AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ ಬಗ್ಗೆ ಚರ್ಚಿಸಲು ತಜ್ಞರ ಸಭೆ ನಡೆಸಿದ ಪ್ರಧಾನಿ ಮೋದಿ; ಈ ಬಾರಿ ಉದ್ಯೋಗಸೃಷ್ಟಿಯತ್ತ ಹೆಚ್ಚು ಗಮನ ಸಾಧ್ಯತೆ

Union Budget 2024: ಜುಲೈ 23ರಂದು ಮಂಡನೆ ಆಗಲಿರುವ ಕೇಂದ್ರ ಬಜೆಟ್ ದಿಕ್ಕು ದೆಸೆ ಹೇಗಿರಬೇಕು ಎಂದು ನಿರ್ಣಯಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಜ್ಞರ ಸಭೆ ನಡೆಸಿದರು. ವಿವಿಧ ಕ್ಷೇತ್ರಗಳ ಪರಿಣಿತರು, ಪ್ರತಿನಿಧಿಗಳು, ಆರ್ಥಿಕ ತಜ್ಞರು, ನೀತಿ ಆಯೋಗ್ ಅಧಿಕಾರಿಗಳು ಮೊದಲಾದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿಯ ಬಜೆಟ್​ನಲ್ಲಿ ಉದ್ಯೋಗಸೃಷ್ಟಿಗೆ ಪೂರಕವಾಗುವ ಮತ್ತು ಹಣದುಬ್ಬರ ಇಳಿಕೆಗೆ ಆಸ್ಪದ ಕೊಡುವಂತಹ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.

ಬಜೆಟ್ ಬಗ್ಗೆ ಚರ್ಚಿಸಲು ತಜ್ಞರ ಸಭೆ ನಡೆಸಿದ ಪ್ರಧಾನಿ ಮೋದಿ; ಈ ಬಾರಿ ಉದ್ಯೋಗಸೃಷ್ಟಿಯತ್ತ ಹೆಚ್ಚು ಗಮನ ಸಾಧ್ಯತೆ
ಪ್ರಧಾನಿ ಮೋದಿ ಸಭೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 11, 2024 | 2:37 PM

Share

ನವದೆಹಲಿ, ಜುಲೈ 11: ಕೇಂದ್ರ ಬಜೆಟ್​ನ ಅಜೆಂಡಾ ಹೇಗಿರಬೇಕು ಎಂದು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಗುರುವಾರ ಪ್ರಮುಖ ಆರ್ಥಿಕ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಪರಿಣಿತರ ಸಭೆ ನಡೆಸಿದರು. ಮಧ್ಯಾಹ್ನ 12 ಗಂಟೆಗೆ ಶುರುವಾದ ಈ ಸಭೆಯಲ್ಲಿ ಉದ್ಯೋಗ ಸೃಷ್ಟಿಗೆ ಏನೆಲ್ಲಾ ಕ್ರಮ ಕೈಗೊಳ್ಳಬಹುದು, ಯಾವೆಲ್ಲಾ ವಲಯಗಳಿಗೆ ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ನ್ಯೂಸ್ 18 ವಾಹಿನಿ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಸಭೆಯಲ್ಲಿ ಉಪಸ್ಥಿತರಿದ್ದರು. ಸುರ್ಜಿತ್ ಭಲ್ಲ, ಎ.ಕೆ. ಭಟ್ಟಾಚಾರ್ಯ, ಪ್ರೊ| ಅಶೋಕ್ ಗುಲಾಟಿ, ಕೆ.ವಿ. ಕಾಮತ್ ಮೊದಲಾದ ತಜ್ಞರು ಇದರಲ್ಲಿ ಭಾಗಿಯಾಗಿದ್ದರು. ಹಾಗೆಯೇ, ನೀತಿ ಆಯೋಗ್​ನ ಉಪಾಧ್ಯಕ್ಷ ಸುಮನ್ ಬೇರಿ ಮತ್ತಿತರ ಸದಸ್ಯರೂ ಕೂಡ ಪಾಲ್ಗೊಂಡಿದ್ದರು.

