
ನವದೆಹಲಿ, ಫೆಬ್ರವರಿ 1: ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗೆ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ರೈತರಿಗೆ ಸಂಬಂಧಿಸಿದಂತೆ ಅನೇಕ ಘೋಷಣೆಗಳನ್ನು ಮಾಡಲಾಗಿದೆ. ಕೃಷಿ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬಜೆಟ್ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ಹೆಚ್ಚಿಸಲಾಗಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಾಲದ ಪ್ರಮಾಣವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿದೆ.
ಬೆಳೆ ಉತ್ಪಾದನೆ ಮತ್ತು ಕೃಷಿ ಅಗತ್ಯಗಳಿಗಾಗಿ ರೈತರಿಗೆ ಸುಲಭವಾಗಿ ಸಾಲ ನೀಡುವ ಉದ್ದೇಶದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯನ್ನು 1988 ರಲ್ಲಿ ಭಾರತ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನಾಬಾರ್ಡ್ ಸಹಕಾರದೊಂದಿಗೆ ಜಾರಿಗೆ ತಂದಿತ್ತು. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯುತ್ತಾರೆ. ಆ ಮೂಲಕ ರೈತರು ಬಿತ್ತನೆ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಇತರ ಕೃಷಿ ಅಗತ್ಯಗಳನ್ನು ಪೂರೈಸಬಹುದಾಗಿದೆ.
ಒಬ್ಬನೇ ಅಥವಾ ಜಂಟಿಯಾಗಿ ಕೃಷಿ ಮಾಡುತ್ತಿರುವ ಎಲ್ಲ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಇವುಗಳಲ್ಲಿ ಭೂ ಮಾಲೀಕರು, ಗೇಣಿದಾರ ರೈತರು, ಮೌಖಿಕ ಗುತ್ತಿಗೆದಾರರು ಕೂಡ ಸೇರಿದ್ದಾರೆ. ಜೊತೆಗೆ, ಸ್ವಸಹಾಯ ಗುಂಪು (SHG) ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳಾಗಿ (JLG) ಕೃಷಿ ಮಾಡುವ ರೈತರು ಸಹ ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಬಜೆಟ್ ಸಂಬಂಧಿತ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