ಬಜೆಟ್ಗಿಂತ ಮುಂಚೆ ಗರಿಗೆದರಿದ್ದ ಷೇರುಪೇಟೆ, ಬಜೆಟ್ ಬಳಿಕ ಮುದುಡಿದ್ದು ಯಾಕೆ? ತೆರಿಗೆ ಹೊರೆ ಇಳಿಸಿದರೂ ಪೇಟೆಗೆ ನಿರಾಸೆಯಾಗಿದ್ದು ಯಾಕೆ? ಇಲ್ಲಿದೆ ಕಾರಣ
Stock Market down after budget speech: ಷೇರು ಮಾರುಕಟ್ಟೆ ಇವತ್ತು ಶನಿವಾರ ಮಿಶ್ರಫಲ ಪಡೆದಿದೆ. ಬೆಳಗ್ಗೆ ಖುಷಿಯಿಂದ ಏರಿದ್ದ ಪೇಟೆ, ಕೊನೆಯಲ್ಲಿ ತುಸು ಮಂಕಾಗಿದೆ. ಪ್ರಮುಖ ಸೆಕ್ಟರ್ಗಳಲ್ಲಿರುವ ಸಂಸ್ಥೆಗಳ ಷೇರುಗಳಿಗೆ ಇವತ್ತು ಹಿನ್ನಡೆಯಾಗಿದೆ. ಈ ಬಜೆಟ್ನಲ್ಲಿ ಸರ್ಕಾರದಿಂದ ಬಂಡವಾಳ ವೆಚ್ಚವನ್ನು ಹೆಚ್ಚಿಸಲಾಗಿಲ್ಲದಿರುವುದು ಷೇರುಪೇಟೆಗೆ ನಿರಾಸೆ ಮೂಡಿಸಿರಬಹುದು ಎಂದು ಗ್ರಹಿಸಲಾಗಿದೆ.

ನವದೆಹಲಿ, ಫೆಬ್ರುವರಿ 1: ಇವತ್ತು ಬಜೆಟ್ ಮಂಡನೆಗೆ ಮುನ್ನ ಷೇರು ಮಾರುಕಟ್ಟೆ ಹಲವು ನಿರೀಕ್ಷೆಗಳೊಂದಿಗೆ ಉತ್ಸಾಹ ಹೆಚ್ಚಿಸಿಕೊಂಡಿತ್ತು. ಬಜೆಟ್ ಆದ ಬಳಿಕ ಷೇರುಪೇಟೆ ಮತ್ತೆ ಕುಸಿತದ ಹಾದಿ ಹಿಡಿಯಿತು. ಶನಿವಾರ ಮಾರುಕಟ್ಟೆಯ ಹೆಚ್ಚಿನ ಸೂಚ್ಯಂಕಗಳು ಪತನಗೊಂಡಿವೆ. ಅದರಲ್ಲೂ ಇನ್ಫ್ರಾಸ್ಟ್ರಕ್ಚರ್ ಇತ್ಯಾದಿ ಪ್ರಮುಖ ಸೆಕ್ಟರ್ಗಳಲ್ಲಿರುವ ಸಂಸ್ಥೆಗಳ ಷೇರುಗಳು ಇವತ್ತು ಶನಿವಾರ ಹೆಚ್ಚು ಬಿಕರಿಯಾಗಿವೆ. ಈ ಒತ್ತಡಕ್ಕೆ ಕಾರಣವಾಗಿರುವುದು ಬಜೆಟ್ನಲ್ಲಿ ಸರ್ಕಾರದಿಂದ ಬಂಡವಾಳ ವೆಚ್ಚ ಕಡಿಮೆ ಆಗಿರುವುದು ಎನ್ನಲಾಗಿದೆ.
ಕೆಲ ಪ್ರಮುಖ ಉದ್ಯಮಗಳಿಗೆ ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಬಹುದು ಎನ್ನುವ ನಿರೀಕ್ಷೆ ಬಲವಾಗಿತ್ತು. ಆದರೆ, ಸರ್ಕಾರ ಬೇರೆಯೇ ಆಲೋಚನೆ ಮಾಡಿದಂತಿದೆ. ಬಂಡವಾಳ ವೆಚ್ಚ ಹೆಚ್ಚುವುದರ ಬದಲು ಈ ಬಾರಿ ಇಳಿಕೆ ಆಗಿರುವುದು ಉದ್ಯಮ ವಲಯಕ್ಕೆ ನಿರಾಸೆ ತಂದಿರಬಹುದು. 2024-25ರ ಸಾಲಿನಲ್ಲಿ ಸರ್ಕಾರದ ಬಂಡವಾಳ ವೆಚ್ಚ 11.50 ಲಕ್ಷ ಕೋಟಿ ರೂ ಇತ್ತು. ಆದರೆ, 2025-26ರ ವರ್ಷಕ್ಕೆ ಸರ್ಕಾರ 11.20 ಲಕ್ಷ ಕೋಟಿ ರೂ ಮಾತ್ರವೇ ಬಂಡವಾಳ ವೆಚ್ಚವಾಗಿ ಬಳಸಲು ನಿರ್ಧರಿಸಿದೆ.
