ನವದೆಹಲಿ, ನವೆಂಬರ್ 21: ಡಿಜಿಟಲ್ ಆರ್ಥಿಕತೆಯಲ್ಲಿ ಸೋರಿಕೆಗಳು ಕಡಿಮೆ. ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಹೆಚ್ಚಾದಂತೆ ಆಡಳಿತ ಮತ್ತು ಹಣಕಾಸು ವ್ಯವಸ್ಥೆಯ ನಿರ್ವಹಣೆ ಹೆಚ್ಚು ಸಮರ್ಪಕವಾಗಿ ಆಗುತ್ತಿದೆ. ಡಿಬಿಟಿ ಮೂಲಕ ನೇರ ಹಣ ವರ್ಗಾವಣೆ ವಿಧಾನ ಇದಕ್ಕೆ ಉದಾಹರಣೆ. ಹಾಗೆಯೇ, ಪಡಿತರ ವಿತರಣೆ ವ್ಯವಸ್ಥೆಯಲ್ಲೂ ಡಿಜಿಟಲೀಕರಣವು ಗಮನಾರ್ಹ ಪರಿವರ್ತನೆ ತಂದಿದೆ. ಕೇಂದ್ರ ಆಹಾರ ಸಚಿವಾಲಯ ನಿನ್ನೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 58 ಲಕ್ಷ ನಕಲಿ ರೇಷನ್ ಕಾರ್ಡ್ಗಳು ಪತ್ತೆಯಾಗಿವೆಯಂತೆ.
ದೇಶಾದ್ಯಂತ 20 ಕೋಟಿಗೂ ಅಧಿಕ ರೇಶನ್ ಕಾರ್ಡ್ಗಳು, 80 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಪಡಿತರ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಎಲ್ಲಾ ರೇಶನ್ ಕಾರ್ಡ್ಗಳಿಗೂ ಆಧಾರ್ ಅಥೆಂಟಿಕೇಶನ್ ಮತ್ತು ಇಕೆವೈಸಿ ಮಾಡಿಸಲಾಯಿತು. ಬಹುತೇಕ ಎಲ್ಲಾ ಪಡಿತರ ಚೀಟಿಗಳ ಡಿಜಿಟಲೀಕರಣ ಮಾಡಲಾಯಿತು. ಶೇ. 99.8ರಷ್ಟು ರೇಶನ್ ಕಾರ್ಡ್ಗಳ ಆಧಾರ್ ದೃಢೀಕರಣ ಸಾಧ್ಯವಾಗಿದೆ. ಶೇ. 98.7ರಷ್ಟು ಫಲಾನುಭವಿಗಳ ಬಯೋಮೆಟ್ರಿಕ್ ಅಥೆಂಟಿಕೇಶನ್ ನಡೆದಿದೆ.
ದೇಶಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ 5.33 ಲಕ್ಷ ಇ-ಪಿಒಎಸ್ ಸಾಧನಗಳನ್ನು ಅಳವಡಿಸಲಾಗಿದೆ. ಇಲ್ಲಿ ಪಡಿತರ ವಿತರಣೆ ವೇಳೆ ಆಧಾರ್ ದೃಢೀಕರಣ ಮಾಡಲು ಸಾಧ್ಯವಾಗಿದೆ. ಸಚಿವಾಲಯದ ಮಾಹಿತಿ ಪ್ರಕಾರ, ಶೇ. 98ರಷ್ಟು ಆಹಾರಧಾನ್ಯಗಳ ವಿತರಣೆಗೆ ಆಧಾರ್ ದೃಢೀಕರಣ ಪಡೆಯಲಾಗುತ್ತಿದೆ. ಇದರಿಂದ ಫಲಾನುಭವಿಗಳಲ್ಲದವರು ಪಡಿತರ ವ್ಯವಸ್ಥೆ ದುರುಪಯೋಗಪಡಿಸಿಕೊಳ್ಳುವುದು ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.
ಸರ್ಕಾರದ ಇಕೆವೈಸಿ ಯೋಜನೆಯು ಇನ್ನೂ ಚಾಲನೆಯಲ್ಲಿದೆ. ಪಡಿತರ ಫಲಾನುಭವಿಗಳ ಪೈಕಿ ಶೇ. 64 ಮಂದಿ ಇಕೆವೈಸಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಉಳಿದ ಫಲಾನುಭವಿಗಳಿಂದ ಇಕೆವೈಸಿ ಪಡೆಯುವ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದಿ: ಅದಾನಿ ಸೇರಿ 8 ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆ ಆರೋಪ ದಾಖಲು; ಗೌತಮ್, ಸಾಗರ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್
ರೇಷನ್ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿರುವುದು ಸೋರಿಕೆಯನ್ನು ನಿಗ್ರಹಿಸುವುದರ ಜೊತೆಗೆ ಇನ್ನೂ ಹಲವು ಲಾಭವನ್ನೂ ನೀಡಿದೆ. ‘ಒನ್ ನೇಶನ್ ಒನ್ ರೇಶನ್ ಕಾರ್ಡ್’ ಸ್ಕೀಮ್ನಲ್ಲಿ ಈಗ ಪಡಿತರ ಫಲಾನುಭವಿಗಳು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆಯುವುದು ಸಾಧ್ಯವಾಗಿದೆ. ಆಧಾರ್ ದೃಢೀಕರಣ ಮೂಲಕ ರೇಶನ್ ನೀಡುವ ವ್ಯವಸ್ಥೆ ಬಂದ ಬಳಿಕ ಇದು ಸಾಧ್ಯವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