ಏರ್ ಇಂಡಿಯಾ ವಹಿಸಿಕೊಂಡ ಟಾಟಾ; ಮಹಾರಾಜದಲ್ಲಿ ಏನೆಲ್ಲ ಬದಲಾವಣೆಗಳು ನಿರೀಕ್ಷಿಸಬಹುದು?
ಏರ್ ಇಂಡಿಯಾದ ಪುನಶ್ಚೇತನಕ್ಕೆ ಟಾಟಾ ಸಮೂಹದಿಂದ ಭಾರೀ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಏನು ಆ ಯೋಜನೆಗಳು ಎಂಬ ವಿವರ ಇಲ್ಲಿದೆ.
ಜನವರಿ 27, 2022ರ ಗುರುವಾರದಿಂದ ಅಧಿಕೃತವಾಗಿ ಏರ್ ಇಂಡಿಯಾದ ಕಾರ್ಯಾಚರಣೆಯನ್ನು ಟಾಟಾ ಸಮೂಹ (Tata Group) ಕೈಗೆತ್ತಿಕೊಳ್ಳಲಿದೆ. ಸರ್ಕಾರದ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ ಎಂದು ವರದಿಗಳು ತಿಳಿಸಿವೆ. ಕಂಪೆನಿಯ ಅಧ್ಯಕ್ಷರಾದ ಎನ್. ಚಂದ್ರಶೇಖರನ್ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಕೆಲ ಗಂಟೆಗಳ ನಂತರ ಹಸ್ತಾಂತರ ಆಗಿದೆ. “ಟಾಟಾ ಸಮೂಹದಲ್ಲಿ ಮತ್ತೆ ಏರ್ ಇಂಡಿಯಾ ಸೇರಿರುವುದಕ್ಕೆ ಬಹಳ ಸಂತೋಷವಾಗಿದೆ. ಎಲ್ಲರ ಜತೆಗೆ ಸೇರಿ ಕೆಲಸ ಮಾಡುತ್ತಾ ವಿಶ್ವ ದರ್ಜೆಯ ಏರ್ಲೈನ್ ಸೃಷ್ಟಿಸಲಿದ್ದೇವೆ,” ಎಂದು ಅಧಿಕೃತವಾಗಿ ಏರ್ ಇಂಡಿಯಾವನ್ನು ಟಾಟಾಗೆ ಹಸ್ತಾಂತರ ಮಾಡಿದ ನಂತರ ಚಂದ್ರಶೇಖರನ್ ಸಿಎನ್ಬಿಸಿ- ಟಿವಿ18 ಹೇಳಿದ್ದಾರೆ. 18 ಸಾವಿರ ಕೋಟಿ ರೂಪಾಯಿಗೆ ಬಿಡ್ ಮಾಡಿ, ಏರ್ ಇಂಡಿಯಾವನ್ನು ಟಾಟಾ ಸಮೂಹವು ಶೇ 100ರಷ್ಟು ಷೇರನ್ನು ಸ್ವಾಧೀನ ಮಾಡಿಕೊಂಡಿತ್ತು. ಕಳೆದ ವರ್ಷ ಬಿಡ್ಡಿಂಗ್ ಪ್ರಕ್ರಿಯೆ ಆಗಿತ್ತು. ಆ ನಂತರ ಬಿಡ್ಡಿಂಗ್ ಗೆದ್ದಿದ್ದ ಟಾಟಾ ಸಮೂಹವು ಏರ್ ಇಂಡಿಯಾದ ಆಡಳಿತವನ್ನು ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿತ್ತು.
ಏರ್ ಇಂಡಿಯಾದ ಹಸ್ತಾಂತರದ ದಿನಾಂಕ ನಿಗದಿಯಾದ ಮೊದಲುಗೊಂಡು, ಅಧಿಕಾರಿಗಳನ್ನು ನೇಮಕ ಮಾಡುವ ತನಕ ಟಾಟಾ ಸಮೂಹವು ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದೆ. ಅದರ ಉದ್ದೇಶ ಏರ್ಲೈನ್ ಕಂಪೆನಿಯ ಪುನಶ್ಚೇತನ. ಏಕೆಂದರೆ ಕಳೆದ ಕೆಲ ಸಮಯದಿಂದಲೇ ವೈಮಾನಿಕ ಉದ್ಯಮವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದಕ್ಕೆ ಏರ್ ಇಂಡಿಯಾ ಹೆಣಗಾಡುತ್ತಿದೆ. 1932ರಲ್ಲಿ ಜೆಆರ್ಡಿ ಟಾಟಾ ಅವರು ಸ್ಥಾಪಿಸಿದ ವಿಮಾನ ಯಾನ ಸಂಸ್ಥೆ ಇದು. ಆ ನಂತರ ರಾಷ್ಟ್ರೀಕರಣಗೊಳಿಸಲಾಯಿತು, ಅದನ್ನು ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆಯಾಗಿ ಮಾಡಲಾಯಿತು.
