ಇಎಲ್ಐ ಸ್ಕೀಮ್ಗೆ ಲಕ್ಷ ಕೋಟಿ ರೂ ಅನುದಾನ; ಕೇಂದ್ರ ಸಂಪುಟ ಅನುಮೋದನೆ; ಏನಿದು ಯೋಜನೆ?
Know what is ELI, Employment linked Incentive scheme: ಮುಂದಿನ ಎರಡು ವರ್ಷಗಳಿಗೆ ಇಎಲ್ಐ ಸ್ಕೀಮ್ಗೆ ಒಂದು ಲಕ್ಷ ಕೋಟಿ ರೂ ಅನುದಾನ ಬಿಡುಗಡೆ ಮಾಡಲಿದೆ ಸರ್ಕಾರ. ಇದಕ್ಕೆ ಕೇಂದ್ರ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಮೂರು ಕೋಟಿಗೂ ಅಧಿಕ ಹೊಸ ಉದ್ಯೋಗಗಳ ಸೃಷ್ಟಿಗೆ ಉತ್ತೇಜನ ಸಿಗುವ ಸಾಧ್ಯತೆ ಇದೆ.

ನವದೆಹಲಿ, ಜುಲೈ 1: ಉದ್ಯೋಗ ಜೋಡಿತ ಪ್ರೋತ್ಸಾಹಕ ಯೋಜನೆಯಾದ ಇಎಲ್ಐ ಸ್ಕೀಮ್ಗೆ (ELI scheme) ಒಂದು ಲಕ್ಷ ಕೋಟಿ ರೂ ಅನುದಾನ ಬಿಡುಗಡೆ ಮಾಡಲು ಕೇಂದ್ರ ಸಂಪುಟ (union cabinet) ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ಒಪ್ಪಿಗೆ ಮುದ್ರೆ ದೊರಕಿದೆ. ಈ ಇಎಲ್ಐ ಸ್ಕೀಮ್ಗೆ ಕೇಂದ್ರ ಸರ್ಕಾರವು 1.07 ಲಕ್ಷ ಕೋಟಿ ರೂ ಪ್ರೋತ್ಸಾಹಕ ಒದಗಿಸುತ್ತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಏನಿದು ಇಎಲ್ಐ ಸ್ಕೀಮ್?
2024-25ರ ಬಜೆಟ್ನಲ್ಲಿ ಉದ್ಯೋಗ, ಕೌಶಲ್ಯವೃದ್ಧಿ ಮತ್ತಿತರ ವಿಷಯಗಳಲ್ಲಿ ಯುವಜನರಿಗೆ ಪ್ರೋತ್ಸಾಹ ನೀಡಲು ಐದು ಸ್ಕೀಮ್ಗಳ ಪಿಎಂ ಪ್ಯಾಕೇಜ್ ಘೋಷಿಸಲಾಗಿತ್ತು. ಅದರಲ್ಲಿ ಇಎಲ್ಐ ಕೂಡ ಒಂದು. ಎಲ್ಲಾ ಸೆಕ್ಟರ್ಗಳಲ್ಲೂ ಉದ್ಯೋಗ ಸೃಷ್ಟಿಗೆ ಉತ್ತೇಜಿಸಲು ಸರ್ಕಾರವು ಇಎಲ್ಐ ಸ್ಕೀಮ್ ಜಾರಿಗೆ ತಂದಿದೆ. ಎಲ್ಲಾ ಸೆಕ್ಟರ್ಗಳನ್ನು ಒಳಗೊಳ್ಳಲಾಗಿದೆಯಾದರೂ ತಯಾರಕ ಕ್ಷೇತ್ರವನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಸ್ಕೀಮ್ ರೂಪಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಕೌಶಲ್ಯ ಕೊರತೆ ಇರುವ, ಕೆಳಹಂತದ ಉದ್ಯೋಗಗಳಿಗೆ ಅವಕಾಶ ನೀಡುವುದು, ಮತ್ತು ಕೌಶಲ್ಯ ಹೆಚ್ಚುವಂತೆ ಮಾಡುವುವುದು ಈ ಸ್ಕೀಮ್ನ ಉದ್ದೇಶವಾಗಿದೆ.