ಸರ್ಕಾರ ಬಂಡವಾಳ ವೆಚ್ಚ ಕಡಿಮೆ ಮಾಡಲು ಕಾರಣ ಇಲ್ಲದಿಲ್ಲ. ಉಚಿತ ಸ್ಕೀಮ್ಗಳಿಗೆ ಹಣ ಹೊಂದಿಸಲು ಒಂದು ಕಾರಣ ಇರಬಹುದು. ಹಾಗೆಯೇ, ಖಾಸಗಿ ವಲಯದಿಂದಲೂ ಬಂಡವಾಳ ವೆಚ್ಚ ಹೆಚ್ಚಬೇಕು ಎನ್ನುವ ಇರಾದೆಯೂ ಸರ್ಕಾರಕ್ಕೆ ಇರಬಹುದು. ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ರೈಲ್ವೆ ಮತ್ತು ರಕ್ಷಣಾ ಕ್ಷೇತ್ರದ ಬಗ್ಗೆ ಯಾವ ಪ್ರಸ್ತಾಪವನ್ನೂ ಮಾಡಲಿಲ್ಲ. ಇದೇ ಕಾರಣಕ್ಕೆ ಡಿಫೆನ್ಸ್ ಸ್ಟಾಕ್ಗಳು ಇವತ್ತು ಹಿನ್ನಡೆ ಕಂಡಿವೆ.
ಅದಾನಿ ಪೋರ್ಟ್ಸ್ ಇತ್ಯಾದಿ ಇನ್ಫ್ರಾಸ್ಟ್ರಕ್ಚರ್ ಕಂಪನಿಗಳಿಗೆ ಹಿನ್ನಡೆಯಾಗಿದೆ. ಲಾರ್ಸನ್, ಅದಾನಿ ಎಂಟರ್ಪ್ರೈಸಸ್, ಬಿಇಎಲ್, ಬಿಪಿಸಿಎಲ್, ಕೋಲ್ ಇಂಡಿಯಾ, ಗ್ರಾಸಿಮ್ ಇಂಡಸ್ಟ್ರೀಸ್, ಎಚ್ಸಿಎಲ್ ಟೆಕ್, ಹಿಂಡಾಲ್ಕೋ ಇತ್ಯಾದಿ ಕೋರ್ ಸೆಕ್ಟರ್ ಷೇರುಗಳು ಇಳಿಕೆ ಕಂಡಿವೆ.
ಇದನ್ನೂ ಓದಿ: ಸೇನಾ ಪಡೆಗಳ ಆಧುನೀಕರಣಕ್ಕೆ ಕ್ರಮ: ರಕ್ಷಣಾ ಕ್ಷೇತ್ರದ ಅನುದಾನ ಹೆಚ್ಚಿಸಿದ ನಿರ್ಮಲಾ ಬಜೆಟ್
ಆದರೆ, ಒಟ್ಟಾರೆಯಾಗಿ ಷೇರು ಮಾರುಕಟ್ಟೆಯ ವರ್ತನೆ ತೀರಾ ಋಣಾತ್ಮಕವಾಗಿಲ್ಲ. ಸೆನ್ಸೆಕ್ಸ್ ಪಾಸಿಟಿವ್ನಲ್ಲಿತ್ತು. ನಿಫ್ಟಿ ಅಲ್ಪ ಹಿನ್ನಡೆ ಮಾತ್ರವೇ ಕಂಡಿತು. ಮಧ್ಯಾಹ್ನ 3ಗಂಟೆಯಲ್ಲಿ ನಿಫ್ಟಿ50 ಸೂಚ್ಯಂಕ ಹಿನ್ನಡೆ ಕಂಡಿದ್ದು 9 ಅಂಕ ಮಾತ್ರ. ಸೆನ್ಸೆಕ್ಸ್ ಬಹುತೇಕ 100 ಅಂಕಗಳಷ್ಟು ಹೆಚ್ಚಳ ಕಂಡಿತ್ತು.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