Karnataka Budget 2023: ಬಜೆಟ್ ಮಂತ್ರ ಚುನಾವಣಾ ತಂತ್ರ; ಜನಪ್ರಿಯ ಘೋಷಣೆಗಳೇನೆಲ್ಲ? ಇಲ್ಲಿದೆ ಮಾಹಿತಿ
ಚುನಾವಣಾ ತಂತ್ರಗಾರಿಕೆಯೊಂದಿಗೆ ಬೊಮ್ಮಾಯಿ ಘೋಷಿಸಿರಬಹುದು ಎನ್ನಲಾದ ಕೆಲವು ಜನಪ್ರಿಯ ಯೋಜನೆಗಳ ವಿವರ ಇಲ್ಲಿದೆ.
ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ತಮ್ಮ ಎರಡನೇ ಬಜೆಟ್ (Budget) ಮಂಡನೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತದಾರರನ್ನು ಓಲೈಸುವ ಕಸರತ್ತು ನಡೆಸಿದ್ದಾರೆ. ಹಳ್ಳಿ ಮುತ್ತು, ಬದುಕುವ ದಾರಿ, ಯುವ ಸ್ನೇಹಿ ಸೇರಿದಂತೆ ಕೆಲವು ಹೊಸ ಯೋಜನೆಗಳನ್ನು ಘೋಷಿಸುವ ಮೂಲಕ ಮಧ್ಯಮ ವರ್ಗದ, ಅದರಲ್ಲೂ ಯುವಕರನ್ನು ಸೆಳೆಯುವ ತಂತ್ರ ಅನುಸರಿಸಿದ್ದಾರೆ. ಮಜೂರಿ ತೆರಿಗೆ ವಿನಾಯಿತಿ ಮಿತಿ 25,000 ರೂ.ಗೆ ಹೆಚ್ಚಳ, ಸಾರಾಯಿ ಮತ್ತು ಮದ್ಯ ಮಾರಾಟದ ಅಬಕಾರಿ ತೆರಿಗೆ ಬಾಕಿ ಪಾವತಿ ಇರುವವರಿಗೆ ಕೆಲವು ವಿನಾಯಿತಿಗಳು, ಹೀಗೆ ಹಲವು ಕ್ರಮಗಳನ್ನು ಪ್ರಕಟಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂ. ಆರ್ಥಿಕ ಭದ್ರತೆ ಜೊತೆಗೆ ಸ್ವಯಂ ನಿವೃತ್ತಿ ಅವಕಾಶ ಸೇರಿದಂತೆ ಮಹಿಳೆಯರಿಗೂ ಅನೇಕ ಕೊಡುಗೆಗಳನ್ನು ಘೋಷಿಸಿದ್ದಾರೆ. ಆ ಮೂಲಕ ಮಹಿಳೆಯರನ್ನೂ ಸೆಳೆಯಲು ಮುಂದಾಗಿದ್ದಾರೆ. ಚುನಾವಣಾ ತಂತ್ರಗಾರಿಕೆಯೊಂದಿಗೆ ಬೊಮ್ಮಾಯಿ ಘೋಷಿಸಿರಬಹುದು ಎನ್ನಲಾದ ಕೆಲವು ಜನಪ್ರಿಯ ಯೋಜನೆಗಳ ವಿವರ ಇಲ್ಲಿದೆ.
- ಆಶಾಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಗ್ರಂಥ ಪಾಲಕರ ಗೌರವಧನ 1000 ರೂ. ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ 775 ಕೋಟಿ ರೂ. ಅನುದಾನ ಹೆಚ್ಚಳ ಮಾಡಲಾಗಿದೆ.
- 69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರು. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 49,031 ಕೋಟಿ ಮೀಸಲು. ಎಸ್ಸಿ, ಎಸ್ಟಿ ನಿಗಮಗಳಿಗೆ 795 ಕೋಟಿ ರೂ. ಒದಗಿಸಲಾಗಿದೆ. ಎಸ್ಸಿ, ಎಸ್ಟಿ BPL ಕಾರ್ಡ್ ಹೊಂದಿದವರಿಗೆ ಅಮರ್ ಜ್ಯೋತಿ ಯೋಜನೆಯಡಿ 75 ಯೂನಿಟ್ ಉಚಿತ ವಿದ್ಯುತ್. ಮಾರಣಾಂತಿಕ ಕಾಯಿಲೆ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂ. ಆರ್ಥಿಕ ಭದ್ರತೆ ಜೊತೆಗೆ ಸ್ವಯಂ ನಿವೃತ್ತಿ ಅವಕಾಶ
- ‘ಮನೆ ಮನೆಗೆ ಆರೋಗ್ಯ’ ಎಂಬ ಜನಪ್ರಿಯ ಘೋಷಣೆ ಮಾಡಲಾಗಿದೆ. ಇದರಡಿ ಗ್ರಾಮೀಣ ಜನತೆಗೆ 2023-24ನೇ ಸಾಲಿನಲ್ಲಿ ಎರಡು ಬಾರಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಯೋಜಿಸಲಾಗುವುದು. ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಔಷಧಿಗಳನ್ನು ಕ್ರಮವಹಿಸಲಾಗುವುದು ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
- ಸಾರಾಯಿ, ಸೇಂದಿ ಬಾಡಿಗೆಗಳ ಅಬಕಾರಿ ಸುಂಕ ಬಾಕಿ ಪಾವತಿದಾರರಿಗೆ ಜೂನ್ 30ರ ಒಳಗೆ ಪಾವತಿ ಮಾಡಿದರೆ ಬಡ್ಡಿ ಮತ್ತು ದಂಡ ಪಾವತಿಯಲ್ಲಿ ಪರಿಹಾರ.
- ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಶೇ 24ರವರೆಗೆ ಮೀಸಲಾತಿ ನೀಡಲಾಗುವುದು. 50 ಲಕ್ಷ ಮೊತ್ತದಿಂದ 1 ಕೋಟಿವರೆಗಿನ ಟೆಂಡರ್ನಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ.
- ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಹಳ್ಳಿ ಮುತ್ತು ಯೋಜನೆ ಘೋಷಿಸಲಾಗಿದೆ. ಕನ್ನಡ ಮಾಧ್ಯಮದಲ್ಲಿ ಶಾಲಾ ಶಿಕ್ಷಣ ಪೂರೈಸಿದ 500 ಅತ್ಯುತ್ತಮ ವಿದ್ಯಾರ್ಥಿಗಳ ಹೆಚ್ಚಿನ ಶಿಕ್ಷಣಕ್ಕೆ ಒತ್ತು. ಸಿಇಟಿ ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆ ಯಾದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೆರವು ನೀಡಲಾಗುವುದು. ವೃತ್ತಪರ ಶಿಕ್ಷಣದ ಸಂಪೂರ್ಣ ಶುಲ್ಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭರಿಸಲಿದೆ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
- ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್‌ಜ್ಯೋತಿ ವಿಮಾ ಯೋಜನೆ, ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ. ಮೀನುಗಾರರು, ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ ಯೋಜನೆಯನ್ನು ವಿಸ್ತಣೆ ಮಾಡಲಾಗಿದೆ. ಇದಕ್ಕಾಗಿ ಹೆಚ್ಚುವರಿ 141 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
- ಮಠ-ಮಂದಿರಗಳ ಅಭಿವೃದ್ಧಿಗೆ ಬಜೆಟ್ನಲ್ಲಿ 1,000 ಕೋಟಿ ರೂ. ಹಣ ಮೀಸಲಿರಿಸಲಾಗಿದೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 475 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕಿತ್ತೂರು ಭಾಗದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ ಸ್ಥಾಪನೆ ಮಾಡಲಾಗುವುದು ಎಂದೂ ಘೋಷಿಸಲಾಗಿದೆ.
- ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನ ಹಾಗೂ 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿರುವ ಬಗ್ಗೆ ಘೋಷಣೆ ಮಾಡಲಾಗಿದೆ.
- ಶಾಲಾ ಶಿಕ್ಷಣದ ನಂತರ ವಿವಿಧ ಕಾರಣಗಳಿಂದ ವಿಧ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದವರಿಗೆ ಐಐಟಿಯಲ್ಲಿ ಮೂರು ತಿಂಗಳ ವೃತ್ತಿಪರ ತರಬೇತಿ ಪಡೆಯಲು ಮೂರು ತಿಂಗಳ ಕಾಲ ಮಾಸಿಕ 1,500 ರೂ. ಶಿಷ್ಯವೇತನ ನೀಡಲಾಗುವುದು. ತರಬೇತಿ ಪೂರ್ಣಗೊಂಡವರಿಗೆ ಅಪ್ರೈಂಟಿಸ್ಶಿಪ್ ಕಾರ್ಯಕ್ರಮದಡಿ 3 ತಿಂಗಳು 1,500 ರೂ. ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
- ಪದವಿ ಶಿಕ್ಷಣವನ್ನು ಪೂರೈಸಿ ಮೂರು ವರ್ಷಗಳಾದರೂ ಉದ್ಯೋಗ ದೊರೆಯದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದಕ್ಕಾಗಿ ‘ಯುವಸ್ನೇಹಿ’ ಯೋಜನೆ ಅಡಿ ಒಂದು ಬಾರಿಯ ಆರ್ಥಿಕ ನೆರವಾಗಿ 2,000 ರೂ. ನೀಡಲಾಗುವುದು.
ಕರ್ನಾಟಕ ಬಜೆಟ್ ಮತ್ತಷ್ಟು ಸುದ್ದಿಗಳು
Published On - 2:58 pm, Fri, 17 February 23