Children’s Day 2022: ಆ ಬಾಲ್ಯದ ದಿನಗಳನ್ನು ನೆನಪಿಸುತ್ತಿದೆ ಮಕ್ಕಳ ದಿನಾಚರಣೆ, ಮತ್ತೆ ಮರಳಿ ಬರಬಾರದೇ ಆ ದಿನಗಳು
ಮಕ್ಕಳ ಜೊತೆಗೆ ಇದ್ದರೆ ಮನಸ್ಸಲ್ಲಿರುವ ಎಂತಹದ್ದೇ ನೋವೇ ಆಗಿರಲಿ, ಆ ನೋವೆಲ್ಲವನ್ನು ಮರೆತು ಬಿಡುತ್ತೇವೆ. ಈ ಮಕ್ಕಳಿಗೆ ಮನಸ್ಸಿನ ನೋವನ್ನು ಮರೆಸಿ ಎಲ್ಲರ ಮುಖದಲ್ಲಿ ನಗು ತರಿಸುವ ಶಕ್ತಿಯಿದೆ.
ಮಕ್ಕಳು ದೇವರಿಗೆ ಸಮಾನ, ಮುಗ್ಧ ಮನಸ್ಸಿನ ಮಕ್ಕಳಲ್ಲಿ ದ್ವೇಷ ಅಸೂಯೆ ಎನ್ನುವ ಭಾವಗಳಿಲ್ಲ. ಅವರಲ್ಲಿರುವುದು ನಿಷ್ಕಲ್ಮಶವಾದ ನಗು. ಮಕ್ಕಳ ಜೊತೆಗೆ ಇದ್ದರೆ ಮನಸ್ಸಲ್ಲಿರುವ ಎಂತಹದ್ದೇ ನೋವೇ ಆಗಿರಲಿ, ಆ ನೋವೆಲ್ಲವನ್ನು ಮರೆತು ಬಿಡುತ್ತೇವೆ. ಈ ಮಕ್ಕಳಿಗೆ ಮನಸ್ಸಿನ ನೋವನ್ನು ಮರೆಸಿ ಎಲ್ಲರ ಮುಖದಲ್ಲಿ ನಗು ತರಿಸುವ ಶಕ್ತಿಯಿದೆ. ಇಂದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಸಂಭ್ರಮ. ನವೆಂಬರ್ 14 ನೆಹರುರವರ ಜನ್ಮ ದಿನ. ಮಕ್ಕಳೊಂದಿಗೆ ಮಗುವಾಗುತ್ತಿದ್ದ ಮತ್ತು ಮಕ್ಕಳ ಬಗ್ಗೆ ಅಪಾರ ಒಲವಿದ್ದ ನೆಹರುರವರು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು. ಹೀಗಾಗಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ‘ಮಕ್ಕಳ ದಿನಾಚರಣೆ’ ಆರಂಭವಾಯಿತು.
ನವೆಂಬರ್ ತಿಂಗಳು ಬಂತೆಂದರೆ ಸಾಕು ಎಲ್ಲಾ ಮಕ್ಕಳು ಮಕ್ಕಳ ದಿನಾಚರಣೆಯ ಸಂಭ್ರಮಕ್ಕಾಗಿ ತಯಾರಿ ನಡೆಸುತ್ತಾರೆ. ಇನ್ನು ಮಕ್ಕಳು ಮಾತ್ರವಲ್ಲದೇ ಹಿರಿಯರೂ ಕೂಡಾ ಮಕ್ಕಳ ದಿನಾಚರಣೆಯನ್ನು ತಾವು ಹೇಗೆ ಆಚರಿಸುತ್ತಿದ್ದೆವು ಎಂದು ಮೆಲುಕು ಹಾಕುವುದು ಸಹಜ. ಶಾಲೆ ಆಟ ಪಾಠ ಎಂದು ಕಳೆದುಹೋಗುವ ಮಕ್ಕಳು ಮಕ್ಕಳ ದಿನಾಚರಣೆಯನ್ನು ಸಂಭ್ರಮಿಸುತ್ತಾರೆ. ಶಿಕ್ಷಕರಂತೂ ನವಂಬರ್ 1ರಿಂದಲೇ ಶಾಲೆಗಳಲ್ಲಿ ಮಕ್ಕಳ ದಿನ ಆಚರಿಸಲು ಎಲ್ಲಾ ರೀತಿಯ ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತಾರೆ. ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ ಜೋರಾಗಿಯೇ ಇರುತ್ತದೆ. ನಾನಾ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಆ ಮಕ್ಕಳ ಸಂತೋಷ ಕಂಡು ಶಿಕ್ಷಕರು ಖುಷಿ ಪಡುತ್ತಾರೆ.
