Nishad Singh: ಕ್ರಿಪ್ಟೋ ಪ್ರಪಂಚ ಅಲುಗಾಡಿಸಿದ ಎಫ್​ಟಿಎಕ್ಸ್ ಹಗರಣ; ತಪ್ಪೊಪ್ಪಿಕೊಂಡ ನಿಶಾದ್ ಸಿಂಗ್; ಯಾರು ಈ ಭಾರತೀಯ?

|

Updated on: Mar 02, 2023 | 12:37 PM

FTX Fraud and Nishad Singh- ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಕಮಿಷನ್ ಸಲ್ಲಿಸಿರುವ ದೂರಿನ ಪ್ರಕಾರ ನಿಶಾದ್ ಸಿಂಗ್ ಒಂದು ಸಾಫ್ಟ್​ವೇರ್ ಕೋಡ್ ನಿರ್ಮಿಸಿ ಎಫ್​ಟಿಎಕ್ಸ್ ಗ್ರಾಹಕರ ಹಣವನ್ನು ಅಲಮೆಡಾ ರೀಸರ್ಚ್ ಕಂಪನಿಗೆ ವರ್ಗಾವಣೆ ಆಗುವಂತೆ ಮಾಡಿದ್ದಾರೆ. ಇದೀಗ ನಿಶಾದ್ ಸಿಂಗ್ ಈ ಆರೋಪ ಒಪ್ಪಿಕೊಂಡಿದ್ದಾರೆ.

Nishad Singh: ಕ್ರಿಪ್ಟೋ ಪ್ರಪಂಚ ಅಲುಗಾಡಿಸಿದ ಎಫ್​ಟಿಎಕ್ಸ್ ಹಗರಣ; ತಪ್ಪೊಪ್ಪಿಕೊಂಡ ನಿಶಾದ್ ಸಿಂಗ್; ಯಾರು ಈ ಭಾರತೀಯ?
ನಿಶಾದ್ ಸಿಂಗ್
Follow us on

ನವದೆಹಲಿ: ಕೆಲ ತಿಂಗಳ ಹಿಂದೆ ಕ್ರಿಪ್ಟೋ ಮಾರುಕಟ್ಟೆ ತಲ್ಲಣಗೊಳ್ಳಲು ಕಾರಣವಾದ ಎಫ್​ಟಿಎಕ್ಸ್ ಹಗರಣದಲ್ಲಿ (FTX scam) ತನ್ನ ವಿರುದ್ಧ ಕೇಳಿಬಂದ ಆರೋಪಗಳ ಬಗ್ಗೆ ಭಾರತೀಯ ಮೂಲದ ನಿಶಾದ್ ಸಿಂಗ್ (Nishad Singh) ಕೋರ್ಟ್​ವೊಂದರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಕ್ರಿಪ್ಟೋ ವ್ಯವಹಾರದ ವಂಡರ್ ಕಿಡ್ ಎಂದೇ ಪರಿಗಣಿಸಲಾಗಿದ್ದ ಸ್ಯಾಮುಯೆಲ್ ಬ್ಯಾಂಕ್​ಮ್ಯಾನ್ ಫ್ರೈಡ್ (Samuel Bankman-Fried) ಮತ್ತು ಗ್ಯಾರಿ ವ್ಯಾಂಗ್ ಜೊತೆ ಸೇರಿ ಕ್ರಿಪ್ಟೋ ಹೂಡಿಕೆದಾರರ ಹಣ ಲಪಟಾಯಿಸಿದ ಆರೋಪ 27 ವರ್ಷದ ನಿಶಾದ್ ಸಿಂಗ್ ಮೇಲಿದೆ. ಅಮೆರಿಕದ ಷೇರುಪೇಟೆ ಪ್ರಾಧಿಕಾರ ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಕಮಿಷನ್ (SEC) ಮೊನ್ನೆ ನಿಶಾದ್ ಸಿಂಗ್ ವಿರುದ್ಧ ಆರೋಪ ದಾಖಲಿಸಿತ್ತು. ನ್ಯೂಯಾರ್ಕ್​ನ ಸದರ್ನ್ ಡಿಸ್ಟ್ರಿಕ್​ನ ಅಟಾರ್ನಿ ಕಚೇರಿಯಿಂದಲೂ ಆರೋಪ ದಾಖಲಾಗಿದೆ. ಈ ಸಂಬಂಧ, ತನ್ನ ವಿರುದ್ಧದ ಆರೋಪಗಳು ನಿಜ ಎಂದು ನಿಶಾದ್ ಸಿಂಗ್ ತಪ್ಪೊಪ್ಪಿಕೊಂಡಿದ್ದು, ಕೋರ್ಟ್​ನಲ್ಲಿ ಅವರಿಗೆ ಯಾವ ಶಿಕ್ಷೆ ಕಾದಿದೆ ಎಂಬುದು ಮುಂದಿನ ವಿಚಾರಣೆಗಳ ನಂತರ ತಿಳಿಯಲಿದೆ.

27 ವರ್ಷದ ನಿಶಾದ್ ಸಿಂಗ್ ಭಾರತೀಯ ಮೂಲದವರಾಗಿದ್ದು, ಎಫ್​ಟಿಎಕ್ಸ್​ನಲ್ಲಿ ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ಎಫ್​ಟಿಎಕ್ಸ್ ಎಂಬುದು ಕ್ರಿಪ್ಟೋಕರೆನ್ಸಿ ಲೋಕದ ಟ್ರೇಡಿಂಗ್ ಪ್ಲಾಟ್​ಫಾರ್ಮ್ ಆಗಿದೆ. ಅಂದರೆ ಕ್ರಿಪ್ಟೋ ವಹಿವಾಟು ನಡೆಯುವ ಸ್ಥಳ ಅದು. ಎಫ್​ಟಿಎಕ್ಸ್ ಮೂಲಕ ವಿವಿಧ ಕ್ರಿಪ್ಟೋಗಳಲ್ಲಿ ಹೂಡಿಕೆ ಮಾಡಿದ್ದ ಜನರ ಹಣವನ್ನು ಅಕ್ರಮವಾಗಿ ಬೇರೆಡೆ ಸಾಗಿಸುವ ಕೆಲಸವನ್ನು ನಿಶಾದ್ ಸಿಂಗ್ ಮಾಡಿದ್ದರೆನ್ನಲಾಗಿದೆ.

