AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5G Network Slicing: ಏರ್ಟೆಲ್​ನಿಂದ ಕಮರ್ಷಿಯಲ್ 5ಜಿ ನೆಟ್ವರ್ಕ್ ಸ್ಲೈಸಿಂಗ್ ಸರ್ವಿಸ್; ಉತ್ತಮ ವೇಗಕ್ಕೆ ಪ್ರೀಮಿಯಮ್ ದರ?

5G Network Slicing in India: ಭಾರತದಲ್ಲಿ ಏರ್‌ಟೆಲ್ 5G ನೆಟ್‌ವರ್ಕ್ ಸ್ಲೈಸಿಂಗ್ ಪರಿಚಯಿಸಿದೆ. ಇದು ಪ್ರೀಮಿಯಂ ಬಳಕೆದಾರರಿಗೆ ಆದ್ಯತೆಯ ವೇಗವನ್ನು ನೀಡುತ್ತದೆ. ಆದರೆ, ಸಾಮಾನ್ಯ ಗ್ರಾಹಕರು ಹೆಚ್ಚಿನ ಹಣ ತೆರಬೇಕಾಗಬಹುದು ಮತ್ತು ಅವರ ಇಂಟರ್ನೆಟ್ ವೇಗ ಕುಸಿಯಬಹುದು ಎಂಬ ಆತಂಕವಿದೆ. ಇದು 'ನೆಟ್ ನ್ಯೂಟ್ರಾಲಿಟಿ' ನಿಯಮಗಳ ಉಲ್ಲಂಘನೆಯ ಚರ್ಚೆಯನ್ನು ಹುಟ್ಟುಹಾಕಿದೆ. ಈ ತಂತ್ರಜ್ಞಾನದ ಅನುಕೂಲ ಹಾಗೂ ಅನಾನುಕೂಲಗಳನ್ನು ಲೇಖನ ವಿವರಿಸುತ್ತದೆ.

5G Network Slicing: ಏರ್ಟೆಲ್​ನಿಂದ ಕಮರ್ಷಿಯಲ್ 5ಜಿ ನೆಟ್ವರ್ಕ್ ಸ್ಲೈಸಿಂಗ್ ಸರ್ವಿಸ್; ಉತ್ತಮ ವೇಗಕ್ಕೆ ಪ್ರೀಮಿಯಮ್ ದರ?
ಮೊಬೈಲ್ ಬಳಸುತ್ತಿರುವವರುImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2026 | 2:26 PM

Share

ನವದೆಹಲಿ, ಮೇ 26: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಇತ್ತೀಚೆಗೆ ಅತ್ಯಂತ ದೊಡ್ಡ ತಾಂತ್ರಿಕ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಭಾರತದಲ್ಲಿ 5ಜಿ ನೆಟ್ವರ್ಕ್ ಸ್ಲೈಸಿಂಗ್ ಸರ್ವಿಸ್ ಕಮರ್ಷಿಯಲ್ ಅಡಿ ಇಟ್ಟಿದೆ. ಇನ್ಮುಂದೆ, ಪ್ರೀಮಿಯಮ್ ಬಳಕೆದಾರರಿಗೆ ಸುಗಮ ವೇಗ, ಸಾಮಾನ್ಯ ಬಳಕೆದಾರರಿಗೆ ಮಂದಗತಿಯ ವೇಗದ ಸೇವೆ ಸಿಗುವ ಕಾಲ ಬಂದಂತಿದೆ. ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ (Bharti Airtel) ತನ್ನ ಗ್ರಾಹಕರಿಗಾಗಿ ದೇಶದಲ್ಲೇ ಮೊದಲ ಬಾರಿಗೆ 5G ನೆಟ್‌ವರ್ಕ್ ಸ್ಲೈಸಿಂಗ್ (Network Slicing) ತಂತ್ರಜ್ಞಾನ ಆಧಾರಿತ ‘ಪ್ರಯಾರಿಟಿ ಪೋಸ್ಟ್‌ಪೇಯ್ಡ್ (Priority Postpaid)’ ಸೇವೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ಕೇವಲ ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಬದಲಾಗಿ, ನೆಟ್‌ವರ್ಕ್ ಅನುಭವವನ್ನೇ ಸಂಪೂರ್ಣವಾಗಿ ಬದಲಾಯಿಸುವ ತಂತ್ರಜ್ಞಾನವಾಗಿದೆ. ಅದೇ ವೇಳೆ, ಸಾಮಾನ್ಯ ಗ್ರಾಹಕರು ಉತ್ತಮ ಇಂಟರ್ನೆಟ್ ಸರ್ವಿಸ್ ಪಡೆಯಲು ಹೆಚ್ಚಿನ ಹಣ ತೆರಬೇಕಾಗಬಹುದು.

