Scam Alert: ಎಐ ಬಯೋಮೆಟ್ರಿಕ್ ಸ್ಕ್ಯಾಮ್; ಅಪರಿಚಿತರ ಫೋನ್ ಮುಟ್ಟುವ ಮುನ್ನ ಎಚ್ಚರ; ಪ್ರಶಾಂತ್ ಜೋಗಿಮಠ್ ಜಾಗೃತಿ ವಿಡಿಯೋ
ಅಪರಿಚಿತರು ಬಂದು ತಮಗೆ ನೆರವು ಬೇಕೆಂದು ತಮ್ಮಲ್ಲಿರುವ ಫೋನ್ ಅನ್ನು ಆಪರೇಟ್ ಮಾಡಲು ಹೇಳಿದಾಗ, ಅದು ಸ್ಕ್ಯಾಮ್ ಆಗಿರಬಹುದು. ನಿಮ್ಮ ಬಯೋಮೆಟ್ರಿಕ್ ಡಾಟಾಗಳನ್ನು ಕದ್ದು ಅದನ್ನು ದುರುಪಯೋಗಪಡಿಸಿಕೊಳ್ಳುವ ಜಾಲ ಸಕ್ರಿಯವಾಗಿದೆ ಎನ್ನುತ್ತಾರೆ ಪ್ರಶಾಂತ್ ಜೋಗಿಮಠ್. ಈ ಎಐ ಬಯೋಮೆಟ್ರಿಕ್ ಐಡೆಂಟಿಟಿ ಸ್ಕ್ಯಾಮ್ನಿಂದ ದೂರವಾಗುವುದು ಹೇಗೆ, ಏನದು ಸ್ಕ್ಯಾಮ್ ಎಂಬಿತ್ಯಾದಿ ವಿವರ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 30: ಮಾಲ್, ಮೆಟ್ರೋ ಸ್ಟೇಷನ್ ಅಥವಾ ಜನನಿಬಿಡ ಮಾರುಕಟ್ಟೆಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಬಂದು “ನನಗೆ ಫೋನ್ ಬಳಸಲು ಬರುವುದಿಲ್ಲ, ಸ್ವಲ್ಪ ಸಹಾಯ ಮಾಡಿ” ಎಂದು ಕೇಳಿದರೆ ತಕ್ಷಣ ಸ್ಪಂದಿಸುವ ಮುನ್ನ ಎಚ್ಚರ ವಹಿಸಿ. ಜೋಗಿಮಠ್ ಎಂಟರ್‌ಪ್ರೈಸಸ್‌ನ (Jogimutt Enterprises) ಪ್ರಶಾಂತ್ ಜೋಗಿಮಠ್ ಅವರು ಅತ್ಯಂತ ಅಪಾಯಕಾರಿ ಹಾಗೂ ನೂತನ ಮಾದರಿಯ ‘ಎಐ ಬಯೋಮೆಟ್ರಿಕ್ ಐಡೆಂಟಿಟಿ ಸ್ಕ್ಯಾಮ್’ (AI Biometric Identity Scam) ಕುರಿತು ಕಣ್ಣು ತೆರೆಸುವ ಜಾಗೃತಿ ಮೂಡಿಸಿದ್ದಾರೆ.
ಈ ಸ್ಕ್ಯಾಮ್ ಮಾಡುವವರು ನಿಮ್ಮಿಂದ ತಕ್ಷಣಕ್ಕೆ ಹಣ, ಪಾಸ್‌ವರ್ಡ್ ಅಥವಾ ರಹಸ್ಯ ಪಿನ್ ಕೇಳುವುದಿಲ್ಲ. ಬದಲಿಗೆ ನಿಮ್ಮ ‘ಕರುಣೆ’ ಗುಣವನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ ಎಂದು ಪ್ರಶಾಂತ್ ತಮ್ಮ ವಿಡಿಯೋದಲ್ಲಿ ವಿವರಿಸುತ್ತಾರೆ.