ಇದನ್ನು ಓದಿ: Children’s Day 2022: ಮಕ್ಕಳ ದಿನಾಚರಣೆಯನ್ನು ಆಚರಿಸಲು ಹಲವಾರು ಕಾರಣಗಳಿವೆ
ಮಕ್ಕಳ ದಿನಾಚರಣೆಯ ಬಂತೆಂದರೆ, ನಮ್ಮ ಮನಸ್ಸು ಕೂಡ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತದೆ. ಆ ದಿನಗಳಲ್ಲಿ ಒತ್ತಡದ ಬದುಕಿನ ಬಗ್ಗೆ ಅರಿವೇ ಇರಲಿಲ್ಲ. ಆಟ ಪಾಠ ಓದು ಎಂದು ಎಷ್ಟೇ ಬ್ಯುಸಿಯಾಗಿದ್ದರೂ ಆ ದಿನಗಳ ಸಂತೋಷವೇ ಬೇರೆ. ನಾಳೆಯ ಬದುಕಿನ ಬಗ್ಗೆ ಚಿಂತೆ ಇರಲಿಲ್ಲ. ತನ್ನದೇ ಆದ ಪ್ರಪಂಚವನ್ನು ಕಟ್ಟಿಕೊಂಡಿದ್ದ ದಿನಗಳದು. ಆ ಬಾಲ್ಯದ ಮುಗ್ಧತೆ, ಖುಷಿ ಸಂತೋಷ, ಆ ದಿನಗಳು ಮತ್ತೆಂದಿಗೂ ಬರಲು ಸಾಧ್ಯವೇ ಇಲ್ಲ. ಮಕ್ಕಳ ದಿನ ಬಂತೆಂದರೆ, ತಮ್ಮದೇ ದಿನ ಎನ್ನುವಂತೆ ಸಂಭ್ರಮಿಸುತ್ತಿದ್ದ ಆ ಬಾಲ್ಯದ ದಿನಗಳಿದ್ದವು. ಆದರೆ ನಮ್ಮಂತೆ ಈಗಿನ ಮಕ್ಕಳು ಸಂಭ್ರಮಿಸಿದೇ ಇದ್ದರೂ, ಮಕ್ಕಳ ದಿನಾಚರಣೆ ಬಂದರೆ ನಾವು ನಮ್ಮ ಬಾಲ್ಯದ ಕಡೆಗೆ ಹೋಗಿ ಬರುತ್ತೇವೆ. ಇಂದು ಉದ್ಯೋಗದಲ್ಲಿ ತೊಡಗಿಕೊಂಡು ಒತ್ತಡದ ಬದುಕನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರೂ ಆ ಮಕ್ಕಳ ಬುದ್ಧಿ ನಮ್ಮಲ್ಲಿಯೂ ಇದೆ. ಕೆಲವೊಮ್ಮೆ ಕೆಲವು ಸನ್ನಿವೇಶಗಳಲ್ಲಿ ನಮ್ಮೊಳಗೆ ಇರುವ ಮಕ್ಕಳ ಬುದ್ಧಿಯೂ ಹೊರ ಬರುತ್ತದೆ. ಅದೇನೇ ಇರಲಿ, ಮಕ್ಕಳ ಮನಸ್ಸಿನ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.
ಸಾಯಿನಂದಾ ಚಿಟ್ಪಾಡಿ, ಉಪನ್ಯಾಸಕರು
Published On - 9:36 am, Mon, 14 November 22