ಎಸ್ಟಿಟಿ, ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ದರಗಳ ಹೆಚ್ಚಳ; ಷೇರು ಹೂಡಿಕೆದಾರರಿಗೆ ಬಜೆಟ್ ಕಹಿ
Capital Gain taxes revised: ಷೇರುಗಳನ್ನು ಲಾಭಕ್ಕೆ ಮಾರಿದಾಗ ವಿಧಿಸಲಾಗುವ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ದರಗಳನ್ನು ಬಜೆಟ್ನಲ್ಲಿ ಹೆಚ್ಚಿಸಲಾಗಿದೆ. ನಿರ್ದಿಷ್ಟ ಹಣಕಾಸು ಆಸ್ತಿಗಳಿಗೆ ಇರುವ ಎಸ್ಟಿಸಿಜಿ ತೆರಿಗೆಯನ್ನು ಶೇ. 15ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ. ಎಲ್ಟಿಸಿಜಿ ತೆರಿಗೆಯನ್ನು ಶೇ 10ರಿಂದ ಶೇ. 12.5ಕ್ಕೆ ಹೆಚ್ಚಿಸಲಾಗಿದೆ. ಈಕ್ವಿಟಿ ಮ್ಯೂಚುವಲ್ ಫಂಡ್, ಷೇರು ಇತ್ಯಾದಿಗಳ ಟ್ರೇಡಿಂಗ್ಗೆ ಈ ದರ ಬದಲಾವಣೆ ಅನ್ವಯ ಆಗುತ್ತದೆ.
ನವದೆಹಲಿ, ಜುಲೈ 23: ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ನಲ್ಲಿ ಷೇರು ಹೂಡಿಕೆದಾರರಿಗೆ ತುಸು ಕಹಿ ಸುದ್ದಿ ಇದೆ. ಎರಡು ಕ್ಯಾಪಿಟಲ್ ಗೇಯ್ನ್ ಅಥವಾ ಲಾಭ ಹೆಚ್ಚಳ ತೆರಿಗೆಯನ್ನು ಹೆಚ್ಚಿಸಲಾಗಿದೆ. ಷೇರು ಮಾರುಕಟ್ಟೆ ಮಾತ್ರವಲ್ಲ, ಇತರ ಕೆಲ ಹಣಕಾಸು ಅಸ್ತಿಗಳಿಗೂ ಈ ತೆರಿಗೆ ಅನ್ವಯ ಆಗುತ್ತದೆ. ಷೇರು ಇತ್ಯಾದಿ ಹಣಕಾಸು ಆಸ್ತಿಗಳನ್ನು ಒಂದು ವರ್ಷದ ಅವಧಿಯೊಳಗೆ ಮಾರಿದರೆ ಅದಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಶೇ. 15ರಷ್ಟಿದ್ದ ಕಿರು ಅವಧಿ ಲಾಭ ತೆರಿಗೆಯನ್ನು ಶೇ. 20ಕ್ಕೆ ಹೆಚ್ಚಿಸಲಾಗಿದೆ.
ಇನ್ನು, ಒಂದು ವರ್ಷ ಮೇಲ್ಪಟ್ಟ ಅವಧಿಯವರೆಗೆ ಆಸ್ತಿ ಇಟ್ಟುಕೊಂಡು ಮಾರಿದರೆ ಅದಕ್ಕೆ ಎಲ್ಟಿಸಿಜಿ ಅಥವಾ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಶೇ. 10ರಷ್ಟಿದ್ದ ಎಲ್ಟಿಸಿಜಿಯನ್ನು ಶೇ. 12.5ಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಮಧ್ಯಮ ವರ್ಗದ ಮನೆಯ ಕನಸು ನನಸಾಗಿಸಲು ಮಹತ್ವದ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್
ಆದರೆ, ಲಿಸ್ಟ್ ಆಗಿಲ್ಲದ ಬಾಂಡ್ಗಳು, ಡೆಟ್ ಮ್ಯೂಚುವಲ್ ಫಂಡ್ಗಳಿಗೆ ಈ ಹಿಂದಿನ ದರದಲ್ಲಿ ಲಾಭ ತೆರಿಗೆ ಅನ್ವಯ ಆಗುತ್ತದೆ. ಅಲ್ಲದೇ ಇಂಥ ಹಣಕಾಸು ಆಸ್ತಿಗಳನ್ನು ಎರಡು ವರ್ಷದೊಳಗೆ ಮಾರಿದರೆ ಶೇ. 15ರ ಎಸ್ಟಿಸಿಜಿ ತೆರಿಗೆ ಅನ್ವಯ ಆಗುತ್ತದೆ. ಎರಡು ವರ್ಷದ ಬಳಿಕ ಮಾರಿದರೆ ಶೇ. 20ರ ತೆರಿಗೆ ವಿಧಿಸಲಾಗುತ್ತದೆ.
