ಬಜೆಟ್​​ನಲ್ಲಿ ಒಂದು ವಿಶೇಷ ಘೋಷಣೆ ಮಾಡಿ, ಶ್ಲಾಘನೆಗೆ ಪಾತ್ರವಾದ ಕೇಂದ್ರ ಸರ್ಕಾರ; ಇದು ತುಂಬ ಅಪರೂಪವೆಂದ ಆರೋಗ್ಯ ತಜ್ಞರು !

ಬಜೆಟ್​​ನಲ್ಲಿ ಒಂದು ವಿಶೇಷ ಘೋಷಣೆ ಮಾಡಿ, ಶ್ಲಾಘನೆಗೆ ಪಾತ್ರವಾದ ಕೇಂದ್ರ ಸರ್ಕಾರ; ಇದು ತುಂಬ ಅಪರೂಪವೆಂದ ಆರೋಗ್ಯ ತಜ್ಞರು !
ನಿಮ್ಹಾನ್ಸ್

ಭಾರತದಲ್ಲಷ್ಟೇ ಅಲ್ಲ, ಜಾಗತಿಕವಾಗಿ ಕೊರೊನಾ ಹೊಡೆತ ಬಲವಾಗಿ ಬಿದ್ದಿದೆ. ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡು ಖಿನ್ನತೆಗೆ ಜಾರಿದ್ದಾರೆ. ಹೊರಗಿನ ಪ್ರಪಂಚದ ಸಂಪರ್ಕ ಸಾಧ್ಯವಾಗದೆ ಮಾನಸಿಕ ಆರೋಗ್ಯ ಹದಗೆಡಿಸಿಕೊಂಡವರು ಇದ್ದಾರೆ.

TV9kannada Web Team

| Edited By: Rashmi Kallakatta

Feb 01, 2022 | 6:05 PM

ಕೇಂದ್ರ ಸರ್ಕಾರ ಈ ಬಾರಿ ಬಜೆಟ್​ನಲ್ಲಿ (Budget 2022) ವಿಶೇಷವಾದ ಒಂದು ಘೋಷಣೆ ಮಾಡುವ ಮೂಲಕ ಶ್ಲಾಘನೆಗೆ ಪಾತ್ರವಾಗಿದೆ. ಕೊವಿಡ್​ 19 ಸೋಂಕಿನಿಂದ ಉಂಟಾದ ಭೌತಿಕ ಹಾನಿಯನ್ನು ಮಾತ್ರ ಗುರುತಿಸಿ, ಅದರ ದುರಸ್ತಿಗಷ್ಟೇ ಗಮನ ಹರಿಸದೆ, ಈ ಸಾಂಕ್ರಾಮಿಕ ಉಂಟು ಮಾಡಿದ ಮಾನಸಿಕ ಆಘಾತ, ಜನರ ಮಾನಸಿಕ ಆರೋಗ್ಯದ ಮೇಲೆ ಬೀರಿದ ದುಷ್ಪರಿಣಾಮಗಳನ್ನು ಕೂಡ ಪರಿಗಣಿಸಿ, ಅದರ ನಿವಾರಣೆಗೆ ಬಜೆಟ್​​ನಲ್ಲಿ ಹೊಸದೊಂದು ಕಾರ್ಯಕ್ರಮ ಘೋಷಿಸಿದೆ. ಇದನ್ನು ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರದ ಬಹುತೇಕ ತಜ್ಞರು ಸ್ವಾಗತಿಸಿದ್ದಾರೆ. 