ಏರ್ಟೆಲ್​ನ ಈ ನಡೆಯನ್ನು ಭಾರತದ ಸೆಲೂಲಾರ್ ಆಪರೇಟರ್ಸ್ ಅಸೋಷಿಯೇಶನ್​ನ ಮಹಾನಿರ್ದೇಶಕ ಡಾ. ಎಸ್.ಪಿ. ಕೋಚರ್ (Dr. S.P. Kochar) ಸ್ವಾಗತಿಸಿದ್ದಾರೆ. ಅಮೆರಿಕ, ಸಿಂಗಾಪುರ, ಚೀನಾ ಹಾಗು ಕೆಲ ಐರೋಪ್ಯ ದೇಶಗಳಲ್ಲಿ ಇರುವ 5ಜಿ ನೆಟ್ವರ್ಕ್ ಸ್ಲೈಸಿಂಗ್ ತಂತ್ರಜ್ಞಾನವನ್ನು ನಮ್ಮದೇ ಒಂದು ಕಂಪನಿ ಭಾರತಕ್ಕೆ ತಂದಿರುವುದು ಖುಷಿ ಕೊಟ್ಟಿದೆ ಎಂದು ಅವರು ಹೇಳಿದ್ದಾರೆ. ಏರ್​ಟೆಲ್​ನ ಪ್ರಯಾರಿಟಿ ಪೋಸ್ಟ್​ಪೇಡ್ ಪ್ಲಾನ್​ಗಳು ವೈಯಕ್ತಿಕ ಗ್ರಾಹಕರಾದರೆ ತಿಂಗಳಿಗೆ 449 ರೂನಿಂದ ಆರಂಭವಾಗುತ್ತದೆ.

ನೆಟ್‌ವರ್ಕ್ ಸ್ಲೈಸಿಂಗ್ ಎಂದರೇನು?

ಒಂದೇ ದೊಡ್ಡ ಹೆದ್ದಾರಿಯಲ್ಲಿ ಬಸ್, ಬೈಕ್, ಆಂಬ್ಯುಲೆನ್ಸ್ ಎಲ್ಲವೂ ಒಟ್ಟಿಗೆ ಚಲಿಸಿದಾಗ ಟ್ರಾಫಿಕ್ ಜಾಮ್ ಆಗುತ್ತದೆ. ಆದರೆ ಅದೇ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್ ಅಥವಾ ವಿವಿಐಪಿ ವಾಹನಗಳಿಗಾಗಿ ಒಂದು ವಿಶೇಷ ‘ಮೀಸಲು ಲೇನ್’ (Dedicated Lane) ನಿರ್ಮಿಸಿದರೆ ಹೇಗಿರುತ್ತದೆಯೋ, ಹಾಗೆಯೇ 5G ನೆಟ್‌ವರ್ಕ್ ಸ್ಲೈಸಿಂಗ್ ಕೆಲಸ ಮಾಡುತ್ತದೆ.

ಇದು ಒಂದೇ ಭೌತಿಕ 5G ನೆಟ್‌ವರ್ಕ್ ಮೂಲಸೌಕರ್ಯದೊಳಗೆ ತಂತ್ರಜ್ಞಾನದ ಮೂಲಕ ಹಲವು ಸ್ವತಂತ್ರ, ವರ್ಚುವಲ್ (Virtual) ನೆಟ್‌ವರ್ಕ್ ಪದರಗಳನ್ನು (Slices) ಸೃಷ್ಟಿಸುತ್ತದೆ. ಕ್ರಿಕೆಟ್ ಸ್ಟೇಡಿಯಂ ಅಥವಾ ಜನನಿಬಿಡ ಮಾರುಕಟ್ಟೆಯಂತಹ ಟ್ರಾಫಿಕ್ ಹೆಚ್ಚಿರುವ ಜಾಗದಲ್ಲೂ ಪ್ರಯಾರಿಟಿ ಗ್ರಾಹಕರಿಗೆ ಯಾವುದೇ ಅಡ್ಡಿಯಿಲ್ಲದ ಇಂಟರ್ನೆಟ್ ಸಿಗುವಂತೆ ಇದು ಮಾಡುತ್ತದೆ.

