ಮಿಲಿಟರಿ ಸೇವೆಯ ಅಗ್ನಿಪಥ್ ಸ್ಕೀಮ್ ನಿಲ್ಲಿಸುವ ಯೋಚನೆ ಸರ್ಕಾರಕ್ಕಿಲ್ಲ; ಬಜೆಟ್​ನಲ್ಲಿ ಸ್ವಲ್ಪ ಬದಲಾವಣೆ ಸಾಧ್ಯತೆ

|

Updated on: Jul 12, 2024 | 10:28 AM

Union Budget 2024: ಅಗ್ನಿಪಥ್ ಯೋಜನೆಯನ್ನು ಕೈಬಿಡಿ ಎನ್ನುವ ವಿಪಕ್ಷಗಳ ಕೂಗಿಗೆ ಸರ್ಕಾರ ಬಗ್ಗುವ ಸಾಧ್ಯತೆ ಇಲ್ಲ. ವರದಿ ಪ್ರಕಾರ ಮುಂಬರುವ ಬಜೆಟ್​ನಲ್ಲಿ ಅಗ್ನಿಪಥ್ ಸ್ಕೀಮ್​ನಲ್ಲಿ ತುಸು ಮಾರ್ಪಾಡು ತರಬಹುದು ಎನ್ನಲಾಗಿದೆ. 17.5 ವರ್ಷದಿಂದ 21 ವರ್ಷದೊಳಗಿನ ವಯಸ್ಸಿನ ಯುವಕರು ಮತ್ತು ಯುವತಿಯರನ್ನು ನಾಲ್ಕು ವರ್ಷ ಕಾಲ ಮಿಲಿಟರಿ ಸೇವೆಗೆ ಸೇರಿಸಿಕೊಳ್ಳುವುದು ಅಗ್ನಿಪಥ್ ಯೋಜನೆ.

ಮಿಲಿಟರಿ ಸೇವೆಯ ಅಗ್ನಿಪಥ್ ಸ್ಕೀಮ್ ನಿಲ್ಲಿಸುವ ಯೋಚನೆ ಸರ್ಕಾರಕ್ಕಿಲ್ಲ; ಬಜೆಟ್​ನಲ್ಲಿ ಸ್ವಲ್ಪ ಬದಲಾವಣೆ ಸಾಧ್ಯತೆ
ಅಗ್ನಿಪಥ್ ಸ್ಕೀಮ್
Follow us on

ನವದೆಹಲಿ, ಜುಲೈ 12: ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಅಗ್ನಿಪಥ್ ಯೋಜನೆಯನ್ನು ನಿಲ್ಲಿಸುವ ಯಾವ ಆಲೋಚನೆ ಸರ್ಕಾರಕ್ಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಕೊನೆಯ ವಾರದಲ್ಲಿ ಮಂಡನೆಯಾಗುವ ಕೇಂದ್ರ ಬಜೆಟ್​ನಲ್ಲಿ ಅಗ್ನಿಪಥ್ ಯೋಜನೆಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು ತರಬಹುದು ಎನ್ನಲಾಗಿದೆ. ಸಶಸ್ತ್ರ ಪಡೆಗಳಿಗೆ ಯುವಜನರನ್ನು ನೇಮಿಸುವ ಒಂದು ಸ್ಕೀಮ್ ಅಗ್ನಿಪಥ್. ಈ ಯೋಜನೆ ಸರ್ಕಾರಕ್ಕೆ ಎರಡು ರೀತಿಯಲ್ಲಿ ನೆರವಾಗುತ್ತದೆ. ಮೊದಲನೆಯದು, ಸಶಸ್ತ್ರ ಪಡೆಗೆ ಸಣ್ಣ ಪ್ರಾಯದವರ ಸೇವೆ ಲಭಿಸುತ್ತದೆ. ಎರಡನೆಯದು, ನಿವೃತ್ತ ಸೈನಿಕರಿಗೆ ಕೊಡಲಾಗುವ ಪಿಂಚಣಿ ಹಣವನ್ನು ಉಳಿಸಬಹುದು.

ಏನಿದು ಅಗ್ನಿಪಥ್ ಯೋಜನೆ?

2022ರ ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿತು. 17.5 ವರ್ಷದಿಂದ 21 ವರ್ಷದೊಳಗಿನ ವಯೋಮಾನದ ಯುವಕ ಮತ್ತು ಯುವತಿಯರನ್ನು ಸೇನಾಪಡೆಗಳಿಗೆ ನೇಮಿಸಿಕೊಳ್ಳಲಾಗುತ್ತದೆ. ಅವರಿಗೆ ಮೂಲ ಮಿಲಿಟರಿ ತರಬೇತಿ ಇತ್ಯಾದಿ ಕಲಿಸಿಕೊಡಲಾಗುತ್ತದೆ. ನಾಲ್ಕು ವರ್ಷ ಕಾಲ ಈ ಅಗ್ನಿವೀರರನ್ನು ಸೇವೆಯಲ್ಲಿರಿಸಲಾಗುತ್ತದೆ. ಅದಾದ ಬಳಿಕ ಶೇ. 25ರಷ್ಟು ಅಗ್ನಿವೀರರನ್ನು ಆಯ್ಕೆ ಮಾಡಿಕೊಂಡು ಖಾಯಂ ಆಗಿ ಸೇವೆಯಲ್ಲಿರಿಸಲಾಗುತ್ತದೆ. ಇನ್ನುಳಿದ ಶೇ. 75ರಷ್ಟು ಅಗ್ನಿವೀರರು ವಾಪಸ್ಸಾಗಬೇಕಾಗುತ್ತದೆ. ಇವರಿಗೆ ಸರ್ಕಾರ ಲಂಪ್ಸಮ್ ಆಗಿ ಇಂತಿಷ್ಟು ಹಣವನ್ನು ಕೊಡುತ್ತದೆ.

