Tax Rebate: ಗೊಂದಲ ಬೇಡ… ಟ್ಯಾಕ್ಸ್ ರಿಬೇಟ್ ಹೇಗೆ ಕೆಲಸ ಮಾಡುತ್ತೆ ನೋಡಿ… ಸ್ಲ್ಯಾಬ್ ದರಗಳು ಹೇಗೆ ಅನ್ವಯ ಆಗುತ್ತೆ ನೋಡಿ…
Union Budget 2025, income tax rates: ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಹಲವು ಅಂಶಗಳು ಜನಸಾಮಾನ್ಯರಿಗೆ ಗೊಂದಲಕ್ಕೆ ಕಾರಣವಾಗಬಹುದು. ಟ್ಯಾಕ್ಸ್ ರಿಬೇಟ್, ಸ್ಲ್ಯಾಬ್ ದರ ಇತ್ಯಾದಿಗಳ ಬಗ್ಗೆ ಕೆಲವರಿಗೆ ಈಗಲೂ ಗೊಂದಲ ಇರಬಹುದು. ಪ್ರಸಕ್ತ ಬಜೆಟ್ನಲ್ಲಿ ಟ್ಯಾಕ್ಸ್ ರಿಬೇಟ್ ಅನ್ನು 60,000 ರೂಗೆ ಏರಿಸಲಾಗಿದೆ. ನೀವು ಪಾವತಿಸಬೇಕಾದ ತೆರಿಗೆ ಮೊತ್ತ ಈ ಮಿತಿಯೊಳಗೆ ಇದ್ದರೆ ಟ್ಯಾಕ್ಸ್ ಕಟ್ಟಬೇಕಿಲ್ಲ. ಈ ಮಿತಿ ದಾಟಿದರೆ ಸ್ಲ್ಯಾಬ್ ರೇಟ್ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ.

ಬೆಂಗಳೂರು, ಫೆಬ್ರುವರಿ 1: ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ 12 ಲಕ್ಷ ರೂ ಆದಾಯಕ್ಕೆ ತೆರಿಗೆ ಕಟ್ಟಬೇಕಿಲ್ಲ ಎಂದು ಘೋಷಿಸಿದರು. ಅದರ ಬೆನ್ನಲ್ಲೇ ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ ಸ್ಲ್ಯಾಬ್ ದರಗಳನ್ನು ಪರಿಷ್ಕರಿಸಿದ್ದಾರೆ. ಅದರ ಪ್ರಕಾರ 4ರಿಂದ 8 ಲಕ್ಷ ರೂ ಆದಾಯಕ್ಕೆ ಶೇ. 5ರಷ್ಟು ತೆರಿಗೆ, ಹಾಗೂ 8-12 ಲಕ್ಷ ರೂ ಆದಾಯಕ್ಕೆ ಶೇ. 10 ರಷ್ಟು ತೆರಿಗೆ ಇದೆ. ಕೆಲವರಿಗೆ ಈ ಟ್ಯಾಕ್ಸ್ ದರಗಳು ಗೊಂದಲ ಮೂಡಿಸಿರಬಹುದು.
ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ ಟ್ಯಾಕ್ಸ್ ರಿಬೇಟ್ ಅವಕಾಶ ಇದೆ. ಕಳೆದ ಬಜೆಟ್ನಲ್ಲಿ ರಿಬೇಟ್ ಮಿತಿ 25,000 ರೂ ಇತ್ತು. ಈಗ ಅದನ್ನು 60,000 ರೂಗೆ ಏರಿಸಲಾಗಿದೆ. ಸ್ಲ್ಯಾಬ್ ದರಗಳ ಪ್ರಕಾರ ನೀವು ಪಾವತಿಸಬೇಕಾದ ತೆರಿಗೆಯ ಮೊತ್ತವು ಈ ಮಿತಿಯೊಳಗೆ ಇದ್ದರೆ ತೆರಿಗೆ ಕಟ್ಟುವ ಅಗತ್ಯ ಇರುವುದಿಲ್ಲ.