ವಂಚಕರು ಸಾಮಾನ್ಯವಾಗಿ ಉತ್ತಮವಾಗಿ ಉಡುಪು ಧರಿಸಿದ, ಮಧ್ಯವಯಸ್ಕ ಅಥವಾ ಹಿರಿಯ ನಾಗರಿಕರಂತೆ ಕಾಣಿಸಿಕೊಳ್ಳುತ್ತಾರೆ. ತಮಗೆ ಪಿಂಚಣಿ ಪರಿಶೀಲಿಸಲು ಬರುವುದಿಲ್ಲವೆಂದೋ, ಅಥವಾ ತಪ್ಪಾಗಿ ಯಾವುದೋ ಪೇಜ್ ಓಪನ್ ಆಗಿದೆ ಎಂದು ಹೇಳಿಯೋ ನಿಮ್ಮ ಸಹಾಯ ಕೋರುತ್ತಾರೆ. ನೀವು ಆ ಫೋನ್ ಕೈಗೆತ್ತಿಕೊಳ್ಳುವಷ್ಟರಲ್ಲೇ, ಆ ಫೋನ್‌ನಲ್ಲಿ ಈಗಾಗಲೇ ವಿಡಿಯೋ ಕಾಲ್ ಅಥವಾ ಸ್ಕ್ರೀನ್ ರೆಕಾರ್ಡಿಂಗ್ ಆಗುತ್ತಿರುತ್ತದೆ. ಫೇಶಿಯಲ್ ರೆಕಗ್ನಿಷನ್ ಪರ್ಮಿಷನ್ ಆನ್ ಆಗಿರುತ್ತದೆ. ನೀವು ಆ ಫೋನ್ ಬಳಸಿದಾಗ ನಿಮ್ಮ ಬಯೋಮೆಟ್ರಿಕ್ ಗುರುತುಗಳನ್ನು ಕದ್ದುಬಿಡುತ್ತಾರೆ ಎಂದು ಪ್ರಶಾಂತ್ ಹೇಳಿದ್ದಾರೆ.
ಇದನ್ನೂ ಓದಿ: ಟ್ರಾಯ್ ಹೊಸ ನಿಯಮಗಳು: ಸ್ಪ್ಯಾಮ್ ಕಾಲ್ಗೆ ಕಡಿವಾಣ ಹಾಕಲು ಟೆಲಿಕಾಂ ಆಪರೇಟರ್ಸ್ಗೆ ಹೆಚ್ಚಿನ ಅಧಿಕಾರ, ಜವಾಬ್ದಾರಿ
ನೀವು ಫೋನ್ ಸ್ಪರ್ಶಿಸಿದಾಗ ಬೆರಳಚ್ಚು (Fingerprint) ಪಡೆಯಬಹುದು. ಫೋನ್‌ನಲ್ಲಿದ್ದ ಸಂಖ್ಯೆ ಅಥವಾ ವೆರಿಫಿಕೇಶನ್ ಕೋಡ್‌ಗಳನ್ನು ಗಟ್ಟಿಯಾಗಿ ಓದಿದಾಗ ನಿಮ್ಮ ಧ್ವನಿ (Voice) ಗುರುತನ್ನು ಕದಿಯಬಹುದು. ಕ್ಯಾಮೆರಾ ಅಥವಾ ಸ್ಕ್ರೀನ್ ನೋಡಿದಾಗ ಮುಖದ ಭಾವನೆಗಳು (Facial Movements) ಕಳವಾಗುತ್ತವೆ. ಈಗಿನ ಎಐ ತಂತ್ರಜ್ಞಾನವು ಈ ಬಯೋಮೆಟ್ರಿಕ್ ಗುರುತುಗಳನ್ನು ಬಳಸಿ ನಿಮ್ಮ ಡಿಜಿಟಲ್ ಕ್ಲೋನ್ (Digital Clone) ಸೃಷ್ಟಿಸಬಹುದು ಎಂಬುದು ಪ್ರಶಾಂತ್ ಜೋಗಿಮಠ್ ಅವರ ಆತಂಕ.
ಡಿಜಿಟಲ್ ಕ್ಲೋನ್ ಬಳಸಿ ಏನೆಲ್ಲಾ ಮಾಡಬಹುದು?
