ನವದೆಹಲಿ, ಮೇ 6: ಆಧಾರ್ ದಾಖಲೆ ದೃಢೀಕರಣಕ್ಕೆ (Aadhaar authentication) ಫಿಂಗರ್ ಪ್ರಿಂಟ್ ನೀಡುವುದು ಸಾಮಾನ್ಯ. ಈಗ ಫೇಸ್ ದೃಢೀಕರಣದ ಫೀಚರ್ (Face authentication) ಅನ್ನು ಉಪಯೋಗಿಸಲಾಗುತ್ತಿದೆ. ದೆಹಲಿಯಲ್ಲಿ ಇಂಥದ್ದೊಂದು ಪ್ರಯೋಗ ಯಶಸ್ವಿಯಾಗಿದೆ. ದೆಹಲಿಯ ಕೆಲ ನೀಟ್ ಪರೀಕ್ಷಾ ಕೇಂದ್ರಗಳಲ್ಲಿ (NEET UG examination centres) ಯುಐಡಿಎಐನಿಂದ ಆಧಾರ್ ಆಧಾರಿತ ಫೇಸ್ ಅಥೆಂಟಿಕೇಶನ್ ಫೀಚರ್ ಬಳಕೆಗೆ ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಲಾಗಿತ್ತು. ಇದು ಯಶಸ್ವಿಯಾಗಿರುವುದು ಆಧಾರ್ನ ಉಪಯುಕ್ತತೆಯು ಒಂದು ಸ್ತರ ಮೇಲೆ ಹೋಗಲಿದೆ.
ದೆಹಲಿಯ ಕೆಲ ಆಯ್ದ ನೀಟ್ ಪರೀಕ್ಷಾ ಕೇಂದ್ರಗಳಲ್ಲಿ ಈ ಪ್ರಯೋಗ ಮಾಡಲಾಗಿದೆ. ಎನ್ಐಸಿಯ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಮತ್ತು ಎನ್ಟಿಎನ ಪರೀಕ್ಷಾ ಆಡಳಿತದ ಪ್ರೋಟೋಕಾಲ್ಗಳನ್ನು ಈ ಸೆಂಟರ್ಗಳಲ್ಲಿ ಅಳವಡಿಸಲಾಯಿತು. ಆಧಾರ್ ಫೇಸ್ ಅಥೆಂಟಿಕೇಶನ್ ವ್ಯವಸ್ಥೆ ಬಹಳ ನಿಖರವಾಗಿತ್ತು ಎಂದು ಈ ಪ್ರಯೋಗದ ಉಸ್ತುವಾರಿ ಹೊತ್ತಿದ್ದ ಅಧಿಕಾರಿಗಳು ಹೇಳಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಆಧಾರ್ ದಾಖಲೆಗಳನ್ನು ಮುಂಚಿತವಾಗಿ ಪಡೆದು ಅದನ್ನು ಡಾಟಾಬೇಸ್ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳ ಮುಖದ ಡಾಟಾ ಕೂಡ ಇರುತ್ತದೆ. ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಐಡಿ ತೋರಿಸುವ ಅವಶ್ಯಕತೆ ಇರುವುದಿಲ್ಲ. ಅಲ್ಲಿರುವ ಕ್ಯಾಮರಾಗಳು ತನ್ನಂತಾನೆ ಆ ವಿದ್ಯಾರ್ಥಿಯ ಮುಖದ ಗುರುತು ಹಿಡಿದು, ಎಕ್ಸಾಂ ಹಾಲ್ಗೆ ಪ್ರವೇಶಿಸಲು ಅನುಮತಿಸುತ್ತದೆ.