ಇದನ್ನೂ ಓದಿ: ಆದಾಯ ತೆರಿಗೆ ಸ್ಲ್ಯಾಬ್ ದರ, ಎಕ್ಸೆಂಪ್ಷನ್ ಮಿತಿಯಲ್ಲಿ ಬದಲಾವಣೆ ನಿರೀಕ್ಷಿಸುತ್ತಿರುವವರಿಗೆ ಕಾದಿದೆ ನಿರಾಸೆ

ವಿಪಕ್ಷಗಳು ಅಗ್ನಿಪಥ್ ಸ್ಕೀಮ್​ಗೆ ವಿರೋಧಿಸುತ್ತಿರುವುದ್ಯಾಕೆ?

ಅಗ್ನಿಪಥ್ ಸ್ಕೀಮ್​ನಲ್ಲಿ ಆಯ್ಕೆಯಾದ ಯುವಕರು ಮತ್ತು ಯುವತಿಯರು ನಾಲ್ಕು ವರ್ಷದ ಬಳಿಕ ಸೇವೆಯಲ್ಲಿ ಮುಂದುವರಿಯಲಿಲ್ಲ ಎಂದರೆ ಅವರ ಭವಿಷ್ಯವೇ ಮಸುಕಾಗಬಹುದು. ಅಗ್ನಿವೀರರಾಗದೇ ಹೋಗಿದ್ದರೆ ಓದು ಮುಂದುವರಿಸಿ ವೃತ್ತಿಜೀವನ ಹಿಡಿಯುತ್ತಿದ್ದರು. ಈ ಸ್ಕೀಮ್​ನಿಂದಾಗಿ ಅವರ ಜೀವನ ಹಾಳಾಗಬಹುದು ಎಂಬುದು ವಿಪಕ್ಷಗಳ ವಾದ.

ಅಗ್ನಿಪಥ್ ಯೋಜನೆಯಿಂದ ಸರ್ಕಾರಕ್ಕೆ ಏನು ಲಾಭ?

ಮಿಲಿಟರಿ ಸೇವೆಯಲ್ಲಿ ಈಗ ಹೆಚ್ಚಿನ ಯೋಧರು ವಯಸ್ಸಾದವರೇ ಇದ್ದಾರೆ. ಅಗ್ನಿಪಥ್ ಸ್ಕೀಮ್ ಮೂಲಕ ನಿರಂತರವಾಗಿ ಯುವಕರು ಸೇವೆಗೆ ಸಿಗುತ್ತಾರೆ. ಒಂದು ಬ್ಯಾಚ್​ನ ಅಗ್ನಿವೀರರು ನಾಲ್ಕು ವರ್ಷದ ಬಳಿಕ ಹೊರಹೋದಾಗ, ಮತ್ತೊಂದು ಹೊಸ ಬ್ಯಾಚ್ ಬರುತ್ತದೆ. ಆಗ 21 ವರ್ಷದೊಳಗಿನ ಯುವಕರು ಸೇನಾ ಪಡೆಗೆ ಸೇರಿಕೊಳ್ಳುತ್ತಾರೆ.

ಇದನ್ನೂ ಓದಿ: EPF: 2023-24ರ ಸಾಲಿನಲ್ಲಿ ಇಪಿಎಫ್ ಹಣಕ್ಕೆ ಶೇ. 8.25ರ ಬಡ್ಡಿ; ಹಣಕಾಸು ಸಚಿವಾಲಯದಿಂದ ಅನುಮೋದನೆ

ಒಂದು ಬ್ಯಾಚ್​ನ ಅಗ್ನಿವೀರರಲ್ಲಿ ಶೇ. 25ರಷ್ಟು ಮಂದಿಯನ್ನು ಮಾತ್ರ ಖಾಯಂ ಸೇವೆಗೆ ಸೇರಿಸಿಕೊಳ್ಳಲಾಗುತ್ತದೆ. ಇದರಿಂದ ಸರ್ಕಾರಕ್ಕೆ ಪಿಂಚಣಿ, ದುಬಾರಿ ಸಂಬಳ ಇತ್ಯಾದಿ ವೆಚ್ಚ ತಪ್ಪುತ್ತದೆ. ಈ ಹಣವನ್ನು ಮಿಲಿಟರಿ ಆಧುನೀಕರಣಗೊಳಿಸಲು ಮತ್ತು ಮೇಲ್ದರ್ಜೆಗೇರಿಸಲು ಬಳಸಿಕೊಳ್ಳಬಹುದು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