ದುರುಳರು ನಿಮ್ಮ ಬಯೋಮೆಟ್ರಿಕ್ ಅಂಶಗಳನ್ನು ಕದ್ದಾಗ ಬ್ಯಾಂಕ್ ಅಕೌಂಟ್ನಿಂದ ಹಣ ವರ್ಗಾವಣೆ ಮಾಡಿಕೊಳ್ಳದೇ ಹೋಗಬಹುದು. ಆದರೆ, ಆ ಗುರುತುಗಳನ್ನು ಬಳಸಿ ನಿಮ್ಮ ಹೆಸರಿನಲ್ಲಿ ಆನ್ಲೈನ್ನಲ್ಲಿ ಗರಿಷ್ಠ ಸಾಲ ಪಡೆಯುತ್ತಾರೆ. ಇದು ಲಕ್ಷಗಳಷ್ಟಿರಬಹುದು, ಕೋಟಿಗಳಷ್ಟಿರಲೂ ಬಹುದು. ನಿಮ್ಮ ಬ್ಯಾಂಕ್ ಅಕೌಂಟ್ನಿಂದ ಹಣ ಕಡಿತವಾಗದೇ ಹೋಗುವುದರಿಂದ ನಿಮ್ಮ ಹೆಸರಿನಲ್ಲಿ ಪಡೆಯುವ ಸಾಲ ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಬ್ಯಾಂಕ್ ನೋಟಿಫಿಕೇಶನ್ ಬಂದಾಗಷ್ಟೇ ನಿಮಗೆ ವಂಚನೆಯು ಅರಿವಿಗೆ ಬರಬಹುದು ಎಂದು ವಿವರಿಸುತ್ತಾರೆ ಜೋಗಿಮಠ್.
ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಗಾಂಧಿ ಜಯಂತಿ, ದಸರಾ ಹಬ್ಬ ಸೇರಿ ಬ್ಯಾಂಕುಗಳಿಗೆ 15 ದಿನ ರಜೆ; ಇಲ್ಲಿದೆ ಪಟ್ಟಿ
ಈ ಮೂರು ವಿಚಾರಗಳನ್ನು ಗಮನಿಸಿ…
- ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಪರಿಚಿತ ವ್ಯಕ್ತಿಯು ಕೇಳಿದರೆಂದು ಅವರ ಫೋನ್ ಆಪರೇಟ್ ಮಾಡಲು ಅಥವಾ ಸಹಾಯ ಮಾಡಲು ಕೈಗೆತ್ತಿಕೊಳ್ಳಬೇಡಿ.
- ‘ಒಂದೇ ಒಂದು ಕ್ಲಿಕ್ ಮಾಡಿ ಕೊಡಿ’ ಎಂದು ಕೇಳಿಕೊಂಡರೂ ಫೋನ್ ಸ್ಪರ್ಶಿಸುವುದು, ಸ್ಕ್ರೀನ್ ನೋಡುವುದು ಅಥವಾ ಅಲ್ಲಿರುವ ವಿಷಯಗಳನ್ನು ಗಟ್ಟಿಯಾಗಿ ಓದುವುದನ್ನು ಸಂಪೂರ್ಣವಾಗಿ ತಡೆಯಿರಿ.
- ಅಪರಿಚಿತ ವಿಡಿಯೋ ಕರೆಗಳನ್ನು ತಕ್ಷಣವೇ ಕಟ್ ಮಾಡಿ. ಕ್ಯಾಮೆರಾವನ್ನು ನೋಡಿ ಮಾತನಾಡುವಂತೆ ಬರುವ ಯಾವುದೇ ವಿನಂತಿಗಳಿಗೆ ಸ್ಪಂದಿಸಬೇಡಿ.
ಪ್ರಶಾಂತ್ ಮಾತನಾಡಿರುವ ವಿಡಿಯೋ
🙏🪷Very scary, be careful. This scam can be brutal. You may lose all your financial capabilities within 30 minutes.🪷🙏 pic.twitter.com/xiBgALxVrn
— Vivek Bajaj (@vivbajaj) September 29, 2026
ಈ ಅಂಶಗಳ ಬಗ್ಗೆ ಗಮನದಲ್ಲಿರಿಸಿ ಎಂದು ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗಿರುವ ಪ್ರಶಾಂತ್ ಜೋಗಿಮಠ್ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ವಿಡಿಯೋ ಹಾಕಲಾಗಿರುವ ಎಕ್ಸ್ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಈ ವಿಡಿಯೋದಲ್ಲಿ ಹೇಳಿರುವ ರೀತಿಯಲ್ಲಿ ಸ್ಕ್ಯಾಮ್ ಮಾಡಲು ಆಗುವುದಿಲ್ಲ. ಇದೆಲ್ಲಾ ಬೋಗಸ್ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




