ಮೈಸೂರು: ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೀರಾವರಿಗೆ ಆದ್ಯತೆ ಕೊಡುತ್ತಾರೆ ಅಂತ ನಿರೀಕ್ಷೆ ಇತ್ತು. ಕರ್ನಾಟಕ ರಾಜ್ಯದ ಜನರ ನಿರೀಕ್ಷೆ ಹುಸಿಯಾಗಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ನಿರಾಶಾದಾಯಕ ಬಜೆಟ್ (Union Budget) ಇದಾಗಿದೆ. ಬಜೆಟ್ ಪ್ರತಿ ಸಂಪೂರ್ಣ ಓದಿದ ನಂತರ ವಿಶ್ಲೇಷಿಸುವೆ. ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ಅನುಕೂಲವಿಲ್ಲ. ರಾಜ್ಯದ ಜನರಿಗೆ ಬಿಜೆಪಿ ಸಂಸದರಿಂದ ಪ್ರಯೋಜನವಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಆದರೆ ಕರ್ನಾಟಕಕ್ಕೆ ಯಾವುದೇ ಯೋಜನೆಯನ್ನು ನೀಡಿಲ್ಲ. ರಾಜ್ಯಕ್ಕೆ ಕೊಡಬೇಕಿದ್ದ 5,495 ಕೋಟಿ ಹಣ ಕೊಡಲೇ ಇಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ (BJP Government) ಇದ್ದರೂ ನೀಡುತ್ತಿಲ್ಲ. ರಾಜ್ಯದ ಪಾಲಿನ ಜಿಎಸ್ಟಿ ಪಾಲಿನ ಹಣವನ್ನೂ ಕೊಡಲಿಲ್ಲ. ರಾಜ್ಯಕ್ಕೆ GST ಹಣ ಬರದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಮೋದಿ ಮುಂದೆ ರಾಜ್ಯ ಸಂಸದರು ಹೇಡಿಗಳಂತೆ ವರ್ತಿಸ್ತಾರೆ. ರಾಜ್ಯದ ಪಾಲಿನ ಹಣ ಕೇಳುವುದಕ್ಕೂ ಸಂಸದರಿಗೆ ತಾಕತ್ತಿಲ್ಲ. ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಇದನ್ನು ಪ್ರಶ್ನಿಸುತ್ತಿಲ್ಲ. ಮಾತಾಡ ಬೇಕಾದ ಜಾಗದಲ್ಲಿ ಸಂಸದರು ಮೌನವಾಗಿದ್ದಾರೆ ಎಂದು ಕಬಿನಿ ರೆಸಾರ್ಟ್ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಇದರಿಂದ 11 ಲಕ್ಷದ 87 ಸಾವಿರದ 180 ಕೋಟಿ ಸಾಲ ಹೆಚ್ಚಳವಾಗುತ್ತದೆ. ಕಳೆದ ವರ್ಷ 135 ಲಕ್ಷ 87 ಸಾವಿರದ ಕೋಟಿ ರೂ. ಸಾಲವಾಗಿತ್ತು. 2022ರ ಮಾರ್ಚ್ವರೆಗೆ 135.87 ಲಕ್ಷ ಕೋಟಿ ಸಾಲವಿರುತ್ತದೆ. ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ 53.11 ಲಕ್ಷ ಕೋಟಿ ಸಾಲವಿತ್ತು. ಆದರೆ, ನರೇಂದ್ರ ಮೋದಿ ಸರ್ಕಾರ 8 ವರ್ಷದ ಅವಧಿಯಲ್ಲಿ 93 ಲಕ್ಷ ಕೋಟಿ ಸಾಲ ಮಾಡಿದೆ. ಕೇಂದ್ರ ಬಜೆಟ್ನ ಬಹುಭಾಗ ಹಣ ಸಾಲ, ಬಡ್ಡಿಗೆ ಹೋಗುತ್ತದೆ. ಇದು ಒಟ್ಟಾರೆ ದೇಶದ ಸಾಲ 147 ಲಕ್ಷ ಕೋಟಿಯಷ್ಟು ಆಗುತ್ತದೆ. 147 ಲಕ್ಷ ಕೋಟಿ ಸಾಲಕ್ಕೆ 9,40,651 ಕೋಟಿ ರೂ. ಬಡ್ಡಿಯಾಗುತ್ತದೆ. ಭಾರತ ಸರ್ಕಾರ 9,40,651 ಕೋಟಿ ರೂ. ಬಡ್ಡಿ ಕಟ್ಟಬೇಕು. ಕೊರೊನಾ ಸಂಕಷ್ಟದಿಂದ ಉದ್ಯೋಗ ನಷ್ಟವಾಗಿದೆ. ಕೇಂದ್ರ ಸರ್ಕಾರ ಜನರ ನೆರವಿಗೆ ಬಂದಿಲ್ಲ ಎಂದು ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ರೆಸಾರ್ಟ್ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ 39.45 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಕಳೆದ ಬಾರಿಗಿಂತ 4.61 ಲಕ್ಷ ಕೋಟಿ ಹೆಚ್ಚಿನ ಗಾತ್ರದ ಬಜೆಟ್ ಇದಾಗಿದೆ. ಉದ್ಯೋಗ ಸೃಷ್ಟಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆಹಾರ ಭದ್ರತಾ ಕಾಯ್ದೆಯನ್ನು ದುರ್ಬಲಗೊಳಿಸಿದ್ದಾರೆ. ಜನರಿಗೆ ನೀಡುತ್ತಿದ್ದ ಉಚಿತ ಅಕ್ಕಿ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಎನ್ಇಪಿ ಜಾರಿಗೆ ತರಲು ಸರ್ಕಾರ ಯತ್ನಿಸುತ್ತಿದೆ. ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚುವರಿಯಾಗಿ ಅನುದಾನ ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಂದಿನ ವರ್ಷಕ್ಕೆ ಜಿಡಿಪಿ ವೃದ್ಧಿ 8.2ಕ್ಕೆ ನಿರೀಕ್ಷಿಸಲಾಗಿದೆ. ಮೋದಿ ಅವಧಿಯಲ್ಲಿ ಸುಭಿಕ್ಷವಾಗಿದೆ ಎನ್ನುವುದು ಸುಳ್ಳು. ರಸಗೊಬ್ಬರಕ್ಕೆ ನೀಡುತ್ತಿದ್ದ ಸಬ್ಸಿಡಿ ಹಣ ಕಡಿಮೆ ಮಾಡಿದ್ದಾರೆ. 2020-2021ರಲ್ಲಿ 1,28,740 ಕೋಟಿ ಸಬ್ಸಿಡಿ ನೀಡಿದ್ದರು. 2021-2022ರಲ್ಲಿ 1,40,258 ಕೋಟಿ ಸಬ್ಸಿಡಿ ನೀಡಿದ್ದರು. ಈ ಬಜೆಟ್‌ನಲ್ಲಿ 1,05,262 ಕೋಟಿ ಸಬ್ಸಿಡಿ ನೀಡಿದ್ದಾರೆ. ಸುಮಾರು 35 ಕೋಟಿ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಇದರಿಂದ ರಸಗೊಬ್ಬರ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಹದಾಯಿ ಯೋಜನೆ ಬಗ್ಗೆ ಯಾರನ್ನೂ ಕರೆದು ಮಾತಾಡಿಲ್ಲ. ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲು ಆಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಕರಣಗೊಳಿಸಲು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಈವರೆಗೆ ಸ್ಪಂದಿಸಿಲ್ಲ. ಇದೆಲ್ಲವಲ್ಲೂ ಬಿಟ್ಟು ನದಿ ಜೋಡಣೆ ಮಾಡುತ್ತೇವೆ ಅಂತಿದ್ದಾರೆ. ಇದರ ಅರ್ಥ ಜನರ ಗಮನ ಬೇರಡೆ ಸೆಳೆಯುವುದು ಮಾತ್ರ. ಜನರಿಗೆ ಅಗತ್ಯವಿರುವ ಕೆಲಸ ಮಾಡುವ ಉದ್ದೇಶವಿಲ್ಲ. ಮುಂದಿನ 25 ವರ್ಷಕ್ಕೆ ಯೋಜನೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಇನ್ನೂ 25 ವರ್ಷ ಇವರೇ ಅಧಿಕಾರದಲ್ಲಿರುತ್ತಾರಾ? ಇದು ದೇಶ ಉದ್ಧಾರ ಮಾಡುವ ಬಜೆಟ್ ಅಲ್ಲ. ಇದು ದೇಶವನ್ನು ವಿನಾಶ ಮಾಡಲು ಮಂಡಿಸಿರುವ ಬಜೆಟ್. ಜನರ ನಂಬಿಕೆಗೆ ದ್ರೋಹ ಮಾಡುವ ಬಜೆಟ್ ಇದಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಚುನಾವಣೆ ನಡೆಯುವ ರಾಜ್ಯಗಳಿಗೆ ಯಾವುದೇ ಯೋಜನೆ ಇಲ್ಲ. ಕರ್ನಾಟಕಕ್ಕೂ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಕೇಂದ್ರ ಸರ್ಕಾರದ ಮೇಲಿದ್ದ ಜನರ ಭರವಸೆ ಹುಸಿಯಾಗಿದೆ. ದೇಶದ ಭವಿಷ್ಯ ದೃಷ್ಟಿಯಿಂದ ಇದು ನಿರಾಶದಾಯಕ ಬಜೆಟ್. ವಾಜಪೇಯಿ ಕಾಲದಲ್ಲಿ ನದಿ ಜೋಡಣೆ ಬಗ್ಗೆ ಹೇಳಿದ್ದರು. ಈಗಲೂ ಸಹಾ ನದಿ ಜೋಡಣೆ ಬಗ್ಗೆ ಹೇಳಿದ್ದಾರೆ. ವಾಜಪೇಯಿ ಇಂಡಿಯಾ ಈಸ್ ಶೈನಿಂಗ್ ಅಂತ ಹೇಳಿದ್ದರು. ಅವರ ಕಾಲದಲ್ಲಿ ಹೇಳಿದ್ದು ಆಗಿಲ್ಲ ಎಂದಿದ್ದಾರೆ.
