ಸೇನಾ ಪಡೆಗಳ ಆಧುನೀಕರಣಕ್ಕೆ ಕ್ರಮ: ರಕ್ಷಣಾ ಕ್ಷೇತ್ರದ ಅನುದಾನ ಹೆಚ್ಚಿಸಿದ ನಿರ್ಮಲಾ ಬಜೆಟ್
ಭಾರತದ 2024-25ನೇ ಸಾಲಿನ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 6.81 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹೊಸ ಉಪಕರಣಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಅನುದಾನ ನೀಡಲಾಗಿದೆಯಾದರೂ, ನೆರೆಯ ಚೀನಾಕ್ಕಿಂತ ಭಾರತದ ರಕ್ಷಣಾ ಬಜೆಟ್ ಕಡಿಮೆಯಾಗಿದೆ ಎಂಬುದನ್ನು ಗಮನಿಸಬೇಕು.

ನವದೆಹಲಿ, ಫೆಬ್ರವರಿ 1: ಹೊಸ ಉಪಕರಣಗಳ ಖರೀದಿ, ಆಧುನೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ, ಬಂಡವಾಳ ವೆಚ್ಚ ಸೇರಿದಂತೆ ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ 6.81 ಲಕ್ಷ ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಇದು ಕಳೆದ ವರ್ಷದ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ನೀಡಿದ ಕೊಡುಗೆಗಿಂತ ತುಸು ಹೆಚ್ಚಾಗಿದೆ.
ಹಣಕಾಸು ಸಚಿವರು ರಕ್ಷಣಾ ಕ್ಷೇತ್ರಕ್ಕೆ ಒಟ್ಟು 6,81,210 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಕಳೆದ ವರ್ಷ ಇದು 6,21,940 ಕೋಟಿ ರೂ. ಆಗಿತ್ತು. ಬಜೆಟ್‌ನಲ್ಲಿ ಒಟ್ಟು ರಕ್ಷಣಾ ಬಂಡವಾಳ ವೆಚ್ಚವನ್ನು 1,92,387 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಪಿಂಚಣಿಗಾಗಿ 1,60,795 ಕೋಟಿ ರೂ, ರಾಜಸ್ವ ವೆಚ್ಚ 4,88,822 ಕೋಟಿ ರೂ. ಇದೆ. ಬಂಡವಾಳ ವೆಚ್ಚದ ಅಡಿಯಲ್ಲಿ ವಿಮಾನ ಮತ್ತು ಏರೋ ಇಂಜಿನ್‌ಗಳಿಗೆ 48,614 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ನೌಕಾಪಡೆಗೆ 24,390 ಕೋಟಿ ರೂ. ಇತರೆ ಉಪಕರಣಗಳ ಖರೀದಿಗೆ 63,099 ಕೋಟಿ ರೂ. ಘೋಷಿಸಲಾಗಿದೆ.
ಸ್ವಾತಂತ್ರ್ಯದ ನಂತರ ರಕ್ಷಣಾ ವಲಯದ ವೆಚ್ಚ ಎಷ್ಟು ಹೆಚ್ಚಾಗಿದೆ?
ಸ್ವಾತಂತ್ರ್ಯದ ನಂತರ ದೇಶದ ಮೊದಲ ಬಜೆಟ್ ಅನ್ನು 26 ನವೆಂಬರ್ 1947 ರಂದು ಆರ್ಕೆ ಷಣ್ಮುಖಂ ಚೆಟ್ಟಿ ಮಂಡಿಸಿದ್ದರು. ಆ ಬಜೆಟ್‌ನ ಒಟ್ಟು ಗಾತ್ರ ಅಂದರೆ ಒಟ್ಟು ವೆಚ್ಚ 197.39 ಕೋಟಿ ರೂ. ಇತ್ತೆಂದು ಅಂದಾಜಿಸಲಾಗಿದೆ. ಮೋದಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ 2013-14ರ ಬಜೆಟ್ ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 2,03,672 ಕೋಟಿ ರೂ. ಅನುದಾನ ನೀಡಲಾಗಿತ್ತು. ಮೋದಿ ಸರ್ಕಾರದ ಕೊನೆಯ ಬಜೆಟ್‌ನಲ್ಲಿ (ಕಳೆದ ಸರ್ಕಾರದ ಅವಧಿಯ) ಅಂದರೆ 2024-25ರ ವೇಳೆಗೆ ರಕ್ಷಣಾ ಬಜೆಟ್‌ನ ಗಾತ್ರವು 2013-14 ಕ್ಕೆ ಹೋಲಿಸಿದರೆ ದ್ವಿಗುಣಗೊಂಡಿತ್ತು.
ಇದನ್ನೂ ಓದಿ: ನಿಮಗೆ ಎಷ್ಟು ವೇತನ ಇದ್ದರೆ ಎಷ್ಟು ಟ್ಯಾಕ್ಸ್? ಈಗೆಷ್ಟು ತೆರಿಗೆ ವಿನಾಯಿತಿ ಸಿಕ್ತು? ಇಲ್ಲಿದೆ ವಿವರ
ಚೀನಾದ ರಕ್ಷಣಾ ಬಜೆಟ್‌ಗಿಂತ ಕಡಿಮೆ
2024 ರ ಏಪ್ರಿಲ್ನಲ್ಲಿ ಬಿಡುಗಡೆಯಾದ ‘ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್’ ವರದಿಯ ಪ್ರಕಾರ, 2023 ರಲ್ಲಿ 83.6 ಶತಕೋಟಿ ಡಾಲರ್ ವೆಚ್ಚದೊಂದಿಗೆ ಅತ್ಯಧಿಕ ಮಿಲಿಟರಿ ವೆಚ್ಚವನ್ನು ಹೊಂದಿರುವ ಟಾಪ್ 10 ದೇಶಗಳಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿತ್ತು. ಚೀನಾ 296 ಶತಕೋಟಿ ಡಾಲರ್ಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಭಾರತದ ರಕ್ಷಣಾ ಬಜೆಟ್ ಚೀನಾದ ರಕ್ಷಣಾ ಬಜೆಟ್‌ಗಿಂತ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ.
ಬಜೆಟ್ ಸಂಬಂಧಿತ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