Nishad Singh: ಕ್ರಿಪ್ಟೋ ಪ್ರಪಂಚ ಅಲುಗಾಡಿಸಿದ ಎಫ್ಟಿಎಕ್ಸ್ ಹಗರಣ; ತಪ್ಪೊಪ್ಪಿಕೊಂಡ ನಿಶಾದ್ ಸಿಂಗ್; ಯಾರು ಈ ಭಾರತೀಯ?
FTX Fraud and Nishad Singh- ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ ಸಲ್ಲಿಸಿರುವ ದೂರಿನ ಪ್ರಕಾರ ನಿಶಾದ್ ಸಿಂಗ್ ಒಂದು ಸಾಫ್ಟ್ವೇರ್ ಕೋಡ್ ನಿರ್ಮಿಸಿ ಎಫ್ಟಿಎಕ್ಸ್ ಗ್ರಾಹಕರ ಹಣವನ್ನು ಅಲಮೆಡಾ ರೀಸರ್ಚ್ ಕಂಪನಿಗೆ ವರ್ಗಾವಣೆ ಆಗುವಂತೆ ಮಾಡಿದ್ದಾರೆ. ಇದೀಗ ನಿಶಾದ್ ಸಿಂಗ್ ಈ ಆರೋಪ ಒಪ್ಪಿಕೊಂಡಿದ್ದಾರೆ.
ನವದೆಹಲಿ: ಕೆಲ ತಿಂಗಳ ಹಿಂದೆ ಕ್ರಿಪ್ಟೋ ಮಾರುಕಟ್ಟೆ ತಲ್ಲಣಗೊಳ್ಳಲು ಕಾರಣವಾದ ಎಫ್ಟಿಎಕ್ಸ್ ಹಗರಣದಲ್ಲಿ (FTX scam) ತನ್ನ ವಿರುದ್ಧ ಕೇಳಿಬಂದ ಆರೋಪಗಳ ಬಗ್ಗೆ ಭಾರತೀಯ ಮೂಲದ ನಿಶಾದ್ ಸಿಂಗ್ (Nishad Singh) ಕೋರ್ಟ್ವೊಂದರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಕ್ರಿಪ್ಟೋ ವ್ಯವಹಾರದ ವಂಡರ್ ಕಿಡ್ ಎಂದೇ ಪರಿಗಣಿಸಲಾಗಿದ್ದ ಸ್ಯಾಮುಯೆಲ್ ಬ್ಯಾಂಕ್ಮ್ಯಾನ್ ಫ್ರೈಡ್ (Samuel Bankman-Fried) ಮತ್ತು ಗ್ಯಾರಿ ವ್ಯಾಂಗ್ ಜೊತೆ ಸೇರಿ ಕ್ರಿಪ್ಟೋ ಹೂಡಿಕೆದಾರರ ಹಣ ಲಪಟಾಯಿಸಿದ ಆರೋಪ 27 ವರ್ಷದ ನಿಶಾದ್ ಸಿಂಗ್ ಮೇಲಿದೆ. ಅಮೆರಿಕದ ಷೇರುಪೇಟೆ ಪ್ರಾಧಿಕಾರ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ಮೊನ್ನೆ ನಿಶಾದ್ ಸಿಂಗ್ ವಿರುದ್ಧ ಆರೋಪ ದಾಖಲಿಸಿತ್ತು. ನ್ಯೂಯಾರ್ಕ್ನ ಸದರ್ನ್ ಡಿಸ್ಟ್ರಿಕ್ನ ಅಟಾರ್ನಿ ಕಚೇರಿಯಿಂದಲೂ ಆರೋಪ ದಾಖಲಾಗಿದೆ. ಈ ಸಂಬಂಧ, ತನ್ನ ವಿರುದ್ಧದ ಆರೋಪಗಳು ನಿಜ ಎಂದು ನಿಶಾದ್ ಸಿಂಗ್ ತಪ್ಪೊಪ್ಪಿಕೊಂಡಿದ್ದು, ಕೋರ್ಟ್ನಲ್ಲಿ ಅವರಿಗೆ ಯಾವ ಶಿಕ್ಷೆ ಕಾದಿದೆ ಎಂಬುದು ಮುಂದಿನ ವಿಚಾರಣೆಗಳ ನಂತರ ತಿಳಿಯಲಿದೆ.
27 ವರ್ಷದ ನಿಶಾದ್ ಸಿಂಗ್ ಭಾರತೀಯ ಮೂಲದವರಾಗಿದ್ದು, ಎಫ್ಟಿಎಕ್ಸ್ನಲ್ಲಿ ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ಎಫ್ಟಿಎಕ್ಸ್ ಎಂಬುದು ಕ್ರಿಪ್ಟೋಕರೆನ್ಸಿ ಲೋಕದ ಟ್ರೇಡಿಂಗ್ ಪ್ಲಾಟ್ಫಾರ್ಮ್ ಆಗಿದೆ. ಅಂದರೆ ಕ್ರಿಪ್ಟೋ ವಹಿವಾಟು ನಡೆಯುವ ಸ್ಥಳ ಅದು. ಎಫ್ಟಿಎಕ್ಸ್ ಮೂಲಕ ವಿವಿಧ ಕ್ರಿಪ್ಟೋಗಳಲ್ಲಿ ಹೂಡಿಕೆ ಮಾಡಿದ್ದ ಜನರ ಹಣವನ್ನು ಅಕ್ರಮವಾಗಿ ಬೇರೆಡೆ ಸಾಗಿಸುವ ಕೆಲಸವನ್ನು ನಿಶಾದ್ ಸಿಂಗ್ ಮಾಡಿದ್ದರೆನ್ನಲಾಗಿದೆ.