ಮಹಾದಾಯಿ ಯೋಜನೆಗೆ ನೋಟಿಫಿಕೇಶನ್ ಆಗಿದೆ. ಮೇಕೆದಾಟು ಯೋಜನೆಗೆ ಕ್ಲಿಯರೆನ್ಸ್ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಕೃಷ್ಣ ಮೇಲ್ದಂಡೆ ಯೋಜನೆ ಪ್ರಸ್ತಾಪ ಇಲ್ಲ. 22 ಸಾವಿರ ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಬೇಕು. ಬಜೆಟ್ ಅಂದರೆ ನಮ್ಮ ಆದ್ಯತೆ ಇಂದಿನ ಸಮಸ್ಯೆಗಳ ಬಗ್ಗೆ ಇರಬೇಕು. ಕೃಷಿ, ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಒತ್ತು ಕೊಡಬೇಕಿತ್ತು. ಅದ್ಯಾವುದೂ ಈ ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ. ನಿರುದ್ಯೋಗ ಹೆಚ್ಚಾಗುತ್ತಿದೆ ಕೈಗಾರಿಕೆಗಳು ಮುಚ್ಚುತ್ತಿವೆ. ಶೇ. 60ರಷ್ಟು ಉದ್ಯೋಗ ನಷ್ಟ ಆಗಿದೆ. ಇದನ್ನು ಪುನಶ್ಚೇತನದ ಬಗ್ಗೆ ಮಾಡಬೇಕಿತ್ತು. ಈ ಬಗ್ಗೆ ಏನು ಹೇಳಿಲ್ಲ. ಜನರ ನಿರೀಕ್ಷೆಗೆ ಸ್ಪಂದಿಸಬೇಕಾದ ಬಜೆಟ್ ಅಲ್ಲ. ಅಭಿವೃದ್ದಿಯ ಬಜೆಟ್ ಅಲ್ಲ. ವಾಸ್ತವಿಕ ಸಮಸ್ಯೆ ಬಗೆಹರಿಸುವ ಬಜೆಟ್ ಸಹ ಅಲ್ಲ. ಇದು ದೇಶವನ್ನು ವಿನಾಶ ಮಾಡುವಂತ ಬಜೆಟ್. ಸಬ್ ಕಾ ಸಾಥ್ ಸಬ್ ಕಾ ವಿಕಾಶ್ ಎಂಬುದನ್ನು ಉಲ್ಲೇಖ ಮಾಡಿದ ಸಿದ್ದರಾಮಯ್ಯ ಇದು ಸಬ್ ಕಾ ಲಾಸ್ ಬಜೆಟ್ ಜನರ ನಂಬಿಕೆಗೆ ದ್ರೋಹ ಮಾಡುವ ಕೆಲಸವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Budget Memes: ಬಜೆಟ್ನಿಂದ ಮಧ್ಯಮ ವರ್ಗಕ್ಕೆ ನಿರಾಸೆ; ಟ್ವಿಟ್ಟರ್ನಲ್ಲಿ ತುಂಬಿ ತುಳುಕುತ್ತಿವೆ ಮೀಮ್ಸ್, ಜೋಕ್ಗಳು
ಬಜೆಟ್ ಬಗ್ಗೆ ದೊಡ್ಡ ಮಟ್ಟಿಗೆ ಹೇಳುವಂತದ್ದು ಏನೂ ಇಲ್ಲ; ಹೆಚ್ಡಿ ಕುಮಾರಸ್ವಾಮಿ ವ್ಯಂಗ್ಯ