ಇದನ್ನೂ ಓದಿ: ಟಿಸಿಎಸ್ನಲ್ಲಿ ಭತ್ಯೆ ಧಮಾಕ; ಶೇ. 70 ಉದ್ಯೋಗಿಗಳಿಗೆ ಶೇ. 100 ಭತ್ಯೆ; ವರ್ಕ್ ಫ್ರಂ ಹೋಮ್ನವರಿಗೆ ಇಲ್ಲ ಭಾಗ್ಯ
ಭಾರತದಲ್ಲಿ ಎಕ್ಸಾಮಿನೇಶನ್ ಸೆಂಟರ್ನಲ್ಲಿ ಆಧಾರ್ ಆಧಾರಿತವಾದ ಈ ಸುಧಾರಿತ ಬಯೋಮೆಟ್ರಿಕ್ ವ್ಯವಸ್ಥೆಯ ಪ್ರಯೋಗ ನಡೆದಿರುವುದು ಇದೇ ಮೊದಲು. ಪರೀಕ್ಷಾ ಕೇಂದ್ರಗಳಲ್ಲಿ ನಕಲಿ ವ್ಯಕ್ತಿಗಳು ಬರುವುದನ್ನು ತಪ್ಪಿಸಲು ಇದು ಪರಿಣಾಮಕಾರಿ ಎನಿಸುತ್ತದೆ. ಹಾಗೆಯೇ, ಪರೀಕ್ಷಾ ಕೇಂದ್ರಗಳ ನಿರ್ವಹಣೆಯನ್ನೂ ಸುಗಮಗೊಳಿಸುತ್ತದೆ.
ದೆಹಲಿಯಲ್ಲಿ ಈ ಪ್ರಯೋಗ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ದೇಶದ ಇತರೆಡೆ ನಡೆಯುವ ಇತರ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲೂ ಇದೇ ರೀತಿಯ ವ್ಯವಸ್ಥೆಯನ್ನು ಜಾರಿಗೆ ತರುವ ಆಲೋಚನೆ ಸರ್ಕಾರದ್ದಾಗಿದೆ.
ಬೆಂಗಳೂರು, ಹೈದರಾಬಾದ್, ದೆಹಲಿ, ವಾರಾಣಸಿ ಏರ್ಪೋರ್ಟ್ಗಳಲ್ಲಿ ಪ್ರಯಾಣಿಕರನ್ನು ಸ್ವಯಂಚಾಲಿತವಾಗಿ ಚಹರೆ ಗುರುತಿಸುವ ವ್ಯವಸ್ಥೆ ಇದೆ. ಅದಕ್ಕೆಂದೇ ಡಿಜಿಯಾತ್ರಾ ಆ್ಯಪ್ ನಿರ್ಮಿಸಲಾಗಿದೆ. ವಿಮಾನ ಪ್ರಯಾಣಕ್ಕೆ ಟಿಕೆಟ್ ಪಡೆದವರು ಡಿಜಿಯಾತ್ರಾ ಆ್ಯಪ್ನಲ್ಲಿ ಆಧಾರ್ ಮತ್ತು ಸೆಲ್ಫಿ ಮೂಲಕ ನೊಂದಾಯಿಸಬಹುದು. ಈ ಡಾಟಾ ಎನ್ಕ್ರಿಪ್ಟ್ ಆಗಿ ಸಿಸ್ಟಂನಲ್ಲಿ ಸ್ಟೋರ್ ಆಗುತ್ತದೆ.
ಪ್ರಯಾಣಿಕರು ಏರ್ಪೋರ್ಟ್ನ ಪ್ರವೇಶ ದ್ವಾರಕ್ಕೆ ಬಂದಾಗ ಅಲ್ಲಿರುವ ಕ್ಯಾಮೆರಾ ಆ ವ್ಯಕ್ತಿಯ ಮುಖವನ್ನು ಸ್ಕ್ಯಾನ್ ಮಾಡುತ್ತದೆ. ಸಂಗ್ರಹವಾಗಿರುವ ಡಾಟಾಗೆ ಅದು ಹೊಂದಿಕೆಯಾದರೆ, ಗೇಟ್ ತನ್ನಂತಾನೆ ತೆರೆಯುತ್ತದೆ. ಬೋರ್ಡಿಂಗ್ ಪಾಸ್ ತೋರಿಸುವ ಅವಶ್ಯಕತೆ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