ನವದೆಹಲಿ, ಜುಲೈ 24: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ನಲ್ಲಿ ಆದಾಯ ತೆರಿಗೆ ದರದಲ್ಲಿ ಒಂದಷ್ಟು ಬದಲಾವಣೆ ತಂದಿದ್ದಾರೆ. ನಿರೀಕ್ಷೆಯಂತೆ ಹಳೆಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡದೇ ಹಾಗೇ ಮುಂದುವರಿಸಿದ್ದಾರೆ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ತೆರಿಗೆ ರಿಯಾಯಿತಿ ಹೆಚ್ಚಿಸಿದ್ದಾರೆ. ಬಹುಸಂಖ್ಯಾತ ತೆರಿಗೆ ಪಾವತಿದಾರರು ಹಳೆಯ ಟ್ಯಾಕ್ಸ್ ರೆಜಿಮೆಯಲ್ಲೇ ಮುಂದುವರಿಯುತ್ತಿದ್ದಾರೆ. ಇವರಿಗೆ ಈಗ ಹೊಸ ರೆಜಿಮೆಗೆ ವರ್ಗವಾಗುವುದೋ, ಈಗಿರುವ ಹಳೆಯದರಲ್ಲೆ ಮುಂದುವರಿಯುವುದೋ ಎಂಬ ಗೊಂದಲ ಆಗುತ್ತಿರಬಹುದು.
ಮೊದಲಿಗೆ, ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಏನು ಬದಲಾವಣೆ ತರಲಾಗಿದೆ ಎಂಬುದನ್ನು ಗಮನಿಸಬಹುದು. ಸ್ಟಾಂಡರ್ಡ್ ಡಿಡಕ್ಷನ್ ಅನ್ನು 50,000 ರೂನಿಂದ 75,000 ರೂಗೆ ಹೆಚ್ಚಿಸಲಾಗಿದೆ. ಇದು ತೆರಿಗೆ ವಿನಾಯಿತಿ ಮೊತ್ತವನ್ನು ಹೆಚ್ಚಿಸುತ್ತದೆ. ಹಾಗೆಯೇ ಸ್ಲ್ಯಾಬ್ ದರಗಳಲ್ಲಿ 12,000 ರೂವರೆಗಿನ ಆದಾಯಕ್ಕೆ ತೆರಿಗೆ ಪ್ರಮಾಣದಲ್ಲಿ ವ್ಯತ್ಯಯವಾಗಿದೆ. ಸ್ಲ್ಯಾಬ್ ದರಗಳ ಮಿತಿ ಹೆಚ್ಚಳವಾಗಿದೆ. ಅದರ ಸ್ಲ್ಯಾಬ್ ದರ ಹೀಗಿದೆ:
ಈ ಮುಂಚೆ 3ರಿಂದ 6 ಲಕ್ಷ ರೂ ಆದಾಯಕ್ಕೆ ಶೇ. 5 ತೆರಿಗೆ ಇತ್ತು. ಅದನ್ನು 7 ಲಕ್ಷ ರೂಗೆ ಹೆಚ್ಚಿಸಲಾಗಿದೆ. 6ರಿಂದ 9 ಲಕ್ಷ ರೂವರೆಗಿನ ಮೊತ್ತಕ್ಕೆ ಶೇ. 10 ತೆರಿಗೆ ಇತ್ತು. ಇದನ್ನು 10 ಲಕ್ಷ ರೂಗೆ ಹೆಚ್ಚಿಸಲಾಗಿದೆ.
ನಿಮ್ಮ ವಾರ್ಷಿಕ ಆದಾಯ 10 ಲಕ್ಷ ರೂವರೆಗೆ ಇದ್ದರೆ ಹೊಸ ಟ್ಯಾಕ್ಸ್ ಸಿಸ್ಟಂ ಸೂಕ್ತ ಎನಿಸುತ್ತದೆ. 11 ಲಕ್ಷ ರೂ ಮೇಲ್ಪಟ್ಟ ಆದಾಯ ಇದ್ದು ನೀವು ಎಲ್ಲಾ ರೀತಿಯ ಸೇವಿಂಗ್ಸ್ ಸ್ಕೀಮ್ಗಳಲ್ಲಿ ಹೂಡಿಕೆ ಮಾಡಿ ಗರಿಷ್ಠ ಡಿಡಕ್ಷನ್ ಪಡೆಯಬಲ್ಲಿರೆಂದರೆ ಖಂಡಿತವಾಗಿ ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಮುಂದುವರಿಯಬಹುದು.
ಹೋಮ್ ಲೋನ್ ಇತ್ಯಾದಿ ಎಲ್ಲವನ್ನೂ ನೀವು ಬಳಸಿದರೆ ಸುಮಾರು 4,00,000 ರೂವರೆಗೂ ಡಿಡಕ್ಷನ್ ಕ್ಲೇಮ್ ಮಾಡಲು ಸಾಧ್ಯ. ಸೆಕ್ಷನ್ 80 ಸಿ ಅಡಿಯಲ್ಲಿನ ಹೂಡಿಕೆ, ಗೃಹ ಸಾಲದ ಪ್ರೀಮಿಯಮ್ ಮತ್ತು ಬಡ್ಡಿ, ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಂ, ಮಕ್ಕಳ ಟ್ಯೂಷನ್ ಫೀ, ಮನೆಯ ಬಾಡಿಗೆ, ಸಂಬಳದಲ್ಲಿನ ಎಚ್ಆರ್ಎ ಇವೆಲ್ಲವನ್ನೂ ನೀವು ಬಳಸಬಲ್ಲಿರಾದರೆ ಆಗ ಹಳೆಯ ಟ್ಯಾಕ್ಸ್ ಸಿಸ್ಟಂ ಉಪಯೋಗವಾಗಬಹುದು. ಅವು ಸಾಧ್ಯವಾಗದೇ ಹೋದರೆ ಹೊಸ ಟ್ಯಾಕ್ಸ್ ಸಿಸ್ಟಂಗೆ ವರ್ಗವಾಗುವುದು ಸಮಂಜಸವೆನಿಸಬಹುದು ಎನ್ನುತ್ತಾರೆ ತಜ್ಞರು.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