Valentine’s Day 2023: ನನ್ನೊಳವ ನಾವಿಕನೆ, ನನ್ನೀ ಬದುಕಿನ ಆರಂಭ ನಿನ್ನೊಂದಿಗೆ
ಜಗತ್ತು ಯಾವ ರೀತಿ ಸಾಗುತ್ತಿತ್ತೊ ಹಾಗೆ ನಾ ನನ್ನದೇ ಪುಟ್ಟ ಲೋಕದಲ್ಲಿ ಸಾಗುತ್ತಿದ್ದವಳು. ಆಕಸ್ಮಿಕವೆಂಬಂತೆ ಪರಿಚಯವಾಗಿ ನನ್ನೆದೆಯ ಕದವ ತಟ್ಟಿದವನು ನೀನು. ಸಮಯದ ಜೊತೆ ನನ್ನೊಳಗೆ ಅಳಿಸಲಾಗದ ಭಾವನೆಯ ಹುಟ್ಟು ಹಾಕಿದವನು ನೀನೇ ಅಲ್ಲವೇ. ಅನುಮಾನವೇಕೋ ಶುರುವಾಗಿದೆ ನನ್ನೊಳಗೆ. ಎಂದೂ ಮೂಡದ ಅನುಬಂಧವೊಂದು ಅನುರಾಗವೆಂಬ ಮೊಳಕೆಯನ್ನು ಬಿತ್ತಿದೆ ನನ್ನೆದೆಯಲಿ.
ಜಗತ್ತು ಯಾವ ರೀತಿ ಸಾಗುತ್ತಿತ್ತೊ ಹಾಗೆ ನಾ ನನ್ನದೇ ಪುಟ್ಟ ಲೋಕದಲ್ಲಿ ಸಾಗುತ್ತಿದ್ದವಳು. ಆಕಸ್ಮಿಕವೆಂಬಂತೆ ಪರಿಚಯವಾಗಿ ನನ್ನೆದೆಯ ಕದವ ತಟ್ಟಿದವನು ನೀನು. ಸಮಯದ ಜೊತೆ ನನ್ನೊಳಗೆ ಅಳಿಸಲಾಗದ ಭಾವನೆಯ ಹುಟ್ಟು ಹಾಕಿದವನು ನೀನೇ ಅಲ್ಲವೇ. ಅನುಮಾನವೇಕೋ ಶುರುವಾಗಿದೆ ನನ್ನೊಳಗೆ. ಎಂದೂ ಮೂಡದ ಅನುಬಂಧವೊಂದು ಅನುರಾಗವೆಂಬ ಮೊಳಕೆಯನ್ನು ಬಿತ್ತಿದೆ ನನ್ನೆದೆಯಲಿ. ನಾ ಕುಳಿತ ಪುಟ್ಟ ದೋಣಿಯನ್ನೇ ಏರಿದವನು ನೀನು. ನಿನ್ನ ಬಾಳ ಹಾದಿಯಲ್ಲಿ ನನ್ನ ಹಾದಿಗೂ ನೀನೆ ಮುನ್ನುಡಿಯನ್ನಿಡು ಒಲವೇ. ಸಾವಿರಾರು ಕನಸುಗಳ ಮೂಟೆಯನ್ನು ಹೊತ್ತ ನನ್ನ ಬದುಕಿನ ಬಂಡಿಗೆ ನೀನೆ ಪಥವನ್ನು ತೋರಿಸು. ನನ್ನ ಕತ್ತಲ ಬದುಕಿಗೆ ಬೆಳಕೆಂಬ ಹಾದಿಯನ್ನು ತೋರಿಸಿ ಕತ್ತಲಿಂದ ಬೆಳಕಿನೆಡೆಗೆ ನಡೆಸು.
ಶೃಂಗಾರಗೊಳ್ಳಬೇಕು ನಾ ನಿನ್ನ ಮಧುವಣಗಿತ್ತಿಯಂತೆ. ನನ್ನ ಹಣೆಗೆ ನೀನಿಡುವ ಕುಂಕುಮವು ನನ್ನ ಬದುಕಿನಲ್ಲಿ ಹೊಸ ಅಧ್ಯಾಯವನ್ನು ಬರೆಯುವಂತಾಗಬೇಕು. ಸಪ್ತಪದಿಯೆಂಬ ಏಳು ಹೆಜ್ಜೆಯನ್ನು ತುಳಿಯಬೇಕು ನಾ ನಿನ್ನೊಂದಿಗೆ. ನೀ ನನ್ನ ಜಡೆಗೆ ಮುಡಿಸೊ ಮಲ್ಲಿಗೆಯು ಕೂಡ ನಮ್ಮೊಲವ ನೋಡಿ ಹುಟ್ಟೆ ಕಿಚ್ಚು ಪಡಬೇಕು.
