ಅವಳ್ಯಾರು…..? ಎಂದು ಕಂಡುಕೊಳ್ಳುವಷ್ಟರಲ್ಲಿ ಕಾಲ ನಿರ್ಣಯವಾಗಿತ್ತು !
ತಾಳ್ಮೆ ಇದ್ದರೆ ಜೀವನದಲ್ಲಿ ಮುನ್ನಡೆಯಬಹುದಂತೆ ಅದಕ್ಕೆ ನಾನು ಕೂಡ ಕಾದೆ. ಕಾದು ಕಾದು ಸುಸ್ತಾಗಿ "ಆಕೆ ನನ್ನ ಪಾಲಿಗೆ ದಕ್ಕಳು" ಎನ್ನುತ್ತಾ ಮನೆಕಡೆ ಹೆಜ್ಜೆ ಹಾಕಲು ಪ್ರಾರಂಭಿಸಿದಾಗ ಸುಡುಬಿಸಿಲಲ್ಲಿ ಮಳೆ ಬಂದಂತೆ ಆಕೆ ಬಂದಳು ನನ್ನ ಮನವನ್ನು ತಂಪಾಗಿಸಿದಳು.
ಅವಳ್ಯಾರು…..? ನಮ್ಮ ಮನೆಯಿಂದ ಸ್ವಲ್ಲ ದೂರವಿರುವ ಆ ಓಬಿರಾಯನ ಕಾಲದ ಬಸ್ ಸ್ಟ್ಯಾಂಡಿನಲ್ಲಿ ಬಂದು ನಿಂತ ಅವಳ್ಯಾರು? ಆ ಬಸ್ ಸುಣ್ಣ ಬಣ್ಣವಿಲ್ಲದೆ, ಕಸಕಡ್ಡಿಗಳಿಂದ ತುಂಬಿ ಹೋದದ್ದು ಮಾತ್ರವಲ್ಲದೆ ಅರ್ಧ ಸೇದಿಬಿಟ್ಟ ಸಿಗರೇಟಿನ ತುಂಡುಗಳು, ಅಲ್ಲಲ್ಲಿ ರಂಗೋಲಿಯ ಚುಕ್ಕೆ ಇಟ್ಟಂತೆ ಕಾಣುತ್ತಿತ್ತು. ಆ ದಿನ ಮಾತ್ರ ಆಕೆಯ ಇರುವಿಕೆಯಿಂದ ಸಂಪೂರ್ಣ ತಂಗುದಾಣ( ಬಸ್ ಸ್ಟ್ಯಾಂಡ್ ) ವರ್ಣರಂಜಿತವಾಗಿ ಕಂಗೊಳಿಸುತ್ತಿತ್ತು. ನನಗೋ ಆಕೆಯನ್ನು ಕಂಡಾಗಿನಿಂದ ಮನಸ್ಸು ಹಿಡಿತಕ್ಕೆ ಸಿಗುತ್ತಿಲ್ಲ. ದೇಹ ಆಯಾಸವಾಗಿ ನಿದ್ದೆಗೆ ಜಾರಿದರೂ ಕಣ್ಣು ಮಾತ್ರ “ನಾನಿಂದು ಮುಚ್ಚಲಾರೆ” ಕಣ್ತೆರೆದೇ ಆಕೆಯ ನಗುವನ್ನು ಅನುಭವಿಸುತ್ತೇನೆ ಎಂದು ನನ್ನೊಂದಿಗೆ ಹೋರಾಟ ಮಾಡಿ ಕೊನೆಗೂ ಗೆದ್ದು ಬಿಟ್ಟಿತು. ನನಗಂತೂ ಓದುವ ಹುಚ್ಚಿಲ್ಲ. ನಾನು ಕವಿಯಂತು ಮೊದಲೇ ಅಲ್ಲ ಆದರೂ ಆ ಹುಡುಗಿ ಮಾಡಿದ ಮೋಡಿಯೋ ಏನು ಮನಸ್ಸಿನ ಆಜ್ಞೆಗೆ ಶರಣಾಗಿ ನಾಲಗೆ ಸದಾ ಕವಿತೆಗಳನ್ನು ತಡವರಿಸುತ್ತಿತ್ತು. ಅವಳ್ಯಾರು? ರಮೆಯೋ..? ಉಮೆಯೋ..? ವಾಣಿಯೋ..?ದೇವಲೋಕದ ಅಪ್ಸರೆಯೋ..? ನೋಡಿದ್ರ..ನೋಡಿದ್ರಾ..ಇದೇ ರೀತಿ ಎಂದೋ ಓದಿದ ಕನ್ನಡ ಪದ್ಯಗಳ ಒಂದೆರಡು ಸಾಲುಗಳು ನಾಲಿಗೆಯ ಮೇಲೆ ನಲಿದಾಡುತ್ತಿತ್ತು.
