ನವದೆಹಲಿ, ಜನವರಿ 3: ಕೇಂದ್ರ ಆಯವ್ಯಯ ಪತ್ರ (Union Budget 2024) ಬಿಡುಗಡೆಗೆ ದಿನಗಣನೆ ನಡೆದಿದೆ. ಫೆಬ್ರುವರಿ 1ರಂದು ಈ ಸರ್ಕಾರದ ಕೊನೆಯ ಬಜೆಟ್ ಮಂಡನೆ ಆಗಲಿದೆ. ಚುನಾವಣಾ ಹೊಸ್ತಿಲಿನಲ್ಲಿ ಬಿಡುಗಡೆ ಆಗಲಿರುವ ಬಜೆಟ್ ಬಗ್ಗೆ ಏನು ನಿರೀಕ್ಷಿಸಬಹುದು? ಈ ಬಾರಿಯ ಬಜೆಟ್ ಹೇಗಿರಲಿದೆ, ಯಾರ್ಯಾರಿಗೆ ಯಾವ್ಯಾವ ಭಾಗ್ಯ ಎಷ್ಟೆಷ್ಟು ಸಿಗಲಿದೆ ಎಂಬಿತ್ಯಾದಿ ಕುತೂಹಲ ಮನೆ ಮಾಡಿರಬಹುದು. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಎಲೆಕ್ಷನ್ ಇರುವುದರಿಂದ ಈ ಬಾರಿಯ ಬಜೆಟ್ ಅನ್ನು ಚುನಾವಣಾ ವರ್ಷದ ಬಜೆಟ್ ಎಂದು ಪರಿಗಣಿಸಲಾಗುತ್ತದೆ. ಚುನಾವಣೆ ಬಳಿಕ ಇದೇ ಸರ್ಕಾರವೇ ಮತ್ತೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲವಾದ್ದರಿಂದ ಪೂರ್ಣಪ್ರಮಾಣದ ಬಜೆಟ್ ರೂಪಿಸುವಂತಿಲ್ಲ. ಇದು ಕೇವಲ ಇಂಟರಿಮ್ ಬಜೆಟ್ ಅಥವಾ ಮಧ್ಯಂತರ ಬಜೆಟ್ ಮಾತ್ರವೇ ಆಗಿರುತ್ತದೆ.
ಮಧ್ಯಂತರ ಬಜೆಟ್ 12 ತಿಂಗಳವರೆಗೆ ಸಿಂಧುವಾಗಿರುತ್ತದಾದರೂ ಸರ್ಕಾರ ರಚನೆ ಆಗುವವರೆಗೂ ಮಾತ್ರವೇ ಸೀಮಿತವಾಗಿರುತ್ತದೆ. ಅಲ್ಲಿಯವರೆಗೆ ಅಗತ್ಯ ವೆಚ್ಚಗಳಿಗೆ ಹಣ ವಿನಿಯೋಗಿಸಲು ಅನುವು ಮಾಡಿಕೊಡುವುದು ಮಾತ್ರ ಮಧ್ಯಂತರ ಬಜೆಟ್ನ ಆಶಯ. ಯಾವುದೇ ಹೊಸ ಸ್ಕೀಮ್ಗಳನ್ನು ಘೋಷಿಸಲು ಆಗುವುದಿಲ್ಲ. ಆರ್ಥಿಕ ಸಮೀಕ್ಷೆ ಕೂಡ ಇರುವುದಿಲ್ಲ. ಚುನಾವಣೆ ಮುಗಿದು ಹೊಸ ಸರ್ಕಾರ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗುತ್ತದೆ.
ಬಜೆಟ್ ಎಂದರೆ ಆಯವ್ಯಯ ಪತ್ರ. ಆಯ ಎಂದರೆ ಆದಾಯ, ವ್ಯಯ ಎಂದರೆ ಖರ್ಚು. ಯೂನಿಯನ್ ಬಜೆಟ್ ಅಥವಾ ಕೇಂದ್ರ ಬಜೆಟ್ ಎಂಬುದು ಕೇಂದ್ರ ಸರ್ಕಾರ ರೂಪಿಸುವ ಬಜೆಟ್. ಇದು ಒಂದು ಹಣಕಾಸು ವರ್ಷದ ಹಣಕಾಸು ಲೆಕ್ಕಾಚಾರವಾಗಿದೆ. ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ಖರ್ಚುಗಳ ಒಂದು ಲೆಕ್ಕಪುಸ್ತಕವೇ ಬಜೆಟ್. ಇಡೀ ಒಂದು ವರ್ಷದಲ್ಲಿ ಸರ್ಕಾರದಿಂದ ಯಾವುದೆಲ್ಲಾ ಮತ್ತು ಎಷ್ಟೆಲ್ಲಾ ಆದಾಯ ಬರಬಹುದು. ಯಾವ್ಯಾವುದಕ್ಕೆ ಎಷ್ಟೆಷ್ಟು ವೆಚ್ಚ ಮಾಡಬೇಕು ಎಂದು ನಮೂದಿಸಲಾಗುತ್ತದೆ. ಒಂದು ಹಣಕಾಸು ವರ್ಷ ಎಂದರೆ ಏಪ್ರಿಲ್ 1ರಿಂದ ಮುಂದಿನ ವರ್ಷದ ಮಾರ್ಚ್ 31ರವರೆಗಿನ ಅವಧಿ.
