Budget 2022: ನದಿ ಜೋಡಣೆ ಘೋಷಣೆಯ ಮೂಲಕ ಅನಾಹುತಕಾರಿ ಹಾದಿ ತುಳಿದ ಸರ್ಕಾರ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಮತ್ತು ನದಿ ಜೋಡಣೆ ಪ್ರಸ್ತಾವವನ್ನು ಜೈರಾಮ್ ರಮೇಶ್ ಟೀಕಿಸಿದರು.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನದಿ ಜೋಡಣೆ (River Linking) ಘೋಷಣೆಯ ಮೂಲಕ ಪರಿಸರದ ವಿಚಾರದಲ್ಲಿ ಅನಾಹುತಕಾರಿ ನಿಲುವು ತಳೆದಿದೆ. ಬಾಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಲೇ, ಪರಿಸರವನ್ನು ಹಾಳು ಮಾಡುವ ನದಿ ಜೋಡಣೆಯಂಥ ಅನಾಹುತಕಾರಿ ಯೋಜನೆಗಳನ್ನು ಘೋಷಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh) ಬೇಸರ ವ್ಯಕ್ತಪಡಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಬಜೆಟ್ ಭಾಷಣದಲ್ಲಿ ಪ್ರಸ್ತಾಪವಾದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಮತ್ತು ನದಿ ಜೋಡಣೆ ಪ್ರಸ್ತಾವದ ಬಗ್ಗೆ ಜೈರಾಮ್ ರಮೇಶ್ ಮೇಲಿನಂತೆ ಪ್ರತಿಕ್ರಿಯಿಸಿದರು.
ಇದೇ ಬಜೆಟ್ನಲ್ಲಿ ಸಚಿವರು ಹವಾಮಾನ ವೈಪರಿತ್ಯ ತಡೆಯುವ ಕ್ರಿಯೆಗಳ ಬಗ್ಗೆ ಪ್ರಸ್ತಾಪಿಸುತ್ತಾ, ಪರಿಸರ ಸಂರಕ್ಷಣೆಗೆ ಬದ್ಧತೆಯನ್ನು ಸಚಿವರು ಪ್ರದರ್ಶಿಸಿದ್ದಾರೆ. ಆದರೆ ಪಾರಿಸರಿಕ ದುರಂತವಾಗುವ ನದಿ ಜೋಡಣೆ ಯೋಜನೆಯನ್ನು ಘೋಷಿಸಿದ್ದಾರೆ. ಯೋಜನೆಗಳಿಗೆ ಕೇಂದ್ರ ಸರ್ಕಾರವು ಅತ್ಯುತ್ತಮ ಹೆಸರುಗಳನ್ನು ನೀಡುತ್ತದೆ. ಆದರೆ ಅನುಷ್ಠಾನ ಹಂತದಲ್ಲಿ ಅನಾಹುತಕಾರಿ ಹಾದಿಯನ್ನು ತುಳಿಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಜೈರಾಂ ರಮೇಶ್ ಅವರು ಕೇಂದ್ರ ಪರಿಸರ ಸಚಿವರಾಗಿದ್ದರು. ಪ್ರಸ್ತುತ ಅವರು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾಗಿದ್ದಾರೆ.
On the one hand, the Budget talks of climate action and protecting the environment. On the other, it pushes ecologically disastrous river-linking projects. Rhetoric sounds nice. But actions matter more. On that front, the Modi govt is on a destructive path.
— Jairam Ramesh (@Jairam_Ramesh) February 1, 2022
ಇದು ಶೂನ್ಯ ಬಜೆಟ್: ರಾಹುಲ್ ಟೀಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್ ಶೂನ್ಯ ಲೆಕ್ಕದ ಬಜೆಟ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇಂದು ಬಜೆಟ್ ಹೆಸರಲ್ಲಿ ಮಾಡಲಾದ ಘೋಷಣೆಯಲ್ಲಿ ವೇತನ ವರ್ಗಕ್ಕೆ, ಮಧ್ಯಮ ವರ್ಗಕ್ಕೆ, ಬಡವರು ಮತ್ತು ಸೌಲಭ್ಯ ವಂಚಿತರಿಗೆ, ಯುವಕರು, ರೈತರಿಗೆ, ಎಂಎಸ್ಎಂಇಗಳಿಗೆ ಏನೂ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, M0di G0vernment’s Zer0 Sum Budget! ಎಂದು ಹೇಳಿ, ಅದರಡಿಯಲ್ಲಿ Nothing for (ಏನೂ ಇಲ್ಲ) Salaried class (ವೇತನ ವರ್ಗ), Middle class (ಮಧ್ಯಮ ವರ್ಗ), The poor & deprived (ಬಡವರು ಮತ್ತು ಸೌಕರ್ಯ ವಂಚಿತರು), Youth (ಯುವಜನರು), Farmers (ರೈತರು) ಮತ್ತು MSMEs (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ G0vernment’s Zer0 Sum Budget! ಎಂಬ ವಾಕ್ಯದಲ್ಲಿ ಇಂಗ್ಲಿಷ್ ವರ್ಣಮಾಲೆಯ ಒ ಅಕ್ಷರ ಎಲ್ಲೆಲ್ಲಿ ಬರಬೇಕಿತ್ತೋ, ಅಲ್ಲೆಲ್ಲ ಶೂನ್ಯವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ, ಬಜೆಟ್ನ್ನು ಟೀಕಿಸಿದ್ದಾರೆ. ‘ರೈತರ ಆದಾಯವನ್ನು ದ್ವಿಗುಣಗೊಳಿಸುವುದಿಲ್ಲ, ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ, ಹಣದುಬ್ಬರ (ಬೆಲೆ ಏರಿಕೆ) ಇಳಿಕೆಯಿಲ್ಲ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಯಾವುದೇ ಕ್ರಮವೂ ಇಲ್ಲ, ಯುವಕರಿಗೆ ಉದ್ಯೋಗ ಅವಕಾಶ ನೀಡಲಾಗಿಲ್ಲ. ಈ ಬಾರಿಯೂ ಹಳೇ ಸುಳ್ಳುಗಳನ್ನೇ ಹೇಳಲಾಗಿದೆ ಮತ್ತು ಸಬ್ಸಿಡಿ ಮೇಲೆ ಪ್ರಹಾರ ನಡೆಸಲಾಗಿದೆ. ಇದು ಮೋದಿ ಸರ್ಕಾರದ ಈ ಬಾರಿಯ ಬಜೆಟ್ ಸಾರಾಂಶ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಬಜೆಟ್ 2022-23ರ ಪ್ರಮುಖ ಮುಖ್ಯಾಂಶಗಳು; ಇಲ್ಲಿದೆ ಮಾಹಿತಿ ಇದನ್ನೂ ಓದಿ: ಬಜೆಟ್ನಲ್ಲಿ ಒಂದು ವಿಶೇಷ ಘೋಷಣೆ ಮಾಡಿ, ಶ್ಲಾಘನೆಗೆ ಪಾತ್ರವಾದ ಕೇಂದ್ರ ಸರ್ಕಾರ; ಇದು ತುಂಬ ಅಪರೂಪವೆಂದ ಆರೋಗ್ಯ ತಜ್ಞರು !