GST Council Meeting: ಹಲವು ವಸ್ತುಗಳ ಜಿಎಸ್​ಟಿ ಭಾರ ಇಳಿಸಿದ ನಿರ್ಮಲಾ ಸೀತಾರಾಮನ್; ಇಲ್ಲಿದೆ ವಿವರ

ಆನ್​ಲೈನ್ ಗೇಮಿಂಗ್, ಕುದುರೆ ರೇಸ್ ಹಾಗೂ ಕ್ಯಾಸಿನೋಗಳ ಮೇಲಿನ ತೆರಿಗೆಯ ಸ್ಲ್ಯಾಬ್ ಅನ್ನು ಶೇ 28ಕ್ಕೆ ಹೆಚ್ಚಿಸಲಾಗಿದೆ. ಕ್ಯಾನ್ಸರ್ ಔಷಧಕ್ಕೆ ಜಿಎಸ್​ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

GST Council Meeting: ಹಲವು ವಸ್ತುಗಳ ಜಿಎಸ್​ಟಿ ಭಾರ ಇಳಿಸಿದ ನಿರ್ಮಲಾ ಸೀತಾರಾಮನ್; ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ

Updated on: Jul 11, 2023 | 9:09 PM

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 50ನೇ ಸಭೆಯಲ್ಲಿ (GST Council Meeting) ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಹಲವು ವಸ್ತುಗಳ ತೆರಿಗೆಯಲ್ಲಿ ಭಾರಿ ಇಳಿಕೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ಬೇಯಿಸದ / ಕರಿಯದ ಸ್ನ್ಯಾಕ್ಸ್​ ಪೊಟ್ಟಣದ (Uncooked/Unfried Extruded Snack Pallets) ಮೇಲಿನ ತೆರಿಗೆಯ ಸ್ಲ್ಯಾಬ್​ ಅನ್ನು ಶೇ 18ರಿಂದ ಶೇ 5ಕ್ಕೆ ಇಳಿಕೆ ಮಾಡಲಾಗಿದೆ. ಕ್ಯಾನ್ಸರ್ ಔಷಧಕ್ಕೆ (Cancer Drug) ಜಿಎಸ್​​ಟಿಯಿಂದ ಸಂಪೂರ್ಣ ವಿನಾಯಿತಿ ಘೋಷಿಸಲಾಗಿದೆ.

ಅದೇ ರೀತಿ, ಮೀನಿನ ಎಣ್ಣೆಯಿಂದ ತಯಾರಿಸಿದ ಪೇಸ್ಟ್, ಕೃತಕ ಆಭರಣ ತಯಾರಿಯಲ್ಲಿ ಬಳಸುವ ಜರಿ ದಾರದ ಮೇಲಿನ ಜಿಎಸ್​​ಟಿ ಸ್ಲ್ಯಾಬ್​ ಅನ್ನೂ ಶೇ 18ರಿಂದ ಶೇ 5ಕ್ಕೆ ಇಳಿಕೆ ಮಾಡಲಾಗಿದೆ. ಆದರೆ ಆನ್​ಲೈನ್ ಗೇಮಿಂಗ್, ಕುದುರೆ ರೇಸ್ ಹಾಗೂ ಕ್ಯಾಸಿನೋಗಳ ಮೇಲಿನ ತೆರಿಗೆಯ ಸ್ಲ್ಯಾಬ್ ಅನ್ನು ಶೇ 28ಕ್ಕೆ ಹೆಚ್ಚಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಖಾಸಗಿ ಸಂಸ್ಥೆಗಳ ಉಪಗ್ರಹ ಉಡಾವಣೆಗೂ ಜಿಎಸ್​ಟಿ ವಿನಾಯಿತಿ

ಖಾಸಗಿ ಸಂಸ್ಥೆಗಳ ಉಪಗ್ರಹ ಉಡಾವಣಾ ಸೇವೆಗಳಿಗೂ ಜಿಎಸ್​ಟಿ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವೆ ಮಾಹಿತಿ ನೀಡಿದರು. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿನ ಚಟುವಟಿಕೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಸಿನಿಮಾ ಥಿಯೇಟರ್​​ಗಳಲ್ಲಿಆಹಾರ, ಪಾನೀಯಗಳ ಮೇಲೆ ಶೇ 5 ಜಿಎಸ್​ಟಿ

ಸಿನಿಮಾ ಥಿಯೇಟರ್​​ಗಳಲ್ಲಿ ಮಾರಾಟ ಮಾಡಲಾಗುವ ಆಹಾರ, ಪಾನೀಯಗಳ ಮೇಲೆ ಶೇ 18ರ ಜಿಎಸ್​ಟಿ ವಿಧಿಸುಗುತ್ತಿಲ್ಲ. ಶೇ 5ರಷ್ಟು ಮಾತ್ರವೇ ಜಿಎಸ್​ಟಿ ವಿಧಿಸಲಾಗುತ್ತಿದೆ ಎಂದು ಆದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಸ್ಪಷ್ಟನೆ ನೀಡಿದರು. ಜಿಎಸ್​ಟಿ ಮಂಡಳಿ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾಯ್ದೆಗೂ (PMLA) ಜಿಎಸ್​ಟಿ ನಿಯಮಕ್ಕೂ ಸಂಬಂಧವಿಲ್ಲ. ಜಿಎಸ್​​ಟಿಎನ್​ ಮಾಹಿತಿಯನ್ನು ಪಿಎಂಎಲ್​ಎ ಅಡಿ ತರುವ ಅಧಿಸೂಚನೆ ತನಿಖಾ ಸಂಸ್ಥೆಗಳನ್ನು ಬಲಪಡಿಸುವ ಕ್ರಮವಷ್ಟೇ. ತನಿಖಾ ಸಂಸ್ಥೆಗಳಿಗೆ ತೆರಿಗೆ ವಂಚನೆಯ ಮಾಹಿತಿ ಈ ಹಿಂದೆ ದೊರೆಯುತ್ತಿರಲಿಲ್ಲ ಎಂದು ತಿಳಿಸಿದರು.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:35 pm, Tue, 11 July 23

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us