ಕೇಂದ್ರ ಸಚಿವರು ಇಂದು ಬಜೆಟ್​ನಲ್ಲಿ ರಾಷ್ಟ್ರೀಯ ಟೆಲಿ ಮೆಂಟಲ್​ ಹೆಲ್ತ್​ ಪ್ರೋಗ್ರಾಂನ್ನು (National Tele Mental Health programme) ಘೋಷಿಸಿದ್ದಾರೆ. ಕೊವಿಡ್ 19 ಸಾಂಕ್ರಾಮಿಕ ಎಲ್ಲ ವಯಸ್ಸಿನ ಜನರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ದೈಹಿಕ ಹಾನಿಯ ಜತೆ ಮನಸಿನ ಆರೋಗ್ಯವನ್ನೂ ಹದಗೆಡಿಸಿದೆ. ಹೀಗೆ ಮಾನಸಿಕವಾಗಿ ದುರ್ಬಲರಾದ, ಅನಾರೋಗ್ಯಕ್ಕೆ ಒಳಗಾದವರಿಗೆ ಉತ್ತಮ ಗುಣಮಟ್ಟದ ಸಮಾಲೋಚನೆ (counseling ) ಮತ್ತು ಆರೈಕೆ ಸೇವೆ ನೀಡುವ ಸಲುವಾಗಿ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಪ್ರಾರಂಭಿಸುತ್ತಿರುವುದಾಗಿ ಹೇಳಿದ್ದಾರೆ.

ಈ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಪ್ರೋಗ್ರಾಮ್ 23 ದೂರವಾಣಿ ಮಾನಸಿಕ ಆರೋಗ್ಯ ಶ್ರೇಷ್ಠತಾ ಕೇಂದ್ರಗಳನ್ನು ಒಳಗೊಂಡಿರಲಿದ್ದು, ಬೆಂಗಳೂರಿನ ನಿಮ್ಹಾನ್ಸ್​ (NIMHANS) ಇದರ ನೋಡೆಲ್​ ಕೇಂದ್ರವಾಗಿರಲಿದೆ. ಹಾಗೇ, ಟೆಲಿ ಹೆಲ್ತ್​ ಸೆಂಟರ್​ಗೆ ಬೆಂಗಳೂರು ಐಐಟಿ (The Indian Institute of Technology)  ಸಂಪೂರ್ಣವಾದ ತಾಂತ್ರಿಕ ಸಹಕಾರ (technological support) ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್​ ಇಂದು ತಿಳಿಸಿದ್ದಾರೆ.

