Union Budget 2025: ಪ್ರಾದೇಶಿಕ ವಿಮಾನಯಾನ ಸಂಪರ್ಕವನ್ನು ಹೆಚ್ಚಿಸಲು ‘ಉಡಾನ್’ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್
ದೇಶಿಯ ವಿಮಾನಯಾನ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಗಳನ್ನು ತರುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ ಇದೀಗ ಪ್ರಾದೇಶಿಕ ಸಂಪರ್ಕಗಳನ್ನು ಹೆಚ್ಚಿಸುವ ಮತ್ತು 10 ವರ್ಷಗಳಲ್ಲಿ ಹೆಚ್ಚುವರಿ 4 ಕೋಟಿ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುವ ಗುರಿಯೊಂದಿಗೆ ಈ ಯೋಜನೆಯನ್ನು ನವೀಕರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಫೆಬ್ರವರಿ 1 ಶನಿವಾರದಂದು ಅಂದರೆ ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025 ನ್ನು ಮಂಡಿಸಿದ್ದು, ಈ ಬಜೆಟ್‌ನಲ್ಲಿ ಭಾರತದಾದ್ಯಂತ 120 ಹೊಸ ಸ್ಥಳಗಳಿಗೆ ಟರ್ಬೋಪ್ರೋಲ್ ವಿಮಾನ ಅಥವಾ ಹೆಲಿಕಾಪ್ಟರ್ ಸಂಪರ್ಕವನ್ನು ಒದಗಿಸುವ ಹಾಗೂ ಮುಂದಿನ ಹತ್ತು ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಗುರಿಯಲ್ಲಿ ಪ್ರಾದೇಶಿಕ ಸಂಪರ್ಕ ಯೋಜನೆಯನ್ನು (Enhanced Regional Connectivity Scheme) ಘೋಷಿಸಿದ್ದಾರೆ. ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯ ಈ ವಿಸ್ತರಣೆಯು ಭಾರತದ ವಾಯುಯಾನ ಜಾಲವನ್ನು ಸುಧಾರಿಸಲು, ನಾಗರಿಕರಿಗೆ ಉತ್ತಮ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಮತ್ತು ಪ್ರಾದೇಶಿಕ ವಿಮಾನಯಾನ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ.
ಉಡಾನ್ ಯೋಜನೆ:
ಸಾಮಾನ್ಯ ಜನರೂ ಕೂಡಾ ವಿಮಾನ ಪ್ರಯಾಣ ಮಾಡಲು ನೆರವಾಗಲೆಂದು, ಕೇಂದ್ರ ಸರ್ಕಾರ 2017 ರಲ್ಲಿ ಉಡಾನ್ ಯೋಜನೆಯನ್ನು ಪರಿಚಯಿಸಿತ್ತು. ಇದೀಗ ಈ ಯೋಜನೆಯನ್ನು ನವೀಕರಣ ಮಾಡಲಾಗಿದ್ದು, ಈ ಯೋಜನೆಯು 120 ಹೊಸ ಪ್ರಾದೇಶಿಕ ಸ್ಥಳಗಳನ್ನು ಸಂಪರ್ಕಿಸುವ ವಿಮಾನಯಾನ ಮತ್ತು ಮುಂದಿನ 10 ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯದ ಈ ಯೋಜನೆಯ ಒಟ್ಟು ಬಜೆಟ್ ವೆಚ್ಚವನ್ನು ಉಲ್ಲೇಖಿಸಲಿಲ್ಲ, ಆದರೆ ಹೊಸ ಉಡಾನ್ ಯೋಜನೆಯು ಮುಂದಿನ 10 ವರ್ಷಗಳಲ್ಲಿ 4 ಕೋಟಿ ಹೆಚ್ಚುವರಿ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಪ್ರಾದೇಶಿಕ ವಿಮಾನ ಸಂಪರ್ಕವನ್ನು ಹೆಚ್ಚಿಸುವ ಗುರಿ:
ಉಡಾನ್ ಯೋಜನೆಯಡಿ ಮುಂದಿನ 10 ವರ್ಷಗಳಲ್ಲಿ 120 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಈ ಯೋಜನೆಯು ಗುಡ್ಡಗಾಡು ಪ್ರದೇಶ ಸೇರಿದಂತೆ ಮಹತ್ವಾಕಾಂಕ್ಷೆಯ ಮತ್ತು ಈಶಾನ್ಯ ಪ್ರಾದೇಶಿಕ ಜಿಲ್ಲೆಗಳಲ್ಲಿನ ಹೆಲಿಪ್ಯಾಡ್‌ಗಳು ಮತ್ತು ಸಣ್ಣ ವಿಮಾನ ನಿಲ್ದಾಣಗಳ ಚಿತ್ರಣವನ್ನು ಸಹ ಬದಲಾಯಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲು ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ
ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ:
ಉಡಾನ್ ಯೋಜನೆಯ ವಿಸ್ತರಣೆಯ ಭಾಗವಾಗಿ ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು ಮತ್ತು ಇದು ಪ್ರಾದೇಶಿಕ ಸಂಪರ್ಕವನ್ನು ಮತ್ತಷ್ಟು ಬಲ ಪಡಿಸುವ ಗುರಿಯನ್ನು ಹೊಂದಿದೆ.
4 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಗುರಿ:
ಮೊದಲ ಉಡಾನ್ ಯೋಜನೆಯು 619 ಮಾರ್ಗಗಳೊಂದಿಗೆ 88 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ಮೂಲಕ 1.5 ಕೋಟಿ ಮಧ್ಯಮ ವರ್ಗದ ಜನರಿಗೆ ಪ್ರಯೋಜನವನ್ನು ನೀಡಿದೆ ಎಂದು ಸೀತಾರಾಮನ್ ಹೇಳಿದರು. ನವೀಕರಿಸಲಾದ ಈ ಉಡಾನ್ ಯೋಜನೆ ಮುಂದಿನ 10 ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುವ ನಿರೀಕ್ಷೆಯಿದೆ. ಮತ್ತು ಇದು ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ವಿಮಾನ ಪ್ರಯಾಣವನ್ನು ಉತ್ತೇಜಿಸುವ ಗುರಿ ಹೊಂದಿದೆ.
ಕೈಗೆಟಕುವ ಪ್ರಯಾಣ:
ಉಡಾನ್ ಯೋಜನೆಯು ಸಾಮಾನ್ಯ ಜನರಿಗೂ ವಿಮಾನ ಪ್ರಯಾಣವನ್ನು ಕೈಗೆಟಕುವಂತೆ ಮಾಡುವ ಗುರಿಯನ್ನು ಹೊಂದಿದೆ.
ಬಜೆಟ್ ಸಂಬಂಧಿತ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