ಸಿಎನ್ಬಿಸಿ- ಟಿವಿ18 ಮೂಲಗಳ ಪ್ರಕಾರ, ಗುರುವಾರದಂದೇ ಹೊಸ ಮಂಡಳಿ ಏರ್ ಇಂಡಿಯಾಗಾಗಿ ರಚನೆ ಆಗಲಿದೆ. ಜಾಗತಿಕ ಮಟ್ಟದ ವಿಮಾನ ಯಾನ ವಲಯದ ಅತಿರಥ ಮಹಾರಥರನ್ನು ನೇಮಿಸಿಕೊಳ್ಳುವುದಕ್ಕೆ ಮಾತುಕತೆ ನಡೆದಿದೆ. ಏರ್ ಇಂಡಿಯಾದ ಸಿಇಒ ಆಗಿ ವಿಮಾನ ಯಾನ ಕ್ಷೇತ್ರದ ಹಿರಿಯ ಅನುಭವಿಯಾದ ಫ್ರೆಡ್ ರೀಡ್ ಅವರನ್ನು ಸೇರಿಸಿಕೊಳ್ಳುವುದಕ್ಕೆ ಟಾಟಾ ಸಮೂಹ ಆಲೋಚಿಸುತ್ತಿದೆ. ಬದಲಿ ಆಯ್ಕೆಗಳು ಆಗುವ ತನಕ ಏರ್ ಇಂಡಿಯಾದ ಕೆಲವು ಹಿರಿಯ ಅಧಿಕಾರಿಗಳು ಮುಂದುವರಿಯಲಿದ್ದಾರೆ. ಮೂಲಗಳ ಪ್ರಕಾರ, ಕಡಿಮೆ ಪ್ರಯಾಣದ ದರದ ವಿಮಾನ ಯಾನವಾದ ಏರ್ ಏಷ್ಯಾ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್ಪ್ರೆಸ್ ಮುಂದಿನ ವಾರ ವಿಲೀನ ಆಗಲಿದೆ.
ಸಂಸ್ಥೆಯೊಳಗಿನ ಬದಲಾವಣೆಗಳನ್ನು ಹೊರತುಪಡಿಸಿ, ವಿಮಾನ ಪ್ರಯಾಣದ ಅನುಭವ ಕೂಡ ವಿಸ್ತರಿಸಲು ಟಾಟಾ ಸಮೂಹ ಎದುರು ನೋಡುತ್ತಿದೆ. ಮುಂಬೈನಿಂದ ಕಾರ್ಯ ನಿರ್ವಹಿಸುವ ನಾಲ್ಕು ವಿಮಾನಗಳಿಂದ ಆಹಾರ ಸೇವೆಯ ವಿಸ್ತರಣೆ ಕೂಡ ಪರಿಚಯಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗುರುವಾರದಿಂದ ಮುಂಬೈ- ದೆಹಲಿ (A1864), ಮುಂಬೈ-ದೆಹಲಿ (A1687), ಮುಂಬೈ- ಅಬುಧಾಬಿ (A1945) ಹಾಗೂ ಮುಂಬೈ-ಬೆಂಗಳೂರು (A1639) ವಿಮಾನಗಳಲ್ಲಿ ಆಹಾರ ಸೇವೆ ವಿಸ್ತರಣೆ ಆಗಲಿದೆ.
ಸಿಎನ್ಬಿಸಿ ಪ್ರಕಾರ, ವಿಮಾನ ಸಿಬ್ಬಂದಿಯ ದಿರಿಸಿನ ವಿಚಾರದಲ್ಲೂ ಗಮನಾರ್ಹ ಬದಲಾವಣೆ ಮಾಡುವುದಕ್ಕೆ ಟಾಟಾ ಸಮೂಹ ಮುಂದಾಗಿದೆ. ಇನ್ನು ಸಮಯಕ್ಕೆ ಸರಿಯಾಗಿ ಹೊರಡುವ ಮತ್ತು ತಲುಪುವ ಬಗ್ಗೆ ಕೂಡ ತಿಳಿಸಲಾಗಿದೆ. ವಿಮಾನದಲ್ಲಿನ ಘೋಷಣೆಯೂ ಬದಲಾಗಲಿದೆ. ವಿಮಾನದೊಳಗೆ ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ಟಾಟಾ ಅವರ ವಿಶೇಷ ಸಂದೇಶ ಪ್ರಸಾರ ಆಗಲಿದೆ. ಆದರೆ ವಿಮಾನದೊಳಗಿನ ಇಂಟಿರೀಯರ್ಸ್ ಬದಲಾವಣೆಗೆ ಸಮಯ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಈಗಿನ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಟಾಟಾ ಸಮೂಹವು 117 ಅಗಲ- ಆಕಾರ ಮತ್ತು ಉದ್ದ- ಆಕಾರದ ವಿಮಾನಗಳಿದ್ದು, 24 ಉದ್ದವಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳಿವೆ. ಇದರ ಹೊರತಾಗಿ 4400 ದೇಶೀ ಹಾಗೂ 1800 ಅಂತರರಾಷ್ಟ್ರೀಯ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಸ್ಲಾಟ್ಗಳನ್ನು ದೇಶೀಯ ವಿಮಾನ ನಿಲ್ದಾಣಗಳಲ್ಲಿ ಹತೋಟಿ ಪಡೆಯುತ್ತದೆ.
ಇದನ್ನೂ ಓದಿ: Air India: ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರಿಸುವ ಕಾರ್ಯ ಸಂಪೂರ್ಣ ಎಂದು ಘೋಷಿಸಿದ ತುಹಿನ್ ಕಾಂತ್ ಪಾಂಡೆ