Tax Evasion: ತೆರಿಗೆ ಕಳ್ಳತನದಲ್ಲಿ ಎಚ್ಡಿಎಫ್ಸಿ ಲೈಫ್, ಬಜಾಜ್ ಅಲಾಯನ್ಸ್, ಆದಿತ್ಯ ಬಿರ್ಲಾ ಸನ್ ಲೈಫ್ ಸೇರಿ 15 ಕಂಪನಿಗಳು
15 Insurance Companies Face Heat: ನಕಲಿ ಜಿಎಸ್ಟಿ ನೊಂದಣಿ ಮತ್ತು ನಕಲಿ ಐಟಿಸಿ ಮೂಲಕ ತೆರಿಗೆ ವಂಚನೆ ಎಸಗಿದ ಹಲವಾರು ಕಂಪನಿಗಳನ್ನು ಜಿಎಸ್ಟಿಎನ್ ಪತ್ತೆ ಮಾಡಿದೆ. ಎಚ್ಡಿಎಫ್ಸಿ ಲೈಫ್ ಸೇರಿದಂತೆ 15 ವಿಮಾ ಸಂಸ್ಥೆಗಳಿಂದ 2,350 ಕೋಟಿ ರೂ ತೆರಿಗೆ ವಂಚನೆ ಆಗಿದೆಯಂತೆ.
ನವದೆಹಲಿ, ಜುಲೈ 20: ದೇಶದ 15 ಇನ್ಷೂರೆನ್ಸ್ ಕಂಪನಿಗಳಿಂದ (Insurance Company) ಎರಡು ಸಾವಿರಕ್ಕೂ ಹೆಚ್ಚು ಮೊತ್ತದ ತೆರಿಗೆ ವಂಚನೆ ಆಗಿರುವ ಸಂಗತಿಯನ್ನು ಜಿಎಸ್ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮನಿಕಂಟ್ರೋಲ್ನಲ್ಲಿ ಬಂದಿರುವ ವರದಿ ಪ್ರಕಾರ ಎಚ್ಡಿಎಫ್ಸಿ ಲೈಫ್ ಇನ್ಷೂರೆನ್ಸ್, ಬಜಾಜ್ ಅಲೈಯನ್ಸ್, ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಷೂರೆನ್ಸ್ ಇತ್ಯಾದಿ 15 ಕಂಪನಿಗಳು 2,350 ಕೋಟಿ ರೂನಷ್ಟು ಜಿಎಸ್ಟಿ ತೆರಿಗೆ ವಂಚನೆ (Tax Evasion) ಎಸಗಿವೆಯಂತೆ. ಇದರಲ್ಲಿ ಕೆಲ ಸರ್ಕಾರಿ ಬ್ಯಾಂಕುಗಳ ಇನ್ಷೂರೆನ್ಸ್ ಕಂಪನಿಗಳೂ ಕೂಡ ಸೇರಿವೆ. ಲೈಫ್ ಇನ್ಷೂರೆನ್ಸ್ ಮತ್ತು ಜನರಲ್ ಇನ್ಷೂರೆನ್ಸ್ ಎರಡೂ ರೀತಿಯ ಇನ್ಷೂರೆನ್ಸ್ ಕಂಪನಿಗಳು ಆರೋಪ ಎದುರಿಸುತ್ತಿವೆ. ಜಿಎಸ್ಟಿ ಸಂಸ್ಥೆ ಈ 15 ಕಂಪನಿಗಳಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸುತ್ತಿದೆ.
