Adani Green Energy: ಅದಾನಿ ಗ್ರೀನ್ ಎನರ್ಜಿ ಮಾರುಕಟ್ಟೆ ಬಂಡವಾಳ ಮೌಲ್ಯ ಮೊದಲ ಬಾರಿಗೆ 3 ಲಕ್ಷ ಕೋಟಿ ರೂಪಾಯಿ

| Updated By: Srinivas Mata

Updated on: Jan 18, 2022 | 11:16 AM

ಅದಾನಿ ಸಮೂಹದ ಸಂಸ್ಥೆಯಾದ ಅದಾನಿ ಗ್ರೀನ್ ಎನರ್ಜಿ ಇದೇ ಮೊದಲ ಬಾರಿಗೆ ಮಾರುಕಟ್ಟೆ ಬಂಡವಾಳ ಮೌಲ್ಯ 3 ಲಕ್ಷ ಕೋಟಿ ರೂಪಾಯಿ ಮುಟ್ಟಿದೆ.

Adani Green Energy: ಅದಾನಿ ಗ್ರೀನ್ ಎನರ್ಜಿ ಮಾರುಕಟ್ಟೆ ಬಂಡವಾಳ ಮೌಲ್ಯ ಮೊದಲ ಬಾರಿಗೆ 3 ಲಕ್ಷ ಕೋಟಿ ರೂಪಾಯಿ
ಸಾಂದರ್ಭಿಕ ಚಿತ್ರ
Follow us on

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (Adani Green Energy Ltd) ಜನವರಿ 18ನೇ ತಾರೀಕಿನ ಮಂಗಳವಾರದಂದು ಮಾರುಕಟ್ಟೆ ಬಂಡವಾಳ ಮೌಲ್ಯ 3 ಲಕ್ಷ ಕೋಟಿ ರೂಪಾಯಿಯನ್ನು ಮುಟ್ಟಿತು. ಇಂಟ್ರಾಡೇ ವಹಿವಾಟಿನಲ್ಲಿ ಶೇ 5ರ ತನಕ ಏರಿಕೆ ಕಂಡ ಮೇಲೆ ಪ್ರತಿ ಷೇರಿಗೆ 1915.45 ರೂಪಾಯಿ ಮುಟ್ಟಿತು. ಅದಾನಿ ಸಮೂಹದ ಪೈಕಿ ಈ ಸಾಧನೆಯನ್ನು ಮಾಡಿದ ಮೊದಲ ಸಂಸ್ಥೆ ಇದಾಗಿದೆ. ಬೆಳಗ್ಗೆ 10.02ರ ಸುಮಾರಿಗೆ ಈ ಷೇರು ಬಿಎಸ್​ಇಯಲ್ಲಿ ಶೇ 3.06ರಷ್ಟು ಮೇಲೇರಿ 1883.85ರಲ್ಲಿ ವಹಿವಾಟು ನಡೆಸುತ್ತಿತ್ತು. ಅಂದಹಾಗೆ ಬೆಂಚ್​ಮಾರ್ಕ್​ ಸೂಚ್ಯಂಕವಾದ ಸೆನ್ಸೆಕ್ಸ್​ 214.65 ಪಾಯಿಂಟ್ಸ್ ಅಥವಾ ಶೇ 0.35ರಷ್ಟು ಇಳಿಕೆ ಕಂಡಿತ್ತು. ಅಂದಹಾಗೆ ಅದಾನಿ ಗ್ರೀನ್ ಎನರ್ಜಿ ಷೇರು ಜನವರಿಯಲ್ಲಿ ಇಲ್ಲಿಯ ತನಕ ಶೇಕಡಾ 44ರಷ್ಟು ಏರಿಕೆಯನ್ನು ಕಂಡಿದೆ.

