
ನವದೆಹಲಿ, ಜೂನ್ 1: ಭಾರತದ ನಗರ ಭಾಗದಲ್ಲಿ ಮೂಲಸೌಕರ್ಯ ಮತ್ತು ಸೇವೆಗಳನ್ನು ಬಲಪಡಿಸಲು 10 ಬಿಲಿಯನ್ ಡಾಲರ್ವರೆಗೆ (85,500 ಕೋಟಿ ರೂ) ಸಾಲದ ವ್ಯವಸ್ಥೆ ಮಾಡಲು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB- Asian Development Bank) ಸಿದ್ಧವಾಗಿದೆ. ಐದು ವರ್ಷಗಳ ಅವಧಿಯಲ್ಲಿ ಇಷ್ಟು ಮೊತ್ತದ ಸಾಲವನ್ನು ಎಡಿಬಿ ಖುದ್ದಾಗಿ ನೀಡುವುದಲ್ಲದೇ, ಬೇರೆ ಮೂಲಗಳಿಂದಲೂ ಸಾಲ ಕೊಡಿಸುವುದಾಗಿ ಹೇಳಿದೆ. ಭಾರತಕ್ಕಾಗಿ ಐದು ವರ್ಷದ ಈ ಪ್ಲಾನ್ ಅನ್ನು ಎಡಿಬಿ ಅಧ್ಯಕ್ಷ ಮಸಾಟೋ ಕಾಂಡಾ ಅವರು ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಎಡಿಬಿ ಅಧ್ಯಕ್ಷರು ಈ ಯೋಜನೆಯನ್ನು ಬಹಿರಂಗಗೊಳಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಮೆಟ್ರೋ ನೆಟ್ವರ್ಕ್ ವಿಸ್ತರಣೆ, ಹೊಸ ಪ್ರಾದೇಶಿಕ ಆರ್ಟಿಎಸ್ ಕಾರಿಡಾರ್ಗಳು ಇತ್ಯಾದಿ ಸೌಕರ್ಯಗಳತ್ತ ಗಮನ ಕೊಡಲಾಗುತ್ತದೆ. ಸುಸ್ಥಿರ ನಗರಾಭಿವೃದ್ದಿಗಾಗಿ ಹೂಡಿಕೆಗಳನ್ನು ಮಾಡುವುದೂ ಕೂಡ ಈ ಪ್ಲಾನ್ನ ಉದ್ದೇಶವಾಗಿದೆ.
ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆ
‘ನಗರಗಳು ಪ್ರಗತಿಯ ಎಂಜಿನ್ಗಳಾಗಿವೆ. ಭಾರತದ ನಗರ ಆರ್ಥಿಕತೆ ಚುರುಕುಗೊಂಡು 2047ರ ವಿಕಸಿತ ಭಾರತದ ಪಥದಲ್ಲಿ ಹೆಜ್ಜೆಗಳನ್ನಿಡಲು ಸಾಧ್ಯವಾಗುವ ನಿಟ್ಟಿನಲ್ಲಿ ಎಡಿಬಿ ಅಗತ್ಯವಾದ ಬಂಡವಾಳವನ್ನು ಕ್ರೋಢೀಕರಿಸುತ್ತದೆ’ ಎಂದು ಮಸಾಟೋ ಕಾಂಡಾ ಹೇಳಿದ್ದಾರೆ.
ಸರ್ಕಾರೀ ಮಟ್ಟದ ಸಾಲ, ಖಾಸಗಿ ವಲಯದಿಂದ ಸಾಲ ಇತ್ಯಾದಿಯಿಂದ ಎಡಿಬಿ ಹಣ ಕ್ರೋಢೀಕರಿಸುತ್ತದೆ. ಖಾಸಗಿ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಭಾರತದ ಅರ್ಬನ್ ಚಾಲೆಂಜ್ ಫಂಡ್ಗೂ ಎಡಿಬಿ ಶಕ್ತಿ ಒದಗಿಸಲಿದೆ ಎನ್ನಲಾಗಿದೆ.
ದೇಶಾದ್ಯಂತ ಇರುವ ಜನಸಂಖ್ಯೆಯಲ್ಲಿ ನಗರ ಭಾಗದ ಪಾಲು 2030ರಷ್ಟರಲ್ಲಿ ಶೇ. 40 ಅನ್ನು ಮೀರಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬೆಂಗಳೂರು ಮೆಟ್ರೋ ಸೇರಿದಂತೆ ಎಂಟು ನಗರಗಳಲ್ಲಿನ ಮೆಟ್ರೋ ಮತ್ತು ಆರ್ಆರ್ಟಿಎಸ್ ಯೋಜನೆಗಳ ಜಾಲ ವಿಸ್ತರಣೆಗೆ ಸಹಾಯವಾಗಲು ಎಡಿಬಿ ಬದ್ಧವಾಗಿದೆ.
ಇದನ್ನೂ ಓದಿ: 2024-25ರಲ್ಲಿ ಶೇ. 4.8 ವಿತ್ತೀಯ ಕೊರತೆ; ಸರ್ಕಾರದ ಗುರಿ ಈಡೇರಿಕೆ
ಎಡಿಬಿ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿಯನ್ನು ಮಾತ್ರವಲ್ಲ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿಯಾಗಿದ್ದರು. ಗ್ರಾಮೀಣ ಭಾಗದಲ್ಲಿ ಆಹಾರ ವ್ಯವಸ್ಥೆಯಲ್ಲಿ ಸುಧಾರಣೆ, ಉದ್ಯಮಶೀಲತೆ, ಉದ್ಯೋಗ ಸೃಷ್ಟಿ ಇತ್ಯಾದಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಬಲಪಡಿಸುವ ಉದ್ದೇಶವನ್ನು ತಿಳಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