ಜುಲೈ 1, 2022ರಿಂದ ಹೊಸ ಕಾರ್ಮಿಕ ಕಾನೂನು ಜಾರಿಗೆ ತರುವುದಕ್ಕೆ ಕೇಂದ್ರ ಸರ್ಕಾರ ಯೋಜನೆ ಮಾಡಿದೆ. ಉದ್ಯೋಗಿಯ ಇಪಿಎಫ್ (EPF) ಕೊಡುಗೆ, ಕಚೇರಿಯ ಕೆಲಸದ ಅವಧಿ, ಟೇಕ್ ಹೋಮ್ ಸ್ಯಾಲರಿ ಇವುಗಳಲ್ಲಿ ಭಾರೀ ಬದಲಾವಣೆ ಆಗಲಿದೆ. ಹೊಸದಾಗಿ ನಾಲ್ಕು ಕಾರ್ಮಿಕ ಸಂಹಿತೆ ರೂಪಿಸುವತ್ತ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಇದರ ಅಡಿಯಲ್ಲಿ ಉದ್ಯೋಗಿಯ ವೇತನ, ಪಿಎಫ್ ಕೊಡುಗೆ, ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಈ ನಿಯಮಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಜಾರಿಗೆ ತರುವುದಕ್ಕೆ ಸರ್ಕಾರ ಬಯಸಿದೆ. ಮಾಧ್ಯಮಗಳ ವರದಿ ಹೇಳುವಂತೆ ಜುಲೈ 1ರಿಂದಲೇ ಈ ಬದಲಾವಣೆಗಳು ಜಾರಿಗೆ ಬರಲಿವೆ. ಆದರೆ ಅಧಿಕೃತವಾಗಿ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.
ಏನೇನು ಬದಲಾವಣೆ ಆಗಲಿವೆ?
ಈ ಹಿಂದೆಯೇ ಹೇಳಿದಂತೆ, ಒಂದು ಸಲ ಈ ಕಾರ್ಮಿಕ ಕಾನೂನುಗಳು ಜಾರಿಗೆ ಬಂದ ಮೇಲೆ ಉದ್ಯೋಗಿಯ ಕೆಲಸ ಮಾಡುವ ಅವಧಿ, ಇಪಿಎಫ್ ಕೊಡುಗೆ ಮತ್ತು ಕೈಗೆ ಬರುವ ವೇತನದಲ್ಲಿ ಮಹತ್ತರವಾದ ಬದಲಾವಣೆ ಆಗಿದೆ. ಹೊಸ ಕಾನೂನು ಬಂದ ನಂತರ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ರಜಾ ದೊರೆಯುತ್ತದೆ. ಆದರೆ ಇದು ಹಾಗೇ ಅನ್ವಯ ಆಗಿಬಿಡುವುದಿಲ್ಲ. ಉದ್ಯೋಗಿಯ ಕೆಲಸ ನಿರ್ವಹಿಸುವ ಅವಧಿ ಕಡಿಮೆ ಆಗಲ್ಲ. ಬದಲಿಗೆ ದಿನಕ್ಕೆ 10ರಿಂದ 12 ಗಂಟೆ ನಾಲ್ಕು ದಿನ ಕೆಲಸ ಮಾಡಬೇಕಾಗುತ್ತದೆ. ಆಗ ಬಾಕಿ ಮೂರು ದಿನ ರಜಾ ದೊರೆಯುತ್ತದೆ. ಇಷ್ಟು ಮಾತ್ರ ಅಲ್ಲ, ಗರಿಷ್ಠ ಓವರ್ಟೈಮ್ 50 ಗಂಟೆಯಿಂದ (ಕೈಗಾರಿಕೆ ಕಾಯ್ದೆ ಅಡಿಯಲ್ಲಿ) 125 ಗಂಟೆಗೆ ಹೆಚ್ಚಿಸಲಾಗುತ್ತದೆ. ಇದು ತ್ರೈಮಾಸಿಕಕ್ಕೆ ಎಲ್ಲ ವಲಯಕ್ಕೂ ಅನ್ವಯ ಆಗುತ್ತದೆ.
