Earning vs Expense: ಭಾರತೀಯರ ಆರ್ಥಿಕ ಪರಿಸ್ಥಿತಿ ಹೇಗಿದೆ? ಈ ರಾಜ್ಯಗಳ ಜನರ ತಿಂಗಳ ಗಳಿಕೆ ದೈನಂದಿನ ಬದುಕಿಗೂ ಸಾಕಾಗುತ್ತಿಲ್ಲ!
Money9 Pulse Personal Finance Survey: ಮನಿ9 ನಡೆಸಿರುವ ದೇಶದ ಅತಿದೊಡ್ಡ ಪರ್ಸನಲ್ ಫೈನಾನ್ಸ್ ಸಮೀಕ್ಷೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದೆ. ಒಂದೆಡೆ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇನ್ನೊಂದೆಡೆ ವೆಚ್ಚಕ್ಕೆ ತಕ್ಕಷ್ಟು ಆದಾಯದ ಕೊರತೆ ಕುಟುಂಬಗಳಿಗೆ ಇದೆ. ಬಿಹಾರವು ದೇಶದ ಎಲ್ಲಾ ರಾಜ್ಯಗಳಲ್ಲಿ ಅತ್ಯಂತ ಬಡವಾಗಿದೆ. ಬಿಹಾರದ ಕುಟುಂಬಗಳ ಸರಾಸರಿ ಮಾಸಿಕ ಆದಾಯ ಕೇವಲ 17,567 ರೂ. ಇದೆ.
ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭಾರತದ ಆರ್ಥಿಕತೆ ಗಾತ್ರ 4 ಟ್ರಿಲಿಯನ್ ಡಾಲರ್ ತಲುಪಿದೆ. ಇನ್ನೊಂದು ಕಡೆ ಒಂದು ತಿಂಗಳ ಮಾಸಿಕ ವೆಚ್ಚವನ್ನು ಭರಿಸಲಾಗದಷ್ಟು ಕುಟುಂಬಗಳು ಇವೆ. Money9 ನಡೆಸಿರುವ ಪರ್ಸನಲ್ ಫೈನಾನ್ಸ್ ಸಮೀಕ್ಷೆ (Money9 Pulse Personal Finance Survey) ಪ್ರಕಾರ, ದೇಶದ ಶೇ. 7 ರಷ್ಟು ಕುಟುಂಬಗಳ ಮಾಸಿಕ ಗಳಿಕೆ ಅವರ ಮನೆಯ ವೆಚ್ಚ ಸಹ ಪೂರೈಸುವುದಿಲ್ಲ. ಆಗಸ್ಟ್‌ನಿಂದ ನವೆಂಬರ್‌ವರೆಗೆ ದೇಶದ 20 ರಾಜ್ಯಗಳ 115 ಜಿಲ್ಲೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು ಫಲಿತಾಂಶ ಆಘಾತಕಾರಿಯಾಗಿದೆ.
ಸಮೀಕ್ಷೆಯ ಪ್ರಕಾರ, ಬಿಹಾರವು ದೇಶದ ಎಲ್ಲಾ ರಾಜ್ಯಗಳಲ್ಲಿ ಅತ್ಯಂತ ಬಡವಾಗಿದೆ. ಬಿಹಾರದ ಕುಟುಂಬಗಳ ಸರಾಸರಿ ಮಾಸಿಕ ಆದಾಯ ಕೇವಲ 17,567 ರೂ. ಇದೆ. ಇನ್ನು 18,519 ರೂ. ಮಾಸಿಕ ಆದಾಯದೊಂದಿಗೆ ಬಡತನದಲ್ಲಿ ಒಡಿಶಾ ಎರಡನೇ ಸ್ಥಾನದಲ್ಲಿದ್ದರೆ 18,863 ರೂ. ಮಾಸಿಕ ಆದಾಯದೊಂದಿಗೆ ಜಾರ್ಖಂಡ್ ಮೂರನೇ ಸ್ಥಾನದಲ್ಲಿದೆ. ತಮ್ಮ ಮಾಸಿಕ ಖರ್ಚುಗಳನ್ನು ಪೂರೈಸಲು ಸಾಧ್ಯವಾಗದ ಹೆಚ್ಚಿನ ಕುಟುಂಬಗಳು ಈ ರಾಜ್ಯದಲ್ಲೇ ಇವೆ.
ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕುಟುಂಬಗಳ ಮಾಸಿಕ ಗಳಿಕೆಯ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯಾಗಿದೆ. ಕಳೆದ ವರ್ಷ, ಬಿಹಾರದ ಕುಟುಂಬಗಳ ಸರಾಸರಿ ಮಾಸಿಕ ಆದಾಯ ಕೇವಲ 14,366 ರೂ. ಇತ್ತು. ಜಾರ್ಖಂಡ್‌ನ ಕುಟುಂಬಗಳ ಸರಾಸರಿ ಮಾಸಿಕ ಆದಾಯ 15,804 ರೂ. ಇತ್ತು.
ಇದನ್ನೂ ಓದಿ: Money Spent: ನಮ್ಮ ಸಂಬಳವೆಲ್ಲ ಖರ್ಚಾಗೋದೇ ಇದಕ್ಕೆ! ತಿಂಗಳೆಲ್ಲ ದುಡಿಯುವ ದುಡ್ಡು ಎಲ್ಲಿ ಖರ್ಚಾಗುತ್ತದೆ?
Money9 ನ ಈ ಸಮೀಕ್ಷೆಯನ್ನು ನಗರ ಕೇಂದ್ರಗಳಲ್ಲಿ ನಡೆಸಿದೆ. ಕೊರೋನಾ ನಂತರ ಜನರು ನಗರಗಳಲ್ಲಿ ಕೆಲಸಕ್ಕೆ ಮರಳಿದ್ದಾರೆ, ಇದರಿಂದಾಗಿ ಕುಟುಂಬಗಳ ಸರಾಸರಿ ಮಾಸಿಕ ಗಳಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ.
ಕಳೆದ 5 ವರ್ಷಗಳಲ್ಲಿ ಶೇ. 30 ರಷ್ಟು ಭಾರತೀಯರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎನ್ನುವುದು ಸಹ ಸಮೀಕ್ಷೆಯಿಂದ ಗೊತ್ತಾಗಿದೆ. ಇನ್ನು ಶೇ. 54 ರಷ್ಟು ಭಾರತೀಯ ಕುಟುಂಬಗಳ ಆರ್ಥಿಕ ಸ್ಥಿತಿಯು 5 ವರ್ಷಗಳ ಹಿಂದೆ ಇದ್ದಂತೆಯೇ ಇದೆ. ಆದರೆ, ಕಳೆದ 5 ವರ್ಷಗಳಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಶೇ.16 ಕುಟುಂಬಗಳಿವೆ ಎನ್ನುವುದು ಗಮನಿಸಬೇಕಾದ ಸಂಗತಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