ಕಂಪೆನಿಯ ಡಿಸೆಂಬರ್ ತ್ರೈಮಾಸಿಕದ ತಾತ್ಕಾಲಿಕ ಕಾರ್ಯಾಚರಣೆ ಅಪ್​ಡೇಟ್​ ಪ್ರಕಾರ, ಎನರ್ಜಿ ಮಾರಾಟ ಶೇ 97ರಷ್ಟು ಹೆಚ್ಚಳವಾಗಿ, 2.50 ಬಿಲಿಯನ್ ಯೂನಿಟ್ಸ್ ತಲುಪಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 1.27 ಬಿಲಿಯನ್ ಇತ್ತು. ಸೌರ ಹಾಗೂ ಪವನ ವಿದ್ಯುತ್ ಎರಡೂ ಪೋರ್ಟ್​ಫೋಲಿಯೋದಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡಿದೆ. ಕಂಪೆನಿಯ ಒಟ್ಟಾರೆ ಕಾರ್ಯ ನಿರ್ವಹಣೆ ಸಾಮರ್ಥ್ಯ ಶೇ 84ರಷ್ಟು ಜಾಸ್ತಿಯಾಗಿ, 5410 ಮೆಗಾವಾಟ್ ತಲುಪಿದೆ. ಸೌರ ಪೋರ್ಟ್​ಫೋಲಿಯೋ ಸಾಮರ್ಥ್ಯ ಬಳಕೆ ಅಂಶವು (CUF) ವರ್ಷದಿಂದ ವರ್ಷಕ್ಕೆ 110 ಬೇಸಿಸ್ ಪಾಯಿಂಟ್ಸ್​ ಹೆಚ್ಚಾಗಿ ಶೇ 21.9 ಆಗಿದೆ. ಇನ್ನು ಪವನ ವಿದ್ಯುತ್ ಸಿಯುಎಫ್​ 10 ಬೇಸಿಸ್​ ಪಾಯಿಂಟ್ಸ್​ ಹೆಚ್ಚಾಗಿ ಶೇ 18.6ರಷ್ಟಾಗಿದೆ.

ಎಸ್​ಇಸಿಐ ಜತೆಗೆ ವಿಶ್ವದ ಅತಿದೊಡ್ಡ ಗ್ರೀನ್ ಪಿಪಿಎ ಒಪ್ಪಂದ ಮಾಡಿಕೊಳ್ಳುತ್ತಿದ್ದು, 4667 ಮೆಗಾವಾಟ್ ಪೂರೈಕೆ ಮಾಡುವ ಒಪ್ಪಂದ ಇದಾಗಿದೆ. ಇದರೊಂದಿಗೆ ಒಟ್ಟಾರೆ ಸಹಿ ಹಾಕಿದ ಪಿಪಿಎಗಳು 6000 ಮೆಗಾವಾಟ್ ಆಗಿದ್ದು, ಎಸ್​ಎಎಸ್​ಐನ ಉತ್ಪಾದನೆ ಜೋಡಣೆಯಾದ ಸೋಲಾರ್​ ಟೆಂಡರ್​ನಲ್ಲಿ 8000 ಮೆಗಾವಾಟ್ ಅದಾನಿ ಗ್ರೀನ್​ಗೆ ಸಿಕ್ಕಿದೆ. ವೆಂಚುರಾ ಬ್ರೋಕರೇಜ್ ಸಂಸ್ಥೆಯು ಡಿಸೆಂಬರ್ ತಿಂಗಳಲ್ಲಿ ಈ ಷೇರಿನ ರೇಟಿಂಗ್ ಹೆಚ್ಚಿಸಿತ್ತು. FY24 ಆಧಾರದಲ್ಲಿ 2810 ರೂಪಾಯಿ ಪ್ರತಿ ಷೇರಿಗೆ ಗುರಿ ನಿಗದಿ ಮಾಡಿತ್ತು. ಆ ಮೂಲಕ ಮುಂದಿನ 24 ತಿಂಗಳಲ್ಲಿ ಶೇ 102ರಷ್ಟು ಏರಿಕೆ ಆಗಬಹುದು ಎಂದು ಅಂದಾಜು ಮಾಡಿದೆ.

ಭಾರತದ ಅತಿ ದೊಡ್ಡ ನವೀಕೃತ ಇಂಧನ ಕಂಪೆನಿಗಳಲ್ಲಿ ಒಂದಾಗಿದೆ ಅದಾನಿ ಗ್ರೀನ್. ಸದ್ಯದ ಪ್ರಾಜೆಕ್ಟ್ ಪೋರ್ಟ್​ಫೋಲಿಯೋ 13.990 ಮೆಗಾವಾಟ್​ ಇದ್ದು, ಜತೆಗೆ ಲಾಕ್ಡ್​-ಇನ್ ಬೆಳವಣಿಗೆ 20,284 ಮೆಗಾವಾಟ್ ಇದೆ.

ಇದನ್ನೂ ಓದಿ: Top 10 Richest Indian 2021: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!