AI in Banking: ಊಹೆಗೂ ನಿಲುಕದ ರೀತಿಯಲ್ಲಿ ಬದಲಾದ ಬ್ಯಾಂಕಿಂಗ್ ಸಿಸ್ಟಂ; ಎಐ ತಂದ ಬದಲಾವಣೆಗಳಿವು
AI role in banking: ಭಾರತದ ಬ್ಯಾಂಕುಗಳು ತಮ್ಮ ಸಿಸ್ಟಂಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಳವಡಿಕೆ ಮಾಡುತ್ತಿವೆ. ಜನರೇಟಿವ್ ಎಐ ಮಾಡಲ್ಗಳ ನೆರವು ಪಡೆಯುತ್ತಿವೆ. ಕೆಲ ಆಯ್ದ ಕೆಲಸಗಳಲ್ಲಿ ಎಐ ಅಳವಡಿಕೆ ಆಗುತ್ತಿದೆ. ಆದರೂ ಅದರ ಪರಿಣಾಮ ಗಮನಾರ್ಹ ಎನಿಸುವಷ್ಟು ಆಗುತ್ತಿದೆ. ಅಕೌಂಟ್ ತೆರೆಯುವ ಪ್ರಕ್ರಿಯೆ, ಲೋನ್ ಕ್ಲೋಶರ್, ಡಾಕ್ಯುಮೆಂಟ್ ಅಪ್ಡೇಟ್ ಇಂತಹ ಹಲವು ಕಾರ್ಯಗಳು ಈಗ ಸಲೀಸಾಗಿವೆ.

ನವದೆಹಲಿ, ಜುಲೈ 1: ಕೆಲ ದಶಕಗಳ ಹಿಂದೆ, ಇದು ಕಂಪ್ಯೂಟರ್ ಯುಗ ಎನ್ನುತ್ತಿದ್ದರು. ಈಗ ಎಐ ಕಾಲ ಎನ್ನಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI- Artificial Intelligence) ಅನೇಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದೆ. ಎಐ ಇನ್ನೂ ಆರಂಭಿಕ ಹಂತದಲ್ಲಿದ್ದರೂ ಗಮನಾರ್ಹ ಎನಿಸುವ ಬದಲಾವಣೆಗಳನ್ನು ಕಾಣಬಹುದು. ಡಿಜಿಟಲ್ ಬ್ಯಾಂಕಿಂಗ್, ಯುಪಿಐ, ಎಟಿಎಂ ಇತ್ಯಾದಿ ಸೌಕರ್ಯಗಳು ಗ್ರಾಹಕರಿಗೆ ಕೆಲಸ ಸುಲಭಗೊಳಿಸಿವೆ. ಬ್ಯಾಂಕುಗಳಿಗೂ ಹೊರೆ ಕಡಿಮೆ ಆಗಿದೆ.
ಈಗ ಬ್ಯಾಂಕುಗಳು ತಮ್ಮ ಸಿಸ್ಟಂಗಳಲ್ಲಿ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಅಳವಡಿಸುತ್ತಿವೆ. ಈ ಅಳವಡಿಕೆ ಇನ್ನೂ ಅಲ್ಪ ಪ್ರಮಾಣದಲ್ಲಿ ಆಗುತ್ತಿದೆಯಾದರೂ ಅದರ ಪ್ರತಿಫಲ ಗಣನೀಯವಾಗಿ ಸಿಗುತ್ತಿದೆ. ಬ್ಯಾಂಕುಗಳ ಕಾರ್ಯನಿರ್ವಹಣೆ ಹೆಚ್ಚು ಸಮರ್ಪಕವಾಗುತ್ತಿದೆ. ಗ್ರಾಹಕರಿಗೂ ಅನುಕೂಲವಾಗುತ್ತಿದೆ.