ಟ್ಯಾಕ್ಸ್ ರಿಬೇಟ್ ಹೇಗೆ ಕೆಲಸ ಮಾಡುತ್ತೆ ನೋಡಿ…
ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂನಿಂದ 75,000 ರೂಗೆ ಹೆಚ್ಚಿಸಲಾಗಿದೆ. ಅಂದರೆ, ನಿಮ್ಮ ಒಟ್ಟಾರೆ ಆದಾಯದಲ್ಲಿ 75,000 ರೂ ಹಣವನ್ನು ಹೊರಗಿಡಬಹುದು. ಉಳಿದ ಹಣವು ಟ್ಯಾಕ್ಸಬಲ್ ಇನ್ಕಮ್ ಆಗುತ್ತದೆ. ಇದರಲ್ಲಿ 4 ಲಕ್ಷ ರೂ ಹಣಕ್ಕೆ ತೆರಿಗೆ ವಿನಾಯಿತಿ ಇದೆ. 4-8 ಲಕ್ಷ ರೂ ಹಣಕ್ಕೆ ಶೇ. 5ರಷ್ಟು ತೆರಿಗೆ ಇದೆ. 8-12 ಲಕ್ಷ ರೂ ಆದಾಯಕ್ಕೆ ಶೇ. 10ರಷ್ಟು ತೆರಿಗೆ ಇದೆ.
ಇದನ್ನೂ ಓದಿ: PM Modi Reaction on Budget: ಸರ್ಕಾರದ ಬೊಕ್ಕಸ ತುಂಬುವುದಲ್ಲ, ಜನರ ಜೇಬು ತುಂಬುವ ಬಜೆಟ್: ಮೋದಿ
ಉದಾಹರಣೆಗೆ, ನಿಮ್ಮ ವಾರ್ಷಿಕ ಆದಾಯ 13,00,000 ರೂ ಎಂದಿಟ್ಟುಕೊಳ್ಳಿ. ಆಗ ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತ ಕಳೆದರೆ 12,25,000 ರೂ ಹಣವು ಟ್ಯಾಕ್ಸಬಲ್ ಇನ್ಕಮ್ ಆಗುತ್ತದೆ.
ಇದರಲ್ಲಿ ನಾಲ್ಕು ಲಕ್ಷ ರೂಗೆ ತೆರಿಗೆ ವಿನಾಯಿತಿ ಇದೆ. 4ರಿಂದ 8 ಲಕ್ಷ ರೂ ಆದಾಯಕ್ಕೆ ಶೇ. 5, ಅಂದರೆ 20,000 ರೂ ತೆರಿಗೆ ಆಗುತ್ತದೆ. 8-12 ಲಕ್ಷ ರೂ ಆದಾಯಕ್ಕೆ ಶೇ. 10ರಷ್ಟು ತೆರಿಗೆ ಇದೆ. ಅಂದರೆ, 40,000 ರೂ ತೆರಿಗೆ ಆಗುತ್ತದೆ. ಎರಡೂ ಸೇರಿದರೆ 60,000 ರೂ ಆಗುತ್ತದೆ.
ನಿಮ್ಮ ಟ್ಯಾಕ್ಸಬಲ್ ಇನ್ಕಮ್ ಆದ 12,25,000 ರೂ ಹಣದಲ್ಲಿ ಉಳಿಯುದು 25,000 ರೂ. ಇದು 12ರಿಂದ 16 ಲಕ್ಷ ರೂನ ಶೇ. 20ರ ತೆರಿಗೆ ಸ್ಲ್ಯಾಬ್ಗೆ ಸೇರುತ್ತದೆ. ಅಂದರೆ, 5,000 ರೂ ತೆರಿಗೆ ಆಗುತ್ತದೆ. ನಿಮ್ಮ ಒಟ್ಟು ತೆರಿಗೆ 65,000 ರೂ ಆಗುತ್ತದೆ. ಇದು ಟ್ಯಾಕ್ಸ್ ರಿಬೇಟ್ನ ಮಿತಿಯಾದ 60,000 ರೂಗಿಂತ ಹೆಚ್ಚಿದೆ. ಹೀಗಾಗಿ, ನಿಮಗೆ ರಿಬೇಟ್ ಅನ್ವಯ ಆಗುವುದಿಲ್ಲ. ನೀವು ಪೂರ್ಣ 65,000 ರೂ ತೆರಿಗೆ ಪಾವತಿಸಬೇಕಾಗುತ್ತದೆ.
ನಿಮ್ಮ ವಾರ್ಷಿಕ ಆದಾಯ 12,75,000 ರೂ ಇದ್ದರೆ ಆಗ ಟ್ಯಾಕ್ಸ್ ರಿಬೇಟ್ ಪಡೆಯಲು ಸಾಧ್ಯ. ಯಾವ ತೆರಿಗೆಯನ್ನೂ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಆದಾಯವು ಆ ಗಡಿ ದಾಟಿ ಹೋದರೆ ಆಗ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Sat, 1 February 25