ಉದ್ಯೋಗಿಗೆ 15,000 ರೂ ಪ್ರೋತ್ಸಾಹಕ ಧನ
ಇಎಲ್ಐ ಸ್ಕೀಮ್ ಪ್ರಕಾರ, ಮೊದಲ ಬಾರಿ ಕೆಲಸಕ್ಕೆ ಸೇರುವ ವ್ಯಕ್ತಿಗೆ ಕೇಂದ್ರ ಸರ್ಕಾರ 15,000 ರೂವರೆಗೂ ಹಣ ನೀಡುತ್ತದೆ. ಎರಡು ಕಂತುಗಳಲ್ಲಿ ಇದನ್ನು ನೀಡಲಾಗುತ್ತದೆ. ಈ ಉದ್ಯೋಗಿಗೆ ಇದು ಮೊದಲ ಕೆಲಸವಾಗಿರಬೇಕು. ಇಪಿಎಫ್ ಅಕೌಂಟ್ ಹೊಂದಿರಬೇಕು. ಕೆಲಸಕ್ಕೆ ಸೇರಿ ಆರು ತಿಂಗಳ ಬಳಿಕ ಮೊದಲ ಕಂತನ್ನು ಸರ್ಕಾರವು ನೀಡುತ್ತದೆ. ಒಂದು ವರ್ಷ ಅದೇ ಕಂಪನಿಯಲ್ಲಿ ಕೆಲಸ ಮಾಡಿದರೆ ಇನ್ನೊಂದು ಕಂತಿನ ಹಣ ನೀಡುತ್ತದೆ. ಆದರೆ, ಈ ಹಣವನ್ನು ಠೇವಣಿ ರೂಪದಲ್ಲಿ ಇಟ್ಟಿರಲಾಗುತ್ತದೆ. ಉದ್ಯೋಗಿಯು ನಂತರದ ದಿನಗಳಲ್ಲಿ ಇದನ್ನು ಬಳಸಬಹುದು. 1.92 ಕೋಟಿ ಹೊಸ ಕಾರ್ಮಿಕರಿಗೆ ಇದು ಅನುಕೂಲವಾಗುತ್ತದೆ.
ಇದನ್ನೂ ಓದಿ: ಬಿಗ್ ಬ್ಯೂಟಿಫುಲ್ ಬಿಲ್: 360 ಲಕ್ಷ ಕೋಟಿ ರೂನ ಈ ಹೊಸ ಕಾಯ್ದೆಯಲ್ಲಿ ಏನಿವೆ? ಇಲ್ಲಿದೆ ಹೈಲೈಟ್ಸ್
ಕೆಲಸ ಕೊಟ್ಟ ಕಂಪನಿಗಳಿಗೂ ಸರ್ಕಾರ ಉತ್ತೇಜನ
ಈ ಸ್ಕೀಮ್ನ ಮತ್ತೊಂದು ಭಾಗದಲ್ಲಿ, ಹೊಸ ಉದ್ಯೋಗಿಗಳಿಗೆ ಅವಕಾಶ ಕೊಡುವ ಕಂಪನಿಗಳಿಗೆ ಸರ್ಕಾರ ಪ್ರೋತ್ಸಾಹಕ ಧನ ನೀಡುತ್ತದೆ. ಹೆಚ್ಚುವರಿ ಉದ್ಯೋಗಾವಕಾಶ ಕೊಡುವ ಕಂಪನಿಗಳಿಗೆ ಪ್ರತೀ ಉದ್ಯೋಗಿಗೂ ತಿಂಗಳಿಗೆ 3,000 ರೂವರೆಗೆ ಹಣವನ್ನು ಎರಡು ವರ್ಷ ಕಾಲ ನೀಡುತ್ತದೆ. ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ನಲ್ಲಿ ಈ ಇನ್ಸೆಂಟಿವ್ಸ್ ಇನ್ನೂ ಎರಡು ವರ್ಷ ಮುಂದುವರಿಯುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