ಇದನ್ನೂ ಓದಿ: ಬಿಗ್ ಬ್ಯೂಟಿಫುಲ್ ಬಿಲ್: 360 ಲಕ್ಷ ಕೋಟಿ ರೂನ ಈ ಹೊಸ ಕಾಯ್ದೆಯಲ್ಲಿ ಏನಿವೆ? ಇಲ್ಲಿದೆ ಹೈಲೈಟ್ಸ್
ಬ್ಯಾಂಕಿಂಗ್ ಸೆಕ್ಟರ್ನಲ್ಲಿ ಎಐನಿಂದ ಆಗುತ್ತಿರುವ ಪರಿವರ್ತನೆಗಳು…
ಸಂಕೀರ್ಣ ಪ್ರಕ್ರಿಯೆಗಳು ಎಐನಿಂದಾಗಿ ಸರಳಗೊಳ್ಳುತ್ತಿವೆ…
ಗ್ರಾಹಕರ ಬ್ಯಾಂಕ್ ಅಕೌಂಟ್ಗಳನ್ನು ಅಪ್ಗ್ರೇಡ್ ಮಾಡಲು, ಸಾಲ ಸಮಾಪ್ತಿಗೊಳಿಸಲು, ಇವೇ ಮುಂತಾದ ಬ್ಯಾಂಕಿಂಗ್ ಪ್ರಕ್ರಿಯೆಗಳಿಗೆ ಸಾಕಷ್ಟು ದಾಖಲೆ ಸಲ್ಲಿಕೆ, ಪರಿಶೀಲನೆ ಮೊದಲಾದವು ಬೇಕಾಗುತ್ತದೆ. ಎಐ ಅಳವಡಿಕೆಯಿಂದಾಗಿ ಈ ಪ್ರಕ್ರಿಯೆಗಳು ಆಟೊಮೇಟ್ ಆಗಿವೆ. ಹಲವು ಗಂಟೆ, ದಿನಗಳು ಬೇಕಾಗಿದ್ದ ಕೆಲಸ ಕೆಲವೇ ನಿಮಿಷ, ಗಂಟೆಗಳಲ್ಲಿ ಮುಗಿದುಹೋಗುತ್ತದೆ.
ದಾಖಲೆಗಳನ್ನು ಓದುವ ತಾಪತ್ರಯ ಇಲ್ಲ…
ಸ್ಕ್ಯಾನ್ ಮಾಡಿದ ದಾಖಲೆಗಳು, ಪಿಡಿಎಫ್ ದಾಖಲೆಗಳು ಹೀಗೆ ಎಷ್ಟೇ ದೊಡ್ಡ ಕಡತಗಳಿದ್ದರೂ ಎಐ ಕ್ಷಣ ಮಾತ್ರದಲ್ಲಿ ಓದಬಲ್ಲುದು. ಮಾತ್ರವಲ್ಲ, ಆ ದಾಖಲೆಗಳಲ್ಲಿ ಏನೇನಿದೆ ಎಂದು ಸಂಕ್ಷಿಪ್ತವಾಗಿ ನೀಡಬಲ್ಲುದು. ಮೊದಲಾದರೆ, ಬ್ಯಾಂಕ್ ಉದ್ಯೋಗಿಗಳು ಈ ಕಡತಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಸಾಕಷ್ಟು ಕಾಲವಾಗುತ್ತಿತ್ತು.
ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರೆ ಗಮನಿಸಿ… ಅದರ ಎನ್ಎವಿ ಎಂದರೇನು? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ
ಗ್ರಾಹಕರ ನಾಡಿಮಿಡಿತ ಅರಿತುಕೊಳ್ಳುವ ಎಐ
ಬ್ಯಾಂಕುಗಳು ಈಗ ತಮ್ಮ ಗ್ರಾಹಕರ ಅವಶ್ಯಕತೆ ಏನು ಎಂದು ಸುಲಭವಾಗಿ ಅರಿತು, ಅದಕ್ಕೆ ತಕ್ಕಂತಹ ಸೇವೆ ಆಫರ್ ಮಾಡುತ್ತವೆ. ಗ್ರಾಹಕರ ಡಾಟಾ ಹಾಗೂ ಅವರ ವರ್ತನೆ ಆಧಾರದ ಮೇಲೆ ಬ್ಯಾಂಕ್ಗಳು ಸಂವಾದ ನಡೆಸುತ್ತವೆ, ಸರ್ವಿಸ್ ಒದಗಿಸುತ್ತವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಇದು ಸಾಧ್ಯವಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಆಟೊಮೇಟೆಡ್ ಮಾಡುವುದು ಬಹಳ ರಿಸ್ಕಿ. ಬ್ಯಾಂಕಿಂಗ್ ಸಿಸ್ಟಂನಲ್ಲಿ ಎಐನಿಂದ ಸ್ವಲ್ಪ ತಪ್ಪಾದರೂ ದೊಡ್ಡ ಪ್ರಮಾದವೇ ಬರಬಹುದು. ಹೀಗಾಗಿ, ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಕಸ್ಟಮರ್ ಸಪೋರ್ಟ್, ಡಾಕ್ಯುಮೆಂಟ್ ರೀಡಿಂಗ್ ಇತ್ಯಾದಿ ಆಯ್ದ ಕೆಲಸಗಳಿಗೆ ಎಐ ನೆರವು ಪಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಎಐ ಹೆಚ್ಚು ಪಕ್ವಗೊಂಡಂತೆ ಬ್ಯಾಂಕಿಂಗ್ ಸ್ವರೂಪ ಅಮೂಲಾಗ್ರವಾಗಿ ಬದಲಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