ನಿಶಾದ್ ಸಿಂಗ್

ಸಾಫ್ಟ್​ವೇರ್ ಕೋಡ್ ಬಳಸಿ ವಂಚನೆ
ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಕಮಿಷನ್ ಸಲ್ಲಿಸಿರುವ ದೂರಿನ ಪ್ರಕಾರ ನಿಶಾದ್ ಸಿಂಗ್ ಒಂದು ಸಾಫ್ಟ್​ವೇರ್ ಕೋಡ್ ನಿರ್ಮಿಸಿ ಎಫ್​ಟಿಎಕ್ಸ್ ಗ್ರಾಹಕರ ಹಣವನ್ನು ಅಲಮೆಡಾ ರೀಸರ್ಚ್ ಕಂಪನಿಗೆ ವರ್ಗಾವಣೆ ಆಗುವಂತೆ ಮಾಡಿದ್ದಾರೆ. ಎಫ್​ಟಿಎಕ್ಸ್​ನ ಸಂಸ್ಥಾಪಕ ಸ್ಯಾಮುಯೆಲ್ ಬ್ಯಾಂಕ್​ಮ್ಯಾನ್ ಫ್ರೈಡ್ ಮತ್ತು ಗ್ಯಾರಿ ವ್ಯಾಂಗ್ ಅವರು ಈ ಅಲಾಮೆಡಾ ರಿಸರ್ಚ್ ಕಂಪನಿಯ ಮಾಲೀಕರು. ಸ್ಯಾಮುಯೆಲ್ ಮತ್ತು ನಿಶಾದ್ ಸಿಂಗ್ ಇಬ್ಬರೂ ಚಿಕ್ಕಂದಿನಿಂದಲೂ ಸ್ನೇಹಿತರಾಗಿದ್ದವರು. ತಾಂತ್ರಿಕ ವಿಭಾಗದಲ್ಲಿ ಪರಿಣಿತರಾಗಿದ್ದ ನಿಶಾದ್ ಸಿಂಗ್, ಕ್ರಿಪ್ಟೋ ಹೂಡಿಕೆದಾರರ ಹಣ ಲಪಟಾಯಿಸಲು ಸ್ಯಾಮುಯೆಲ್ ಬ್ಯಾಂಕ್​ಮ್ಯಾನ್ ಫ್ರೈಡ್​ಗೆ ಸಹಾಯ ಮಾಡಿದ್ದರು.

ಇದನ್ನೂ ಓದಿ: Adani Shares: ತಿರುಗಿ ನಿಂತ ಅದಾನಿ ಷೇರುಗಳು; ಮಾರದೇ ಬಿಟ್ಟವರಿಗೆ ಹೊಡೆಯುತ್ತಾ ಜಾಕ್​ಪಾಟ್?

ಎಫ್​ಟಿಎಕ್ಸ್​ನಲ್ಲಿ ಹಗರಣ ನಡೆದಿದೆ ಎನ್ನುವ ವಾಸನೆ ಬರುತ್ತಲೇ ಈ ಪ್ಲಾಟ್​ಫಾರ್ಮ್​ನಿಂದ ಜನರು ತಮ್ಮ ಹೂಡಿಕೆ ವಾಪಸ್ ಪಡೆಯಲು ಪ್ರಯತ್ನಿಸುತ್ತಿರುವಂತೆಯೇ ನಿಶಾದ್ ಸಿಂಗ್ ಸುಮಾರು 6 ಮಿಲಿಯನ್ ಡಾಲರ್ (50 ಕೋಟಿ ರೂಪಾಯಿ) ಮೌಲ್ಯದ ಹಣವನ್ನು ಹಿಂಪಡೆದು ಮನೆ ಖರೀದಿ ಇತ್ಯಾದಿ ವೈಯಕ್ತಿಕ ವೆಚ್ಚಕ್ಕೆ ಬಳಸಿರುವುದು ತಿಳಿದುಬಂದಿದೆ.

ನಿಶಾದ್ ಸಿಂಗ್ ಭಾರತೀಯ ಮೂಲದವರಾದರೂ ಹುಟ್ಟಿ ಬೆಳೆದಿದ್ದೆಲ್ಲಾ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ. ಅಲಾಮೆಡಾ ರೀಸರ್ಜ್ ಕಂಪನಿಯ ಎಂಜಿನಿಯರಿಂಗ್ ಪ್ರಾಜೆಕ್ಟ್​ಗಳಲ್ಲಿ ಭಾಗಿಯಾಗಿದ್ದ ಅವರು ಸ್ಯಾಮುಯೆಲ್ ಬ್ಯಾಂಕ್​ಮ್ಯಾನ್ ಫ್ರೈಡ್ ಮತ್ತು ವ್ಯಾಗ್ ಜೊತೆ ಸೇರಿ ಎಫ್​ಟಿಎಕ್ಸ್ ಟ್ರೇಡಿಂಗ್ ಪ್ಲಾಟ್​ಫಾರ್ಮ್ ರೂಪಿಸಲು ನೆರವಾಗಿದ್ದರೆನ್ನಲಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