ಭಾರತದಲ್ಲಷ್ಟೇ ಅಲ್ಲ, ಜಾಗತಿಕವಾಗಿ ಕೊರೊನಾ ಹೊಡೆತ ಬಲವಾಗಿ ಬಿದ್ದಿದೆ. ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡು ಖಿನ್ನತೆಗೆ ಜಾರಿದ್ದಾರೆ. ಹೊರಗಿನ ಪ್ರಪಂಚದ ಸಂಪರ್ಕ ಸಾಧ್ಯವಾಗದೆ ಮಾನಸಿಕ ಆರೋಗ್ಯ ಹದಗೆಡಿಸಿಕೊಂಡವರು ಇದ್ದಾರೆ. ಕೊರೊನಾ ಎಂಬ ಸೋಂಕಿಗೆ ಹೆದರಿಯೇ ಹಲವರು ಡಿಪ್ರೆಷನ್​ಗೆ ಹೋಗಿದ್ದಾರೆ. ಕೊರೊನಾ ಶುರುವಾದ ಮೇಲೆ ಅನೇಕರು ಮಾನಸಿಕ ರೋಗದಿಂದಾಗಿಯೇ ಆತ್ಮಹತ್ಯೆಯನ್ನೂ ಮಾಡಿಕೊಂಡವರು ಇದ್ದಾರೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್​​ನ ಪ್ರಕಾರ, ಒಟ್ಟಾರೆ ಜನಸಂಖ್ಯೆಯ ಶೇ.6ರಿಂದ 7 ರಷ್ಟು ಜನರು ಕೊರೊನಾ ಕಾರಣದಿಂದ ಮಾನಸಿಕ ಅನಾರೋಗ್ಯಕ್ಕೀಡಾಗಿದ್ದಾರೆ. ಕೊವಿಡ್ 19 ಪರಿಸ್ಥಿತಿಯಿಂದ ಜಾಗತಿಕವಾಗಿ ನಾಲ್ಕು ಕುಟುಂಬಗಳಲ್ಲಿ ಒಂದು ಕುಟುಂಬದ ಒಬ್ಬ ಸದಸ್ಯ ಮಾನಸಿಕ ಅಸ್ವಸ್ಥತೆಗೆ ಒಳಗಾಗಿರಬಹುದು ಎಂದು ವಿಶ್ವ  ಆರೋಗ್ಯ ಸಂಸ್ಥೆಯೂ ಹೇಳಿದೆ. ಇದೆಲ್ಲದರ ಮಧ್ಯೆ ಕೇಂದ್ರ ಸರ್ಕಾರದ ಈ ಕ್ರಮ ಅತ್ಯಂತ ಸ್ವಾಗತಾರ್ಹವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮಹಿಳೆಯರ ಮಾನಸಿಕ ಆರೋಗ್ಯ ವೇದಿಕೆ AtEase ನ ನಿರ್ದೇಶಕ ಸುಭಮೋಯ್ ದಸ್ತಿದಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಬಜೆಟ್​​ನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಉಲ್ಲೇಖ ಮಾಡಿದ್ದು ನಿಜಕ್ಕೂ ಅಚ್ಚರಿ ತಂದಿದೆ. ಹೀಗೆ ಬಜೆಟ್​​ನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಉಲ್ಲೇಖಿಸುವುದು, ಅಂಥವರ ಸೇವೆಗಾಗಿ ಕ್ರಮ ಕೈಗೊಳ್ಳುವುದು ತೀರ ಅಪರೂಪ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊವಿಡ್​ 19 ಪರಿಸ್ಥಿತಿಯ ಬಳಿಕ ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು ಸತ್ಯ. ಈ ಹೊತ್ತಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿದ ರಾಷ್ಟ್ರೀಯ ಟೆಲಿ ಮೆಂಟಲ್​ ಹೆಲ್ತ್​ ಪ್ರೋಗ್ರಾಂ ಒಂದು ಮಹತ್ವದ ನಿರ್ಧಾರ. ಇದು ವೈಕ್ತಿಗಳ, ಕುಟುಂಬಗಳ ಮತ್ತು ಇಡೀ ಸಮಾಜದ ಮಾನಸಿಕ ಆರೋಗ್ಯವನ್ನು ಸದೃಢಗೊಳಿಸಲು ಸಹಕಾರಿ ಎಂದಿದ್ದಾರೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಹಾಗೇ, ಫೋರ್ಟೀಸ್​ ಹೆಲ್ತ್​ಕೇರ್​​ನ ಮೆಂಟಲ್​ ಹೆಲ್ತ್​ ವಿಭಾಗದ ಮುಖ್ಯಸ್ಥರಾದ ಕಾಮ್ನಾ ಛಿಬ್ಬರ್​ ಕೂಡ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಪ್ರೋಗ್ರಾಂನ್ನು ಸ್ವಾಗತಿಸಿದ್ದಾರೆ. ಇದೊಂದು ಅತ್ಯಂತ ಅಗತ್ಯವಿದ್ದ ಸೇವೆಯಾಗಿತ್ತು ಎಂದು ಹೇಳಿದ್ದಾರೆ. ನಿಮ್ಹಾನ್ಸ್​ನ ಮನೋವೈದ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಪ್ರತಿಮಾ ಮೂರ್ತಿ ಇಂಡಿಯನ್​ ಎಕ್ಸ್​ಪ್ರೆಸ್​ಗೆ ಪ್ರತಿಕ್ರಿಯೆ ನೀಡಿ, ಜನಸಾಮಾನ್ಯರನ್ನು ತಲುಪಲು ಇದೊಂದು ಅತ್ಯದ್ಭುತ ಅವಕಾಶವಾಗಿದೆ. ಮಾನಸಿಕ ಆರೋಗ್ಯದ ಬಗ್ಗೆ ಅರಿವಿನ ಕೊರತೆ ಇದೆ. ಜನರಲ್ಲಿ ತಿಳಿವಳಿಕೆ ಮೂಡಿಸಲು ಇದು ಅತ್ಯಂತ ಅಗತ್ಯ ಮತ್ತು ಸಮಯೋಚಿತವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಒ ಇದ್ದಲ್ಲೆಲ್ಲ ಸೊನ್ನೆ ಹಾಕಿದ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ; ಕೇಂದ್ರ ಬಜೆಟ್​​ಗೆ ನೀಡಿದ ಪ್ರತಿಕ್ರಿಯೆ ಇದು !

Follow us on

Related Stories

Most Read Stories

Click on your DTH Provider to Add TV9 Kannada