ಇದನ್ನೂ ಓದಿ: ವಿದೇಶೀ ಹೂಡಿಕೆದಾರರು ಸದ್ಯಕ್ಕೆ ಭಾರತಕ್ಕೆ ಬರಲ್ಲ ಎಂದ ಅಮರ್ ಅಂಬಾನಿ; ಎಫ್​ಐಐಗಳ ಆಗನಕ್ಕೆ ಬೇಕು ಈ 3 ಕಾರಣಗಳು

ನೆಟ್‌ವರ್ಕ್ ಸ್ಲೈಸಿಂಗ್‌ನ ಅನುಕೂಲಗಳು

  • ಸ್ಥಿರ ಹಾಗೂ ಅಡೆತಡೆಯಿಲ್ಲದ ಕನೆಕ್ಟಿವಿಟಿ: ಹಬ್ಬಗಳು, ಸಾರ್ವಜನಿಕ ಸಭೆಗಳು ಅಥವಾ ಕನ್ಸರ್ಟ್‌ಗಳಂತಹ ಅತಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಸಾಮಾನ್ಯ ನೆಟ್‌ವರ್ಕ್ ಜಾಮ್ ಆದರೂ, ಈ ಸ್ಲೈಸಿಂಗ್ ಪಡೆದ ಗ್ರಾಹಕರಿಗೆ ನಿರಂತರ ಹೈ-ಸ್ಪೀಡ್ ಇಂಟರ್ನೆಟ್ ಸಿಗುತ್ತದೆ. ಆಫೀಸ್ ಕಾಲ್‌ಗಳು ಅಥವಾ ತುರ್ತು ಡಿಜಿಟಲ್ ಪೇಮೆಂಟ್‌ಗಳು ಸುಲಭವಾಗಿ ಆಗುತ್ತವೆ.
  • ವಿವಿಧ ಅಗತ್ಯಗಳಿಗೆ ತಕ್ಕಂತೆ ನೆಟ್‌ವರ್ಕ್: ವಿಡಿಯೋ ಸ್ಟ್ರೀಮಿಂಗ್‌ಗೆ ಹೆಚ್ಚಿನ ಬ್ಯಾಂಡ್‌ವಿಡ್ತ್ ಬೇಕು, ಆನ್‌ಲೈನ್ ಗೇಮಿಂಗ್‌ಗೆ ಕಡಿಮೆ ಲ್ಯಾಟೆನ್ಸಿ (Latency – ಡೇಟಾ ತಲುಪಲು ತೆಗೆದುಕೊಳ್ಳುವ ಸಮಯ) ಬೇಕು. ನೆಟ್‌ವರ್ಕ್ ಸ್ಲೈಸಿಂಗ್ ಆಯಾ ಅಗತ್ಯಕ್ಕೆ ತಕ್ಕಂತೆ ನೆಟ್‌ವರ್ಕ್ ಅನ್ನು ಪ್ರತ್ಯೇಕವಾಗಿ ಹೊಂದಿಸಬಲ್ಲದು.
  • ಉದ್ಯಮಗಳಿಗೆ ವರದಾನ (Enterprise Use): ಭವಿಷ್ಯದಲ್ಲಿ ಆಸ್ಪತ್ರೆಗಳು (ದೂರಸ್ಥ ಶಸ್ತ್ರಚಿಕಿತ್ಸೆ), ಸ್ವಯಂಚಾಲಿತ ವಾಹನಗಳು (Autonomous Vehicles) ಮತ್ತು ಕೈಗಾರಿಕೆಗಳ ಸ್ಮಾರ್ಟ್ ಯಂತ್ರೋಪಕರಣಗಳಿಗೆ ಅತ್ಯಂತ ಸುರಕ್ಷಿತ ಹಾಗೂ ಮೀಸಲಾದ ನೆಟ್‌ವರ್ಕ್ ಒದಗಿಸಲು ಇದು ಸಹಕಾರಿ.