ಇದನ್ನೂ ಓದಿ: ಜಾಗಿಂಗ್ನಲ್ಲಿ ಹುಟ್ಟಿದ ಪ್ರೀತಿ, ನನ್ನ ಪ್ರೀತಿಯ ಒಪ್ಪಿಗಾಗಿ ಕ್ಷಣ ಕ್ಷಣಕ್ಕೂ ಕಾಯುತ್ತಿದ್ದ ಅಣ್ಣ ಸ್ನೇಹಿತ
ನಿನ್ನ ಕಣ್ಣುಗಳಲ್ಲಿ ನನ್ನ ಮೇಲಿನ ಒಲವನ್ನು ನಾ ಕಂಡಿರುವೆ. ಹೇಳಬೇಕು ನಾ ನನ್ನೊಡಲ ಒಲುಮೆಯನು ಸಾವಿರಾರು ಬಾರಿ. ನೀ ಕಣ್ಣ ಮುಂದಿಲ್ಲದಿದ್ದಾಗ ನಿನಗಾಗಿ ಹುಡುಕಾಡಿದ ಕ್ಷಣಗಳು ಅದೆಷ್ಟೋ. ನೀ ಆಕಸ್ಮಿಕವಾಗಿ ನನ್ನೆದುರು ನಿಂತಾಗ ಸಂಭ್ರಮಿಸಿದ ಪರಿಯನ್ನಂತು ಹೇಳತೀರದು. ನೀ ಜೊತೆಗಿಲ್ಲದಿದ್ದಾಗಲೂ ನೀ ನನ್ನೊಂದಿಗಿರುವೆ ಎಂಬಂತೆ ಕಲ್ಪನಾ ಲೋಕದಲ್ಲಿ ನಾ ಸಾಗುತ್ತಿದ್ದೆ. ಇಂದು ನೀ ನನ್ನೊಂದಿಗೆ ಪುಟ್ಟ ಮಗುವಾಗಿರುವೆ. ನಿನಗೆ ಹೋಲುವಂತ ಹೋಲಿಕೆಯ ನಾನೆಲ್ಲೂ ನೋಡೋದಿಕ್ಕೆ ಸಾಧ್ಯವಿಲ್ಲ. ನಿನ್ನಷ್ಟು ಮನಕೆ ಹತ್ತಿರವಾದವರು ಕೂಡ ಮತ್ತಾರೂ ಇಲ್ಲ.
ನೀ ನನಗಷ್ಟೇ ಸ್ವಂತ ಹೊರತು ನಾ ನಿನ್ನ ಬೇರೆ ಯಾರೊಂದಿಗೂ ಕಾಣಲು ಕಣ್ಣುಗಳಿಗೂ ಕೂಡ ಸಹಿಸಲಾಗದು. ನಿಜ, ನಾ ನಗಲು ಕಳಿತಿದ್ದು ನಿನ್ನಿಂದಲೇ ಅಲ್ಲವೇ. ನಿನ್ನ ಆ ಮುಗುಳು ನಗು, ನಿನ್ನ ಆ ತುಂಟ ನೋಟ, ನಿನ್ನ ಹುಸಿ ಕೋಪ ಇಂದಿಗೂ ಮನಸಲ್ಲಿ ಹಾಗೆ ಇದೆ ಒಲವೇ. ಸ್ನೇಹಿತರಂತಿರೋ ನಾವುಗಳು ಪತಿ-ಪತ್ನಿಯರೆಂಬ ಸಂಬಂಧ ನಮ್ಮದಾಗಬೇಕು. ಕನವರಿಕೆಯಲ್ಲೂ ನಿನ್ನದೇ ಹೆಸರ ತೊದಲುತಿರುವೆ. ನಾ ಅತ್ತಾಗ ನನ್ನ ಕಣ್ಣೀರೊರೆಸೊ ಅಂಗೈ ನಿನ್ನದಾಗಬೇಕು. ನನ್ನ ಪ್ರತಿ ತರಲೆ ತಮಾಷೆಗಳಿಗೆ ಮನ ಬಿಚ್ಚಿ ನೀ ನಗಬೇಕು.
ನಿನ್ನ ಪುಟ್ಟ ಎದೆಯೊಳಗೆ ನಾ ಮಗುವಾಗಿ ಮುದ್ದಾಗಿ ಆಡಬೇಕು. ನಿನ್ನ ಎದೆಗೊರಗಿ ಹೃದಯ ಬಡಿತವ ನಾ ಮತ್ತೆ ಮತ್ತೆ ಕೇಳಬೇಕು. ದೇವರು ನನ್ನ ಹಣೆ ಬರಹದಲ್ಲಿ ಏನನ್ನು ಬರೆದಿಹನೊ ನನಗೆ ತಿಳಿಯದು ಆದರೆ ಮನಸಲ್ಲಿ ನಿನ್ನದೇ ಹೆಸರು ಅಚ್ಚೊತ್ತಾಗಿದೆ. ಒಲವೆಂಬ ಗುಡಿಯೊಳು ನಂಬಿಕೆಯೆಂಬ ಜ್ಯೋತಿಯು ಸದಾ ಕಾಲ ಬೆಳಗಲಿ ದೇವರೆ.
ಪ್ರೇಮ ಪತ್ರ: ಹೇಮಾವತಿ