ಜುಲೈ 23ರಂದು ಮಂಡನೆ ಆಗಲಿರುವ ಈ ಬಾರಿಯ ಮುಂಗಡ ಪತ್ರವು ಹಲವು ಐತಿಹಾಸಿಕ ಹೆಜ್ಜೆಗಳನ್ನು ಒಳಗೊಂಡಿರುತ್ತದೆ. ಸುಧಾರಣೆ ಕ್ರಮಗಳಿಗೆ ಇನ್ನಷ್ಟು ಪುಷ್ಟಿ ಕೊಡಲಾಗುತ್ತದೆ ಎಂದು ಕಳೆದ ತಿಂಗಳು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದರು. ಮೈತ್ರಿ ಮೇಲೆ ಸರ್ಕಾರ ಅವಲಂಬಿತವಾಗಿದ್ದರೂ ದಿಟ್ಟ ಕ್ರಮಗಳ ಜಾರಿ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ: ದೇಶದ ಹಣದ ಕೊರತೆ ಐದೇ ನಿಮಿಷದಲ್ಲಿ ಬಗೆಹರಿಸ್ತೀನಿ: 13 ವರ್ಷದ ಹಿಂದೆ ವಾರನ್ ಬಫೆಟ್ ಹೇಳಿದ ಮಾತು ಈಗ ವೈರಲ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಬಜೆಟ್ ಸಂಬಂಧ ವಿವಿಧ ಉದ್ಯಮ ವಲಯಗಳ ನೇತಾರರು, ಪ್ರಮುಖ ಆರ್ಥಿಕ ತಜ್ಞರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಚಿವರು ಸೇರಿದಂತೆ ಎಲ್ಲಾ ಭಾಗಿದಾರರೊಂದಿಗೆ ಬಜೆಟ್ ಸಂಬಂಧ ಸಮಾಲೋಚನೆ ನಡೆಸಿ ಸಲಹೆಗಳನ್ನು ಸಂಗ್ರಹಿಸಿದ್ದಾರೆ. ಒಟ್ಟಾರೆ ಈ ಬಜೆಟ್​ನಲ್ಲಿ ಉದ್ಯೋಗಸೃಷ್ಟಿಗೆ ಪೂರಕವಾಗಿರುವ ಕ್ರಮಗಳನ್ನು ಜಾರಿಗೊಳಿಸುವತ್ತ ಗಮನ ಹರಿಸಬಹುದು ಎನ್ನಲಾಗುತ್ತಿದೆ.

ಸಾಮಾನ್ಯ ವ್ಯಕ್ತಿಗೆ, ಅದರಲ್ಲೂ ಕಡಿಮೆ ಸಂಬಳದ ವರಮಾನ ಇರುವ ಜನರಿಗೆ ತೆರಿಗೆ ಹೊರೆ ಬೀಳಬಾರದು. ಆದಾಯ ತೆರಿಗೆ ಸ್ಲ್ಯಾಬ್ ದರದಲ್ಲಿ ಬದಲಾವಣೆ ಮಾಡಬೇಕು. ತೆರಿಗೆ ವಿನಾಯಿತಿ, ರಿಯಾಯಿತಿಗಳನ್ನು ಹೆಚ್ಚಿಸಬೇಕು. ಮಹಿಳೆಯರಿಗೆ ಹೆಚ್ಚು ತೆರಿಗೆ ಲಾಭ ಕೊಡಬೇಕು ಎಂಬಿತ್ಯಾದಿ ಸಲಹೆಗಳು ಉದ್ಯಮವಲಯದಿಂದ ಕೇಳಿಬರುತ್ತಿವೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2024: ಮಹಿಳೆಯರಿಗೆ ವಿಶೇಷ ತೆರಿಗೆ ಲಾಭ ಸಿಗುತ್ತದಾ? ನಿರೀಕ್ಷೆಗಳಿವು…

2047ರ ವೇಳೆಗೆ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡುವ ಗುರಿ ಸರ್ಕಾರದ್ದು. ಅದಕ್ಕಾಗಿ ನಿರಂತರವಾಗಿ ಪ್ಲಾನ್​ಗಳನ್ನು ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ಬಜೆಟ್ ಹೆಜ್ಜೆ ಇರಲಿದೆ. ಹಣದುಬ್ಬರ ಕಡಿಮೆ ಮಾಡುವ, ಉದ್ಯೋಗ ಸೃಷ್ಟಿಸುವ ಮತ್ತು ಆರ್ಥಿಕತೆಗೆ ವೇಗ ತರುವಂತಹ ಕ್ರಮವನ್ನು ಜುಲೈ ಬಜೆಟ್​ನಲ್ಲಿ ನಿರೀಕ್ಷಿಸಬಹುದು ಎಂದು ಮೂಲಗಳು ಹೇಳುತ್ತಿವೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