ನೆಟ್ವರ್ಕ್ ಸ್ಲೈಸಿಂಗ್​ನಿಂದ ಅನಾನುಕೂಲಗಳು

  • ನೆಟ್ ನ್ಯೂಟ್ರಾಲಿಟಿ (Net Neutrality) ವಿವಾದ: ಇದು ಪ್ರಸ್ತುತ ಟೆಲಿಕಾಂ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇಂಟರ್ನೆಟ್‌ನಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎನ್ನುವುದು ನೆಟ್ ನ್ಯೂಟ್ರಾಲಿಟಿ ನಿಯಮ. ಆದರೆ ಹಣ ನೀಡುವ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮಾತ್ರ ಪ್ರತ್ಯೇಕ ‘ವೇಗದ ಲೇನ್’ ನೀಡುವುದರಿಂದ ಸಾಮಾನ್ಯ ಅಥವಾ ಪ್ರಿಪೇಯ್ಡ್ ಗ್ರಾಹಕರಿಗೆ ಅನ್ಯಾಯವಾಗಬಹುದು ಎಂಬ ಆತಂಕ ತಜ್ಞರಲ್ಲಿದೆ. ಆದರೆ ಏರ್‌ಟೆಲ್ ಸಂಸ್ಥೆಯು ತಾವು ಯಾವುದೇ ನಿರ್ದಿಷ್ಟ ಆ್ಯಪ್‌ಗಳಿಗೆ ಆದ್ಯತೆ ನೀಡುತ್ತಿಲ್ಲ, ಕೇವಲ ನೆಟ್‌ವರ್ಕ್ ಸಾಮರ್ಥ್ಯ ನಿರ್ವಹಣೆ ಮಾಡುತ್ತಿರುವುದರಿಂದ ಇದು ನೆಟ್ ನ್ಯೂಟ್ರಾಲಿಟಿ ನಿಯಮ ಉಲ್ಲಂಘಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
  • ಬೆಲೆ ಏರಿಕೆಯ ಹೊರೆ: ಸಾಮಾನ್ಯ ಗ್ರಾಹಕರು ಈ ವಿಶೇಷ ಸೇವೆಯನ್ನು ಪಡೆಯಬೇಕಾದರೆ ಹೆಚ್ಚಿನ ಹಣ ನೀಡಿ ಪ್ರೀಮಿಯಂ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ಖರೀದಿಸಬೇಕಾಗುತ್ತದೆ.
  • ಸಾಮಾನ್ಯ ಗ್ರಾಹಕರ ನೆಟ್‌ವರ್ಕ್ ಕುಸಿತದ ಭೀತಿ: ಲಭ್ಯವಿರುವ ಸ್ಪೆಕ್ಟ್ರಮ್ ಲಿಮಿಟೆಡ್ ಆಗಿರುವುದರಿಂದ, ಪ್ರೀಮಿಯಂ ಗ್ರಾಹಕರಿಗೆ ಹೆಚ್ಚಿನ ನೆಟ್‌ವರ್ಕ್ ಹಂಚಿಕೆ ಮಾಡಿದಾಗ ಸಾಮಾನ್ಯ ಪ್ರಿಪೇಯ್ಡ್ ಗ್ರಾಹಕರ ಇಂಟರ್ನೆಟ್ ವೇಗ ಕುಸಿಯುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

ಜಾಗತಿಕ ಮಾರುಕಟ್ಟೆಯೊಂದಿಗೆ ಹೋಲಿಕೆ

ಭಾರತದಲ್ಲಿ ಏರ್‌ಟೆಲ್ ಈಗಷ್ಟೇ ಈ ತಂತ್ರಜ್ಞಾನವನ್ನು ವಾಣಿಜ್ಯಿಕವಾಗಿ ಸಾರ್ವಜನಿಕರಿಗೆ ಪರಿಚಯಿಸುತ್ತಿದೆ. ಆದರೆ ಜಾಗತಿಕವಾಗಿ ಈ ತಂತ್ರಜ್ಞಾನ ಈಗಾಗಲೇ ಮುಂಚೂಣಿಯಲ್ಲಿದೆ. ಆದರೆ, ಅಮೆರಿಕ, ಸಿಂಗಾಪುರ, ಬ್ರಿಟನ್, ಚೀನಾ ಮೊದಲಾದ ದೇಶಗಳಲ್ಲಿ ಟೆಲಿಕಾಂ ಕಂಪನಿಗಳು ಉದ್ಯಮಗಳು ಹಾಗೂ ಸಾರ್ವಜನಿಕ ವಲಯಗಳಿಗೆ ಈ ಸ್ಲೈಸಿಂಗ್ ಸರ್ವಿಸ್ ನೀಡುತ್ತಿವೆ. ಭಾರತದಲ್ಲಿ ವಿಸ್ತೃತವಾಗಿ ನೀಡಲಾಗುತ್ತಿದೆ.

ಜಾಗತಿಕವಾಗಿ ನೆಟ್ ನ್ಯೂಟ್ರಾಲಿಟಿ ನಿಯಮಗಳನ್ನು ಈ ತಂತ್ರಜ್ಞಾನಕ್ಕೆ ಪೂರಕವಾಗಿ ಮಾರ್ಪಡಿಸಲಾಗಿದೆ ಅಥವಾ ವಿಶೇಷ ವಿನಾಯಿತಿ ನೀಡಲಾಗಿದೆ. ಭಾರತದಲ್ಲಿ TRAI ಮತ್ತು ದೂರಸಂಪರ್ಕ ಇಲಾಖೆ (DoT) ಈ ವ್ಯವಸ್ಥೆಯು ಸಾಮಾನ್ಯ ಗ್ರಾಹಕರ ಇಂಟರ್ನೆಟ್ ಅನುಭವವನ್ನು ಕೆಡಿಸುತ್ತಿದೆಯೇ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More