
ಬೆಂಗಳೂರು, ಫೆಬ್ರವರಿ 16: ಹತ್ತಾರು ನಿರೀಕ್ಷೆಗಳು, ನೂರೆಂಟು ಸವಾಲುಗಳು ಗ್ಯಾರಂಟಿ ಅಂತಲೇ ಅಧಿಕಾರದ ಗದ್ದುಗೆ ಏರಿರುವ ಸಿಎಂ ಸಿದ್ದರಾಮಯ್ಯ (Siddaramaiah) ಇಂದು ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ಅದರಲ್ಲೂ ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಬಜೆಟ್ ಮಂಡನೆ ಆಗಿರುವುದು ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ, ನೂತನ ಪೊಲೀಸ್ ಠಾಣಾ ಕಟ್ಟಡಗಳಿಗೆ ₹30 ಕೋಟಿ ರೂ. ಮೀಸಲಿಟ್ಟಿದ್ದಾರೆ. ಆಡಳಿತ ವ್ಯವಸ್ಥೆ ಬಲಪಡಿಸಲು ಕೃತಕ ಬುದ್ಧಿಮತ್ತೆ, ಮಿಷನ್ ಲರ್ನಿಂಗ್ ತಂತ್ರಜ್ಞಾನ ಬಳಕೆ, ವಿಧಿ ವಿಜ್ಞಾನ ಪ್ರಯೋಗಾಲಯಗಳ ಮೊಬೈಲ್ ಫೊರೆನ್ಸಿಕ್, ಆಡಿಯೋ ಮತ್ತು ವಿಡಿಯೋ ವಿಭಾಗ ಬಲಪಡಿಸಲು ಕ್ರಮಕೈಗೊಳ್ಳಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಉಪಕರಣ, ತಂತ್ರಾಂಶ ಪೂರೈಕೆ ಆಗಲಿದೆ.
ಎಲ್ಲಾ ಕಾರಾಗೃಹಗಳ ಸುಗಮ ಆಡಳಿತ ಹಾಗೂ ಭದ್ರತೆಗೆ ಕ್ರಮಕೈಗೊಳ್ಳಲಿದ್ದು, 5 ಕೋಟಿ ರೂ. ವೆಚ್ಚದಲ್ಲಿ ಎಐ ತಂತ್ರಾಂಶ, ಬ್ಯಾಗೇಜ್ ಸ್ಕ್ಯಾನರ್ ಮುಂತಾದ ಆಧುನಿಕ ಉಪಕರಣ ಖರೀದಿಗೆ ಸರ್ಕಾರ ಮುಂದಾಗಿದೆ.
ಶಿವಮೊಗ್ಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಹೈ ಸೆಕ್ಯೂರಿಟಿ ಕಾರಾಗೃಹ, ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಸರ್ಕಾರ ಕ್ರಮಕೈಗೊಂಡಿದೆ. ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.1ರ ದರದಲ್ಲಿ ಫೈರ್ ಸೆಸ್ ವಿಧಿಸಲಾಗುತ್ತಿದೆ.
ಶಕ್ತಿ ಯೋಜನೆಯಡಿ ಈವರೆಗೆ 155 ಕೋಟಿ ಬಾರಿ ಉಚಿತವಾಗಿ ಮಹಿಳೆಯರು ಪ್ರಯಾಣಿಸಿದ್ದಾರೆ. ಶಕ್ತಿಯೋಜನೆಗಾಗಿ ಸರ್ಕಾರದಿಂದ 3000 ಕೋಟಿ ರೂ. ಒದಗಿಸಲಾಗಿದೆ. 3 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್ ನೋಡಿಲ್ಲ: ಸಿದ್ದು ಬಜೆಟ್ಗೆ ಯಡಿಯೂರಪ್ಪ ಕೆಂಡಾಮಂಡಲ
ಉಡುಪಿ, ಚಿಕ್ಕಬಳ್ಳಾಪುರ, ನೆಲಮಂಗಲ, ಮಡಿಕೇರಿ, ಮಧುಗಿರಿ, ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಚಾಲನಾ ಪರೀಕ್ಷಾ ಪಥ ನಿರ್ಮಾಣ ಮಾಡಲಾಗಿದೆ. ದೇವನಹಳ್ಳಿ, ತುಮಕೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸೀಜಿಂಗ್ ಯಾರ್ಡ್ ಅರ್ಹತಾ ಪತ್ರ ನವೀಕರಣಕ್ಕೆ ಬರುವ ಎಲ್ಲಾ ಸಾರಿಗೆ ವಾಹನಗಳಿಗೆ ಅರ್ಹತಾ ಪರೀಕ್ಷೆ ಕೈಗೊಳ್ಳಲು ಸ್ವಯಂ ಚಾಲಿತಾ ಪರೀಕ್ಷಾ ಕೇಂದ್ರ ಅಭಿವೃದ್ಧಿ ಪಡಿಸಲಾಗಿದೆ.
ಇದನ್ನೂ ಓದಿ: ಸಾಲ ಶೂಲದ ಹರಿಕಾರ ಸಾಲರಾಮಯ್ಯ: ಸಿದ್ದರಾಮಯ್ಯ ಬಜೆಟ್ ಬಗ್ಗೆ ಬಿಜೆಪಿ ವ್ಯಂಗ್ಯ
32 ಸ್ಥಳಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರ ಅಭಿವೃದ್ಧಿ, ನೋಂದಣಿಯಾಗಿರುವ ವಾಹನ ದಾಖಲಾತಿ ಡಿಜಿಟಲೀಕರಣಕ್ಕೆ ಯೋಜನೆ ರೂಪಿಸಲಾಗಿದ್ದು, 2024-25ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ಕೇಂದ್ರವಾಗಿದ್ದು, ಬೆಳಗಾವಿ, ಮಂಗಳೂರು, ಭಾಲ್ಕಿ ಕಚೇರಿಗಳಲ್ಲಿ ಈ ಯೋಜನೆ ಜಾರಿ ಆಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.