ರಾತ್ರಿಯಿಡೀ ನಿದ್ದೆಯಿಲ್ಲದೆ ಕಾಲ ಕಳೆದು ಮುಂಜಾನೆಯೇ ಹೊರಟು ತಯಾರಾಗಿ, ಎಂದಿಗಿಂತ ಭಿನ್ನವಾಗಿ ಸರಿಸುಮಾರು ಏಳನೇ ಸಲ ಕನ್ನಡಿಯ ಮುಂದೆ ನಿಂತು ಹಲ್ಕಿರಿದು, ಮನೆ ತೊರೆದು ಬಸ್ ಸ್ಟ್ಯಾಂಡಿನಲ್ಲಿ ಕಾದು ಕುಳಿತೆ. ಒಂದೊಂದು ನಿಮಿಷ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಕಾಯುವುದರಲ್ಲಿ ಸುಖವಿದೆ ಎಂದು ಮೇಧಾವಿಗಳು ಹೇಳುವುದನ್ನು ಕೇಳಿದ್ದೆ ಅದೇ ರೀತಿ ಎಲ್ಲಾ ವಿಷಯಗಳನ್ನು ನಾವೇ ಅನುಭವಿಸಿದಾಗ ಮಾತ್ರ ಅದರ ತೀವ್ರತೆ ತಿಳಿಯುತ್ತದೆ ಎಂಬುವುದು ನನಗೆ ಸರಿಯಾಗಿ ಅರ್ಥವಾಯಿತು.
ತಾಳ್ಮೆ ಇದ್ದರೆ ಜೀವನದಲ್ಲಿ ಮುನ್ನಡೆಯಬಹುದಂತೆ ಅದಕ್ಕೆ ನಾನು ಕೂಡ ಕಾದೆ. ಕಾದು ಕಾದು ಸುಸ್ತಾಗಿ “ಆಕೆ ನನ್ನ ಪಾಲಿಗೆ ದಕ್ಕಳು” ಎನ್ನುತ್ತಾ ಮನೆಕಡೆ ಹೆಜ್ಜೆ ಹಾಕಲು ಪ್ರಾರಂಭಿಸಿದಾಗ ಸುಡುಬಿಸಿಲಲ್ಲಿ ಮಳೆ ಬಂದಂತೆ ಆಕೆ ಬಂದಳು ನನ್ನ ಮನವನ್ನು ತಂಪಾಗಿಸಿದಳು. ನನಗಂತೂ ಕೈಕಾಲು ನಡುಗಲು ಶುರುವಾಗಿ ಉಸಿರಾಟವೆಂಬ ಸಂಗೀತದಲ್ಲಿ ಏರಿಳಿತಗಳು ಶ್ರುತಿ ತಪ್ಪ ತೊಡಗಿದವು. ಆದರೂ ಧೈರ್ಯವಾಗಿ ಆ ಹುಡುಗಿಯಲ್ಲಿ ಮಾತನಾಡಿಸಬೇಕೆಂದು ಬಾಯ್ತೆರೆದಾಗ ಆಕೆ ತನ್ನ ಭುಜದ ಮೇಲೆ ನೀಳವಾಗಿ ಹರಿಬಿಟ್ಟ ತಲೆ ಕೂದಲನ್ನು ಹಿಂದಕ್ಕೆ ಸರಿಸಿದಾಗ ಕತ್ತಲ್ಲಿ ವಿರಾಜಮಾನವಾಗಿ ರಾರಾಜಿಸುತ್ತಿದ್ದ ‘ಕರಿಮಣಿ’ ನನಗಂತೂ ಯಮಪಾಶ ಸದೃಶವಾಗಿ ಬಾ…ಬಾ ಎಂದು ಕರೆದಂತೆ ಭಾಸವಾಗಿ ಎದೆ ಬಡಿತ ಜೋರಾಯಿತು. ಪ್ರೀತಿಗೆ ವಯಸ್ಸಿಲ್ಲ, ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಎಂಬುದನ್ನು ಇದಕ್ಕೆ ಹೇಳಿರಬೇಕೋ ಏನೋ. ಹೆಣ್ಣನ್ನು ಕಂಡ ಕೂಡಲೆ ಪ್ರೀತಿಯ ಹೊರತು ಬೇರೆ ಭಾವನೆ ಚಿಗುರೊಡೆಯಲು ಸಾಧ್ಯವಿಲ್ಲವೇ..?
ಕವನ ಕಾಂತಾವರ ಆಳ್ವಾಸ್ ಕಾಲೇಜು