ನವದೆಹಲಿ, ಜುಲೈ 23: ಎಂಎಸ್ಎಂಇ ವಲಯಕ್ಕೆ ಉತ್ತೇಜನ ನೀಡಲು ಮುದ್ರಾ ಯೋಜನೆಯ ಮೊತ್ತವನ್ನು ಹೆಚ್ಚಿಸಲಾಗಿದೆ. ಯೋಜನೆ ಅಡಿ ನೀಡಲಾಗುವ ಗರಿಷ್ಠ ಸಾಲದ ಮಿತಿಯನ್ನು 10 ಲಕ್ಷ ರೂನಿಂದ 20 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಸತತ 7ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ ಪ್ರಧಾನಮಂತ್ರಿ ಮುದ್ರಾ ಯೋಜನೆಗೆ (Mudra Yojana) ಮೀಸಲಿಡುವ ಹಣದಲ್ಲಿ ಗಣನೀಯ ಪ್ರಮಾಣದ ಏರಿಕೆಯನ್ನ ಘೋಷಿಸಿದ್ದಾರೆ. ದ್ವಿಗುಣಗೊಳಿಸಲಾದ ಮೊತ್ತವು ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ತೇಜಿಸುವ ಮೂಲಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ, ಮತ್ತು ನಾವಿನ್ಯತೆಗೆ ಅಗತ್ಯವಾದ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದರಿಂದ ಉದ್ಯೋಗಾವಕಾಶಗಳನ್ನ ಸೃಷ್ಟಿಸುವ ಗುರಿಯನ್ನ ಯೋಜನೆ ಹೊಂದಿದೆ.
ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಮತ್ತು ದೇಶಾದ್ಯಂತ ಉದ್ಯೋಗವನ್ನು ಹೆಚ್ಚಿಸುವಲ್ಲಿ ಯೋಜನೆಯ ಯಶಸ್ಸನ್ನು ಎತ್ತಿ ತೋರಿಸಿದ ಸೀತಾರಾಮನ್, ಹೆಚ್ಚಿದ ಆರ್ಥಿಕ ಸಹಾಯವು ಸೂಕ್ಷ್ಮ ಉದ್ಯಮಗಳನ್ನು ಮತ್ತಷ್ಟು ಸಶಕ್ತಗೊಳಿಸುತ್ತದೆ ಮತ್ತು ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡುವುದಾಗಿ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಮ್ಇ) ಬೆಂಬಲ ನೀಡುವ ಉದ್ದೇಶದಿಂದ ಹೊಸ ಸಾಲ ಖಾತರಿ ಯೋಜನೆಯನ್ನು ಪರಿಚಯಿಸುವುದಾಗಿಯೂ ತಿಳಿಸಿದ್ದಾರೆ.
ಮೋದಿ ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದಾದ ಮುದ್ರಾ ಸಾಲ ಉಪಕ್ರಮವು ಕಾರ್ಪೊರೇಟ್ ಅಲ್ಲದೇ, ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ಸಾಲವನ್ನು ವಿಸ್ತರಿಸುವಲ್ಲಿ ಪರಿಣಾಮಕಾರಿಯಾಗಿದೆ. ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಾದ ಕೋಳಿ ಸಾಕಣಿಕೆ, ಹೈನುಗಾರಿಕೆ, ಜೇನುಸಾಕಣೆ ಇತ್ಯಾದಿಗಳನ್ನು ಒಳಗೊಂಡಂತೆ ಉತ್ಪಾದನೆ, ವ್ಯಾಪಾರ ಅಥವಾ ಸೇವಾ ಕ್ಷೇತ್ರಗಳಲ್ಲಿ ಹಾಗು ಕೃಷಿಯೇತರ ವಲಯದಲ್ಲಿ ತೊಡಗಿರುವಂತಹ ಆದಾಯದಾಯಕವಾದ ಯಾವುದೇ ಅರ್ಹ ಸೂಕ್ಷ್ಮ ಉದ್ಯಮಗಳಿಗೆ ಅತ್ಯಂತ ಸುಲಭವಾಗಿ ಸಾಲವನ್ನು ಒದಗಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ.
ಆರ್ಥಿಕವಾಗಿ ಸಶಕ್ತವಲ್ಲದ, ಆದರೆ ಉದ್ಯಮಶೀಲತೆಯ ಮನಸ್ಥಿತಿಯುಳ್ಳವರಿಗೆ ಈ ಯೋಜನೆ ಆಶಾಕಿರಣವಾಗಿದೆ.
ಇದನ್ನೂ ಓದಿ: ಕಾರ್ಪೊರೇಟ್ ತೆರಿಗೆ 5 ಪ್ರತಿಶತದಷ್ಟು ಇಳಿಕೆ; ಏಂಜೆಲ್ ಟ್ಯಾಕ್ಸ್ ರದ್ದು; ಉದ್ಯಮ ವಲಯಕ್ಕೆ ತುಸು ರಿಲೀಫ್
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲಗಳನ್ನು ಬ್ಯಾಂಕ್ ಇತ್ಯಾದಿ ನಿಯೋಜಿತ ಹಣಕಾಸು ಸಂಸ್ಥೆಗಳ ಮೂಲಕ ಪಡೆಯಬಹುದು.
ಸರ್ಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು, ರಾಜ್ಯ ಸರ್ಕಾರಗಳ ಅಡಿಗೆ ಬರುವ ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ವಲಯದ ಗ್ರಾಮೀಣ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್ ಸಂಸ್ಥೆ, ಎನ್ಬಿಎಫ್ಸಿ, ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಮುದ್ರಾ ಯೋಜನೆ ಅಡಿ ಸಾಲ ನೀಡಲು ಅನುಮತಿ ಹೊಂದಿರುತ್ತವೆ.
– ದರ್ಶಿನಿ ತಿಪ್ಪಾರೆಡ್ಡಿ
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Tue, 23 July 24