು ಮಾಡಿದ ನನ್ನ ಸ್ವಪ್ನಲೋಕದ ಕುವರ ನೀನು. ಬಿಳಿ ಕುದುರೆ ಅಲ್ಲದಿದ್ದರೂ, ಬಿಳಿ ಕಾರಿನಲ್ಲಿ ಬಂದು ನನ್ನ ಹೃದಯದ ಕೋಟೆಬಾಗಿಲು ತಟ್ಟಿದ ಚೆಲುವ ನೀನು.
ಅಂದ ಹಾಗೇ, ನನ್ನನ್ನು ನಿನ್ನ ಭಾವನಾವಲಯಕೆ ಸೇರಿಸಿಕೊಂಡ ಆ ದಿನ ನೆನಪಿದೆಯಾ!? ತಿಳಿ ನೀಲಿ ಆಕಾಶ, ತಂಗಾಳಿ, ಸಮುದ್ರದ ಅಲೆಯ ನಿನಾದ, ಸ್ವರ್ಗವೇ ಧರೆಗಿಳಿದಂತೆ ಭಾಸವಾಗಿದ್ದ ವಾತಾವರಣ, ಅಬ್ಬಬ್ಬಾ! ಆ ಚಿತ್ತಾರ ಲೋಕದ ಚಿತ್ರಣದ ಮಧ್ಯೆ ಬಿಳಿ ಸೂಟ್ ತೊಟ್ಟು ರೋಮ್ ದೇಶದ ಪ್ರಿನ್ಸ್ನಂತೆ ನಿಂತಿದ್ದ ನಿನ್ನನ್ನು ಕಂಡು ಒಂದು ಕ್ಷಣ ನನ್ನನ್ನೇ ನಾನು ಮರೆತಿದ್ದೆ. ನೀನು ಪ್ರೀತಿಯಿಂದ ಕೊಟ್ಟ ಬಿಳಿ ಗೌನ್ ಧರಿಸಿ ನಿನ್ನ ಜೀವನಕ್ಕೆ ಬಲಗಾಲಿಟ್ಟು ಬರಲು ಕಾತುರದಿಂದ ಕಾಯುತ್ತಿದ್ದ ನನಗೆ, ಮಂಡಿಯೂರಿ ಕೈಗೆ ಉಂಗುರ ತೊಡಿಸಿ ಕೆಂಪು ಗುಲಾಬಿಯ ಹೂಮಳೆ ಸುರಿಸುತ್ತ , ಪ್ರೀತಿ ನಿವೇದನೆ ಮಾಡಿದ ಆ ಕ್ಷಣ ಇನ್ನೂ ಕಣ್ಣುಕಟ್ಟಿದಂತಿದೆ. ನಿನ್ನ ನಿಸ್ವಾರ್ಥ ಪ್ರೆಮಕ್ಕೆ ಇಲ್ಲ ಎನ್ನಲು ಸಾಧ್ಯವೇ ಗೆಳೆಯ, ನಿನ್ನನ್ನು ಒಪ್ಪಿ ಅಪ್ಪಿಕೊಂಡ ಆ ಘಳಿಗೆ ನನ್ನ ಬದುಕಿನ ಅತ್ಯಂತ ಸುಂದರ ಕ್ಷಣ’. ಅಂದು ನೀ ಕೊಟ್ಟ ಕನಸಿನ ರೆಕ್ಕೆಯನ್ನು ಕಟ್ಟಿಕೊಂಡು ಬಾನೆತ್ತರಕ್ಕೆ ಹಕ್ಕಿಯಂತೆ ಹಾರುತ್ತಿರುವೆ. ನಿನ್ನ ನಲುಮೆಯ ಲೋಕಕ್ಕೆ ನನ್ನನ್ನು ಪರಿಚಯಿಸಿದಕ್ಕೆ ಅದೆಷ್ಟು ಕೃತಜ್ಞತೆ ಸಲ್ಲಿಸಬೇಕೋ ನಾ ಅರಿಯೆ!
ಇದನ್ನೂ ಓದಿ:ವ್ಯಾಲೆಂಟೈನ್ಸ್ ಡೇಗೆ ಜಿಯೋದಿಂದ ಧಮಕಾ ಆಫರ್ ಘೋಷಣೆ: ಕೂಡಲೇ ರಿಚಾರ್ಜ್ ಮಾಡಿರಿ
ಕೆಲಸದ ಕಾರಣದಿಂದ ದೂರದ ಅಮೇರಿಕ ದೇಶದಲ್ಲಿರುವ ನಿನ್ನನ್ನು ತುಂಬಾ ಮಿಸ್ ಮಾಡ್ಕೋತೀನಿ. ಸ್ಕೈಪ್, ವಿಡಿಯೋ ಕಾಲ್, ವಾಟ್ಸಾಪ್ ಅಂತಿರುವ ಈ ಕಾಲದಲ್ಲೂ ನಿನಗಾಗಿ ಪ್ರೇಮ ಪತ್ರ ಬರೆಯುತ್ತಿರುವ ನಿನ್ನ ಮನದರಸಿ ನಾನು. ದೂರದ ದೇಶಕ್ಕೆ ಈ ಪತ್ರ ತಲುಪದೇ ಇದ್ದರೂ ನನ್ನ ಪ್ರೇಮ ಸಂದೇಶ ನಿನ್ನನ್ನು ತಲುಪುತ್ತದೆ.
ಕನಸನು ಗುಣಿಸುವಂಥಾ ನೆನಪನು ಎಣಿಸುವಂಥ ಹೃದಯದ ಗಣಿತ ನೀನು. ಈ ಸಲ ನಿನ್ನೊಟ್ಟಿಗೆ ‘ವಾಲೆಂಟೈನ್ಸ್ ಡೇ’ ಆಚರಿಸಲು ಸಾಧ್ಯವಿಲ್ಲದಿದ್ದರೂ ಆಗಸದಷ್ಟು ಪ್ರೀತಿಯನ್ನು ನೀನಿದ್ದಲ್ಲಿಗೆ ಕಳುಹಿಸುತ್ತಿದ್ದೇನೆ. ನಿನ್ನ ಕಣ್ಣಲ್ಲಿ ನನ್ನ ಬಿಂಬ ಕಾಣಲು ನಿನ್ನ ದಾರಿಯನ್ನೇ ಎದುರು ನೋಡುತ್ತಿರುವೆ. ಜೀವದ ಗೆಳತಿಯನ್ನು ಕಾಣಲು ಆದಷ್ಟು ಬಂದುಬಿಡು ರೋಮಿಯೋ.
ಪ್ರೇಮ ಪತ್ರ: ತೇಜಶ್ವಿನಿ ಕಾಂತರಾಜ್
Published On - 5:00 pm, Tue, 14 February 23