ಸಾಫ್ಟ್ವೇರ್ ಕೋಡ್ ಬಳಸಿ ವಂಚನೆ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ ಸಲ್ಲಿಸಿರುವ ದೂರಿನ ಪ್ರಕಾರ ನಿಶಾದ್ ಸಿಂಗ್ ಒಂದು ಸಾಫ್ಟ್ವೇರ್ ಕೋಡ್ ನಿರ್ಮಿಸಿ ಎಫ್ಟಿಎಕ್ಸ್ ಗ್ರಾಹಕರ ಹಣವನ್ನು ಅಲಮೆಡಾ ರೀಸರ್ಚ್ ಕಂಪನಿಗೆ ವರ್ಗಾವಣೆ ಆಗುವಂತೆ ಮಾಡಿದ್ದಾರೆ. ಎಫ್ಟಿಎಕ್ಸ್ನ ಸಂಸ್ಥಾಪಕ ಸ್ಯಾಮುಯೆಲ್ ಬ್ಯಾಂಕ್ಮ್ಯಾನ್ ಫ್ರೈಡ್ ಮತ್ತು ಗ್ಯಾರಿ ವ್ಯಾಂಗ್ ಅವರು ಈ ಅಲಾಮೆಡಾ ರಿಸರ್ಚ್ ಕಂಪನಿಯ ಮಾಲೀಕರು. ಸ್ಯಾಮುಯೆಲ್ ಮತ್ತು ನಿಶಾದ್ ಸಿಂಗ್ ಇಬ್ಬರೂ ಚಿಕ್ಕಂದಿನಿಂದಲೂ ಸ್ನೇಹಿತರಾಗಿದ್ದವರು. ತಾಂತ್ರಿಕ ವಿಭಾಗದಲ್ಲಿ ಪರಿಣಿತರಾಗಿದ್ದ ನಿಶಾದ್ ಸಿಂಗ್, ಕ್ರಿಪ್ಟೋ ಹೂಡಿಕೆದಾರರ ಹಣ ಲಪಟಾಯಿಸಲು ಸ್ಯಾಮುಯೆಲ್ ಬ್ಯಾಂಕ್ಮ್ಯಾನ್ ಫ್ರೈಡ್ಗೆ ಸಹಾಯ ಮಾಡಿದ್ದರು.
ಇದನ್ನೂ ಓದಿ: Adani Shares: ತಿರುಗಿ ನಿಂತ ಅದಾನಿ ಷೇರುಗಳು; ಮಾರದೇ ಬಿಟ್ಟವರಿಗೆ ಹೊಡೆಯುತ್ತಾ ಜಾಕ್ಪಾಟ್?
ಎಫ್ಟಿಎಕ್ಸ್ನಲ್ಲಿ ಹಗರಣ ನಡೆದಿದೆ ಎನ್ನುವ ವಾಸನೆ ಬರುತ್ತಲೇ ಈ ಪ್ಲಾಟ್ಫಾರ್ಮ್ನಿಂದ ಜನರು ತಮ್ಮ ಹೂಡಿಕೆ ವಾಪಸ್ ಪಡೆಯಲು ಪ್ರಯತ್ನಿಸುತ್ತಿರುವಂತೆಯೇ ನಿಶಾದ್ ಸಿಂಗ್ ಸುಮಾರು 6 ಮಿಲಿಯನ್ ಡಾಲರ್ (50 ಕೋಟಿ ರೂಪಾಯಿ) ಮೌಲ್ಯದ ಹಣವನ್ನು ಹಿಂಪಡೆದು ಮನೆ ಖರೀದಿ ಇತ್ಯಾದಿ ವೈಯಕ್ತಿಕ ವೆಚ್ಚಕ್ಕೆ ಬಳಸಿರುವುದು ತಿಳಿದುಬಂದಿದೆ.
ನಿಶಾದ್ ಸಿಂಗ್ ಭಾರತೀಯ ಮೂಲದವರಾದರೂ ಹುಟ್ಟಿ ಬೆಳೆದಿದ್ದೆಲ್ಲಾ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ. ಅಲಾಮೆಡಾ ರೀಸರ್ಜ್ ಕಂಪನಿಯ ಎಂಜಿನಿಯರಿಂಗ್ ಪ್ರಾಜೆಕ್ಟ್ಗಳಲ್ಲಿ ಭಾಗಿಯಾಗಿದ್ದ ಅವರು ಸ್ಯಾಮುಯೆಲ್ ಬ್ಯಾಂಕ್ಮ್ಯಾನ್ ಫ್ರೈಡ್ ಮತ್ತು ವ್ಯಾಗ್ ಜೊತೆ ಸೇರಿ ಎಫ್ಟಿಎಕ್ಸ್ ಟ್ರೇಡಿಂಗ್ ಪ್ಲಾಟ್ಫಾರ್ಮ್ ರೂಪಿಸಲು ನೆರವಾಗಿದ್ದರೆನ್ನಲಾಗಿದೆ.