ವಿನಾಯಿತಿ ಮಿತಿ ಹೆಚ್ಚಳ
ಲಾಭ ಹೆಚ್ಚಳದಲ್ಲಿ ಒಂದು ವರ್ಷಕ್ಕೆ ತೆರಿಗೆ ವಿನಾಯಿತಿಗೆ ಇದ್ದ ಒಂದು ಲಕ್ಷ ರೂ ಮಿತಿಯನ್ನು 1.25 ಲಕ್ಷ ರೂಗೆ ಹೆಚ್ಚಿಸಲಾಗಿದೆ.
ಲಾಭ ಹೆಚ್ಚಳ ತೆರಿಗೆಯು ನೀವು ಹಣಕಾಸು ಆಸ್ತಿಯನ್ನು ಮಾರಿ ಬಂದ ಲಾಭಕ್ಕೆ ವಿಧಿಸುವ ತೆರಿಗೆ. ನೀವು 1 ಲಕ್ಷ ರೂ ಮೌಲ್ಯದ ಷೇರುಗಳನ್ನು ಖರೀದಿಸಿ, ಒಂದು ವರ್ಷದೊಳಗೆ ಅದನ್ನು 1.25 ಲಕ್ಷ ರೂಗೆ ಮಾರುತ್ತೀರಿ ಎಂದಿಟ್ಟುಕೊಳ್ಳಿ. 25 ಸಾವಿರ ರೂ ಲಾಭದ ಮೇಲೆ ಎಸ್ಟಿಸಿಜಿ ಅನ್ವಯ ಆಗುತ್ತದೆ. ಅಂದರೆ 5,000 ರೂ ತೆರಿಗೆ ಬೀಳುತ್ತದೆ. ಒಂದು ವರ್ಷ ಹೂಡಿಕೆ ಮಾಡಿ ಮಾರಿದಾಗ ಶೆ. 12.5ರಷ್ಟು ಎಲ್ಟಿಸಿಜಿ ತೆರಿಗೆ ವಿಧಿಸಲಾಗುತ್ತದೆ.
ಇದನ್ನೂ ಓದಿ: ರಕ್ಷಣಾ ಕ್ಷೇತ್ರದಲ್ಲಿ ಬಲಿಷ್ಠವಾಗಲಿದೆ ಭಾರತ, ಬಜೆಟ್ನಲ್ಲಿ ಘೋಷಿಸಿದ್ದೇನೇನು ತಿಳಿಯಿರಿ
ಎಸ್ಟಿಟಿ ತೆರಿಗೆ ಹೆಚ್ಚಳ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಫ್ ಅಂಡ್ ಒ ಟ್ರೇಡಿಂಗ್ನಲ್ಲಿ ಎಸ್ಟಿಟಿ ಅಥವಾ ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅನ್ನೂ ಹೆಚ್ಚಿಸಿದ್ದಾರೆ. ಫ್ಯೂಚರ್ಸ್ ಟ್ರೇಡಿಂಗ್ನಲ್ಲಿ ಶೇ. 0.0125ರಷ್ಟಿದ್ದ ಎಸ್ಟಿಟಿಯನ್ನು ಶೇ 0.02ಕ್ಕೆ ಹೆಚ್ಚಿಸಲಾಗಿದೆ. ಆಪ್ಷನ್ಸ್ ಟ್ರೇಡಿಂಗ್ನಲ್ಲಿ ಶೇ. 0.0625ರಷ್ಟಿದ್ದ ಎಸ್ಟಿಟಿಯನ್ನು ಶೇ 0.1ಕ್ಕೆ ಹೆಚ್ಚಿಸಲಾಗಿದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