‘ಮ್ಯೂಚುವಲ್ ಫಂಡ್, ಬ್ಯಾಂಕ್ಗಳನ್ನೂ ಒಳಗೊಂಡಂತೆ 15 ಇನ್ಷೂರೆನ್ಸ್ ಕಂಪನಿಗಳ ಮೇಲಿನ ತನಿಖೆ ಪೂರ್ಣಗೊಂಡಿದೆ. ಈ ಸಂಸ್ಥೆಗಳಿಂದ ಒಟ್ಟು 2,350 ಕೋಟಿ ರೂ ತೆರಿಗೆ ವಂಚನೆ ಆಗಿರುವುದು ಕಂಡುಬಂದಿದೆ. 700 ಕೋಟಿ ರೂಗಳನ್ನು ಹಿಂಪಡೆಯಲಾಗಿದೆ. ಈ ಪಟ್ಟಿಯಲ್ಲಿ ಕೆಲ ಪಬ್ಲಿಕ್ ಸೆಕ್ಟರ್ ಇನ್ಷೂರೆನ್ಸ್ ಕಂಪನಿಗಳೂ ಸೇರಿವೆ. ಬಜಾಜ್ ಅಲೈಯನ್ಸ್, ಸನ್ ಲೈಫ್, ಎಚ್ಡಿಎಫ್ಸಿ ಲೈಫ್ ಇನ್ಸೂರೆನ್ಸ್, ಹೀಗೆ ಜನಪ್ರಿಯ ಇನ್ಷೂರೆನ್ಸ್ ಕಂಪನಿಗಳೂ ಇದರಲ್ಲಿವೆ’ ಎಂದು ಜಿಎಸ್ಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಮನಿಕಂಟ್ರೋಲ್ನಲ್ಲಿ ವರದಿಯಾಗಿದೆ.
ಇದನ್ನೂ ಓದಿ: Online Gaming: ಆನ್ಲೈನ್ ಗೇಮಿಂಗ್ಗೆ ಶೇ. 28ಜಿಎಸ್ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ
ನಕಲಿ ಜಿಎಸ್ಟಿ ನೊಂದಣಿಗಳ ವಿರುದ್ಧ ಕಾರ್ಯಾಚರಣೆ
ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ನಕಲಿ ಜಿಎಸ್ಟಿ ನೊಂದಣಿ, ನಕಲಿ ಬಿಲ್, ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇತ್ಯಾದಿ ಮೂಲಕ ತೆರಿಗೆ ವಂಚನೆ ನಡೆಯುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಇದೆ. ಇದರ ವಿರುದ್ಧ ಜಿಎಸ್ಟಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ತನಿಖೆ ನಡೆಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಕಾರ್ಯಾಚರಣೆಯನ್ನು ಅವಲೋಕಿಸಲು ಸಭೆ ನಡೆಸಿದ್ದರು. ನಕಲಿ ರಿಜಿಸ್ಟ್ರೇಶನ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿರುವ ಬಗ್ಗೆ ಅವರು ಸಭೆಯಲ್ಲಿ ಮಾಹಿತಿ ನೀಡಿದ್ದರು.
ಇದನ್ನೂ ಓದಿ: Cess: ಎಸ್ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್ಯುವಿ ಕಾರುಗಳು?
ನಕಲಿ ಜಿಎಸ್ಟಿ ನೊಂಣಿ ಹೊಂದಿರುವ ಸಾಧ್ಯತೆಯ ಸುಮಾರು 60,000 ಸಂಸ್ಥೆಗಳನ್ನು ಜಿಎಸ್ಟಿ ನೆಟ್ವರ್ಕ್ ಗುರುತಿಸಿದೆ. ಇಲ್ಲಿಯರೆಗೆ 43,000 ವೆರಿಫಿಕೇಶನ್ಗಳಾಗಿವೆ. ಜಿಎಸ್ಟಿ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆಯ ವೇಳೆ 11,140 ನಕಲಿ ಜಿಎಸ್ಟಿ ನೊಂದಣಿಗಳು ಪತ್ತೆಯಾಗಿವಂತೆ. ಜನರ ಗುರುತಿನ ದಾಖಲೆಗಳನ್ನು ಕದ್ದು ಫೇಕ್ ರಿಜಿಸ್ಟ್ರೇಶನ್ ಸೃಷ್ಟಿಸಿರುವ ಶಂಕೆ ಇದೆ. ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆಯನ್ನು ದುರುಪಯೋಗಿಸಿ 15,000 ರೂನಷ್ಟು ತೆರಿಗೆ ವಂಚನೆ ನಡೆಸಲಾಗಿರುವ ಮಾಹಿತಿಯನ್ನು ಕಳೆದ ತಿಂಗಳು ಜಿಎಸ್ಟಿ ಅಧಿಕಾರಿಗಳು ಹೊರಗೆಡವಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