ಬಜೆಟ್ ಅನ್ನು ರೆವೆನ್ಯೂ ಬಜೆಟ್ ಮತ್ತು ಕ್ಯಾಪಿಟಲ್ ಬಜೆಟ್ ಎಂದು ವರ್ಗೀಕರಿಸಲಾಗುತ್ತದೆ. ರೆವೆನ್ಯೂ ಬಜೆಟ್ನಲ್ಲಿ ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಬರುವ ಆದಾಯಗಳು, ಮತ್ತು ಆ ಆದಾಯ ಹಣವನ್ನು ಹೇಗೆಲ್ಲಾ ವಿನಿಯೋಗಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ. ಕ್ಯಾಪಿಟಲ್ ಬಜೆಟ್ನಲ್ಲಿ ಸರ್ಕಾರ ಸಾರ್ವಜನಿಕ ಸಾಲಗಳಿಂದ ಪಡೆಯಬಹುದಾದ ಹಣದ ವಿವರ ಹಾಗೂ ಆ ಹಣ ಎಲ್ಲೆಲ್ಲಿ ಬಳಕೆ ಆಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ.
ಕಳೆದ ವರ್ಷ ಪ್ರಸ್ತುಪಡಿಸಿದ ಬಜೆಟ್ನ ವ್ಯಾಪ್ತಿ 2024ರ ಮಾರ್ಚ್ 31ರವರೆಗೂ ಮಾತ್ರವೇ ಇರುತ್ತದೆ. ಏಪ್ರಿಲ್ 1ರಿಂದ ಹಿಡಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಹೊಸ ಬಜೆಟ್ ರೂಪುಗೊಳ್ಳುವವರೆಗೂ ಸರ್ಕಾರದ ಆಯ ಮತ್ತು ವ್ಯಯ ಸಾಧ್ಯವಾಗಲು ಮಧ್ಯಂತರ ಬಜೆಟ್ ಮಾಡಲಾಗುತ್ತದೆ.
ಆಗಲೇ ತಿಳಿಸಿದಂತೆ ಮಧ್ಯಂತರ ಬಜೆಟ್ನಲ್ಲಿ ಪ್ರಮುಖ ನಿರ್ಧಾರಗಳ ಘೋಷಣೆ ನಡೆಯುವುದಿಲ್ಲ. ಮತದಾರರನ್ನು ಓಲೈಸುವ ಸಾಧ್ಯತೆ ಇರುವುದರಿಂದ ಇದಕ್ಕೆ ಆಸ್ಪದ ಇರುವುದಿಲ್ಲ.
ಮಧ್ಯಂತರ ಬಜೆಟ್ನಲ್ಲಿ ಆರ್ಥಿಕ ಸಮೀಕ್ಷೆ ಪ್ರಸ್ತುತಪಡಿಸುವಂತಿಲ್ಲ.
ಇದನ್ನೂ ಓದಿ: ITR: ಡಿ. 31ರವರೆಗೂ 8.18 ಕೋಟಿ ಐಟಿಆರ್ಗಳ ಸಲ್ಲಿಕೆ; ಇದು ಹೊಸ ದಾಖಲೆ
ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ಖರ್ಚುಗಳ ಅಂದಾಜು ಮಾಡಬಹುದು. ಹಣಕಾಸು ಸ್ಥಿತಿ ಒಂದು ವರ್ಷದಲ್ಲಿ ಹೇಗಿರಬಹುದು, ವಿತ್ತೀಯ ಕೊರತೆ ಎಷ್ಟು ಎದುರಾಗಬಹುದು ಎಂದೂ ಅಂದಾಜು ಮಾಡಬಹುದು.
ಮುಂದಿನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಹಾಲಿ ಸರ್ಕಾರಕ್ಕೆ ವೆಚ್ಚ ಮಾಡಲು ಅನುವಾಗುವಂತೆ ಮಧ್ಯಂತರ ಬಜೆಟ್ ಮೂಲಕ ವೋಟ್ ಆನ್ ಅಕೌಂಟ್ಗೆ ಸಂಸತ್ತು ಅಂಗೀಕರಿಸುತ್ತದೆ. ಚುನಾವಣಾ ನಿರ್ವಹಣೆ, ಸಿಬ್ಬಂದಿ ವೇತನ ಇತ್ಯಾದಿ ಅಗತ್ಯ ವೆಚ್ಚಗಳಿಗೆ ಸರ್ಕಾರಕ್ಕೆ ನೀಡಲಾಗುವ ಅನುಮತಿ ಮಾತ್ರವೇ ಆಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