AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್​ನಲ್ಲಿ ಕರ್ನಾಟಕ ನಿರ್ಲಕ್ಷ್ಯ: ನೀತಿ ಆಯೋಗದ ಸಭೆ ಬಹಿಷ್ಕರಿಸಲು ನಿರ್ಧರಿಸಿದ ಸಿದ್ದರಾಮಯ್ಯ

2024-25ನೇ ಸಾಲಿನ ಕೇಂದ್ರ ಬಜೆಟ್​​ ಕರ್ನಾಟಕಕ್ಕೆ ಯಾವುದೇ ಘೋಷಣೆ ಮಾಡಿಲ್ಲ. ಮೂಲಸೌಕರ್ಯ, ಕೈಗಾರಿಕೆ, ಕೃಷಿ, ನೀರಾವರಿ ಸೇರಿದಂತೆ ಅನೇಕ ವಲಯಗಳ ನಿರೀಕ್ಷೆಯಿತ್ತು. ಆದರೆ ಅದೆಲ್ಲಾ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಮೋದಿ ನೇತೃತ್ವದಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಬಜೆಟ್​ನಲ್ಲಿ ಕರ್ನಾಟಕ ನಿರ್ಲಕ್ಷ್ಯ: ನೀತಿ ಆಯೋಗದ ಸಭೆ ಬಹಿಷ್ಕರಿಸಲು ನಿರ್ಧರಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ-ಮೋದಿ
ರಮೇಶ್ ಬಿ. ಜವಳಗೇರಾ
|

Updated on: Jul 23, 2024 | 10:05 PM

Share

ಬೆಂಗಳೂರು, (ಜುಲೈ 23): ಕರ್ನಾಟಕದಿಂದಲೇ ಆಯ್ಕೆಯಾಗಿ ಹೋಗಿರುವ ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸೇರಿದಂತೆ ರಾಜ್ಯದ ಸಂಸದರೆಲ್ಲರ ಸಭೆ ಕರೆದು ರಾಜ್ಯದ ಅತ್ಯವಶ್ಯಕ ಬೇಡಿಕೆಗಳನ್ನು ಮುಂದಿಟ್ಟು ಮನವರಿಕೆ ಮಾಡಿಕೊಟ್ಟಿದ್ದರೂ ಇಂದು (ಜುಲೈ 23) ಮಂಡಿಸಲಾಗಿರುವ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಈ ಉದ್ದೇಶಪೂರ್ವ ನಿರ್ಲಕ್ಷ್ಯ ಮತ್ತು ತಾರತಮ್ಯ ನೀತಿಯನ್ನು ಖಂಡಿಸಿ, ಇದೇ ಜುಲೈ ತಿಂಗಳ 27ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಕರೆಯಲಾಗಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಇಂದು ಮಂಡಿಸಲಾದ 2024-25ರ ಸಾಲಿನ ಬಜೆಟ್ ನೋಡಿದ ನಂತರ ನಮಗೆ ಕೇಂದ್ರ ಸರ್ಕಾರದ ಮೇಲಿನ ವಿಶ‍್ವಾಸವೇ ಹೊರಟುಹೋಗಿದೆ. ಬಜೆಟ್ ನಲ್ಲಿ ರೈತರ ಕಲ್ಯಾಣದ ಕಾಳಜಿ ವ್ಯಕ್ತಪಡಿಸಿರುವ ಹಣಕಾಸುವ ಸಚಿವರು ನಮ್ಮ ಬಹುದಿನಗಳ ಬೇಡಿಕೆಯಾಗಿರುವ ಮೇಕೆದಾಟು ಯೋಜನೆಯ ಬಗ್ಗೆ ಪ್ರಸ್ತಾವವನ್ನೇ ಮಾಡಿಲ್ಲ. ಭದ್ರಾ ಮೇಲ್ದಂಡೆಗೆ ವಿಶೇಷ ನೆರವು ನೀಡುವ ತಮ್ಮದೇ ಭರವಸೆಯನ್ನೂ ಉಳಿಸಿಕೊಳ್ಳಲಿಲ್ಲ. ಕಳಸಾ -ಬಂಡೂರಿ ಯೋಜನೆಯನ್ನೂ ನಿರ್ಲಕ್ಷಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಮೆಟ್ರೋ 3ನೇ ಹಂತದ ಯೋಜನೆ ಮತ್ತು ಬೆಂಗಳೂರು ನಗರದ ಉದ್ದೇಶಿತ ಅಷ್ಟಪಥ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಅಗತ್ಯ ಅನುಮತಿ ಮತ್ತು ಅನುದಾನವನ್ನೂ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: 5 ಜನ ಕೇಂದ್ರ ಮಂತ್ರಿಗಳಿದ್ದರೂ ಬಜೆಟ್​ನಲ್ಲಿ ಕರ್ನಾಟಕಕ್ಕೆ ಏನು ಕೊಟ್ಟಿಲ್ಲ: ಸಿದ್ದರಾಮಯ್ಯ ಆಕ್ರೋಶ

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಸೂಚನೆ ಕೂಡಾ ಬಜೆಟ್ ನಲ್ಲಿ ಇಲ್ಲ. ಕೇಂದ್ರ ಸರ್ಕಾರದ ತಾರತಮ್ಯ ನೀತಿಯನ್ನು ಸೂಕ್ಷ್ಮವಾಗಿ ಅವಲೋಕಸಿದರೆ ಬಿಜೆಪಿಯನ್ನು ತಿರಸ್ಕರಿಸಿರುವ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ನರೇಂದ್ರ ಮೋದಿ ಅವರ ಸರ್ಕಾರ ನಿರ್ಧಾರ ಮಾಡಿದಂತಿದೆ ಎಂದು ಕಿಡಿಕಾರಿದ್ದಾರೆ.

ದೇಶದಲ್ಲಿ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿವೆ ಎನ್ನುವುದನ್ನು ನರೇಂದ್ರ ಮೋದಿ ಸರ್ಕಾರ ಮರೆತಂತಿದೆ. ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಸುರಿದಿರುವ ವಿಶೇಷ ಅನುದಾನದ ಸುರಿಮಳೆಯನ್ನು ನೋಡಿದರೆ ನರೇಂದ್ರ ಮೋದಿಯವರ ಲೆಕ್ಕಾಚಾರದಲ್ಲಿ ಆ ಎರಡು ರಾಜ್ಯಗಳು ಮಾತ್ರ ಅಸ್ತಿತ್ವದಲ್ಲಿರುವ ಹಾಗೆ ಕಾಣುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಅನ್ಯಾಯವನ್ನು ಸಹಿಸಲಾಗದು. ಈ ರೀತಿ ನಿರ್ಲಕ್ಷ್ಯಕ್ಕೊಳಗಾಗಿರುವ ಬಿಜೆಪಿಯೇತರ ಪಕ್ಷಗಳ ಆಡಳಿತದ ರಾಜ್ಯಗಳ ಜೊತೆ ಸೇರಿ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಮತ್ತು ಸೇಡಿನ ರಾಜಕಾರಣದ ವಿರುದ್ಧ ಹೋರಾಟ ನಡೆಸಲಾಗುವುದು. ಈ ಹೋರಾಟದಲ್ಲಿ ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ನಿಲುವಿನ ಬಗ್ಗೆ ಅಸಮಾಧಾನಗೊಂಡಿರುವ ರಾಜ್ಯದ ಜನತೆ ನಮ್ಮ ಜೊತೆ ನಿಲ್ಲಲಿದ್ದಾರೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.