ಮತ್ತೊಂದು ಅಂಶ ಅಂದರೆ, ಟೇಕ್ ಹೋಮ್ ಸ್ಯಾಲರಿಯ ಅನುಪಾತದಲ್ಲಿ ಬದಲಾವಣೆ ಆಗಲಿದೆ. ಜತೆಗೆ ಉದ್ಯೋಗಿ ಮತ್ತು ಉದ್ಯೋಗದಾತರ ಪಿಎಫ್ ಕೊಡುಗೆಯಲ್ಲೂ ಹೆಚ್ಚಳ ಆಗಲಿದೆ. ಹೊಸ ನಿಯಮಾವಳಿಯಂತೆ, ಗ್ರಾಸ್ ಸ್ಯಾಲರಿಯ ಶೇ 50ರಷ್ಟು ಮೂಲವೇತನ ಇರಬೇಕು. ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ಟೇಕ್ ಹೋಮ್ ಸ್ಯಾಲರಿ ಕಡಿಮೆ ಆಗಲಿದೆ. ನಿವೃತ್ತಿ ನಂತರ ಪಡೆಯುವ ಹಣ, ಗ್ರಾಚ್ಯುಟಿ ಕೂಡ ಹೊಸದಾಗಿ ರೂಪಿಸಲಾದ ನಿಯಮದ ಅನ್ವಯ ಜಾಸ್ತಿ ಆಗಲಿದೆ. ನಿವೃತ್ತಿ ನಂತರದಲ್ಲಿ ಉತ್ತಮವಾಗಿ ಬದುಕು ಮಡೆಸುವುದಕ್ಕೆ ಇದರಿಂದ ಅನುಕೂಲ ಆಗಲಿ ಎಂಬುದು ಉದ್ದೇಶ.
ಇನ್ನು ಉದ್ಯೋಗಿಗಳ ರಜಾ ವಿಚಾರದಲ್ಲೂ ಬದಲಾವಣೆ ಆಗಲಿದೆ. ಹಿಂದಿನ ವರ್ಷದ ರಜಾ ದಿನಗಳನ್ನು ಮುಂದಿನ ವರ್ಷಕ್ಕೆ ಮುಂದುವರಿಸಬಹುದು. ಸೇವಾ ವಲಯದಲ್ಲಿ ವರ್ಕ್ ಫ್ರಮ್ ಹೋಮ್ ರಚನೆಯನ್ನು ಗುರುತಿಸಲು ಯೋಜಿಸಲಾಗಿದೆ. ಕೇಂದ್ರ ಸರ್ಕಾರದಿಂದ ಮುಖ್ಯವಾಗಿ ನಾಲ್ಕು ಕಾರ್ಮಿಕ ಕಾನೂನು- ವೇತನ ಸಂಹಿತೆ, 2019 ಮತ್ತು ಕೈಗಾರಿಕೆ ವ್ಯವಹಾರ ಕಾಯ್ದೆ, 2020, ಸಾಮಾಜಿಕ ಭದ್ರತೆ ಸಂಹಿತೆ 2020 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ನಿರ್ವಹಣೆ ಸ್ಥಿತಿ ಸಂಹಿತೆ 2020 ಅಧಿಸೂಚನೆ ಹೊರಡಿಸಲಾಗಿದೆ. ಈ ವರೆಗೆ 23 ರಾಜ್ಯಗಳು ಸಂಸತ್ನಲ್ಲಿ ಅನುಮೋದಿಸಿದ ಈ ಸಂಹಿತೆ ಅಡಿಯಲ್ಲಿ ನಿಯಮಾವಳಿ ರೂಪಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: EPF Non Refundable Advance: ಮರುಪಾವತಿಸುವ ಅಗತ್ಯ ಇಲ್ಲದ ಇಪಿಎಫ್ ಮುಂಗಡ ಪಡೆಯುವುದು ಹೇಗೆ?
Published On - 8:37 pm, Fri, 10 June 22